ಅರಬ್ ಜಗತ್ತಿಗೆ ರಾಜಕೀಯ ಇಚ್ಛಾಶಕ್ತಿಯ ಪಾಠ ಕಲಿಸಿದ ಖತರ್ ಮೇಲಿನ ದಾಳಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯಾಕಾಂಡ ಮತ್ತು ಜನಾಂಗ ನಿರ್ಮೂಲನ ವಿಚಾರದಲ್ಲಿ ಜಗತ್ತಿನಲ್ಲಿ ಈವರೆಗೆ ಆಗಿ ಹೋಗಿರುವ ಎಲ್ಲ ಸರ್ವಾಧಿಕಾರಿಗಳ ದಾಖಲೆಗಳನ್ನು ಮುರಿಯುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದಾರೆ. ಆ ಕೊಲೆಗಡುಕನ ಎಲ್ಲ ಯೋಜನೆಗಳಲ್ಲೂ ನೇರ ಪಾಲುದಾರನಾಗಿರುವ ಅಮೆರಿಕ ರಾಜತಾಂತ್ರಿಕತೆಯ ಕಪಟ ನಾಟಕವಾಡುತ್ತಾ ಇಡೀ ಅರಬ್ ಜಗತ್ತಿಗೆ ಟೋಪಿ ಹಾಕುತ್ತಿರುವುದು ಖತರ್ ಮೇಲಿನ ದಾಳಿಯಿಂದ ಮತ್ತೆ ದೃಢಪಟ್ಟಿದೆ. ಈ ಹಿಂದೆ ಇರಾನ್‌ನಲ್ಲಿ ರಾಜಿ ಮಾತುಕತೆಯ ಹೊಗೆಬೇಲಿ ಸೃಷ್ಟಿಸಿ ಇಸ್ರೇಲ್ ಜತೆಗೂಡಿ ನಡೆಸಿದ ದಾಳಿಯು ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕಿತ್ತು. ವಾಣಿಜ್ಯ ಮತ್ತು ಜಿಯೊಪೊಲಿಟಿಕಲ್ ಹಿತಾಸಕ್ತಿಗಳ ರಕ್ಷಣೆ ಅಮೆರಿಕಕ್ಕೆ ಮುಖ್ಯವೇ ಹೊರತು ನ್ಯಾಯ, ನೀತಿ ಮತ್ತು ಮಾನವೀಯತೆ ಅಲ್ಲ ಎಂಬುದನ್ನು ಕೊಲ್ಲಿ ರಾಷ್ಟ್ರಗಳು ಇನ್ನೂ ಮನಗಾಣದಿರುವುದೇ ಅಚ್ಚರಿಯ ವಿಷಯ.
ಮಧ್ಯ ಪ್ರಾಚ್ಯದಲ್ಲಿ ಅಮೆರಿಕದ ಅತ್ಯಂತ ದೊಡ್ಡ ಸೇನಾನೆಲೆಗೆ ಆಶ್ರಯ ಕೊಟ್ಟ ಖತರ್‌ನ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯು ಗಲ್ಫ್‌ರಾಷ್ಟ್ರಗಳಿಗೆ ರಾಜತಾಂತ್ರಿಕತೆಯ ದೊಡ್ಡ ಪಾಠವೊಂದನ್ನು ಕಲಿಸಿದೆ. ಜಗತ್ತಿನ ದೊಡ್ಡಣ್ಣ ಮತ್ತು ಬೆಂಜಮಿನ್ ನೆತನ್ಯಾಹು ನೇತೃತ್ವದ ಫ್ಯಾಶಿಸ್ಟ್ ಸರಕಾರ ಜತೆಗೂಡಿ ಗಾಝಾದಲ್ಲಿ ಕಳೆದ 23 ತಿಂಗಳಿಂದ ನಡೆಸುತ್ತಿರುವ ನರಮೇಧಕ್ಕೆ ಕೊನೆ ಹಾಡಲು ದೋಹಾದಲ್ಲಿ ನಡೆಯುತ್ತಿದ್ದ ಸಂಧಾನ ಪ್ರಯತ್ನಗಳಿಗೆ ಇದೊಂದು ಹಿನ್ನಡೆಯೇ ಸರಿ. ಸಂಧಾನಕ್ಕೆ ವೇದಿಕೆ ಕಲ್ಪಿಸಿದ್ದ ರಾಷ್ಟ್ರದ ರಾಜಧಾನಿಯಲ್ಲಿ ಮಾತುಕತೆಗೆ ಆಗಮಿಸಿದ್ದ ಹಮಾಸ್ ಪ್ರತಿನಿಧಿಗಳು ತಂಗಿದ್ದ ಕಟ್ಟಡವೊಂದರ ಮೇಲೆ ನಡೆದ ದಾಳಿಯಲ್ಲಿ ಓರ್ವ ಖತರ್ ಪ್ರಜೆಯೂ ಸೇರಿದಂತೆ ಆರು ಮಂದಿ ಹತರಾಗಿದ್ದಾರೆ. ತನ್ನ ನಾಯಕತ್ವ ಇನ್ನೂ ಸುಭದ್ರವಾಗಿದೆ ಎಂದು ಹೇಳಿಕೊಂಡಿರುವ ಹಮಾಸ್ ಇದನ್ನೇ ನೆಪವಾಗಿಟ್ಟು ಇಸ್ರೇಲ್ ಜತೆಗಿನ ಸಂಧಾನದಿಂದ ಹಿಂದೆ ಸರಿಯುವ ಸಾಧ್ಯತೆಯನ್ನು ಈಗ ಅಲ್ಲಗಳೆಯುವಂತಿಲ್ಲ.
2023ರ ಅಕ್ಟೋಬರ್‌ನಲ್ಲಿ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯ ಬೆನ್ನಲ್ಲಿ ಗಾಝಾದಲ್ಲಿ ಇಸ್ರೇಲ್ ಎಸಗುತ್ತಿರುವ ನರಮೇಧಕ್ಕೆ ಈವರೆಗೆ ಸುಮಾರು 65 ಸಾವಿರ ಫೆಲೆಸ್ತೀನಿಯರು ಬಲಿಯಾಗಿದ್ದಾರೆ. 1.6 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂರರಲ್ಲಿ ಎರಡು ಭಾಗದಷ್ಟು ಸಂತ್ರಸ್ತರು ಮಕ್ಕಳು ಮತ್ತು ಮಹಿಳೆಯರೆಂಬುದು ಗಮನಾರ್ಹ. ಹಮಾಸ್ ದಾಳಿಯನ್ನು ನೆಪವಾಗಿಟ್ಟುಕೊಂಡು ಆರಂಭಿಸಿದ ಇಡೀ ಫೆಲೆಸ್ತೀನಿ ಜನಾಂಗವನ್ನೇ ‘‘ಸಾಮೂಹಿಕವಾಗಿ ಶಿಕ್ಷೆ’’ಗೊಳಪಡಿಸುವ ಇಸ್ರೇಲಿನ ರಕ್ತಸಿಕ್ತ ಮಿಲಿಟರಿ ಅಭಿಯಾನವು ದಿನೇ ದಿನೇ ತೀವ್ರಗೊಳ್ಳುತ್ತಿದೆ. ಸುಮಾರು ಒಂದು ಮಿಲಿಯ ಜನಸಂಖ್ಯೆಯಿರುವ ಗಾಝಾದಲ್ಲಿ ಶೇ.90ರಷ್ಟು ಮಂದಿ ಕನಿಷ್ಠ ಒಂದು ಬಾರಿಯಾದರೂ ನಿರಾಶ್ರಿತರಾಗಿದ್ದಾರೆ. ಇಡೀ ಪ್ರದೇಶದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಜನರನ್ನು ‘ಅನಾವೃಷ್ಟಿ’ಯ ಸಂಕಟಕ್ಕೆ ಸಿಲುಕಿಸಿದ್ದು, ವಿಶ್ವಸಂಸ್ಥೆಯೇ ಹಸಿವಿನಿಂದ ಮಕ್ಕಳು ಸಾವಿಗೀಡಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯಾಕಾಂಡ ಮತ್ತು ಜನಾಂಗ ನಿರ್ಮೂಲನ ವಿಚಾರದಲ್ಲಿ ಜಗತ್ತಿನಲ್ಲಿ ಈವರೆಗೆ ಆಗಿ ಹೋಗಿರುವ ಎಲ್ಲ ಸರ್ವಾಧಿಕಾರಿಗಳ ದಾಖಲೆಗಳನ್ನು ಮುರಿಯುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದಾರೆ. ಆ ಕೊಲೆಗಡುಕನ ಎಲ್ಲ ಯೋಜನೆಗಳಲ್ಲೂ ನೇರ ಪಾಲುದಾರನಾಗಿರುವ ಅಮೆರಿಕ ರಾಜತಾಂತ್ರಿಕತೆಯ ಕಪಟ ನಾಟಕವಾಡುತ್ತಾ ಇಡೀ ಅರಬ್ ಜಗತ್ತಿಗೆ ಟೋಪಿ ಹಾಕುತ್ತಿರುವುದು ಖತರ್ ಮೇಲಿನ ದಾಳಿಯಿಂದ ಮತ್ತೆ ದೃಢಪಟ್ಟಿದೆ. ಈ ಹಿಂದೆ ಇರಾನ್‌ನಲ್ಲಿ ರಾಜಿ ಮಾತುಕತೆಯ ಹೊಗೆಬೇಲಿ ಸೃಷ್ಟಿಸಿ ಇಸ್ರೇಲ್ ಜತೆಗೂಡಿ ನಡೆಸಿದ ದಾಳಿಯು ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕಿತ್ತು. ವಾಣಿಜ್ಯ ಮತ್ತು ಜಿಯೊಪೊಲಿಟಿಕಲ್ ಹಿತಾಸಕ್ತಿಗಳ ರಕ್ಷಣೆ ಅಮೆರಿಕಕ್ಕೆ ಮುಖ್ಯವೇ ಹೊರತು ನ್ಯಾಯ, ನೀತಿ ಮತ್ತು ಮಾನವೀಯತೆ ಅಲ್ಲ ಎಂಬುದನ್ನು ಕೊಲ್ಲಿ ರಾಷ್ಟ್ರಗಳು ಇನ್ನೂ ಮನಗಾಣದಿರುವುದೇ ಅಚ್ಚರಿಯ ವಿಷಯ.
ಐವತ್ತೈದಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮುಸ್ಲಿಮ್ ರಾಷ್ಟ್ರಗಳು ಮತ್ತು ಜಗತ್ತಿನ ಅತ್ಯಂತ ಶ್ರೀಮಂತ ಪ್ರದೇಶವಾಗಿರುವ ಆರು ರಾಷ್ಟ್ರಗಳ ಒಕ್ಕೂಟವಾದ ಜಿಸಿಸಿಯ ವೈಫಲ್ಯ ಮತ್ತು ಅಸಹಾಯಕತೆಯನ್ನೂ ಕಳೆದ ಎರಡು ವರ್ಷಗಳಿಂದ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧವು ಎತ್ತಿ ತೋರಿಸುತ್ತಿದೆ. ದಶಕಗಳಿಂದಲೂ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಪರವಾಗಿ ಧ್ವನಿಯೆತ್ತುತ್ತಾ ಬಂದಿದ್ದ ಗಲ್ಫ್ ರಾಷ್ಟ್ರಗಳ ಮಾತಿನಲ್ಲಿ ಇಂದು ಪ್ರಾಮಾಣಿಕತೆಯ ಅಭಾವ ಎದ್ದು ಕಾಣುತ್ತಿದೆ. ಆಸ್ಟ್ರೇಲಿಯದ ಸಿಡ್ನಿ ಹಾರ್ಬರ್‌ನಿಂದ ಹಿಡಿದು ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನವರೆಗೆ ಜಗತ್ತಿನ ನಾನಾ ಕಡೆಗಳಲ್ಲಿ ಫೆಲೆಸ್ತೀನ್ ಪರ ಮೆರವಣಿಗೆ, ಪ್ರತಿಭಟನೆಗಳು ನಡೆಯುತ್ತಿದ್ದರೂ ಅರಬ್ ರಾಷ್ಟ್ರಗಳಲ್ಲಿ ಅಸಹನೀಯ ಮೌನ ಮನೆಮಾಡಿದೆ. ಜನಸಂಖ್ಯೆಯಲ್ಲಿ ಅರಬ್ ಜಗತ್ತಿನ ಅತ್ಯಂತ ದೊಡ್ಡ ರಾಷ್ಟ್ರವೂ ಮಿಲಿಟರಿ ಶಕ್ತಿಯೂ ಆಗಿರುವ ಈಜಿಪ್ಟ್ ತನ್ನ ಐತಿಹಾಸಿಕ ಜವಾಬ್ದಾರಿಯನ್ನು ಮರೆತಂತಿದೆ. ಇರಾನ್, ಯಮನ್, ಮೊರಕ್ಕೋ, ಟುನೀಶಿಯಾ ಹೊರತುಪಡಿಸಿ ಯಾವುದೇ ಅರಬ್ ದೇಶದಲ್ಲಿ ಗಾಝಾದ ನರಮೇಧದ ಬಗ್ಗೆ ಸಾರ್ವಜನಿಕ ಆಕ್ರೋಶ ಕಂಡು ಬರುತ್ತಿಲ್ಲ. ಅಕ್ಟೋಬರ್ 7ರ ಹಮಾಸ್ ದಾಳಿ ನಡೆಯುವುದಕ್ಕೆ ಮುಂಚೆ ಅಬ್ರಹಾಮ್ ಒಪ್ಪಂದವೂ ಸೇರಿದಂತೆ ಇಸ್ರೇಲ್ ಜತೆ ಸಹಜ ಸಂಬಂಧ ಸ್ಥಾಪಿಸಲು ಒಳದಾರಿಗಳನ್ನು ಹುಡುಕುತ್ತಿದ್ದ ಗಲ್ಫ್‌ರಾಷ್ಟ್ರಗಳ ಫೆಲೆಸ್ತೀನ್ ಧೋರಣೆಯ ಕಾಪಟ್ಯ ಈಗ ಜಗಜ್ಜಾಹೀರಾಗಿದೆ. ಫಲೆಸ್ತೀನ್ ರಾಷ್ಟ್ರದ ಕನಸು ಕಮರುತ್ತಿರುವ ನೋವಿಗಿಂತಲೂ ಇಸ್ರೇಲ್ ಜತೆಗಿನ ತಮ್ಮ ವಾಣಿಜ್ಯ ಹಿತಾಸಕ್ತಿಗಳಿಗೆ ಆಗುತ್ತಿರುವ ನಷ್ಟದಿಂದ ಅವು ಕಂಗಾಲಾಗಿರುವಂತಿವೆ.
ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಟ್ರಂಪ್ ಶ್ವೇತಭವನಕ್ಕೆ ಮೊದಲ ಅತಿಥಿಯಾಗಿ ಬೆಂಜಮಿನ್ ನೆತನ್ಯಾಹುರನ್ನು ಕರೆಸಿಕೊಂಡದ್ದು ಬರೇ ಕಾಕತಾಳೀಯವಾಗಿರಲಿಲ್ಲ. ಅದು ಅಮೆರಿಕ ಮತ್ತು ಇಸ್ರೇಲ್ ತಮ್ಮ ಸಂಬಂಧ ಎಷ್ಟು ಗಾಢವಾದುದೆಂಬುದನ್ನು ಜಗತ್ತಿಗೆ ತೋರಿಸಲು ಬಳಸಿಕೊಂಡ ಅವಕಾಶವಾಗಿತ್ತು. ಅದೇ ಭೇಟಿಯ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿಯೂ ನಾಚಿ ನೀರಾಗುವಂತೆ ತನ್ನ ‘ಝಿಯೋನಿಸ್ಟ್’ ಪರ ನಿಲುವನ್ನು ಟ್ರಂಪ್ ತೋರ್ಪಡಿಸಿದ್ದರು. ಗಾಝಾದಲ್ಲಿ ಎಳೆಯ ಕಂದಮ್ಮಗಳೂ ಸೇರಿದಂತೆ ಸಾವಿರಾರು ಅಮಾಯಕರ ಹತ್ಯಾಕಾಂಡದಿಂದ ಕೈತುಂಬಾ ರಕ್ತ ಮೆತ್ತಿಸಿಕೊಂಡ ನೆತನ್ಯಾಹುವನ್ನು ಪಕ್ಕದಲ್ಲಿ ಕೂರಿಸಿಕೊಂಡು ‘‘ಗಾಝಾ ಇನ್ನು ಜನವಾಸಕ್ಕೆ ಸೂಕ್ತವಾದ ಸ್ಥಳವಲ್ಲ. ಛಿದ್ರಗೊಂಡ ಅವಶೇಷಗಳ ಮಧ್ಯೆ ಬದುಕುವುದು ತುಂಬಾ ಅಪಾಯಕಾರಿ. ನಾವು ಇಡೀ ಗಾಝಾದ ಜನರನ್ನೇ ಅಲ್ಲಿಂದ ಬೇರೆಡೆಗೆ ಕಳುಹಿಸೋಣ. ಅತ್ಯಂತ ಸುಂದರ ಸಮುದ್ರ ಕಿನಾರೆಯನ್ನು ಹೊಂದಿರುವ ಆ ಪ್ರದೇಶವನ್ನು ಮಧ್ಯ ಪ್ರಾಚ್ಯದ ರಿವಿಯೇರಾ ಆಗಿ ಒಂದು ಅಂತರರಾಷ್ಟ್ರೀಯ ನಗರವಾಗಿ ನಾವು ಪುನರ್ ನಿರ್ಮಿಸೋಣ,’’ ಎಂಬ ಅತ್ಯಂತ ಅನಾಗರಿಕ, ಅಮಾನುಷ ಸಲಹೆಯನ್ನು ಟ್ರಂಪ್ ಅಂದು ಮುಂದಿಟ್ಟಿದ್ದರು. ಗಾಝಾದ ಸರ್ವನಾಶಕ್ಕೆ ಕಾರಣವಾದ ನೆತನ್ಯಾಹು ಮುಖದಲ್ಲಿ ಆಗ ಮೂಡಿದ್ದ ಕಪಟ ನಗು ಅರಬ್ ರಾಷ್ಟ್ರಗಳ ಮುಖಕ್ಕೆ ಬಾರಿಸಿದ ತಪರಾಕಿಯಾಗಿತ್ತು.
ಅಂತರ್ ರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಠರಾವು, ನಿರಾಶ್ರಿತರ ಹಕ್ಕುಗಳು, ಜನಾಂಗ ಹತ್ಯೆ, ಬಲಾತ್ಕಾರದ ನಿರ್ವಸತೀಕರಣ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅಮಾನುಷ, ಕ್ರೂರ ಮತ್ತು ಅನಾಗರಿಕವಾಗಿದ್ದ ಟ್ರಂಪ್‌ರ ಆ ಪ್ರಸ್ತಾವಕ್ಕೆ ಯಾವ ರೀತಿ ಪ್ರತಿಕ್ರಿಯಿಸುವುದೆಂಬ ಸಂದಿಗ್ಧತೆಗೆ ಅರಬ್ ರಾಷ್ಟ್ರಗಳು ಸಿಲುಕಿದ್ದವು. ಸೌದಿ ಅರೇಬಿಯದ ರಿಯಾದ್‌ನಲ್ಲಿ ಸಭೆ ಸೇರಿದ ಅರಬ್‌ಲೀಗ್ ಸದಸ್ಯ ರಾಷ್ಟ್ರಗಳು ಆ ಪ್ರಸ್ತಾವವನ್ನು ನಿರಾಕರಿಸಿದವಾದರೂ ಅದರ ಹಿಂದೆ ಇರುವ ಸಂಚನ್ನು ಅರಿಯಲು ವಿಫಲವಾದರು. ಇತಿಹಾಸದಲ್ಲೇ ಬರ್ಬರವಾದ ಹತ್ಯಾಕಾಂಡದ ಆರೋಪಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಟ್ರಂಪ್ ಜಗತ್ತಿನ ಮುಂದಿಟ್ಟ ಆ ಪ್ರಸ್ತಾವದ ಉದ್ದೇಶ ‘‘ಅರಬರಿಗೆ ತಮ್ಮ ಸ್ಥಾನವನ್ನು ತೋರಿಸುವುದಾಗಿತ್ತು’’. ಹಾಗೆ ನೋಡಿದರೆ ಆ ಸಲಹೆಯು 2024ರ ಜೂನ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ವತಃ ಅಮೆರಿಕ ಬೆಂಬಲದಿಂದ ಅಂಗೀಕರಿಸಲಾದ ನಿರ್ಣಯಕ್ಕೇ ವಿರುದ್ಧವಾಗಿತ್ತು. ಗಾಝಾದಲ್ಲಿ ಯಾವುದೇ ಭೌಗೋಳಿಕ ಅಥವಾ ಜನಸಂಖ್ಯಾತ್ಮಕ ಬದಲಾವಣೆ ಜಾರಿಗೊಳಿಸುವುದನ್ನು ಆ ನಿರ್ಣಯದಲ್ಲಿ ವಿರೋಧಿಸಲಾಗಿತ್ತು.
ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಗೆ ತಮ್ಮ ಬೆಂಬಲ ಅಚಲ ಎಂದು ಅರಬ್ ರಾಷ್ಟ್ರಗಳು ಆಗಿಂದಾಗ ಘೋಷಿಸುತ್ತಿವೆಯಾದರೂ ಆ ಕನಸನ್ನು ನುಚ್ಚುನೂರುಗೊಳಿಸಲು ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ಹೆಣೆಯುತ್ತಿರುವ ಷಡ್ಯಂತ್ರ ಮತ್ತು ಜಾರಿಗೊಳಿಸುತ್ತಿರುವ ಕುಟಿಲ ಕಾರ್ಯಕ್ರಮಗಳನ್ನು ತಡೆಯುವ ಯಾವ ಪ್ರಯತ್ನವನ್ನೂ ಅವು ನಡೆಸುತ್ತಿಲ್ಲ. ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್‌ನ ಮಧ್ಯೆ ಸುಮಾರು 3,500 ಇಸ್ರೇಲಿ ಮನೆಗಳನ್ನು ಹೊಸದಾಗಿ ನಿರ್ಮಿಸಿ ಒಂದು ಸ್ವತಂತ್ರ ಏಕೀಕೃತ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯ ಸಾಧ್ಯತೆಯನ್ನು ಶಾಶ್ವತವಾಗಿ ಮುಚ್ಚಿಬಿಡುವ ಪ್ರಯತ್ನ ಸದ್ಯ ನಡೆಯುತ್ತಿದೆ. ಯಹೂದಿ ಜನವಸತಿಗಳ ವಿಸ್ತರಣೆಯ ಯೋಜನೆಯು ಜಿನೀವಾ ಒಪ್ಪಂದ, ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಇಂಟರ್‌ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್‌ನ ನಿಲುವಿಗೆ ವಿರುದ್ಧವಾಗಿದ್ದು ಈ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದಾವುದಕ್ಕೂ ಸೊಪ್ಪು ಹಾಕದ ನೆತನ್ಯಾಹು ಮತ್ತು ಆತನ ಬಲಪಂಥೀಯ ಸಹಚರರು ಮತ್ತೊಂದೆಡೆ ಸಿರಿಯಾ, ಲೆಬನಾನ್, ಜೊರ್ಡಾನ್ ಮತ್ತಿತರ ರಾಷ್ಟ್ರಗಳ ಪ್ರದೇಶಗಳನ್ನೂ ಕಬಳಿಸಿ ‘ಗ್ರೇಟರ್‌ಇಸ್ರೇಲ್’ ಕಟ್ಟುವ ಸಂಕಲ್ಪ ಕೈಗೊಂಡಿದ್ದಾರೆ.
ಇತಿಹಾಸದ ಮೊತ್ತ ಮೊದಲ ‘ಲೈವ್‌ಸ್ಟ್ರೀಮ್’ ಜನಾಂಗ ಹತ್ಯಾಕಾಂಡ ನಡೆಯುತ್ತಿದ್ದರೂ ಇಸ್ರೇಲ್‌ನೊಂದಿಗೆ ತಮ್ಮ ರಾಜತಾಂತ್ರಿಕ ಸಂಬಂಧವನ್ನು ಕಳಚಿಕೊಳ್ಳಲಿಕ್ಕೆ ಅರಬ್ ರಾಷ್ಟ್ರಗಳು ಸಿದ್ಧವಿಲ್ಲ ಎಂಬುದು ಇನ್ನೊಂದು ದೊಡ್ಡ ದುರಂತ. ಬರೀ ಖಂಡನಾ ನಿರ್ಣಯಗಳಿಗೆ ತಮ್ಮ ಪಾತ್ರವನ್ನು ಸೀಮಿತಗೊಳಿಸಿರುವ ತೈಲ ಸಮೃದ್ಧ ಜಿಸಿಸಿ ರಾಷ್ಟ್ರಗಳು ಗಾಝಾವನ್ನು ಜಗತ್ತಿನಲ್ಲೇ ಮನುಷ್ಯವಾಸಕ್ಕೆ ಅಯೋಗ್ಯವಾದ ಸ್ಥಳವನ್ನಾಗಿ ಪರಿವರ್ತಿಸಿದ ಆಧುನಿಕ ಹಿಟ್ಲರ್‌ನನ್ನು ಕಟಕಟೆಯಲ್ಲಿ ನಿಲ್ಲಿಸುವ ಬದಲು ತಮ್ಮನ್ನು ರಾಜಕೀಯ ಪ್ರಜ್ಞೆಯೇ ಇಲ್ಲದ ಜುಜುಬಿ ಎನ್‌ಜಿಒಗಳ ಮಟ್ಟಕ್ಕೆ ಇಳಿಸಿಕೊಂಡಿವೆ. ಇಸ್ರೇಲ್ ಒಡೆದದ್ದನ್ನು ಮತ್ತೆ ಕಟ್ಟುವುದು ಹೇಗೆ, ಬಾಂಬ್‌ನಿಂದ ನಾಶವಾದ ಕಟ್ಟಡಗಳ ಅವಶೇಷಗಳನ್ನು ಖಾಲಿ ಮಾಡುವುದು ಹೇಗೆ, ನಿರ್ವಸಿತರಿಗೆ ವಸತಿ ಕಲ್ಪಿಸುವುದು ಹೇಗೆ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು ಎಲ್ಲಿ ಎಂಬ ‘ಅಪೊಲಿಟಿಕಲ್’ ಆದ ವಿಚಾರಗಳಿಗೆ ತಮ್ಮ ಕರ್ತವ್ಯವನ್ನು ಸೀಮಿತಗೊಳಿಸಿ ಬಿಟ್ಟಿವೆ. ಇಂದು ಗಲ್ಫ್ ರಾಷ್ಟ್ರಗಳ ದೈನೇಸಿತನ ಎಲ್ಲಿಗೆ ತಲುಪಿದೆ ಎಂದರೆ ಹಿಂದೆಲ್ಲಾ ಮಸೀದಿಗಳಲ್ಲಿ ಬಹಳ ಜೋರಾಗಿ ಕೇಳಿಸುತ್ತಿದ್ದ ಫೆಲೆಸ್ತೀನ್ ಸಂತ್ರಸ್ತರ ಪರವಾದ ಆವೇಶಭರಿತ ದುಆಗಳು ಕೂಡಾ ಕಣ್ಮರೆಯಾಗಿವೆ!
ತಾಲಿಬಾನ್ ಅಮೆರಿಕ ಮಾತುಕತೆ, ಯಶಸ್ವಿ ಫುಟ್‌ಬಾಲ್ ವಿಶ್ವಕಪ್, ಅತ್ಯುತ್ತಮ ಜಿಡಿಪಿ, ತೈಲ ಸಂಪತ್ತು, ಸಾಫ್ಟ್‌ಪವರ್- ಹೀಗೆ ಹಲವು ದೃಷ್ಟಿಗಳಿಂದ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದ ಖತರ್‌ನ ಮೇಲೆ ಇಸ್ರೇಲ್ ನಡೆಸಿದ ದಾಳಿಗಿಂತಲೂ ಆ ಬಗ್ಗೆ ಅಮೆರಿಕ ತೋರಿದ ಅಸಡ್ಡೆ ಹೆಚ್ಚು ಆತಂಕಕಾರಿ. ತನ್ನೊಂದಿಗೆ ನಿಕಟ ಮೈತ್ರಿ ಹೊಂದಿರುವ ಒಂದು ಸಾರ್ವಭೌಮ ರಾಷ್ಟ್ರದ ಮೇಲೆ ನಡೆದ ದಾಳಿಯನ್ನು ಸ್ಪಷ್ಟವಾಗಿ ಖಂಡಿಸಲಿಕ್ಕೂ ಟ್ರಂಪ್ ಹಿಂಜರಿದಿದ್ದಾರೆ. ಮಧ್ಯಪ್ರಾಚ್ಯದಲ್ಲೇ ಅತ್ಯಂತ ದೊಡ್ಡ ಸೇನಾ ನೆಲೆಯನ್ನು ಇಟ್ಟು ಕೊಂಡೂ ಖತರ್‌ಗೆ ದಾಳಿಯ ಪೂರ್ವಭಾವಿ ಮಾಹಿತಿಯನ್ನು ರವಾನಿಸಲು ವಾಶಿಂಗ್ಟನ್ ವಿಫಲವಾಗಿದ್ದು ದೊಡ್ಡ ಸೋಜಿಗ. ಇತ್ತೀಚೆಗಷ್ಟೇ ಟ್ರಂಪ್‌ಗೆ ಅತ್ಯಂತ ದೊಡ್ಡ ಏರ್‌ಫೋರ್ಸ್ ವನ್ ಬೋಯಿಂಗ್ ವಿಮಾನವನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದ್ದ ಖತರ್ ಜಗತ್ತಿನ ನಾನಾ ಕಡೆಗಳಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಕೊನೆಗಾಣಿಸಲು ಅಮೆರಿಕ ಪರವಾಗಿ ಕನಿಷ್ಠ ಹತ್ತು ಕಡೆ ಸಂಧಾನ ಮಾತುಕತೆಗಳನ್ನೂ ನಡೆಸುತ್ತಿದೆ. ಹೀಗಿರುವಾಗ ತನ್ನ ಪರವಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿರುವ ರಾಷ್ಟ್ರವೊಂದರ ಪರ ಸ್ಪಷ್ಟ ನಿಲುವು ತಳೆಯದಿರುವ ಅಮೆರಿಕವು ಇಸ್ರೇಲ್ ಮಾತ್ರ ಎಲ್ಲ ಕಾಲಕ್ಕೂ ಸಲ್ಲುವ ತನ್ನ ನೈಜ ಮಿತ್ರ ಎನ್ನುವುದನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ.
ಆದರೆ ಈಗಾಗಲೇ ಜಗತ್ತಿನಾದ್ಯಂತ ಇಸ್ರೇಲ್ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶ ಈ ವಿದ್ಯಮಾನದಿಂದ ಮತ್ತಷ್ಟು ತೀವ್ರವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅರಬ್ ರಾಷ್ಟ್ರಗಳ ಆಡಳಿತಗಾರರು ಮತ್ತು ಜನತೆ ಫೆಲೆಸ್ತೀನಿಯರ ಅಮಾನುಷ ಮರ್ದನಕ್ಕೆ ಮೂಕ ಪ್ರೇಕ್ಷಕರಾಗಿದ್ದರೂ ಅಮೆರಿಕ, ಆಸ್ಟ್ರೇಲಿಯ, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್‌ಲ್ಯಾಂಡ್ಸ್, ಸ್ಪೈನ್, ದಕ್ಷಿಣ ಆಫ್ರಿಕಾ, ಕೆನ್ಯಾ, ಸೆನೆಗಲ್ ಮುಂತಾದೆಡೆ ಪ್ರತೀ ನಿತ್ಯ ಹೊಸ ಹೊಸ ಮಾದರಿಯ ಪ್ರತಿಭಟನೆಗಳು ನಡೆಯುತ್ತಿವೆ. ಗಾಝಾದ ಜನತೆಯನ್ನು ದಿಗ್ಬಂಧನದಲ್ಲಿರಿಸಿ ಹಸಿವಿನಿಂದ ಸಾಯಿಸುತ್ತಿರುವ ಇಸ್ರೇಲ್‌ನ ವಿರುದ್ಧ ಪ್ರತಿಭಟನೆಯಾಗಿ ಜಗತ್ತಿನ 44 ರಾಷ್ಟ್ರಗಳ ಪ್ರತಿನಿಧಿಗಳು ಆಹಾರ ಸಾಮಗ್ರಿಗಳನ್ನೊಳಗೊಂಡ ನೂರಾರು ಬೋಟುಗಳ ಮೂಲಕ ಸ್ಪೈನ್‌ನಿಂದ ಹೊರಟಿದ್ದು ಟ್ಯುನೀಶಿಯಾ ತಲುಪಿವೆ. ಜಾಗತಿಕ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಸೇರಿದಂತೆ ಹಲವಾರು ಹೋರಾಟಗಾರರು ಮತ್ತು ಎಂಪಿಗಳು ಈ ನಿಯೋಗದ ಭಾಗವಾಗಿದ್ದಾರೆ. ಈಗಾಗಲೇ ಈ ಬೋಟುಗಳ ಮೇಲೆ ಇಸ್ರೇಲ್ ದಾಳಿ ಆರಂಭಿಸಿದೆ. ಈ ಮಧ್ಯೆ ಯುರೋಪಿನಾದ್ಯಂತ ಹಲವು ಹಡಗು ನಿಲ್ದಾಣಗಳಲ್ಲಿ ಕಾರ್ಮಿಕರ ಸಂಘಟನೆಗಳು ಇಸ್ರೇಲ್‌ಗೆ ಶಸ್ತಾಸ್ತ್ರಗಳನ್ನು ಸಾಗಿಸುವ ಜಹಜುಗಳಲ್ಲಿ ಕೆಲಸ ಮಾಡಲು ನಿರಾಕರಿಸುತ್ತಿದ್ದು ಈ ಪ್ರತಿಭಟನೆಯೂ ಸಾರ್ವತ್ರಿಕವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಅದೇನಿದ್ದರೂ, ತಮ್ಮ ನೆರೆಯಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ ಅರಬ್ ರಾಷ್ಟ್ರಗಳನ್ನು ಇತಿಹಾಸ ಖಂಡಿತಾ ಕ್ಷಮಿಸದು. ಗಾಝಾದ ಜನರ ಮಾನವ ಹಕ್ಕುಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಇತ್ತೀಚೆಗಷ್ಟೇ ಎಂಟು ಮಂದಿ ಇಸ್ರೇಲಿ ತರುಣರು ಕಡ್ಡಾಯ ಸೈನಿಕ ಸೇವೆಗೆ ಸೇರಲು ನಿರಾಕರಿಸಿ ಜೈಲು ಸೇರಿದ್ದರು. ಆದರೆ ತಮ್ಮ ರಾಯಭಾರಿಗಳನ್ನು ವಾಪಸ್ ಕರೆಸಲಿಕ್ಕೂ ಹಿಂದೇಟು ಹಾಕುತ್ತಿರುವ ಗಲ್ಫ್‌ರಾಷ್ಟ್ರಗಳು, ಫೆಲೆಸ್ತೀನ್ ಹತ್ಯಾಕಾಂಡ ವನ್ನೂ ಮುಸ್ಲಿಮ್-ಮುಸ್ಲಿಮೇತರ ಎಂಬ ಬೈನರಿಯಿಂದ ನೋಡುತ್ತಿರುವ ಭಾರತದಂತಹ ದೇಶಗಳು ಹಸಿವು ಮತ್ತು ಬಾಂಬಿನಿಂದ ಸಾಯುತ್ತಿರುವ ಸಹಸ್ರಾರು ಮಕ್ಕಳಿಗೆ ಏನು ಉತ್ತರ ನೀಡಬಹುದು? ಅರಬ್ ದೇಶಗಳಂತೂ 2011ರ ಆಡಳಿತ ವಿರೋಧಿ ಪ್ರತಿಭಟನೆಗಳಿಂದ ಕಂಗಾಲಾಗಿ ತಮ್ಮ ಅಧಿಕಾರದ ಭದ್ರತೆಗಾಗಿ ಅಮೆರಿಕ-ಇಸ್ರೇಲ್ ನೇತೃತ್ವವನ್ನು ತೆಪ್ಪಗೆ ಒಪ್ಪಿಕೊಂಡು ಸ್ವತಂತ್ರ ಫೆಲೆಸ್ತೀನ್‌ನ ಗುರಿಯನ್ನು ಕೈಬಿಟ್ಟಿದ್ದಾರೆಂದು ಹೇಳಿದರೂ ತಪ್ಪಾಗದೇನೋ.