ಕುರುಬದೊಡ್ಡಿ ಶಾಲೆಯಲ್ಲಿ ಕೊಠಡಿಗಳ ಕೊರತೆ
ರಾಯಚೂರು: ರಾಯಚೂರು ತಾಲೂಕಿನ ಬಾಯಿದೊಡ್ಡಿ ಗ್ರಾಮ ಪಂಚಾಯತ್‌ವ್ಯಾಪ್ತಿಯ ಕುರುಬದೊಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿದ್ದು ಮರದ ನೆರಳಲ್ಲೇ ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೂ 193 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸದ್ಯ 5 ಕೊಠಡಿಗಳಿದ್ದು ಮಕ್ಕಳಿಗೆ ಸಾಲುತ್ತಿಲ್ಲ. ಹೀಗಾಗಿ ಅನೇಕ ವಿದ್ಯಾರ್ಥಿಗಳಿಗೆ ಶಾಲೆಯ ಆವರಣ ಹಾಗೂ ಬಯಲಿನಲ್ಲೇ ಪಾಠ ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಮಕ್ಕಳು ಪಾಠ ಕೇಳುವುದರಿಂದ ಗಾಳಿ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಪೋಷಕರ ಆರೋಪವಾಗಿದೆ.
ಶಾಲೆಗೆ ಇನ್ನೂ 4 ಕೊಠಡಿಗಳ ಅವಶ್ಯಕತೆ ಇದೆ. ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಪಾಲಕರು ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸರಕಾರಿ ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಈ ಹಿಂದೆ ನಲಿಕಲಿ ಮಕ್ಕಳ ಕೊಠಡಿ ಶಿಥಿಲಾವಸ್ಥೆಯಿಂದ ಮೇಲ್ಛಾವಣಿಯ ಸಿಮೆಂಟ್ ಉದುರಿ ಎರಡು ಮಕ್ಕಳ ಮೇಲೆ ಬಿದ್ದು ಗಾಯಗೊಂಡಿದ್ದರು. ಬಳಿಕ ಅನೇಕ ಪಾಲಕರು ಆತಂಕ ಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಯಿತು.
ರಾಯಚೂರು ಗ್ರಾಮೀಣ ಭಾಗದ ಅನೇಕ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು ಮಳೆಗಾಲದಲ್ಲಿ ಸೋರುತ್ತಿವೆ. ಸರಕಾರದಿಂದ ಶಾಲೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಬಿಡುಗಡೆಯಾದರೂ ಶಾಲೆಗಳ ದುಸ್ಥಿತಿ ಬದಲಾಗಿಲ್ಲ. ಸರಕಾರಿ ಶಾಲೆಗಳ ಇಂತಹ ದುಸ್ಥಿತಿ ಕಂಡು ನಗರ ಪ್ರದೇಶಗಳಲ್ಲಿ ಪಾಲಕರು ಖಾಸಗಿ ಶಾಲೆಗೆ ದಾಖಲಿಸುತ್ತಾರೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ಇರುವುದರಿಂದ ಖಾಸಗಿ ಶಾಲೆಗಳಿಲ್ಲ ಹಾಗೂ ದುಬಾರಿ ಹಣ ಪಾವತಿಸಿ ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಸರಕಾರ ಮೂಲಭೂತ ಸೌಕರ್ಯ ಕಲ್ಪಿಸಿ ನಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಪಾಲಕರ ಮನವಿ.
2021-22ನೇ ಸಾಲಿನಲ್ಲಿ ಶಾಲೆಗೆ ಭೋಜನಾಲಯ ಕಟ್ಟಡಕ್ಕೆ 6 ಲಕ್ಷ ರೂ.ಅನುದಾನ ಬಿಡುಗಡೆಯಾಗಿ ಕಾಮಗಾರಿ ಮಾಡಲಾಗಿತ್ತು. ಆದರೆ ಕಳಪೆ ಕಾಮಗಾರಿ ಮಾಡಿದ್ದರಿಂದ ಕಟ್ಟಡ ಕುಸಿದು ಬಿದ್ದತ್ತು. ಬಳಿಕ ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದ್ದು 4 ವರ್ಷಗಳಾದರೂ ಕಾಮಗಾರಿ ಪೂರ್ಣಗೊಳ್ಳದೇ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ತಿಳಿಸಿದರು.
ಕುರುಬದೊಡ್ಡಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಲ್ಲಿರುವುದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು, ಗಮನಕ್ಕೆ ಬಂದ ಬಳಿಕ ಶಾಲೆಗೆ ಭೇಟಿ ನೀಡಿದ್ದೇನೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಎರೆಡು ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಹೆಚ್ಚುವರಿ ಕೊಠಡಿಗೆ ಹಿರಿಯ ಅಧಿಕಾರಿಗಳು ಹಾಗೂ ಸರಕಾರದ ಗಮನಕ್ಕೆ ತರಲಾಗುವುದು.
-ಈರಣ್ಣ ಕೋಸಗಿ, ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ
ಕುರುಬದೊಡ್ಡಿ ಶಾಲೆಯಲ್ಲಿ ಈ ಹಿಂದೆ ನಲಿಕಲಿ ಕೊಠಡಿ ಶಿಥಿಲಾವಸ್ಥೆಯಿಂದ ಮೇಲ್ಛಾವಣಿಯ ಭಾಗ ಕಿತ್ತುಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಿಂದ ನಲಿಕಲಿ ಮಕ್ಕಳಿಗೆ ಬಯಲಲ್ಲಿ ಪಾಠ ಮಾಡಲಾಗುತ್ತಿತ್ತು. ಈ ಘಟನೆಯ ಬಳಿಕ ನಾನು 18 ಸಾವಿರ ರೂಪಾಯಿ ನನ್ನ ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸಿದ್ದೆ. ಈಗ ನಲಿ ಕಲಿ ತರಗತಿ ಕೊಠಡಿಯಲ್ಲಿ ನಡೆಯುತ್ತಿದ್ದು, 3ನೇ ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಬಯಲಲ್ಲಿ ಪಾಠ ಮಾಡಲಾಗುತ್ತಿದೆ. ಶೀಘ್ರವೇ ಹೆಚ್ಚುವರಿ 4 ಕೊಠಡಿ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು.
-ವೀರೇಶ, ಎಸ್‌ಡಿಎಂಸಿ ಅಧ್ಯಕ್ಷ
ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಶಾಲೆಗಳು ಶೀಥಿಲಗೊಂಡ ಮೇಲ್ಛಾವಣಿ ಮಕ್ಕಳ ಮೇಳೆ ಕುಸಿದು ಬಿದ್ದಿರುವ ದುರಂತ ಘಟನೆಗಳು ಕಣ್ಣ ಮುಂದೆಯೇ ಇವೆ. ಮಳೆಗಾಲದಲ್ಲಿ ಇದರ ಆತಂಕ ಮತ್ತಷ್ಟು ಹೆಚ್ಚಾಗುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಿಇಒ ಅವರು ಕುರುಬದೊಡ್ಡಿ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಶೀಘ್ರವೇ ಮಂಜೂರು ಮಾಡಬೇಕು.
-ಶಿವಕುಮಾರ ನಾಯಕ, ನರಸಪ್ಪ, ಮಕ್ಕಳ ಪಾಲಕರು