ಕಣ್ಮರೆಯಾಗುತ್ತಿರುವ ವಿದ್ಯಾರ್ಥಿ ಚಳವಳಿ
ಇಂದಿನ ಈ ಅತ್ಯಂತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಯುವಕರು ತಮ್ಮ ಹೋರಾಟ ಮತ್ತು ಗುರಿಯ ನಡುವೆ ಸಾಮರಸ್ಯವನ್ನು ಸ್ಥಾಪಿಸಬೇಕಾಗುತ್ತದೆ. ಯುವಕರು ವ್ಯಕ್ತಪಡಿಸುವ ಭಾವನೆಗಳನ್ನು ಬಲಪ್ರಯೋಗದಿಂದ ನಿಗ್ರಹಿಸಲು ಸಾಧ್ಯವಿಲ್ಲ. ಅವರೊಂದಿಗೆ ಸಾಮರಸ್ಯದ ಒಪ್ಪಂದದ ಹಾದಿಯನ್ನು ಕಂಡುಕೊಳ್ಳುವುದು ಆಡಳಿತ ಸರಕಾರದ ಜವಾಬ್ದಾರಿ ಮಾತ್ರವಲ್ಲ, ಅದು ಕಾಲದ ದೊಡ್ಡ ಅವಶ್ಯಕತೆಯೂ ಆಗಿದೆ.
ವಿದ್ಯಾರ್ಥಿಗಳು ಮತ್ತು ಯುವಕರು ಸಮಾಜದಲ್ಲಿ ನಡೆಯುತ್ತಿರುವ ಯಾವುದೇ ರೀತಿಯ ಅನ್ಯಾಯದ ವಿರುದ್ಧ ಸದಾ ಕಾಲ ಪ್ರತಿಭಟಿಸುತ್ತಲೇ ಬಂದಿದ್ದಾರೆ. ವಿದ್ಯಾರ್ಥಿ ಚಳವಳಿಯು ಯುವ ಚಳವಳಿಗಿಂತ ಭಿನ್ನವಾಗಿದೆ, ಏಕೆಂದರೆ ಅದು ಮುಖ್ಯವಾಗಿ ಆದರ್ಶ ವಿಷಯಗಳ ಮೇಲೆ ಆಧಾರಿತವಾಗಿದೆ. ವಿದ್ಯಾರ್ಥಿಗಳು ಹೆಚ್ಚಾಗಿ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರೂ, ಯುವಕರ ಬೇಡಿಕೆಗಳು ಉದ್ಯೋಗ ಅಥವಾ ಅಭಿವೃದ್ಧಿಯಂತಹ ವಿಶಾಲವಾದ ಸಮಸ್ಯೆಗಳನ್ನು ಒಳಗೊಂಡಿವೆ. ಅದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯುವ ಚಳವಳಿಗಳು ವಿದ್ಯಾರ್ಥಿ ಚಳವಳಿಗಳಿಗಿಂತ ಹೆಚ್ಚು ವಿಶಾಲ ಮತ್ತು ಹೆಚ್ಚು ಅಂತರ್ಗತವಾಗಿವೆ. ಭಾರತದಲ್ಲಿ ವಿದ್ಯಾರ್ಥಿ ಮತ್ತು ಯುವ ಚಳವಳಿಗಳು ನಿಕಟ ಸಂಬಂಧ ಹೊಂದಿವೆ. 20ನೇ ಶತಮಾನದ ಮೊದಲಾರ್ಧದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಂಘಟಿತ ವಿದ್ಯಾರ್ಥಿ ಕ್ರಿಯಾಶೀಲತೆಯು ಒಂದು ನಿರ್ದಿಷ್ಟ ಆಕಾರವನ್ನು ಪಡೆದುಕೊಂಡಿತು. ಇದು ಸಮಾಜದ ವಿವಿಧ ವರ್ಗಗಳ ಹಕ್ಕುಗಳಿಗಾಗಿ ಹೋರಾಡುವ ಪ್ರಗತಿಪರ ಪಾತ್ರವನ್ನು ಪ್ರದರ್ಶಿಸಿತು.
ಭಾರತದಲ್ಲಿ ವಿದ್ಯಾರ್ಥಿ ಚಳವಳಿಯ ಬೇರುಗಳನ್ನು ಸುಮಾರು 200 ವರ್ಷಗಳ ಹಿಂದೆ 1828ರಲ್ಲಿ ಅವಿಭಜಿತ ಬಂಗಾಳದ ಹಿಂದೂ ಕಾಲೇಜಿನಲ್ಲಿ ಅಲ್ಲಿನ ಶಿಕ್ಷಕ ಮತ್ತು ಸುಧಾರಕ ಹೆನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ ಅವರ ಮಾರ್ಗದರ್ಶನದಲ್ಲಿ ಅಕಾಡಮಿಕ್ ಅಸೋಸಿಯೇಷನ್ ರಚನೆಯೊಂದಿಗೆ ಗುರುತಿಸಬಹುದು. ಸ್ವತಂತ್ರ ಚಿಂತಕರ ಯಂಗ್ ಇಂಡಿಯಾ ಗುಂಪನ್ನು ರಚಿಸಿದ ಅವರ ಶಿಷ್ಯರು 19ನೇ ಶತಮಾನದ ಬಂಗಾಳ ನವೋದಯದಲ್ಲಿ ಪಾತ್ರವಹಿಸಿದರು. ನಂತರದ ವರ್ಷಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಹಲವಾರು ಚರ್ಚಾ ಸಂಘಗಳು ಹುಟ್ಟಿಕೊಂಡವು, ಬಾಂಬೆ ಕಾಲೇಜಿನಲ್ಲಿ ಮರಾಠಿ ಸಾಹಿತ್ಯ ಸಮಾಜ ಮತ್ತು ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಗುಜರಾತಿ ನಾಟಕ ಗುಂಪು ಇತ್ಯಾದಿ. 1905ರಲ್ಲಿ, ಕಲ್ಕತ್ತಾದ (ಈಗ ಕೋಲ್ಕತಾ) ಈಡನ್ ಕಾಲೇಜಿನ ವಿದ್ಯಾರ್ಥಿಗಳು ಬಂಗಾಳ ವಿಭಜನೆಯನ್ನು ಪ್ರತಿಭಟಿಸಲು ಆಗಿನ ವೈಸರಾಯ್ ಲಾರ್ಡ್ ಕರ್ಜನ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು. ಇದು ವಿದ್ಯಾರ್ಥಿಗಳ ಪ್ರತಿಭಟನೆಯ ಮೊದಲ ದಾಖಲಿತ ನಿದರ್ಶನಗಳಲ್ಲಿ ಒಂದಾಗಿದೆ. ಅವಿಭಜಿತ ಭಾರತದಲ್ಲಿ ಮೊದಲ ವಿದ್ಯಾರ್ಥಿಗಳ ಮುಷ್ಕರವು 1920ರಲ್ಲಿ ಲಾಹೋರ್‌ನ ಕಿಂಗ್ ಎಡ್ವರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಮತ್ತು ಇಂಗ್ಲಿಷ್ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ತಾರತಮ್ಯದ ವಿರುದ್ಧ ನಡೆಯಿತು. ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳು ಭಾಗವಹಿಸಿದ್ದವು.
ಸ್ವಾತಂತ್ರ್ಯದ ನಂತರ, ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ವಿದ್ಯಾರ್ಥಿ ಘಟಕಗಳನ್ನು ಪ್ರಾರಂಭಿಸಿದವು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಂಚಿತ ವರ್ಗಗಳನ್ನು ಹಕ್ಕು ಮತ್ತು ಘನತೆಯನ್ನು ರಕ್ಷಿಸಲು ಹಲವಾರು ಸ್ವತಂತ್ರ ವಿದ್ಯಾರ್ಥಿ ಗುಂಪುಗಳು ಸಹ ಹುಟ್ಟಿಕೊಂಡವು. ರಾಷ್ಟ್ರದ ನೆನಪಿನಲ್ಲಿ ಉಳಿಯುವ ಹಲವಾರು ವಿದ್ಯಾರ್ಥಿ ಚಳವಳಿಗಳನ್ನು ದೇಶವು ಕಂಡಿದೆ. ಭಾರತದಲ್ಲಿ ಸಂಘಟಿತ ವಿದ್ಯಾರ್ಥಿ ಚಳವಳಿಗೆ ಎಂಭತ್ತು ವರ್ಷಗಳು ತುಂಬಿವೆ, ಏಕೆಂದರೆ ಅದರ ಮೂಲವು 1936ರಲ್ಲಿ ಪ್ರಾರಂಭವಾಯಿತು. ಆಗ ಸಂಪೂರ್ಣ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತಮ್ಮ ಪಾಲನ್ನು ಪಡೆಯಲು ವಿದ್ಯಾರ್ಥಿಗಳನ್ನು ಪೌರತ್ವಕ್ಕಾಗಿ ಸಿದ್ಧಪಡಿಸಲು ಶಾಶ್ವತ ವಿದ್ಯಾರ್ಥಿ ಒಕ್ಕೂಟವನ್ನು ರೂಪಿಸಲಾಯಿತು. ಅಂದಿನಿಂದ, ಭಾರತದ ವಿದ್ಯಾರ್ಥಿಗಳು ಅವರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದಾರೆ.
ಚರಿತ್ರೆಯನ್ನೊಮ್ಮೆ ಅವಲೋಕಿಸಿದಾಗ ನಮಗೆ ಗೋಚರಿಸುವ ಅನೇಕ ವಿದ್ಯಾರ್ಥಿ ಚಳವಳಿಗಳನ್ನು ಗುರುತಿಸಬಹುದು. ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ- 1965: ತಮಿಳುನಾಡಿನಲ್ಲಿ ದಶಕಗಳಿಂದ ಹಿಂದಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ, ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು 1963ರ ಅಧಿಕೃತ ಭಾಷಾ ಕಾಯ್ದೆಯ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ ಅದು ಒಂದು ಘರ್ಷಣಾ ಕೇಂದ್ರವಾಯಿತು, ಇದು ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿತು. ಸಂಸತ್ತಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಡೆಸಿದ ಪ್ರತಿಭಟನೆಗಳ ಹೊರತಾಗಿಯೂ ಕಾನೂನನ್ನು ಅಂಗೀಕರಿಸಲಾಯಿತು.
ನವ ನಿರ್ಮಾಣ್ ಆಂದೋಲನ (ಪುನರ್ನಿರ್ಮಾಣ ಚಳವಳಿ)-1974, ಭ್ರಷ್ಟ ಸರಕಾರವನ್ನು ವಿಸರ್ಜಿಸಲು ಕಾರಣವಾದ ಕೆಲವೇ ಯಶಸ್ವಿ ವಿದ್ಯಾರ್ಥಿ ಆಂದೋಲನಗಳಲ್ಲಿ ಇದು ಬಹುಶಃ ಒಂದಾಗಿದೆ.
ಬಿಹಾರ ವಿದ್ಯಾರ್ಥಿ ಚಳವಳಿ-1974 (ಜೆಪಿ ಚಳವಳಿ) ಜಯಪ್ರಕಾಶ್ ನಾರಾಯಣ್ ನೇತೃತ್ವದ ಛತ್ರ ಸಂಘರ್ಷ ಸಮಿತಿಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಚುನಾವಣಾ ಸುಧಾರಣೆಗಳು, ಸಬ್ಸಿಡಿ ಆಹಾರ ಮತ್ತು ಶಿಕ್ಷಣ ಸುಧಾರಣೆಗಳ ಮೇಲೆ ಕೇಂದ್ರೀಕರಿಸಿತು. ಇದು ಅಹಿಂಸಾತ್ಮಕ ಪ್ರತಿಭಟನೆಯಾಗಿದ್ದು, ಪಾಟ್ನಾ ವಿಶ್ವವಿದ್ಯಾನಿಲಯದಿಂದ ಪ್ರಾರಂಭವಾಗಿ ಉತ್ತರ ಭಾರತದ ಹಿಂದಿ ಮಾತನಾಡುವ ರಾಜ್ಯಗಳ ಹಲವಾರು ಇತರ ಶಿಕ್ಷಣ ಸಂಸ್ಥೆಗಳಿಗೆ ಹರಡಿತು.
ಅಸ್ಸಾಂ ಆಂದೋಲನ (1979ರಿಂದ 1985), ಅಸ್ಸಾಮಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಆಂದೋಲನವನ್ನು ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಪ್ರಾರಂಭಿಸಿತು.
ಮಂಡಲ ಆಯೋಗ ವಿರೋಧಿ ಪ್ರತಿಭಟನೆಗಳು, 1990ರಲ್ಲಿ ವಿ.ಪಿ. ಸಿಂಗ್ ಸರಕಾರ ಮಂಡಲ್ ಆಯೋಗ ವರದಿಯನ್ನು ಜಾರಿಗೆ ತರುವ ನಿರ್ಧಾರವನ್ನು ಘೋಷಿಸಿದಾಗ, ಸ್ವಯಂಪ್ರೇರಿತ ಪ್ರತಿಭಟನೆಗಳು ಭುಗಿಲೆದ್ದವು.
ಮೀಸಲಾತಿ ವಿರೋಧಿ ಪ್ರತಿಭಟನೆಗಳು-2006, ಇದು ಮೀಸಲಾತಿ ವ್ಯವಸ್ಥೆಯ ವಿರುದ್ಧ ಎರಡನೇ ಪ್ರಮುಖ ಪ್ರತಿಭಟನೆಯಾಗಿತ್ತು. 2006ರಲ್ಲಿ, ಕೇಂದ್ರ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ಜಾರಿಗೆ ತರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನಿರ್ಧಾರವನ್ನು ವಿರೋಧಿಸಿ ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು.
ಶ್ರೀಲಂಕಾ ವಿರೋಧಿ ಪ್ರತಿಭಟನೆಗಳು-2013, ಅಂತರ್ಯುದ್ಧದ ಸಮಯದಲ್ಲಿ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಸೇನೆಯು ನಡೆಸಿದ ಯುದ್ಧ ಅಪರಾಧಗಳು ತಮಿಳು ಸಮುದಾಯಕ್ಕೆ ಸೂಕ್ಷ್ಮ ವಿಷಯವಾಗಿದೆ. ತಮಿಳುನಾಡಿನ ವಿದ್ಯಾರ್ಥಿಗಳು ತಮಿಳು ಈಳಂ ಸ್ವಾತಂತ್ರ್ಯಕ್ಕಾಗಿ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ನಡೆಸಿದ್ದಾರೆ.
ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಆಂದೋಲನ-2015, ಜುಲೈ 2015ರಲ್ಲಿ, ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ವಿದ್ಯಾರ್ಥಿಗಳು, ನಟ ಗಜೇಂದ್ರ ಚೌಹಾಣ್ ಅವರನ್ನು ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. 140ದಿನಗಳ ಪ್ರತಿಭಟನೆಯಲ್ಲಿ, ವಿದ್ಯಾರ್ಥಿಗಳು ಅವರು ಎಫ್‌ಟಿಐಐ ಮುಖ್ಯಸ್ಥರಾಗಲು ಅರ್ಹರಲ್ಲ ಎಂದು ಪ್ರತಿಪಾದಿಸಿ ತರಗತಿಗಳನ್ನು ಬಹಿಷ್ಕರಿಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು.
ಜಾದವ್‌ಪುರ ವಿಶ್ವವಿದ್ಯಾನಿಲಯ-2014, ಜಾದವ್‌ಪುರ ವಿಶ್ವವಿದ್ಯಾನಿಲಯದಲ್ಲಿ ‘ಹೋಕ್ ಕಲೊರೊಬ್’ ಎಂಬ ಆಂದೋಲನವು ನಿರಾಯುಧ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಾಳಿಯ ವಿರುದ್ಧವಾಗಿತ್ತು. ಕ್ಯಾಂಪಸ್‌ನೊಳಗೆ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದರು. ವಾರಪೂರ್ತಿ ನಡೆದ ಪ್ರತಿಭಟನೆಯು ಪೊಲೀಸರನ್ನು ಕ್ಯಾಂಪಸ್‌ಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದ ಉಪಕುಲಪತಿ ಅಭಿಜಿತ್ ಚಕ್ರವರ್ತಿಯನ್ನು ತೆಗೆದುಹಾಕುವ ಮೂಲಕ ಅಂತ್ಯಗೊಂಡಿತು.
ದಲಿತ ಸಂಶೋಧಕನ ಆತ್ಮಹತ್ಯೆಯ ಕುರಿತು ಪ್ರತಿಭಟನೆಗಳು-2016, ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧಕನ ಆತ್ಮಹತ್ಯೆ ಮತ್ತು ಅದರ ಪರಿಣಾಮವು ಜನವರಿ ಪೂರ್ತಿ ಮಾಧ್ಯಮಗಳಲ್ಲಿ ಪ್ರಾಬಲ್ಯ ಸಾಧಿಸಿತು. ಮೃತ ವಿದ್ಯಾರ್ಥಿ ರೋಹಿತ್ ವೇಮುಲಾಗೆ ನ್ಯಾಯ ದೊರಕಿಸಿಕೊಡಲು ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ದೇಶಾದ್ಯಂತ ಬೃಹತ್ ಆಂದೋಲನಕ್ಕೆ ಸಾಕ್ಷಿಯಾಯಿತು. ಭಾರತದಾದ್ಯಂತದ ವಿಶ್ವವಿದ್ಯಾನಿಲಯಗಳ ನೂರಾರು ವಿದ್ಯಾರ್ಥಿಗಳು ‘ಜಸ್ಟಿಸ್ ಫಾರ್ ರೋಹಿತ್ ವೇಮುಲಾ’ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದರು.
ಫೆಬ್ರವರಿ 9, 2016ರಂದು, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) 16 ವರ್ಷಗಳ ಹಿಂದೆ ಸಂಸತ್ತಿನ ಮೇಲಿನ ದಾಳಿಯಲ್ಲಿ ಪಿತೂರಿ ನಡೆಸಿದ ಆರೋಪದ ಮೇಲೆ ಕಾಶ್ಮೀರಿ ಪ್ರತ್ಯೇಕತಾವಾದಿ ಅಫ್ಝಲ್ ಗುರುವನ್ನು 2013 ರಲ್ಲಿ ಗಲ್ಲಿಗೇರಿಸಿದ ಘಟನೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಿತು. ವಿದ್ಯಾರ್ಥಿಗಳು ತಮ್ಮ ಮುಷ್ಕರವನ್ನು ಕೊನೆಗೊಳಿಸಬೇಕೆಂಬ ಷರತ್ತಿನ ಮೇಲೆ ದಿಲ್ಲಿ ಹೈಕೋರ್ಟ್ ವಿಶ್ವವಿದ್ಯಾನಿಲಯದ ಕ್ರಮವನ್ನು ಸ್ಥಗಿತಗೊಳಿಸಿತು.
ಇಂದಿನ ಉತ್ಸಾಹಭರಿತ ಯುವ ಪೀಳಿಗೆ ರಾಜಕೀಯವು ಅಂತಿಮವಾಗಿ ರಾಜಕೀಯ ಅಧಿಕಾರವನ್ನು ಪಡೆಯುವ ಗುರಿಯನ್ನು ಹೊಂದಿದೆ ಮತ್ತು ಅಧಿಕಾರವು ಹೆಚ್ಚಾಗಿ ಮಾನವೀಯತೆಯನ್ನು ಮರೆಮಾಡುತ್ತದೆ ಎಂಬುದನ್ನು ಎಂದಿಗೂ ಮರೆಯಬಾರದು. ಒಂದು ಮಾತಿದೆ. ಅಧಿಕಾರ ಮನುಷ್ಯನನ್ನು ಭ್ರಷ್ಟಗೊಳಿಸುತ್ತದೆ, ಅಕ್ರಮ ವಿಧಾನಗಳಿಂದ ಹಣ ಸಂಪಾದಿಸುವ ಮತ್ತು ಸಂಗ್ರಹಿಸುವ ಜನರು ಮಾತ್ರ ಭ್ರಷ್ಟರಾಗುವುದು ಅನಿವಾರ್ಯವಲ್ಲ. ತಮ್ಮ ತತ್ವಗಳು ಮತ್ತು ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವ ಜನರೂ ಹೆಚ್ಚು ಅಪಾಯಕಾರಿ. ಇಂದಿನ ಈ ಅತ್ಯಂತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಯುವಕರು ತಮ್ಮ ಹೋರಾಟ ಮತ್ತು ಗುರಿಯ ನಡುವೆ ಸಾಮರಸ್ಯವನ್ನು ಸ್ಥಾಪಿಸಬೇಕಾಗುತ್ತದೆ. ಯುವಕರು ವ್ಯಕ್ತಪಡಿಸುವ ಭಾವನೆಗಳನ್ನು ಬಲಪ್ರಯೋಗದಿಂದ ನಿಗ್ರಹಿಸಲು ಸಾಧ್ಯವಿಲ್ಲ. ಅವರೊಂದಿಗೆ ಸಾಮರಸ್ಯದ ಒಪ್ಪಂದದ ಹಾದಿಯನ್ನು ಕಂಡುಕೊಳ್ಳುವುದು ಆಡಳಿತ ಸರಕಾರದ ಜವಾಬ್ದಾರಿ ಮಾತ್ರವಲ್ಲ, ಅದು ಕಾಲದ ದೊಡ್ಡ ಅವಶ್ಯಕತೆಯೂ ಆಗಿದೆ.