×
Ad

ಶಿವಣಿ ಗ್ರಾಪಂ ಕರ ವಸೂಲಿಗಾರ ಹುದ್ದೆಗೆ ಅಕ್ರಮ ನೇಮಕ: ಆರೋಪ

Update: 2025-11-09 10:11 IST

ಬೀದರ್, ನ.8: ಭಾಲ್ಕಿ ತಾಲೂಕಿನ ಶಿವಣಿ ಗ್ರಾಮ ಪಂಚಾಯತ್‌ನಲ್ಲಿ ಕರವಸೂಲಿಗಾರ ಹುದ್ದೆಗೆ ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದ್ದು, ಈ ಅಕ್ರಮ ನೇಮಕಾತಿಯಲ್ಲಿ ಅಧಿಕಾರಿಗಳು ಶಾಮಿಲಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಶಿವಣಿ ಗ್ರಾಮ ಪಂಚಾಯತ್ ನಲ್ಲಿ ಕರವಸೂಲಿಗಾರ ಹುದ್ದೆ ಖಾಲಿ ಇರುವ ಕಾರಣ ಅದೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಷವರ್ಧನ್ ಎಂಬ ಅಭ್ಯರ್ಥಿಯು ತನ್ನನ್ನು ಆ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು ಎಂದು 2020ರಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆಯುತ್ತಾರೆ. ಆ ಪತ್ರವನ್ನು ಪರಿಗಣಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹರ್ಷವರ್ಧನ್ ಅವರನ್ನು ಕರವಸೂಲಿಗಾರ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸುತ್ತಾರೆ. ಆದರೆ ಹರ್ಷವರ್ಧನ್ ಅವರನ್ನು ನೇಮಕ ಮಾಡಿಕೊಳ್ಳದೆ ಅಲ್ಲಿನ ಪಿಡಿಒ ಅವರು ಆ ಆದೇಶವನ್ನು ಕಡೆಗಣಿಸಿರುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ನಂತರದಲ್ಲಿ ಹರ್ಷವರ್ಧನ್ ಅವರು ನೇಮಕ ಮಾಡಿಕೊಳ್ಳಿ ಎಂದು ಪತ್ರ ಬರೆದರೂ ಕೂಡ ಉಪಯೋಗಕ್ಕೆ ಬರುವುದಿಲ್ಲ. ಅದಾದ ಬಳಿಕ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತೊಮ್ಮೆ ಹರ್ಷವರ್ಧನ್ ಅವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಪಿಡಿಒ ಅವರನ್ನು ಜ್ಞಾಪಕ ಪತ್ರ ಬರೆಯುತ್ತಾರೆ. ಆದರೂ ಕೂಡ ಅಲ್ಲಿನ ಆವಾಗಿನ ಪಿಡಿಒ ಅವರು ಆ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪವಿದೆ.

ಎಲ್ಲ ಆದೇಶಗಳು ಗಾಳಿಗೆ ತೂರಿ 2021ರಲ್ಲಿ ಅಂದಿನ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಾಮಾನ್ಯ ಸಭೆ ಮಾಡಿ, ಆ ಕರವಸೂಲಿಗಾರ ಹುದ್ದೆಗೆ ಅಧಿಸೂಚನೆ ಇಲ್ಲದೇ ಸರಕಾರದ ನಿಯಮ ಉಲ್ಲಂಘನೆ ಮಾಡುವ ಮೂಲಕ ಕಮಲನಗರ್ ತಾಲೂಕಿನ ಮುರ್ಕಿ ಗ್ರಾಮದ ಲಿಂಗೇಶ್ ಎನ್ನುವ ಅಭ್ಯರ್ಥಿಯನ್ನು ನೇಮಕ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನನಗೆ ಕರವಸೂಲಿಗಾರ ಹುದ್ದೆಗೆ ನೇಮಕಾತಿ ಆದೇಶವಾದರೂ, ಅಂದಿನ ಪಿಡಿಒ ಬಾಲಾಜಿ ಅವರು ಹಣಕ್ಕೋಸ್ಕರ ಬೇರೆ ತಾಲೂಕಿನ ಅಭ್ಯರ್ಥಿಯಾದ ಲಿಂಗೇಶ್ ಅವರನ್ನು ನೇಮಕಾತಿ ಮಾಡಿದ್ದಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಭ್ಯರ್ಥಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಎನ್ನುವುದು ಸರಕಾರದ ನಿಯಮವಿದೆ. ಹಾಗಾಗಿ ಇದು ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಆದ್ದರಿಂದ ಪಿಡಿಒ ಬಾಲಾಜಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿ ಈ ಹುದ್ದೆ ಭರ್ತಿ ಮಾಡಬೇಕು.

-ಹರ್ಷವರ್ಧನ್, ಅನ್ಯಾಯಕ್ಕೋಳಗಾದ ಅಭ್ಯರ್ಥಿ

ಕರವಸೂಲಿಗಾರ ಹುದ್ದೆ ನೇಮಕದ ಬಗ್ಗೆ ನಮ್ಮ ಅಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ನಮ್ಮ ಅಧಿಕಾರಿಯನ್ನು ನಾವು ನಂಬಬೇಕಾಗುತ್ತದೆ. ಒಂದು ವೇಳೆ ಈ ವರದಿ ಸುಳ್ಳು ಎಂಬುದಾಗಿ ಹೇಳಿ, ಮರು ತನಿಖೆ ನಡೆಸುವಂತೆ ಯಾರಾದರೂ ಪತ್ರ ನೀಡಿದರೆ ನಾವು ಮರು ತನಿಖೆ ನಡೆಸುತ್ತೇವೆ.

-ಗಿರೀಶ್ ಬದೋಲೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಶಿವಣಿ ಗ್ರಾಮ ಪಂಚಾಯತ್‌ನ ಕರವಸೂಲಿಗಾರ ಹುದ್ದೆಯನ್ನು ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ. ಇದಕ್ಕೆ ದಾಖಲೆ ಸಮೇತವಾಗಿ ಜಿಲ್ಲಾ ಪಂಚಾಯತ್‌ನಲ್ಲಿ ದೂರು ಸಲ್ಲಿಸಿದ್ದೇವೆ. ನಮ್ಮ ದೂರನ್ನು ಪರಿಗಣಿಸಿ ಭಾಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ರಚಿಸಿದ್ದರು. ಆದರೆ ಈ ತನಿಖಾ ವರದಿಯು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದ್ದು, ತನಿಖಾಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ.

- ಸಾಯಿ ಸಿಂಧೆ, ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News