8,462 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣ: ಮೆಕ್ಕೆಜೋಳ ಬೆಳೆಯತ್ತ ರೈತರ ಚಿತ್ತ
ಪಾವಗಡ: ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಬಿತ್ತನೆಯ ಕಾರ್ಯ ಚುರುಕು ಪಡೆದಿದೆ. ಒಂದೇ ವಾರದ ಅವಧಿಯಲ್ಲಿ 50,120 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಬೇಕಿತ್ತು. ಮುಂಗಾರು ಪೂರ್ವ ದಿಂದಲೇ ಉತ್ತಮ ಮಳೆಯಾಗಿದೆ. ಈಗಾಗಲೇ ಶೇ.17ರಷ್ಟು ಬಿತ್ತನೆ ಆಗಿದೆ.
ಪ್ರಸಕ್ತ ಸಾಲಿನಲ್ಲಿ ನೀರಾವರಿ ಪ್ರದೇಶ ಮತ್ತು ಮಳೆ ಆಶ್ರಿತ ಪ್ರದೇಶದಲ್ಲಿ 50.120 ಹೆಕ್ಟೇರ್ ಹಾಗೂ ಖುಷ್ಕಿ ಪ್ರದೇಶದಲ್ಲಿ 8,462 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈಗಾಗಲೇ ನೀರಾವರಿ ಪ್ರದೇಶದಲ್ಲಿ 3,462 ಹೆಕ್ಟೇರ್ ಹಾಗೂ ಖುಷ್ಕಿ ಪ್ರದೇಶದಲ್ಲಿ 5,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ವಿವಿಧ ಬೆಳಗಳನ್ನು ಬಿತ್ತನೆ ಮಾಡಿದ್ದಾರೆ.
ತಾಲೂಕುವಾರು ಬಿತ್ತನೆಯಾದ ಪ್ರದೇಶ ನೋಡಿದಾಗ ಹೋಬಳಿಯ ಪ್ರದೇಶದಲ್ಲಿ ಹೆಚ್ಚಿನ ಬಿತ್ತನೆ ಪ್ರಮಾಣ ಆಗಿದ್ದು, ನಂತರದ ಸ್ಥಾನದಲ್ಲಿ ನಿಡಿಗಲ್, ವೈ.ಎನ್.ಹೊಸಕೋಟೆ, ನಾಗಲಮಡಿಕೆ, ಕಸಬಾ, ಕ್ರಮವಾಗಿ ಬಿತ್ತನೆ ಪ್ರಮಾಣ ಹೊಂದಿವೆ. ಮುಂಗಾರು ಪೂರ್ವ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಿದ್ದು, ಜೂನ್ ತಿಂಗಳಲ್ಲಿ ಮಳೆ ಪ್ರಮಾಣ ವಾಡಿಕೆಯಂತೆ ಆಗಿಲ್ಲದಿದ್ದರೂ, ಮುಂಗಾರು ಪೂರ್ವ ಮಳೆಗೆ ಕೃಷಿ ಭೂಮಿಗಳು ಹದವಾಗಿರುವುದರಿಂದ ಮತ್ತು ಆಗಾಗ ಮುಂಗಾರು ಮಳೆಯೂ ಆಗಿರುವುದರಿಂದ ಬಿತ್ತನೆಗೆ ಪೂರಕವಾಗಿದೆ. ಉತ್ತಮ ಫಸಲಿನ ಆಶಾಭಾವನೆ ಯೊಂದಿಗೆ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವನ್ನು ವೇಗಗೊಳಿಸಿದ್ದು, ಪಾವಗಡ ತಾಲೂಕಿನಲ್ಲಿ ಪ್ರಮುಖವಾಗಿ ವಾಣಿಜ್ಯ ಬೆಳೆಗಳ ಕೃಷಿಗೆ ರೈತರು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.
ಹೋಬಳಿವಾರು ಬಿತ್ತನೆ ಪ್ರಮಾಣ: ನಿಡಿಗಲ್ ಹೋಬಳಿಯಲ್ಲಿ 5,694 ಹೆಕ್ಟೇರ್, ವೈ.ಎನ್.ಹೊಸಕೋಟೆಯಲ್ಲಿ 1,173 ಹೆಕ್ಟೇರ್, ಕಸಬಾದಲ್ಲಿ 1,000 ಹೆಕ್ಟೇರ್, ನಾಗಲಮಡಿಕೆಯಲ್ಲಿ 702 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
6,150 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. 50,120 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಲ್ಲಿ 8,462 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಶೇ.83 ರಷ್ಟು ಸಾಧನೆ ಆಗಬೇಕಿದೆ.
ಜೂನ್ 1ರಿಂದ 20ರ ವರೆಗೆ ತಾಲೂಕಿನಲ್ಲಿ 48.02 ಎಂ.ಎಂ. ಪ್ರಮಾಣದಲ್ಲಿ ಮಳೆ ಆಗಬೇಕಿತ್ತು. ಆದರೆ, ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಅಂದರೆ 26.06 ಎಂ.ಎಂ. ಪ್ರಮಾಣದ ಮಳೆ ಆಗಿದೆ. ಶೇ.22ರಷ್ಟು ಮಳೆ ಕೊರತೆ ಆಗಿದೆ. ಆದರೂ, ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಿಂದ ಭೂಮಿ ಹದವಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಆಗಿರುವ ಕೊರತೆ ಪ್ರಮಾಣದ ಮಳೆಗೂ ಕೃಷಿ ಭೂಮಿ ಬಿತ್ತನೆ ಕಾರ್ಯ ಕೈಗೊಳ್ಳಲು ಪೂರಕವಾಗಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಇಲಾಖೆ ಕೂಡ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಕೊರತೆ ಆಗದಂತೆ ಕ್ರಮ ವಹಿಸಿದೆ.
ಪಾವಗಡ ತಾಲೂಕಿನಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಶೇಂಗಾ (ಕಡಲೆ ಕಾಯಿ) ಬೆಳೆ ಬಿತ್ತನೆಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಪರಿಣಾಮವಾಗಿ ತಾಲೂಕಿನಲ್ಲಿ ಬಿತ್ತನೆಯಾಗಿರುವ ಒಟ್ಟು 8,462 ಹೆಕ್ಟೇರ್ ಪ್ರದೇಶದಲ್ಲಿ 722ಹೆಕ್ಟೇರ್ ಪ್ರದೇಶವನ್ನು ಹತ್ತಿ ಬೆಳೆ ಆವರಿಸಿಕೊಂಡಿದೆ. ನಂತರದಲ್ಲಿ ತೊಗರಿ ಬೆಳೆ 690 ಹೆಕ್ಟೇರ್ ಪ್ರದೇಶ ಹಾಗೂ ಮೆಕ್ಕೆಜೋಳವನ್ನು 790 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮುಂಗಾರು ಹಂಗಾಮಿ ಬೆಳೆಗಳು ಬಿತ್ತನೆ ಚುರುಕು ಪಡೆದಿದ್ದು, ರೈತರಿಗೆ ಬೀಜ ಹಾಗೂ ಗೊಬ್ಬರದ ಅಗತ್ಯ ದಾಸ್ತಾನಿದೆ. ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಲಾಗಿದೆ.
-ಅಜಯ ಕುಮಾರ್, ಸಹಾಯಕ ಕೃಷಿ ನಿರ್ದೇಶಕ, ಪಾವಗಡ