×
Ad

ಪರಿಹಾರ ಕಾಣದ ಮರಳು, ಕೆಂಪು ಕಲ್ಲಿನ ಸಮಸ್ಯೆ

Update: 2025-08-04 15:00 IST

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಸಮಸ್ಯೆ ಬಗೆಹರಿಯದಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಕಾರ್ಯದಲ್ಲಿ ನಿರತರಾದ ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ.

ಕೆಂಪು ಕಲ್ಲಿನ ಗಣಿಗಾರಿಕೆ ದ.ಕ.ದಲ್ಲಿ ನಡೆಯುತ್ತಿಲ್ಲ. ರಾಯಲ್ಟಿ ಜಾಸ್ತಿ ಇರುವ ಕಾರಣದಿಂದಾಗಿ ಇಲ್ಲಿ ಪರವಾನಿಗೆ ಪಡೆದವರಿಗೂ ಕೆಂಪು ಕಲ್ಲು ಗಣಿಗಾರಿಕೆ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಕೆಂಪು ಕಲ್ಲು ಕೋರೆ ಮಾಲಕರು ಹೇಳುತ್ತಾರೆ.

ಕೇರಳದಲ್ಲಿ ಕೆಂಪು ಕಲ್ಲಿಗೆ ರಾಯಲ್ಟಿ ಕಡಿಮೆ ಇದೆ ಎನ್ನುವುದು ಗಣಿಗಾರಿಕೆ ನಡೆಸುತ್ತಿದ್ದವರ ವಾದ ಹೀಗಾಗಿ ಜನರಿಗೆ ಸುಲಭವಾಗಿ ಅಲ್ಲಿ ಕೆಂಪುಕಲ್ಲು ಸಿಗುತ್ತಿದೆ. ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ಒಂದು ಕೆಂಪು ಕಲ್ಲು 28 ರೂ.ಗಳಿಗೆ ಸಿಗುತ್ತದೆ. ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಕೆಂಪು ಕಲ್ಲು ಕರ್ನಾಟಕಕ್ಕೆ ರವಾನೆಯಾಗುತ್ತಿವೆ. ಆದರೆ ಅದೇ ಕಲ್ಲಿಗೆ ಕರ್ನಾಟಕದಲ್ಲಿ ದರ ದುಪ್ಪಟ್ಟು ಆಗಿದೆ. ಹೀಗಾಗಿ ಕರ್ನಾಟಕಕ್ಕೆ ಕಲ್ಲಿನ ಸಾಗಾಟ ನಡೆಯುತ್ತಿದೆ. ಶನಿವಾರ ಬಂಟ್ವಾಳ ತಾಲೂಕಿನ ಉಕ್ಕುಡದ ಬಳಿ ಕೇರಳದಿಂದ ಕರ್ನಾಟಕಕ್ಕೆ ಪರವಾನಿಗೆ ಇಲ್ಲದೆ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದರು.

ದುಬಾರಿಯಾದ ಮರಳು: ದ.ಕ.ದಲ್ಲಿ ಬಡವರಿಗೆ ಮನೆ ಕಟ್ಟಲು ಕೆಂಪು ಕಲ್ಲಿನಂತೆ ಮರಳು ಸುಲಭವಾಗಿ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಕಣ್ಣುತಪ್ಪಿಸಿ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದರೂ ಜನಸಾಮಾನ್ಯರ ಪಾಲಿಗೆ ಇಂತಹ ಮರಳು ದುಬಾರಿಯಾಗಿದೆ. ಮರಳು ಮಾಫಿಯಾದಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ.

ನೇತ್ರಾವತಿ ನದಿಯಿಂದ ಗ್ರಾಮೀಣ ಪ್ರದೇಶಗಳಿಗೆ ಮರಳು ಸಾಗಾಟ ನಡೆಯುತ್ತಿದೆ. ದ.ಕ. ಜಿಲ್ಲೆಯ ಪಕ್ಕದ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳಿಗೆ ಟಿಪ್ಪರ್ ಮತ್ತು ಪಿಕಪ್‌ಗಳಲ್ಲಿ ಮರಳು ರವಾನೆಯಾಗುತ್ತದೆ. ತೋಡು, ಹೊಳೆಗಳಿಂದ ಮರಳನ್ನು ಎತ್ತಿ ಪಿಕಪ್‌ಗಳಲ್ಲಿ ಸಾಗಾಟ ಮಾಡಲಾಗುತ್ತಿದ್ದು, ಕಳಪೆ ಗುಣಮಟ್ಟದ ಮರಳನ್ನು ಬಡವರು ದುಬಾರಿ ಹಣ ತೆತ್ತು ಪಡೆಯುವಂತಾಗಿದೆ.

ಎಂ. ಸ್ಯಾಂಡ್‌ಗೆ ಬೇಡಿಕೆ: ಕೇರಳದಲ್ಲಿ ಮರಳು ಸಿಗುತ್ತಿಲ್ಲ. ಕರ್ನಾಟಕದಿಂದ ಮರಳು ಕಳ್ಳ ಸಾಗಾಣಿಕೆ ಮೂಲಕ ಕೇರಳಕ್ಕೆ ರವಾನೆಯಾದರೂ ಅಲ್ಲಿ ಬಡವರಿಗೆ ಇದು ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಹೀಗಾಗಿ ಮನೆ ಕಟ್ಟುವ ಕಾರ್ಯದಲ್ಲಿ ನಿರತರಾದವರು ಎಂ. ಸ್ಯಾಂಡ್‌ನ್ನು ಆಶ್ರಯಿಸುವಂತಾಗಿದೆ. ಇದು ಕೂಡಾ ದುಬಾರಿಯಾಗಿದೆ. ಸಾಂಪ್ರದಾಯಿಕ ನದಿ ಮರಳಿಗೆ ಪರ್ಯಾಯವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಕೇರಳದಲ್ಲಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಎಂ.ಸ್ಯಾಂಡ್ ಮತ್ತು ಸಿ.ಸ್ಯಾಂಡ್‌ಗಳು ಕರ್ನಾಟಕದಿಂದ ಕೇರಳಕ್ಕೆ ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ರವಾನೆಯಾಗುತ್ತಿದೆ. ಇಟ್ಟಿಗೆ ಮತ್ತು ಬ್ಲಾಕ್ ತಯಾರಿಸಲು ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.

ಪರಿಸರ ಸಚಿವಾಲಯದಿಂದ ಬಿಡುಗಡೆಯಾಗದ ಗೈಡ್‌ಲೈನ್ಸ್: ಮರಳುಗಾರಿಕೆಗೆ ಸಂಬಂಧಿಸಿ ಮೂರು ವರ್ಷಗಳಿಂದ ಕೇಂದ್ರ ಪರಿಸರ ಸಚಿವಾಲಯದಿಂದ ಸೂಕ್ತ ಗೈಡ್‌ಲೈನ್ಸ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ನಾನ್ ಸಿಆರ್‌ಝೆಡ್‌ನಲ್ಲಿ ಎಲ್ಲ ಮರಳು ಬ್ಲಾಕ್‌ಗಳು ಚಾಲ್ತಿಯಲ್ಲಿಲ್ಲ. 6 ಬ್ಲಾಕ್‌ಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸ್ಟಾಕ್ ಯಾರ್ಡ್‌ಗಳಲ್ಲಿ ಮರಳು ದಾಸ್ತಾನು ಸಾಕಷ್ಟು ಇದ್ದರೂ, ಇದು ಸುಲಭವಾಗಿ ಸಿಗದಂತಾಗಿದೆ.

ಜನಪ್ರತಿನಿಧಿಗಳ ಮೌನ: ಮರಳಿನ ಸಮಸ್ಯೆಯನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಆ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಬಿಜೆಪಿ ಶಾಸಕರುಗಳು ಸಮಸ್ಯೆಯನ್ನು ನಿವಾರಿಸಲು ಸರಕಾರದ ಮೇಲೆ ಒತ್ತಡ ಹಾಕುವ ಕಡೆಗೆ ಗಮನ ಹರಿಸದೆ, ತಮ್ಮ ಜವಾಬ್ದಾರಿಯಿಂದ ದೂರ ಸರಿದು ಆಡಳಿತಾರೂಢ ಕಾಂಗ್ರೆಸ್‌ನ ಶಾಸಕರ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಕೂಡಾ ಜನರ ಸಮಸ್ಯೆಯ ಪರಿಹಾರದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ ಎನ್ನುವುದು ಜನಸಾಮಾನ್ಯರ ಆರೋಪ.

ಗಣಿ ಅಧಿಕಾರಿಗಳ ಕೊರತೆ: ದ.ಕ.ಜಿಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕಾದ ಗಣಿಗಾರಿಕೆ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಇದೆ. 9 ತಾಲೂಕುಗಳಿಗೆ ಕೇವಲ 4 ಮಂದಿ ಜಿಯೋಲಾಜಿಸ್ಟ್‌ಗಳು ಇದ್ದಾರೆ. ಗಣಿಗಾರಿಕೆ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿದ್ದ ಉಪನಿರ್ದೇಶಕರ ಹುದ್ದೆಯನ್ನು ಕಳೆದ ವರ್ಷ ಸರಕಾರ ರದ್ದು ಮಾಡಿತ್ತು. ಹಿರಿಯ ಜಿಯೋಲಾಜಿಸ್ಟ್ ಹೆಗಲಿಗೆ ಜವಾಬ್ದಾರಿ ರವಾನೆಯಾಗಿತ್ತು. ಆದರೆ ಆ ಹುದ್ದೆ ಇದೀಗ ಖಾಲಿ ಇದೆ. ಇಲ್ಲಿದ್ದ ಅಧಿಕಾರಿಗೆ ಕೊಡಗಿಗೆ ವರ್ಗಾವಣೆಯಾಗಿದೆ. ಹೀಗಿದ್ದರೂ ಅವರು ದ.ಕ. ಜಿಲ್ಲೆಯ ಪ್ರಭಾರವನ್ನು ನೋಡಿಕೊಳ್ಳುವಂತಾಗಿದೆ.

‘ಮರಳಿನ ಕೊರತೆ ಇಲ್ಲ, ಕೆಂಪು ಕಲ್ಲಿಗೆ ಪರ್ಮಿಟ್ ಕೊಡುತ್ತೇವೆ’

ದ.ಕ. ಜಿಲ್ಲೆಯಲ್ಲಿ ಮರಳಿನ ಅಭಾವ ಇದೆ ಎನ್ನುವುದು ಸರಿಯಲ್ಲ. ಮರಳಿನ ಕೊರತೆ ಇದೆ ಎನ್ನುವುದು ಕೃತಕ ಸೃಷ್ಟಿ. ನಮ್ಮಲ್ಲಿ ಸಾಕಷ್ಟು ಮರಳು ದಾಸ್ತಾನು ಇದೆ. ಸ್ಯಾಂಡ್ ಆ್ಯಪ್ ಮೂಲಕ ಮರಳು ಲಭ್ಯ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಜನರು ಈ ಬಗ್ಗೆ ಯೋಚಿಸಬೇಕಾಗಿದೆ. ಕಾಮಗಾರಿಗೆ ಸಿಆರ್‌ಝೆಡ್ ವಲಯದ ಮರಳೇ ಬೇಕು. ಉಳಿದ ಕಡೆ ಸಿಗುವ ನದಿಯ ಮರಳಿನ ಗುಣಮಟ್ಟ ಚೆನ್ನಾಗಿಲ್ಲ ಎಂಬ ಮನಸ್ಥಿತಿ ಇರುವುದು ಬದಲಾಗಬೇಕು ಎಂದು ಹೇಳಿದರು.

ಕೆಂಪುಕಲ್ಲಿನ ಸಮಸ್ಯೆ ಇಲ್ಲ. ಕೆಂಪುಕಲ್ಲಿನ ಗಣಿಗಾರಿಕೆಗೆ ಪರವಾನಿಗೆ ಕೇಳಿದವರಿಗೆ ನೀಡಲಾಗುತ್ತದೆ. ಆದರೆ ಪರವಾನಿಗೆ ಪಡೆಯದೆ ಗಣಿಗಾರಿಕೆ ಮಾಡಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಇಬ್ರಾಹಿಂ ಅಡ್ಕಸ್ಥಳ

contributor

Similar News