×
Ad

ಹಾಲಕ್ಕಿ ಶಕುನ ಪಲಕುವ ‘ಬುಡಬುಡಕಿ’

Update: 2025-10-15 11:52 IST

ಬುಡಬುಡಕಿ ಜನಾಂಗದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದಾರೆ. ಇವರಿಗಂಟಿದ ಸಾಮಾಜಿಕ ಕಳಂಕ(social stigma) ಇನ್ನೂ ಚಾಲ್ತಿಯಲ್ಲಿದೆ. ಶಿಕ್ಷಣ ಪಡೆದು ಸರಕಾರಿ ಉದ್ಯೋಗ ಪಡೆದವರು ಬೆರಳೆಣಿಕೆಯಷ್ಟಿದ್ದರೆ ಹೆಚ್ಚು. ಸಾಕ್ಷರತಾ ಪ್ರಮಾಣ ಶೇ. 40ಕ್ಕಿಂತಲೂ ಕಡಿಮೆ. ಈವರೆಗೂ ಬುಡಬುಡಕಿಗಳಲ್ಲಿ ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಕೂಡ ಇಲ್ಲ!

ನೀವು ಗ್ರಾಮಾಂತರ ಪ್ರದೇಶದಿಂದ ಬಂದವರಾದರೆ ಬೆಳಗ್ಗೆ ಬೆಳಕು ಮೂಡುವ ಮುಂಚೆಯೇ ನಿಮ್ಮ ಕೇರಿಯ ಬೀದಿಬೀದಿಗಳಲ್ಲಿ ‘‘ಅಂಬಾ ಪಲುಕವೇ.. ಜಗದಂಬಾ ಪಲುಕವೇ..’’ ಎಂದು ನಿರರ್ಗಳವಾಗಿ ಮಂತ್ರ ಹೇಳಿದಂತೆ ಮಾತನ್ನೇ ಜಪಿಸುತ್ತಾ, ಬುಡಬುಡಕಿಯ ಶಬ್ದವನ್ನು ಚಿತ್ರವಿಚಿತ್ರವಾಗಿ ಧ್ವನಿಸುತ್ತಾ ಬರುತ್ತಿದ್ದ ಬುಡಬುಡಕಿ ವೇಷದಾರಿಯನ್ನು ಕಂಡಿರುತ್ತೀರಿ. ಕೇರಿಯ ಮಕ್ಕಳು ಈತ ಎಲ್ಲಿಂದ ಬಂದ, ಹೇಗೆ ಉದ್ಭವಿಸಿದ ಎಂಬ ಕುತೂಹಲದಿಂದ ಈ ಬುಡಬುಡಕಿಯವನನ್ನು ಹಿಂಬಾಲಿಸುತ್ತಿದ್ದರು. ಮನೆಮನೆಗಳ ಮುಂದೆ ಈತ ಶಕುನ ಹೇಳುತ್ತಾ ಬುಡಬುಡಕಿ ನುಡಿಸುತ್ತಿದ್ದರೆ ರೈತಾಪಿ ಜನ ಈತನ ಜೋಳಿಗೆಗೆ ರಾಗಿಯನ್ನೋ, ಜೋಳವನ್ನೋ ಸುರಿದು, ಇಲ್ಲದಿದ್ದರೆ ಮೂರು ಕಾಸನ್ನೋ ಆರು ಕಾಸನ್ನೋ ಕೊಟ್ಟು ಸಾಗಹಾಕುತಿದ್ದರು.

2008ರಲ್ಲಿ ಒಮ್ಮೆ ಚನ್ನಪಟ್ಟಣದ ಬಳಿ ಬುಡಬುಡಕಿ ಸಮುದಾಯದ ಮೇಕೆ ಮೇಯಿಸುವ ಒಬ್ಬ ಹೆಣ್ಣುಮಗಳು, ತನ್ನ ಹೊಲಕ್ಕೆ ಮೇಕೆಗಳನ್ನು ಬಿಟ್ಟಳೆಂಬ ಕಾರಣಕ್ಕೆ ಆ ಹೊಲದ ಒಡೆಯ ಆ ಹೆಣ್ಣುಮಗಳನ್ನು ಚೆನ್ನಾಗಿ ಒದ್ದು ಉರಿಯುತಿದ್ದ ಹುಲ್ಲಿನ ವಾಮೆಗೆ ಎಸೆದಿದ್ದ. ಇದನ್ನು ತಿಳಿದ ನಾನು ಈಕೆಯನ್ನು ನೋಡಲು ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ವಾರ್ಡ್‌ಗೆ ಹೋಗಿ ಈ ಹೆಣ್ಣು ಮಗಳನ್ನು ಉಳಿಸಲು ಪರದಾಡಿದ್ದೆ. ಆಗ ನಾನು ಹಿಂದುಳಿದ ವರ್ಗಗಳ ಆಯೋಗದ ಸ್ಥಾನದಲ್ಲಿದ್ದದ್ದರಿಂದ ವೈದ್ಯರು ವಿಶೇಷ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಿದರೂ ಈ ಬುಡಬುಡಕಿ ಹೆಣ್ಣುಮಗಳು ಬದುಕುಳಿಯಲಿಲ್ಲ. ಆ ಸಂದರ್ಭದಲ್ಲಿ ಈ ಕುಟುಂಬಕ್ಕೆ ಒಂದಷ್ಟು ನೆರವಾಗಿ ಈಕೆಯನ್ನು ಬೆಂಕಿಗೆಸೆದವನ ಮೇಲೆ ಎಫ್‌ಐಆರ್ ಮಾಡಿಸಿದ್ದೆ. ನಂತರ ನನಗೆ ಈ ಬುಡಬುಡಕಿ ಸಮುದಾಯದೊಂದಿಗೆ ಸಂಪರ್ಕವೇ ಇಲ್ಲದಂತಾಯಿತು.

ಈಚೆಗೆ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದ ಕಚೇರಿಗೆ ಇದೇ ಬುಡಬುಡಕಿ ಸಮುದಾಯದ ವಿದ್ಯಾವಂತ ಮತ್ತು ನಿವೃತ್ತ ಸರಕಾರಿ ನೌಕರರಾಗಿದ್ದ ಮಾರ್ತಾಂಡಪ್ಪ ನಾಯ್ಕಲ್ ಬರತೊಡಗಿದರು. ಇವರಿಂದಾಗಿ ಬುಡಬುಡಕಿ ಸಮುದಾಯದ ಆಳ ಅಗಲಗಳ ಪರಿಚಯವಾಗತೊಡಗಿತು. ಬುಡಬುಡಕಿಗಳ ಬದುಕನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು.

ಜನ ನಂಬಿರುವಂತೆ ಬುಡಬುಡಕಿಗಳು ಬ್ಲ್ಯಾಕ್ ಮ್ಯಾಜಿಕ್ ಮಾಡುವಲ್ಲಿ ಸಿದ್ಧಹಸ್ತರಂತೆ! ಬೆಳಗಾಗುವ ಮುಂಚೆ ಊರು ಗಳಲ್ಲಿ ಹಾಲಕ್ಕಿಯ ಶಕುನ ಕಟ್ಟುತ್ತಾರೆ. ಹಾಲಕ್ಕಿ ಶಕುನ ನುಡಿದಿದೆ ಎಂದು ಜನಕ್ಕೆ ಭವಿಷ್ಯ ಹೇಳುತ್ತಾರೆ. ಶಕುನ ಕಟ್ಟುವ ಮುಂಚೆ ಸ್ಮಶಾನದಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ತಮ್ಮ ಪೂರ್ವಜರಿಂದ ಪಡಕೊಂಡ ಬಾಣಂತಿಯ ಹಸ್ತವೇ ಇವರ ಮಂತ್ರದಂಡ. ರಾತ್ರಿಯ ವೇಳೆ ಶಕುನ ಕಟ್ಟುವಾಗ ಬೀದಿ ನಾಯಿಗಳು ಬೊಗಳಿ ಇವರ ಮೇಲೆ ಆಕ್ರಮಣ ಮಾಡಲು ಬಂದರೆ ನಾಯಿಗಳ ಮೇಲೆ ಸಮ್ಮೋಹಿನಿ ಬಳಸಿ ಬೊಗಳದಂತೆ ಮಾಡುತ್ತಾರಂತೆ! ತಮ್ಮ ಮಂತ್ರದಂಡದಿಂದ ನಾಯಿಗಳ ಬೊಗಳುವಿಕೆಯನ್ನು ನಿಯಂತ್ರಿಸುತ್ತಾರಂತೆ.

ಬುಡಬುಡಕಿ ಜನಾಂಗದವರದು ಬಿನ್ನವಾದ ಸಂಸ್ಕೃತಿ, ತಮ್ಮದೇ ಮರಗು ಭಾಷೆಯಿದೆ. ಈ ಭಾಷೆಯನ್ನು ‘ಖಿವಾರಿ’ ಭಾಷೆಯೆಂದು ಕರೆಯುತ್ತಾರೆ. ಇವರು ಹಕ್ಕಿ ಶಕುನ ಕಟ್ಟಿ ಜನಪದರ ಭವಿಷ್ಯ ಹೇಳುವ ರೀತಿಯು ಒಂದು ಜನಪದ ಕಲೆಯಾಗಿದೆ.

ಈ ಜನಾಂಗದವರು ಬಹುತೇಕ ಗ್ರಾಮೀಣ ಪ್ರದೇಶದಲ್ಲೇ ವಾಸಿಸುತ್ತಾರೆ. ಹಳ್ಳಿಯ ಹೊರವಲಯದಲ್ಲಿ, ನೀರಿನ ಮೂಲ ಇರುವಲ್ಲೇ ಟೆಂಟು, ಗುಡಾರಗಳನ್ನು ಹಾಕಿಕೊಂಡು ವಾಸಿಸುತ್ತಾರೆ. ಮೂಲತಃ ಅಲೆಮಾರಿಗಳೇ ಆದ ಬುಡಬುಡಕಿ ಯವರು ಅಪರಾಧಿ ಬುಡಕಟ್ಟುಗಳ ಪಟ್ಟಿಯಲ್ಲಿರುವುದರಿಂದ ಹಿಂದೆ ಸೆಟಲ್ಮೆಂಟ್‌ಗಳಲ್ಲೇ ವಾಸಿಸುತ್ತಿದ್ದರು. ಅಪರಾಧಿ ಬುಡಕಟ್ಟುಗಳನ್ನು ವಿಮುಕ್ತಗೊಳಿಸಿದ ನಂತರ ಈಗ ಮುಖ್ಯವಾಹಿನಿಯೊಂದಿಗೆ ವಾಸಿಸುತ್ತಿದ್ದಾರೆ. ಬುಡಬುಡಕಿ ಸಮುದಾಯದವರು ಪ್ರವಾಸದ ಸಮಯದಲ್ಲಿ ಊರ ಹೊರಗಿನ ಗುಡಿ ಗುಡಾರ, ಪಾಳುಛತ್ರ, ಪಾಳುಮಂಟಪ, ರೈಲ್ವೆ ಹಳಿ, ಬಸ್ ಸ್ಟ್ಯಾಂಡ್ ಪಕ್ಕಗಳಲ್ಲಿ ಜೀವಿಸುತ್ತಾರೆ. ಮಹಿಳೆಯರು ಹಳೇ ಬಟ್ಟೆ ಸಂಗ್ರಹಿಸಿ ಕೌದಿಗಳನ್ನು ಹೊಲಿಯುತ್ತಾರೆ. ಮೂಲತಃ ಅಂಜಿಕೆ ಮತ್ತು ನಾಚಿಕೆ ಸ್ವಭಾವದ ಬುಡಬುಡಕಿಗಳು ಇತರ ಸಮುದಾಯ ಗಳೊಂದಿಗೆ ಸುಲಭವಾಗಿ ಬೆರೆಯುವುದಿಲ್ಲ. ಅನ್ಯ ಜಾತಿಗಳ ಕಾರ್ಯಕ್ರಮಗಳಲ್ಲಿ ಸಹಜವಾಗಿ ಭಾಗವಹಿಸುವುದಿಲ್ಲ.

ಬುಡಬುಡಕಿ ಜನಾಂಗದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದಾರೆ. ಇವರಿಗಂಟಿದ ಸಾಮಾಜಿಕ ಕಳಂಕ(social stigma) ಇನ್ನೂ ಚಾಲ್ತಿಯಲ್ಲಿದೆ. ಶಿಕ್ಷಣ ಪಡೆದು ಸರಕಾರಿ ಉದ್ಯೋಗ ಪಡೆದವರು ಬೆರಳೆಣಿಕೆಯಷ್ಟಿದ್ದರೆ ಹೆಚ್ಚು. ಸಾಕ್ಷರತಾ ಪ್ರಮಾಣ ಶೇ. 40ಕ್ಕಿಂತಲೂ ಕಡಿಮೆ. ಈ ವರೆಗೂ ಬುಡಬುಡಕಿಗಳಲ್ಲಿ ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಕೂಡ ಇಲ್ಲ!

ಬುಡಬುಡಕಿ ಜನಾಂಗವನ್ನು ಆಗಿನ ಮೈಸೂರು ಸರಕಾರ ಅಲೆಮಾರಿ ವಿಮುಕ್ತ ಬುಡಕಟ್ಟು ಎಂದು ಘೋಷಿಸಿದೆ ಅದಕ್ಕೂ ಹಿಂದೆ ಬ್ರಿಟಿಷ್ ಸರಕಾರ ಈ ಜನಾಂಗವನ್ನು ಅಪರಾಧಿ ಬುಡಕಟ್ಟು ಎಂದು ಘೋಷಿಸಿತ್ತು. 1966ರಲ್ಲೇ ಮೈಸೂರು ಸರಕಾರ ಬುಡಬುಡಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು ಆದರೆ ಸದರಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡಿರಲಿಲ್ಲ.

1911ರ ಸಾಲಿನಲ್ಲಿ ನಡೆದ ಜನಗಣತಿ ಪ್ರಕಾರ ಬುಡಬುಡಕಿ ಸಮುದಾಯದ ಜನಸಂಖ್ಯೆ 1,327ರಷ್ಟಿತ್ತು, 1931ರಲ್ಲಿ 1,867 ಇತ್ತು, 2015ರಲ್ಲಿ ಕರ್ನಾಟಕ ಸರಕಾರ ಕೈಗೊಂಡ ಜಾತಿಗಣತಿ ಪ್ರಕಾರ ಕೇವಲ 5,873 ಇದ್ದು ವರ್ಷದಿಂದ ವರ್ಷಕ್ಕೆ ಇವರ ಜನಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ. ಇದರ ಅರ್ಥ ಈ ಜನಾಂಗವು ಅಳಿವಿನ ಅಂಚಿನಲ್ಲಿದೆ! ಭಾರತ ಸರಕಾರವು ವರ್ಗೀಕರಿಸಿದ ಅತ್ಯಂತ ದುರ್ಬಲ ಜನಾಂಗಕ್ಕೆ ಸರಿಸಮನಾಗಿದೆ.

ತಮಿಳುನಾಡು ಮತ್ತು ಕೇರಳದಲ್ಲಿ ಬುಡಬುಡಕಿಯ ವರನ್ನು ಕನಿಕ್ಕರ್ ಎಂದು ಕರೆಯುತ್ತಾರೆ. ಸದ್ಯಕ್ಕೆ ಕರ್ನಾಟಕದ ಹಿಂದುಳಿದ ವರ್ಗದ ಪ್ರವರ್ಗ ಒಂದರ ಪಟ್ಟಿಯಲ್ಲಿದ್ದು ಇಲ್ಲಿನ ಬಲಿಷ್ಟರೊಂದಿಗೆ ಸೆಣೆಸಲಾರದೆ ದಿಕ್ಕಾಪಾಲಾಗಿದ್ದಾರೆ. ಅಳಿವಿನ ಅಂಚಿನಲ್ಲಿರುವ ಈ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವನ್ನು ಮಾಡಲು ಮೈಸೂರಿನ ಕರ್ನಾಟಕ ಬುಡಕಟ್ಟು ಅಧ್ಯಯನ ಸಂಸ್ಥೆಗೆ 2023ರಲ್ಲೇ ನೀಡಿದ್ದಾರೆ. ಆದರೆ ಈವರೆಗೂ ಸದರಿ ಸಂಸ್ಥೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದಿಲ್ಲ. ಈ ಸಮುದಾಯದ ಕೆಲ ಅರಿವುಳ್ಳವರು ಬುಡಬುಡಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅನೇಕ ವರ್ಷಗಳಿಂದ ಸಿಕ್ಕಸಿಕ್ಕ ಅಧಿಕಾರಸ್ತರಿಗೆಲ್ಲಾ ಮನವಿಗಳನ್ನು ನೀಡುತ್ತಾ ಅಂಗಲಾಚುತಿದ್ದಾರೆ. ಅತ್ಯಂತ ನಿರ್ಗತಿಕರೂ ಮತ್ತು ರಾಜಕೀಯವಾಗಿ ದುರ್ಬಲರೂ ಆದ ಇವರ ಮಾತುಗಳನ್ನು ದೊಡ್ಡ ದೊಡ್ಡ ಜಾತಿಗಳನ್ನು ಪೊರೆಯುವ ಸರಕಾರದಲ್ಲಿರುವ ಅಧಿಕಾರಸ್ಥರು ಕೇಳಿಸಿಕೊಳ್ಳದೆ ಜಾಣಕಿವುಡು ಪ್ರದರ್ಶಿಸುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News