×
Ad

ಸರಕಾರಿ ಶಾಲೆಯಲ್ಲಿ ನೂರರಿಂದ ಮೂರಕ್ಕೆ ಇಳಿದ ಮಕ್ಕಳ ಸಂಖ್ಯೆ

Update: 2025-11-17 10:41 IST

ಶಿಡ್ಲಘಟ್ಟ, ನ.16: ತಾಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳುವನಹಳ್ಳಿ ಗ್ರಾಮದಲ್ಲಿ, ಇದುವರೆಗೂ ಸರಕಾರಿ ಶಾಲಾ ಕಟ್ಟಡವೇ ಇಲ್ಲದೆ, 50 ವರ್ಷಗಳ ಹಿಂದೆ ದಾನಿಗಳು ಕೊಟ್ಟಿರುವ ಹಳೆಯ ಕಟ್ಟಡದಲ್ಲೆ ಶಾಲೆಯನ್ನು ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಸುಸಜ್ಜಿ ತವಾದ ಕಟ್ಟಡವಿಲ್ಲದ ಕಾರಣ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಸರಕಾರ, ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಾಗಿ ಪ್ರತಿ ವರ್ಷದ ತನ್ನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ಮೀಸಲಿಟ್ಟಿದ್ದರೂ, ಈ ಬಳುವನಹಳ್ಳಿ ಗ್ರಾಮದಲ್ಲಿ ಸರಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಇದುವರೆಗೂ ಜಾಗ ಸಿಕ್ಕಿಲ್ಲ. ಹೊಸ ಕಟ್ಟಡವನ್ನೂ ಮಾಡಿಲ್ಲ.

ತಾಲೂಕಿನ ಬಳುವನಹಳ್ಳಿ ಗ್ರಾಮದಲ್ಲಿ, ಹಳೆಯ ಕಟ್ಟಡದಲ್ಲೆ ಮಕ್ಕಳು ಓದುತ್ತಿದ್ದಾರೆ. ಕಳೆದ 15 ವರ್ಷಗಳ ಹಿಂದೆ 100 ಮಂದಿ ವಿದ್ಯಾರ್ಥಿಗಳು ಓದುತ್ತಿದ್ದ ಶಾಲೆಯಲ್ಲಿ ಈಗ ಮೂರು ಮಂದಿಗೆ ಇಳಿಕೆಯಾಗಿದೆ.

ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ಗ್ರಾಮದ ದಾನಿಗಳು ಶಾಲೆಗೆಂದು ಕೊಟ್ಟಿರುವ ಕಟ್ಟಡದಲ್ಲೆ ಮಕ್ಕಳಿಗೆ ಕಲಿಕಾ ಕೋಣೆ, ಅಡುಗೆ ಕೋಣೆ, ಮಾಡಿ ಕೊಂಡಿದ್ದಾರೆ. ಎರಡನೇ ಅಂತಸ್ತಿನಲ್ಲಿರುವ ಹಾಲ್‌ನಲ್ಲಿ ಮಕ್ಕಳಿಗೆ ಕುಳಿತುಕೊಂಡು ಪಾಠ ಕೇಳಲು ವ್ಯವಸ್ಥೆಯಿದೆಯಾದರೂ ಶಾಲೆಯಲ್ಲಿ ಮಕ್ಕಳಿಲ್ಲ.

ನಮ್ಮೂರಿನಲ್ಲಿ, ಸರಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಎಲ್ಲೂ ಜಾಗವನ್ನು ಮೀಸಲಿಟ್ಟಿಲ್ಲ, ಈ ಕಾರಣದಿಂದ ದಾನಿಗಳು ಕೊಟ್ಟಿರುವ ಹಳೆಯ ಕಟ್ಟಡದಲ್ಲೆ ಪಾಠಪ್ರವಚನಗಳು ನಡೆಯುತ್ತಿವೆ. ಪ್ರತಿಯೊಂದು ಚುನಾವಣೆಗೂ ಇದೇ ಕಟ್ಟಡದಲ್ಲಿ ಮತದಾನ ಮಾಡುತ್ತೇವೆ. ಕಟ್ಟಡ ಸುಸಜ್ಜಿತವಾಗಿಲ್ಲದ ಕಾರಣ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಟ್ಟು, ಖಾಸಗಿ ಶಾಲೆಗಳಿಗೆ ದಾಖಲು ಮಾಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮದಲ್ಲಿ 350 ಕ್ಕೂ ಹೆಚ್ಚು ಕುಟುಂಬಗಳಿವೆ. 1300ಕ್ಕೂ ಹೆಚ್ಚು ಮಂದಿ ಮತದಾರರಿದ್ದಾರೆ. ಒಟ್ಟು ಜನಸಂಖ್ಯೆ 1700 ಇದೆ. ಈ ಗ್ರಾಮದಲ್ಲಿನ ಬಹುತೇಕ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದು, ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ನವರು, ಸರಕಾರಿ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಈಗ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಈ ಶಾಲೆಯನ್ನು ಮುಚ್ಚಿದರೆ, ಮುಂಬರುವ ದಿನಗಳಲ್ಲಿ ಬಡವರ ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಲಿದೆ ಎಂದು ಒತ್ತಾಯಿಸಿದ್ದಾರೆ.

ಬಳುವನಹಳ್ಳಿ ಗ್ರಾಮದಲ್ಲಿ ಶಾಲೆ ಕಟ್ಟಲು ಜಾಗವಿಲ್ಲ, ಸರಕಾರ, ಗ್ರಾಮ ಪಂಚಾಯತ್‌ಗೆ ಒಂದರಂತೆ ಮಾದರಿ ಶಾಲೆಗಳು ತೆರೆಯಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಈ ಗ್ರಾಮದ ಮಕ್ಕಳನ್ನು ಬಸ್ಸಿನ ಕರೆದುಕೊಂಡು ಬಂದು ಪಾಠ ಮಾಡಿ, ಪುನಃ ಬಿಟ್ಟು ಬರುವ ವ್ಯವಸ್ಥೆ ಮಾಡಲು ಚಿಂತನೆ ನಡೆಸಿದ್ದೇವೆ.

-ನರೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿಡ್ಲಘಟ್ಟ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಂಗನಹಳ್ಳಿ ಎಂ.ಮುನಿನಾರಾಯಣ

contributor

Similar News