×
Ad

ಸಾಮಾಜಿಕ ನ್ಯಾಯದ ಪ್ರವರ್ತಕ ಎಲ್.ಜಿ. ಹಾವನೂರ್

ಹಾವನೂರು ವರದಿ ಜಾರಿಯಾಗಿ ಇಂದಿಗೆ 50 ವರ್ಷ

Update: 2025-11-19 11:30 IST

‘ಹಿಂದುಳಿದ ವರ್ಗಗಳ ಹರಿಕಾರ’ ಎಂದು ಪ್ರಸಿದ್ಧರಾದ ಲಕ್ಷ್ಮಣ ಹಾವನೂರರು ಈ ನಾಡು ಕಂಡ ಶ್ರೇಷ್ಠ ನ್ಯಾಯವಾದಿ, ತೀಕ್ಷ್ಣ ದೂರದೃಷ್ಟಿ ಉಳ್ಳ ರಾಜಕೀಯ ಮುತ್ಸದ್ದಿ ಮತ್ತು ಅತಿಮುಖ್ಯವಾಗಿ ತನ್ನ ಜೀವನವನ್ನೇ ಸಮಾಜ ಸೇವೆಗೆ ಮುಡುಪಾಗಿಟ್ಟ ಮಾನವತಾವಾದಿ.

ಈ ರಾಜ್ಯದ ಬಹುಸಂಖ್ಯಾತ ಹಿಂದುಳಿದ ಜಾತಿಯವರಿಗೆ ಮೀಸಲಾತಿಯೇ ದೊರೆಯದೆ ಇದ್ದ ಸಂದರ್ಭದಲ್ಲಿ ನ್ಯಾಯವಾದಿಯಾಗಿದ್ದ ಹಾವನೂರರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ಹಾವನೂರು ವರದಿ ದೇವರಾಜ ಅರಸುರವರಿಗೆ ನೀಡಿ, ಹಿಂದುಳಿದ ಜಾತಿಯವರಿಗೆ ಮೀಸಲಾತಿಯನ್ನು ಕಲ್ಪಿಸಿ ಅವರ ಅಭಿವೃದ್ಧಿಗೆ ಕಾರಣಕರ್ತರಾದವರು. ಇವರಿಲ್ಲದೇ ಇದ್ದಲ್ಲಿ ಹಿಂದುಳಿದ ಜಾತಿ ಸಮುದಾಯ ಇಂದಿಗೂ ಹಿಂದಿನಂತೆಯೇ ಕಗ್ಗತ್ತಲಲ್ಲೇ ಇರಬೇಕಾಗಿರುತ್ತಿತ್ತು.

ಕಾನೂನು ಪ್ರಾಧ್ಯಾಪಕ

ಎಲ್‌ಎಲ್‌ಬಿ ಪದವಿ ಮುಗಿಸಿ ಬೆಂಗಳೂರಿನಲ್ಲಿ ವಕಾಲತ್ತನ್ನು ಪ್ರಾರಂಭಿಸಿದ ಕ್ಷಿಪ್ರ ಸಮಯದಲ್ಲಿ ಹಾವನೂರರು ಬೆಂಗಳೂರಿನ ಹೈಕೋರ್ಟ್‌ನಲ್ಲಿ ಪ್ರತಿಷ್ಠಿತ ನ್ಯಾಯವಾದಿಯಾಗಿ ಹೊರಹೊಮ್ಮಿದರು. ಅವರ ಪಾಂಡಿತ್ಯ ಮತ್ತು ಪ್ರಬುದ್ಧತೆಯನ್ನು ಗಮನಿಸಿ ಅಂದಿನ ಕರ್ನಾಟಕದ ಏಕೈಕ ಸರಕಾರಿ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕರಾಗಿ ಆಹ್ವಾನಿಸಲ್ಪಟ್ಟರು. ಅಷ್ಟೇ ಅಲ್ಲದೆ ಸರಕಾರಿ ಲಾ ಕಾಲೀಜಿನ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾಗಿ ನೇಮಕಗೊಂಡರು. ವಿದ್ಯಾರ್ಥಿಗಳಲ್ಲಿ ತುಂಬ ಜನಪ್ರಿಯವಾಗಿದ್ದ ಹಾವನೂರರು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಒಡನಾಟದಲ್ಲಿ ದಿನನಿತ್ಯ ಸಂವಿಧಾನದ ಬಗ್ಗೆ ಮತ್ತು ಅಂಬೇಡ್ಕರ್ ಬಗ್ಗೆ ವ್ಯಾಖ್ಯಾನ ಮಾಡುತ್ತ ವಿದ್ಯಾರ್ಥಿಗಳಿಗೆ ಅಪ್ಯಾಯಮಾನವಾಗಿದ್ದರು. ಇವರ ಶಿಷ್ಯಕೋಟಿಯಲ್ಲಿ ಹಲವಾರು ಹೈಕೋರ್ಟ್ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಪ್ರಖ್ಯಾತ ವಕೀಲರು ಹಾಗೂ ರಾಜಕೀಯ ನಾಯಕರುಗಳೂ ಸೇರಿದ್ದಾರೆ.

ಉದ್ಧಾಮ ಸಂವಿಧಾನ ತಜ್ಞ

ಲಕ್ಷಣ ಹಾವನೂರರು ತಮ್ಮ ಸಮುದಾಯ ವಾಲ್ಮೀಕಿ ನಾಯಕರಲ್ಲಿ ಬಾಂಬೆ ರಾಜ್ಯದ ಮೊತ್ತಮೊದಲ ಎಲ್‌ಎಲ್‌ಬಿ ಪದವೀಧರ. 1953ರಲ್ಲಿ ಬಾಂಬೆ ರಾಜ್ಯದಲ್ಲಿ ಅಂಬೇಡ್ಕರ್ ಸಂಗಾತಿಯಾಗಿ ವಕಾಲತ್ತನ್ನು ಪ್ರಾರಂಭಿಸುತ್ತಾರೆ. ಭಾಷಾವಾರು ರಾಜ್ಯ ರಚನೆಗಳಾದ ಹಿನ್ನೆಲೆಯಲ್ಲಿ ಬಾಂಬೆ ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳು ಮೈಸೂರು ರಾಜ್ಯಕ್ಕೆ ಸೇರಿದ ಹಿನ್ನೆಲೆಯಲ್ಲಿ ತಮ್ಮ ವೃತ್ತಿಯನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ವರ್ಗಾಯಿಸಿ, ಬೆಂಗಳೂರು ಹೈಕೋರ್ಟಲ್ಲಿ ವಕಾಲತ್ತು ಪ್ರಾರಂಭಿಸುತ್ತಾರೆ. ಕೆಲಸಮಯ ಅಂದಿನ ಪ್ರಖ್ಯಾತ ವಕೀಲ ಇ.ಎಸ್. ವೆಂಕಟರಾಮಯ್ಯರವರ ಜೊತೆ ಗುರುತಿಸಿಕೊಂಡರೂ ಶೀಘ್ರದಲ್ಲಿ ಸ್ವತಂತ್ರ ಕಚೆೇರಿ ತೆರೆದು ವಕೀಲ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಅಪಾರ ಪರಿಶ್ರಮ, ಶ್ರದ್ಧೆ, ಪಾಂಡಿತ್ಯ ಮತ್ತು ಪ್ರಾಮಾಣಿಕತೆಯಿಂದ ಅತೀ ಶೀಘ್ರದಲ್ಲಿ ಪ್ರಖ್ಯಾತ ವಕೀಲರಾಗಿ ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದ ಕಕ್ಷಿದಾರರಲ್ಲಿ ಜನಪ್ರಿಯರಾಗುತ್ತಾರೆ. ಬೆರಳೆಣಿಕೆಯಷ್ಟು ಬ್ರಾಹ್ಮಣೇತರ ವಕೀಲರಲ್ಲಿ ಹಾವನೂರರು ಉಚಿತ ಕಾನೂನು ಸೇವೆ ಮತ್ತು ಪಾಂಡಿತ್ಯಪೂರ್ಣ ವಾದಗಳಿಗೆ ಪ್ರಸಿದ್ಧರಾಗುತ್ತಾರೆ. ಸಂವಿಧಾನವನ್ನು ಅವರು ವ್ಯಾಖ್ಯಾನಿಸಿದ ಪರಿ ಮತ್ತು ಸಾಮಾಜಿಕ ಬದ್ಧತೆ ಕರ್ನಾಟಕದಲ್ಲಷ್ಟೇ ಅಲ್ಲ ದಿಲ್ಲಿಯ ಸುಪ್ರೀಂ ಕೋರ್ಟ್‌ನಲ್ಲಿಯೂ ಸಹ ತಮ್ಮ ವಕಾಲತ್ತನ್ನು ವಿಸ್ತರಿಸುತ್ತಾರೆ. ಸಂವಿಧಾನದ ಪ್ರಮುಖ ವ್ಯಾಖ್ಯಾನ ಮಾಡುವಂತಹ ಎಲ್ಲಾ ಮೊಕದ್ದಮೆಗಳಲ್ಲಿಯೂ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತಮ್ಮ ವೃತ್ತಿ ಸೇವೆಯ ಮೂಲಕ ಸಂವಿಧಾನ ಜನಪರವಾಗುವ ಬೆಳವಣಿಗೆಗೆ ಕಾರಣಕರ್ತರಾಗುತ್ತಾರೆ. ಹಾವನೂರರ ಕೆಚ್ಚೆದೆಯ ಧೈರ್ಯ ಎಂತಹ ಸನ್ನಿವೇಶಗಳಲ್ಲೂ ಹೋರಾಡಿ ಸಾಮಾಜಿಕನ್ಯಾಯ ಜಯಶಾಲಿಯಾಗುವಂತೆ ಮಾಡಿತು. ಒಮ್ಮೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅವರು ವಾದ ಮಾಡುವಾಗ ಇನ್ನು ಎಷ್ಟು ಸಮಯ ಬೇಕು ಎಂದು ಕೇಳಿದಾಗ ಹಾವನೂರರ ಉತ್ತರ: ‘‘ನಿಮ್ಮ ಪ್ರಶ್ನೆಗೆ ತೀವ್ರ ಪ್ರತಿಭಟನೆಯಿದೆ; ಕೇಶವಾನಂದ ಭಾರತಿಗೆ ಈ ತರ ಪ್ರಶ್ನೆ ಕೇಳಿದ್ದೀರೇ? ಟಾಟಾ ಬಿರ್ಲಾ ಮೊಕದ್ದಮೆಗಳಲ್ಲಿ ಈ ತರ ಪ್ರಶ್ನೆ ಕೇಳಿದ್ದೀರೇ? ದಲಿತರು, ಹಿಂದುಳಿದ ವರ್ಗಗಳು ಅಪರೂಪಕ್ಕೆ ಇಲ್ಲಿ ಬಂದಾಗ ಈ ತರ ಪ್ರಶ್ನೆ ಕೇಳಕೂಡದು’’ ಎಂದಿದ್ದರು. ವಿಶೇಷವಾಗಿ, ಅವರು ಸಾಮಾಜಿಕ ನ್ಯಾಯದ ವಿಷಯಗಳು ಬಂದಾಗ ತಮ್ಮ ಸ್ವಂತ ಖರ್ಚಿನಲ್ಲಾದರೂ ದಿಲ್ಲಿಗೆ ಹೋಗಿ ಮೊಕದ್ದಮೆಗಳನ್ನು ನಡೆಸಿ ಬರುತ್ತಿದ್ದರು. ಆ ಪ್ರಕಾರ 1962ರ ಬಾಲಾಜಿ ಪ್ರಕರಣದಿಂದ ಹಿಡಿದು 1992ರ ಮಂಡಲ್ ಆಯೋಗದ ಮೊಕದ್ದಮೆಯವರೆಗೂ ಹಾವನೂರರು ತಮ್ಮ ವೃತ್ತಿ ಕೌಶಲವನ್ನು, ಸಾಮಾಜಿಕ ಬದ್ಧತೆಯನ್ನು ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಮೀಸಲಾಗಿರಿಸಿದ್ದರು. ಮಂಡಲ್ ವರದಿಯ ಸಮರ್ಥನೆಗೆ ಕೇಂದ್ರ ಸರಕಾರ ಹಾವನೂರರನ್ನೇ ಸರಕಾರಿ ವಕೀಲರಾಗಿ ನೇಮಕ ಮಾಡಿ ಜಯಶಾಲಿಯಾಯಿತು. ಹಾವನೂರರ ನ್ಯಾಯತತ್ಪರತೆ ಮತ್ತು ಉದಾರತೆ ಕಾರಣ ಮೊಕದ್ದಮೆಗಳಲ್ಲಿ, ಅವರ ವಿರುದ್ಧ ವಾದ ಮಾಡುತ್ತಿದ್ದ ವಕೀಲರು ಸಹ, ಅವರ ಸಮಾಲೋಚನೆ ಮತ್ತು ಸಲಹೆಗಳನ್ನು ಪಡೆಯುತ್ತಿದ್ದರು. ಹಾವನೂರರ ವೈಶಿಷ್ಟ್ಯಪೂರ್ಣ ಕಾನೂನು ಸೇವೆಯನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಅವರನ್ನು ಹಿರಿಯ ನ್ಯಾಯವಾದಿಯಾಗಿ ಪದಾಂತಿಕ ಸ್ಥಾನವನ್ನು ಕೊಟ್ಟಿತು.

1969ರಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬಾಗವಾದ ಸಂದರ್ಭದಲ್ಲಿ ದೇವರಾಜ ಆರಸುರವರಿಗೆ ಬೆನ್ನೆಲುಬಾಗಿ ನಿಂತವರು ಹಾವನೂರರು. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಎಲ್ಲಾ ತಾಲೂಕುಗಳ ಸಾಮಾಜಿಕ ಹಿನ್ನೆಲೆಯ ಪೂರ್ಣ ಪರಿಚಯವನ್ನು ಅರಸರಿಗೆ ಮಾಡಿ 1972 ಮತ್ತು 1978ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚುವ ಪ್ರತ್ಯಕ್ಷ ಅಥವಾ ಪರೋಕ್ಷ ಜವಾಬ್ದಾರಿಯನ್ನು ವಹಿಸಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಶ್ರಮಿಸಿದರು. ವಿಶೇಷವಾಗಿ ಅವರ ಬಹುಮುಖ್ಯ ಕಲ್ಪನೆಯಾದ ಸೋಷಿಯಲ್ ಇಂಜಿನಿಯರಿಂಗ್ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಹಿಂದೆಂದೂ ಕಾಣದಂತಹ ಪ್ರಾತಿನಿಧ್ಯವನ್ನು ಕೊಟ್ಟು ಆ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯಲ್ಲಿ ರಾರಾಜಿಸಲು ಕಾರಣೀಕರ್ತರಾದರು.

1978ರ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಈ ಲೇಖಕರೇ ಸಾಕ್ಷಿಯಾಗಿದ್ದರು. ಹಾವನೂರರು 1931ರ ಜನಗಣತಿ ಜಾತಿಗಳ ನಿಖರ ಜನಸಂಖ್ಯೆಯನ್ನು ಸಂಗ್ರಹಿಸಿದರು. ಜಾತಿ ಜನಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು ಪ್ರತೀ ವಿಧಾನ ಸಭಾ ಕ್ಷೇತ್ರದ ನಿಖರವಾದ ಜಾತಿವಾರು ಅನುಪಾತ ಪತ್ತೆಹಚ್ಚಿ ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದವರ ಜನಸಂಖ್ಯೆ ಗೆಲ್ಲುವ ಸಾಧ್ಯತೆ ಇದೆ ಎನ್ನುವ ಸಮೀಕ್ಷೆಯನ್ನು ಮಾಡಿ ಪ್ರತ್ಯಕ್ಷವಾಗಿ ಸುಮಾರು 150 ಹೊಸಮುಖಗಳನ್ನು ಆಯ್ಕೆ ಮಾಡಿದರು. ಆಯ್ಕೆ ಮಾಡಿದಂತಹ ಪಟ್ಟಿಯನ್ನು ಹಾವನೂರರೇ ಖುದ್ದಾಗಿ ಪತ್ರಕರ್ತರ ಸಭೆಯಲ್ಲಿ ಬಿಡುಗಡೆ ಮಾಡಿದರು. ಅಷ್ಟೊಂದು ಹೊಸಮುಖಗಳ ಆಯ್ಕೆಯ ಹಿನ್ನೆಲೆಯಲ್ಲಿ ಪತ್ರಕರ್ತರು ಹಾವನೂರರನ್ನು ಗೇಲಿ ಮಾಡಿದಾಗ ಪತ್ರಕರ್ತರಿಗೆ ಕರಾರುವಾಕ್ಕಾಗಿ ಸಂಖ್ಯೆ ಬರೆದುಕೊಳ್ಳಲು ಹೇಳಿದರು. 150ರಿಂದ 160 ಎಂದು ಅವರು ಹೇಳಿದಾಗ ಯಾರೂ ನಂಬಲಿಲ್ಲ. ಆನಂತರ ಚುನಾವಣೆ ನಡೆದು ಫಲಿತಾಂಶ ಬಂದಾಗ ಬರೋಬ್ಬರಿ 151 ಕ್ಷೇತ್ರಗಳಲ್ಲಿ ಗೆದ್ದು ದೇವರಾಜ ಅರಸುರವರು ಪ್ರಚಂಡ ಬಹುಮತದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಸಮಾಜದ ಸಂಪೂರ್ಣ ಮಾಹಿತಿ ಇದ್ದ ಹಾವನೂರರು ಸಮಾಜಕ್ಕೆ ನಾಡಿ ಹಿಡಿದು ಪರಿಹಾರವನ್ನು ಕೊಡಬಲ್ಲಷ್ಟು ಪರಿಣಿತರಾಗಿದ್ದರು. ದೇವರಾಜ ಅರಸರಂತೂ ಹಾವನೂರರ ಜ್ಞಾನ ಸಂಪತ್ತು ಮತ್ತು ಅವರ ಸಾಮಾಜಿಕ ಇಂಜಿನಿಯರಿಂಗ್ ಪ್ರಯೋಗವನ್ನು ನೋಡಿ ಮೂಕವಿಸ್ಮಿತರಾಗಿದ್ದರು. ಇದರ ಫಲವೇ ಅರಸರು ಹಾವನೂರರನ್ನು ತಮ್ಮ ಸಚಿವ ಸಂಪುಟದ ಪ್ರಮುಖ ಸ್ಥಾನದಲ್ಲಿ ಕೂರಿಸಿಕೊಂಡರು.

ಹಾವನೂರ ಆಯೋಗ

ಬಾಲಾಜಿ ಮೊಕದ್ದಮೆಯ ತೀರ್ಪನ್ನೇ ನೆಪವಾಗಿಟ್ಟು ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿತ್ತು (1962). ವ್ಯಕ್ತಿಪರ ಶಿಕ್ಷಣ, ಉನ್ನತ ವ್ಯಾಸಂಗ ಮತ್ತು ಸರಕಾರಿ ಉದ್ಯೋಗಗಳ ಅವಕಾಶಗಳನ್ನು ನಿರೀಕ್ಷಿಸುತ್ತಿದ್ದ ಹಿಂದುಳಿದ ಜಾತಿಗಳಿಗೆ ಮಾರಕವಾದ ಈ ಬೆಳವಣಿಗೆಯಿಂದ ಲಕ್ಷಾಂತರ ಯುವಕರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾದರು. ಯಾವ ಜಾತಿವ್ಯವಸ್ಥೆ, ತಾರತಮ್ಯ ಮತ್ತು ಶೋಷಣೆಯಿಂದ ಮೀಸಲಾತಿಯೆಂಬ ದೋಣಿ ಏರಿ ಪಾರಾಗಬೇಕೆಂದಿದ್ದರೋ ಆ ದೋಣಿಯೇ ಮುಳುಗಿದ ಕಥೆ ಆಯಿತು.

ದಶಕಗಳ ಈ ಸಾಮಾಜಿಕ ಅನ್ಯಾಯದಿಂದ ತತ್ತರಿಸಿದ್ದ ಈ ಜನತೆಗೆ ದೇವರಾಜ ಅರಸುರವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ವರದಾನವಾಯಿತು. ದೇವರಾಜ ಅರಸುರವರು ಈ ಯುವ ವಕೀಲನ ಸಾಮಾಜಿಕ ಕಾಳಜಿ ಮತ್ತು ಅಪಾರ ಪಾಂಡಿತ್ಯ ಗಮನಿಸಿ ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಕೆಲಸವೆಂದರೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ ಹಾವನೂರರನ್ನು ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದ್ದು (1972).

ಹಾವನೂರ ವರದಿ

ಹಾವನೂರರು ಅಧ್ಯಕ್ಷರಾದ ದಿನದಿಂದ ಮನೆ ಬಿಟ್ಟು ಜೀವನೋಪಾಯದ ಏಕೈಕ ವೃತ್ತಿಯನ್ನೂ ಕೈಬಿಟ್ಟು ಹಗಲು ರಾತ್ರಿ ಆಯೋಗದ ಕಾರ್ಯಕ್ರಮದಲ್ಲಿ ಮುಳುಗಿ ಹೋದರು. ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಸಮೀಕ್ಷೆಯನ್ನು ನಡೆಸಿದರು. ಹಿಂದುಳಿದ ಜಾತಿಗಳನ್ನು ಬಡಿದೆಬ್ಬಿಸಿ ರಾಜ್ಯಾದ್ಯಂತ ಸಮ್ಮೇಳನಗಳು, ಶಿಬಿರಗಳು, ಕಾರ್ಯಾಗಾರಗಳು ಮತ್ತು ಸಮಾಲೋಚನಾ ಶಿಬಿರಗಳನ್ನು ನಡೆಸಿದರು. ರಾಷ್ಟ್ರದ ಉದ್ಧಾಮ ಸಂವಿಧಾನ ತಜ್ಞರಾದ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಕೆ. ಸುಬ್ಬರಾವ್, ನ್ಯಾ. ಕೆ. ಎಸ್. ಹೆಗ್ಡೆಯವರ ಸಲಹೆ ಮತ್ತು ಸೂಚನೆಗಳನ್ನು ಪಡೆದರು. ಹಗಲು ರಾತ್ರಿ ಶ್ರಮ ವಹಿಸಿ ಮಾಹಿತಿ ಸಂಗ್ರಹಿಸಿದರು. 200 ಗಣಕದಾರರ ಮೂಲಕ ಮಾಹಿತಿಯನ್ನು ವಿಂಗಡಿಸಿ ಜಿಲ್ಲಾವಾರು ಪ್ರತಿಯೊಂದು ಜಾತಿಯ ಬಗ್ಗೆ ಕೋಷ್ಟಕ ನಿರೂಪಣೆ ಮಾಡಿದರು. ಬೆಂಗಳೂರಿನಲ್ಲಿ ಏಕಾಗ್ರತೆಯಿಂದ ಕೆಲಸ ಮಾಡುವುದು ಕಷ್ಟವೆಂದು ಅರಿತು ಕೊನೆಯ 6 ತಿಂಗಳ ಕಾಲ ತಿಪ್ಪಗೊಂಡನಹಳ್ಳಿಯ ಜಲಮಂಡಳಿ ಅಥಿತಿ ಗೃಹದಲ್ಲಿ ತಂಗಿ 3 ಲಾರಿ ಪುಸ್ತಕಗಳು, ಮಾಹಿತಿ ವಿಷಯಗಳು ಮತ್ತಿತರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ವರದಿ ಸಿದ್ಧ ಮಾಡಲು ಪ್ರಾರಂಭಿಸಿದರು. ಸರಕಾರದ ಯಾವುದೇ ಅಧಿಕಾರಿಗಳಾಗಲಿ, ಅತಿಥಿಗಳಾಗಲಿ ಆ ಸಮಯದಲ್ಲಿ ಅತಿಥಿಗೃಹವನ್ನು ಬಳಸದಂತೆ ವಿನಂತಿಸಿದರು. ಅವರೊಡನೆ ಅವರ ಶೀಘ್ರಲಿಪಿಕಾರ ಮಾತ್ರ ಕೆಲಸ ಮಾಡಿದರು. ತಪಸ್ಸಿನೋಪಾದಿಯಲ್ಲಿ ವರದಿಯನ್ನು ಸಿದ್ಧ ಮಾಡಿ ಸರಕಾರಿ ಮುದ್ರಣಾಲಯಕ್ಕೆ ತಂದು ಖುದ್ದಾಗಿ ನಿಂತು ವರದಿಯ ಅಚ್ಚು ಮಾಡಿಸಿದರು. ಇಡೀ ವರದಿಯನ್ನು ಒಬ್ಬರೇ ತಯಾರಿಸಿದರು. ಮೂರು ವರ್ಷ ಒಂದುವೂ ದಿನ ರಜೆ ತೆಗೆದುಕೊಳ್ಳದೆ ಏಕ್ರಾಗತೆಯಿಂದ ಕೆಲಸ ಮಾಡಿದರು. ಕೊಟ್ಟ ಸಮಯದಲ್ಲಿ ಕೆಲಸ ಮುಗಿಸಿ 19/11/1975ರಂದು ಮುಖ್ಯಮಂತ್ರಿಗಳಿಗೆ ವರದಿಯನ್ನು ನೀಡಿ ಕೂಡಲೇ ಜಾರಿಯಾಗುವಂತೆ ವಿನಂತಿಸಿದರು.

ಚಲನಾ ರಹಿತ ಸಮಾಜದಲ್ಲಿ ಹಾವನೂರು ವರದಿ ಸಮುದ್ರ ಮಂಥನದಷ್ಟೇ ಖ್ಯಾತಿ ಪಡೆಯಿತು. ಜಾತಿ ಜಾತಿಗಳ ನಡುವೆ ಸಮಾನತೆಯನ್ನು ತರುವಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಲ್ಲೂ ಭರವಸೆಗಳನ್ನು ಮೂಡಿಸಿತು. ಪ್ರತೀ ವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಕೊಡಿಸುವುದರ ಮೂಲಕ ಸಮಾಜದ ಎಲ್ಲ ಜಾತಿಗಳ ಪ್ರತಿಭಾವಂತರಿಗೆ ಅಭ್ಯುದಯಕ್ಕೆ ಅವಕಾಶ ಮಾಡಿಕೊಟ್ಟಿತು. ಕರ್ನಾಟಕ ರಾಜ್ಯವನ್ನು ಇಡೀ ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಹಾವನೂರು ವರದಿಯ ಅನುಷ್ಠಾನ ಒಂದು ದೊಡ್ಡ ದಾಪುಗಾಲು. ಪ್ರಾರಂಭದಲ್ಲೇ ವಾರ್ಷಿಕ ಸುಮಾರು 25,000 ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್, ಡೆಂಟಲ್ ಮತ್ತು ಇತರ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶವನ್ನು ಕಲ್ಪಿಸಲಾಯಿತು. ಇಂದು ಬೆಂಗಳೂರು ದಕ್ಷಿಣದ ಸಿಲಿಕಾನ್ ಸಿಟಿಯಾಗಲು ಹಾವನೂರು ವರದಿಯ ಅನುಷ್ಠಾನ ಬಹಳ ದೊಡ್ಡ ಕಾರಣ. ಉದ್ಯೋಗದಲ್ಲಿ ಮೀಸಲಾತಿ ಕೊಡುವುದರ ಮೂಲಕ ಕರ್ನಾಟಕವನ್ನು ಸಮರ್ಥ ಆಡಳಿತದ ರಾಜ್ಯ ಎಂಬ ಖ್ಯಾತಿಗೆ ಅನುವು ಮಾಡಿಕೊಟ್ಟಿತು. ಹಾವನೂರು ಆಯೋಗ ವರದಿ ಜಾರಿಯಾದ ನಂತರ ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಕಾಲ ಪ್ರಾರಂಭವಾಗಿದೆ ಎಂದು ಹೇಳಿರುವುದು ಅತಿಶಯೋಕ್ತಿಯಲ್ಲ.

ಹಾವನೂರ ವರದಿಯ ಮುಖ್ಯ ಶಿಫಾರಸುಗಳು(1975)

1) ಸಂವಿಧಾನದ ಪರಿಚ್ಛೇದ 15(4) ರಲ್ಲಿ ಇತರ ಹಿಂದುಳಿದ ವರ್ಗಗಗಳಿಗೆ ಶಿಕ್ಷಣದಲ್ಲಿ ಮೀಸಲಾತಿ.

2) ಸಂವಿಧಾನದ ಪರಿಚ್ಛೇದ 16(4)ರಲ್ಲಿ ಸರಕಾರಿ ಸೇವೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ.

3) ಹಿಂದುಳಿದ ಬುಡಕಟ್ಟುಗಳಿಗೆ ಮೀಸಲಿಟ್ಟ ಸ್ಥಾನಗಳಿಗೆ ಅಭ್ಯರ್ಥಿಗಳಿಲ್ಲದಿದ್ದಲ್ಲಿ ಹಿಂದುಳಿದ ಸಮುದಾಯಗಳು ಮತ್ತು ಹಿಂದುಳಿದ ಜಾತಿಗಳಿಗೆ ಪ್ರವೇಶಾವಕಾಶ/ಉದ್ಯೋಗಗಳನ್ನು ವರ್ಗಾಯಿಸಬೇಕು; ಹಿಂದುಳಿದ ಜಾತಿಗಳ ಮೀಸಲಾತಿ ತುಂಬಲಾಗದಿದ್ದಲ್ಲಿ ಹಿಂದುಳಿದ ಸಮುದಾಯಗಳು ಮತ್ತು ಹಿಂದುಳಿದ ಬುಡಕಟ್ಟುಗಳಿಗೆ ವರ್ಗಾಯಿಸಬೇಕು.

4) ಸ್ನಾತಕೋತ್ತರ ಶಿಕ್ಷಣದಲ್ಲಿ ಮತ್ತು ಸಂಶೋಧನಾ ಸಂಸ್ಥೆಗಳಲ್ಲೂ ಮೀಸಲಾತಿ ನೀಡಬೇಕು.

5) ಈ ಎಲ್ಲಾ ಆಯ್ಕೆ ಸಮಿತಿಗಳಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಜೊತೆಗೆ ಹಿಂದುಳಿದ ಜಾತಿಯ ಮೂರೂ ವರ್ಗಗಳ ಸದಸ್ಯರ ಪ್ರಾತಿನಿಧ್ಯವಿರಬೇಕು.

6) ಹೊರದೇಶದಲ್ಲೂ ವೈದ್ಯಕೀಯ, ತಾಂತ್ರಿಕ ಶಿಕ್ಷಣ, ಕೃಷಿ ವಿಜ್ಞಾನ ಮತ್ತಿತರ ಉನ್ನತ ಮತ್ತು ಪರಿಣತಿ ವ್ಯಾಸಂಗಕ್ಕೆ ವರ್ಷಕ್ಕೆ ಕನಿಷ್ಠ 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡಬೇಕು.

7) ಸಾಕಷ್ಟು ಉಚಿತ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು; ಪ್ರತೀ ಗ್ರಾಮ ಪಂಚಾಯತ್‌ಗೊಂದು, ಕಾಲೇಜಿರುವ ಪ್ರತೀ ಪಟ್ಟಣದಲ್ಲಿ ಒಂದು ವಿದ್ಯಾರ್ಥಿ ನಿಲಯವಿರಬೇಕು, ವಾರ್ಷಿಕ ಆದಾಯ ರೂ. 6,000ಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಅದೇ ಅನುಪಾತದಲ್ಲಿ ಪ್ರವೇಶ ನೀಡಬೇಕು.

8) ಹಾಸ್ಟೆಲ್‌ನಲ್ಲಿ ಪ್ರವೇಶ ದೊರಕದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಕಾಲರ್‌ಶಿಪ್ ಕೊಡಬೇಕು.

9) ವಾರ್ಷಿಕ ಆದಾಯ ರೂ. 6,000ಕ್ಕಿಂತ ಕಡಿಮೆಯಿರುವ ಮಕ್ಕಳಿಗೆ ಎಲ್ಲಾ ಶಿಕ್ಷಣ ಶುಲ್ಕ ಮತ್ತು ಪರೀಕ್ಷಾ ಶುಲ್ಕದಿಂದ ಎಲ್ಲ ಹಂತದ ಶಿಕ್ಷಣದಲ್ಲೂ ವಿನಾಯಿತಿ ನೀಡಬೇಕು.

10 ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿಯೇ ಪ್ರತ್ಯೇಕ ಇಲಾಖೆ, ನಿರ್ದೇಶನಾಲಯ ಮತ್ತು ಸಂಪುಟ ದರ್ಜೆ ಸಚಿವರಿರಬೇಕು (ಸ್ವತಂತ್ರ ಖಾತೆ).

11 ಆರ್ಥಿಕ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪನೆ.

12 ಮೀಸಲಾತಿ ಮೂಲಕ ಅಭಿವೃದ್ಧಿ ಹೊಂದಿದ ಎಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗದ ಜನರು ತಮ್ಮ ವರಮಾನದ ಶೇ. 10 ಈ ಅಭಿವೃದ್ಧಿ ನಿಗಮಕ್ಕೆ ದೇಣಿಗೆಯಾಗಿ ನೀಡಿ ಮುಂದೆ ಬರುವವರ ಅಭಿವೃದ್ಧಿಗೆ ಸಹಾಯವಾಗಬೇಕು.

13 ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳ ಸಮಸ್ಯೆಗಳ ಅಧ್ಯಯನ ಸಂಸ್ಥೆ ಸ್ಥಾಪಿಸಬೇಕು.

ಸಂಸತ್ ಸದಸ್ಯ

ವರದಿ ಸಲ್ಲಿಸಿದ ಕೆಲ ಸಮಯದಲ್ಲಿಯೇ ಹಾವನೂರರ ಸೇವೆ ಈ ನಾಡಿಗೆ ರಾಷ್ಟ್ರ ಮಟ್ಟದಲ್ಲಿ ದೊರೆಯಲಿ ಎಂಬ ಕಾರಣಕ್ಕಾಗಿ 1977ರಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಆಗ ಸದನದಲ್ಲಿ ತಮ್ಮ ವಿದ್ವತ್ ಪೂರ್ಣ ಭಾಷಣದಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದರು. ಸಭಾಧ್ಯಕ್ಷರು ನೀಡಿದ ಸಮಯಕ್ಕಿಂತ ಹೆಚ್ಚಿನ ಮಾತುಗಳನ್ನಾಡುವ ಸಂದರ್ಭದಲ್ಲಿ ಸದನದ ಹಿರಿಯ ಸದಸ್ಯರು ಸಹ ಅವರ ಸಮಯವನ್ನು ಹಾವನೂರರವರಿಗೆ ಬಿಟ್ಟುಕೊಟ್ಟು ಅವರ ಭಾಷಣ ನಿರಂತರವಾಗಿ ಮತ್ತು ನಿರರ್ಗಳವಾಗಿ ನಡೆಯಲು ಅವಕಾಶ ಮಾಡಿಕೊಡುತ್ತಿದ್ದರು. ಕರ್ನಾಟಕದ ವಿಧಾನ ಮಂಡಲದಲ್ಲಾಗಲಿ, ರಾಜ್ಯಸಭೆಯಲ್ಲಾಗಲಿ ಹಾವನೂರರು ಮಾತನಾಡಲು ನಿಂತರೆ ಇಡೀ ಸದನ ಗಮನವಿಟ್ಟು ಅವರ ಭಾಷಣವನ್ನು ಆಲಿಸಿ ವಿಷಯದ ಮನವರಿಕೆ ಮಾಡಿಕೊಳ್ಳುತ್ತಿತ್ತು. ರಾಜ್ಯಸಭೆ ಮತ್ತು ವಿಧಾನ ಮಂಡಲದಲ್ಲಿ ಸಿಕ್ಕ ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡ ಹಾವನೂರರು ಆಭಿವ್ಯಕ್ತಿ ಸ್ವಾತಂತ್ರ್ಯವನ್ನು ಶ್ರೀಮಂತಗೊಳಿಸಿ ಸಭೆಯ ಕಲಾಪಗಳಿಗೆ ಗಾಂಭೀರ್ಯತೆಯನ್ನು ನೀಡಿದರು. ರಾಜ್ಯಸಭೆಯಲ್ಲಿ ಅವರು ನ್ಯಾಯಾಂಗದ ಸಾಮಾಜೀಕರಣದ ಬಗ್ಗೆ ಹೆಚ್ಚು ಪ್ರಸ್ತಾಪಿಸಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಮಂತ್ರಿ

ಹಾವನೂರು ವರದಿಯ ಸರ್ವಕಾಲಿಕ ಸಾಮಾಜಿಕ ನ್ಯಾಯದ ತತ್ವಗಳನ್ನು ಗಂಭೀರವಾಗಿ ಪರಿಗಣಿಸಿ, ಮುಖ್ಯಮಂತ್ರಿ ದೇವರಾಜ ಅರಸು ಅವರು ಆ ವರದಿಯ ಎಲ್ಲಾ ಶಿಫಾರಸುಗಳನ್ನು ಜಾರಿಗೊಳಿಸಲು ಅನುಕೂಲವಾಗುವಂತೆ ಲಕ್ಷ್ಮಣ ಹಾವನೂರುರವರನ್ನೇ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿ ಮಾರ್ಚ್ 1978ರಲ್ಲಿ ನೇಮಕ ಮಾಡಿಕೊಂಡರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಹಾವನೂರರು ತಮ್ಮ ವರದಿಯ ಎಲ್ಲಾ ಶಿಫಾರಸುಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದರು. ಪ್ರಮುಖವಾಗಿ ಸುಮಾರು ಎರಡು ಸಹಸ್ರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ರಾಜ್ಯಾದ್ಯಂತ ತೆರೆದು ಎರಡು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಿ ಜೀವನ ಪರ್ಯಂತ ಶಿಕ್ಷಣದ ಸೌಲಭ್ಯ ದೊರಕುವಂತೆ ಒಂದು ಕ್ರಾಂತಿಕಾರಕ ಹೆಜ್ಜೆಯ ಮೂಲಕ ಹಿಂದುಳಿದ ವರ್ಗಗಳ ಪ್ರಗತಿಗೆ ನಾಂದಿ ಹಾಡಿದರು. ಇದು ಸಾಮಾಜಿಕ ಮತ್ತು ಆರ್ಥಿಕ ತೊಂದರೆಗಳಿಂದ ಮುಕ್ತಿ ಪಡೆದು ಹಿಂದುಳಿದ ವರ್ಗಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕಾರಣಕರ್ತರಾದರು. 27/04/1978ರಂದು ಸರಕಾರದ ಆದೇಶ ಹೊರಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭಡ್ತಿಯಲ್ಲೂ ಮೀಸಲಾತಿ ದೊರಕುವಂತೆ ಸಂವಿಧಾನದ ಆಶಯವನ್ನು ಈಡೇರಿಸಿದರು. ಈ ಕ್ರಾಂತಿಕಾರಕ ಹೆಜ್ಜೆ ರಾಜ್ಯದ ಬಹುತೇಕ ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ ಮಾಡಿಕೊಟ್ಟರು. ಆ ಮೂಲಕ ಇಡೀ ರಾಜ್ಯದ ಆಡಳಿತ ಚುಕ್ಕಾಣಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಧಿಕಾರಿಗಳಲ್ಲಿ ಕೇಂದ್ರೀಕರಿಸಿ ರಾಜ್ಯದ ಸಮಾಜ ಕಲ್ಯಾಣಕ್ಕೆ ದಾಪುಗಾಲು ಹಾಕಲು ಅನುವು ಮಾಡಿಕೊಟ್ಟಿತು. 01/01/1979ರಿಂದ ಜಾರಿಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಸರಕಾರದಿಂದ ಕೊಡಮಾಡಲ್ಪಟ್ಟಿದ್ದ ಜಮೀನುಗಳನ್ನು ಪರಭಾರೆ ಮಾಡಿದ್ದನ್ನು ರದ್ದುಗೊಳಿಸಿ, ಆ ಎಲ್ಲ ಜಮೀನುಗಳು ಮೂಲ ದರ್ಖಾಸ್ತುದಾರರಿಗೆ ವಾಪಸ್ ಕೊಡಿಸಲು ಕಾಯ್ದೆ ಮಾಡಿದರು. ಈ ಮೂಲಕ ಹಣದ ಮುಗ್ಗಟ್ಟಿನಿಂದ ಸರಕಾರದಿಂದ ಬಂದಂತಹ ಜಮೀನುಗಳನ್ನು ಪರಭಾರೆ ಮಾಡಿ ಮತ್ತೆ ನಿರ್ಗತಿಕರಾಗಿದ್ದ ಲಕ್ಷೋಪಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಗಳಿಗೆ ತಮ್ಮ ಜೀವನೋಪಾಯ ಮರಳಿ ಬರುವುದಕ್ಕೆ ಕಾರಣಕರ್ತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರೊ. ರವಿವರ್ಮ ಕುಮಾರ್

contributor

Similar News