ಉಮರ್ ಖಾಲಿದ್ ಪ್ರಕರಣ: ಭಾರತೀಯ ನ್ಯಾಯ ವ್ಯವಸ್ಥೆ ಕಟಕಟೆಯಲ್ಲಿ
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುರ್‌ಮೀತ್ ರಾಮ್ ರಹೀಂ ಎಂಬ ಅಪರಾಧಿಗೆ ಕಳೆದ ಎಂಟು ವರ್ಷಗಳಲ್ಲಿ 14 ಬಾರಿ ನ್ಯಾಯಾಲಯವು ಪೆರೋಲ್ ನೀಡಿ ಹೊರಗೆ ಕಳುಹಿಸಿದೆ. ಅದೇ ವೇಳೆ, ದಿಲ್ಲಿ ಗಲಭೆ ಸಂಚು ಪ್ರಕರಣದ ವಿಚಾರಣಾಧೀನ ಕೈದಿಗಳಿಗೆ ಕಳೆದ ಐದು ವರ್ಷಗಳಿಂದ ಜಾಮೀನು ನಿರಾಕರಿಸಲಾಗುತ್ತಿದೆ. ಇತಿಹಾಸವು (ಭಾರತೀಯ ನ್ಯಾಯ ವ್ಯವಸ್ಥೆಯ) ಈ ವಿರೋಧಾಭಾಸ ವನ್ನೂ ನೆನಪಿಡಲಿದೆ. ವಾಸ್ತವದಲ್ಲಿ ಇತಿಹಾಸವು ಈ ಪ್ರಕರಣವನ್ನು ಒಂಭತ್ತು ಮಂದಿಯ ಜಾಮೀನು ವಿಚಾರಣೆ ಎನ್ನುವುದಕ್ಕಿಂತಲೂ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯ ವಿಚಾರಣೆ ಎಂಬ ನೆಲೆಯಲ್ಲಿ ನೆನಪಿಡಲಿದೆ.
‘‘ಸಬ್ ಯಾದ್ ರಖ್ಖಾ ಜಾಯೇಗಾ!’’
(ಎಲ್ಲವನ್ನೂ ನೆನಪಿಡಲಾಗುವುದು)
ದಿಲ್ಲಿ ಗಲಭೆ ಷಡ್ಯಂತ್ರ ಪ್ರಕರಣದಲ್ಲಿ ಒಂಭತ್ತು ಮಂದಿ ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್‌ನ ಆಘಾತಕಾರಿ ಆದೇಶವನ್ನು ಅರಗಿಸಿಕೊಳ್ಳುತ್ತಾ ನಾನು ಆಮಿರ್ ಅಝೀಝ್‌ನ ಈ ಅಮರ ಸಾಲುಗಳನ್ನು ಗುನುಗುನಿಸುತ್ತಿದ್ದೇನೆ. ಈ ಹೊತ್ತಲ್ಲಿ ನಾನು ಉಮರ್‌ಖಾಲಿದ್‌ನ ಗೆಳತಿ ಬನ್ಜ್ಯೋತ್ಸ್ನಾ ಮತ್ತು ಖಾಲಿದ್‌ಸೈಫಿಯ ಪತ್ನಿ ನರ್ಗೀಸ್ ಹಾಗೂ ಅವರ ಕುಟುಂಬದವರನ್ನು ನೆನಪಿಸಿಕೊಳ್ಳುತ್ತಿದ್ದೇನೆ.
ಸದ್ಯ ನನಗೆ 2020ರ ಜನವರಿ ತಿಂಗಳ (ಮಹಾರಾಷ್ಟ್ರದ) ಭಿವಂಡಿಯ ಆ ಸಂಜೆ ನೆನಪಾಗುತ್ತಿದೆ. ಉಮರ್ ಖಾಲಿದ್ ಅಂದು ನಾಗರಿಕ ತಿದ್ದುಪಡಿ ಕಾಯ್ದೆಯ ವಿರುದ್ಧ ಮಾತನಾಡುತ್ತಾ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಜನರು ಸೇರಿದ್ದ ತುಂಬಿದ ಸ್ಟೇಡಿಯಂನಲ್ಲಿ ಸಭಿಕರನ್ನು ತನ್ನ ತರ್ಕಬದ್ಧ ಮತ್ತು ಆವೇಶಭರಿತ ಭಾಷಣದ ಮೂಲಕ ಮಂತ್ರಮುಗ್ಧಗೊಳಿಸಿದ್ದ; ಚಿಂತನೆಗೆ ಹಚ್ಚಿದ್ದ. ಸಭಿಕರಿಗೆ ‘ಕ್ರಾಂತಿಕಾರಿ ಸ್ವಾಗತ’ವನ್ನು ಕೋರುತ್ತಾ ಆತ ಮಾತು ಆರಂಭಿಸಿದ್ದ.
ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸುತ್ತಾ, ಮುಸ್ಲಿಮರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಪರಿವರ್ತಿಸುವ ನ್ಯಾಯಬಾಹಿರ ಮತ್ತು ಸಂವಿಧಾನ ವಿರೋಧಿ ಸಿಎಎಯ ವಿರುದ್ಧ ಅಹಿಂಸಾತ್ಮಕ ಹೋರಾಟಕ್ಕೆ ಆತ ಕರೆನೀಡಿದ್ದ. ಅದು (ದಿಲ್ಲಿಯ) ಅಮರಾವತಿಯಲ್ಲಿ ಮಾಡಿದ ಭಾಷಣಕ್ಕಿಂತ ಭಿನ್ನವಾಗಿರಲಿಲ್ಲ. ‘ಕೋಮುವಾದಿ, ಪ್ರಚೋದನಕಾರಿ ಭಾಷಣ’ಕ್ಕಾಗಿ ದಿಲ್ಲಿ ಹೈಕೋರ್ಟ್ ಉಮರ್ ಖಾಲಿದ್‌ನನ್ನು ಮೇಲ್ನೋಟಕ್ಕೆ ಅಪರಾಧಿಯೆಂದು ಪರಿಗಣಿಸಲು ಅಮರಾವತಿಯ ಆ ಭಾಷಣ ಕಾರಣವಾಗಿತ್ತು.
ಭಿವಂಡಿಯ ಭಾಷಣದ ಕೊನೆಯಲ್ಲಿ ಉಮರ್ ಖಾಲಿದ್ ಸಭಿಕರೊಡನೆ ತಮ್ಮ ಮೊಬೈಲ್ ಫೋನ್ ಟಾರ್ಚನ್ನು ಬೆಳಗಿಸುವಂತೆ ಕೇಳಿಕೊಂಡಿದ್ದ. ಆನಂತರ ಸಭಿಕರನ್ನೂ ಸೇರಿಸಿ ‘‘ಹಮ್ ಕ್ಯಾ ಮಾಂಗೇ? ಆಝಾದೀ. ಸಿಎಎಸೇ ಆಝಾದಿ, ಭೂಕ್‌ಸೇ ಆಝಾದಿ, ಅಂಬೇಡ್ಕರ್‌ವಾಲೀ ಆಝಾದಿ’’ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದ್ದ. ಇಡೀ ಸ್ಟೇಡಿಯಂ ಆತನ ‘ಸ್ವಾತಂತ್ರ್ಯ’ ಪರ ಘೋಷಣೆಗಳಿಗೆ ತಲೆದೂಗಿತ್ತು. ಆ ಸ್ವಾತಂತ್ರ್ಯದ ಕರೆಯು ಸಮಾನ ನಾಗರಿಕತ್ವವನ್ನು ಪಡೆಯುವ ಕುರಿತಾಗಿತ್ತು. ತಾವೂ ಇಲ್ಲಿನವರೇ ಎಂಬುದನ್ನು ದೃಢಪಡಿಸುವ ಸ್ವಾತಂತ್ರ್ಯ; ಸಹಪ್ರಜೆಗಳಾಗಿ ಒಪ್ಪಿಕೊಳ್ಳುವ ಸ್ವಾತಂತ್ರ್ಯ. ಬಾನಿನಲ್ಲಿ ನೂರಾರು ನಕ್ಷತ್ರಗಳು ಝಗಮಗಿಸುತ್ತಿದ್ದ ಆ ರಾತಿಯನ್ನು, ಆ ಗಳಿಗೆಯನ್ನು ನಾನು ಎಂದೂ ಮರೆಯಲಾರೆ. ಅಂದು ಆತ ಅತ್ಯಂತ ಹೆಚ್ಚು ಪ್ರಕಾಶಿಸುತ್ತಿದ್ದ ಎದ್ದು ಕಾಣುತ್ತಿದ್ದ ನಕ್ಷತ್ರವಾಗಿದ್ದ. ಭಾರತಕ್ಕೆ ಅತ್ಯಂತ ಜರೂರಾಗಿ ಬೇಕಾಗಿದ್ದ ನಾಯಕ. ಮುಸ್ಲಿಮರು ಕಾತರದಿಂದ ನಿರೀಕ್ಷಿಸುತ್ತಿದ್ದ ನಾಯಕ ಆತ (ಎಂದು ನನಗೆ ಭಾಸವಾಗಿತ್ತು).
ದಿಲ್ಲಿ ಹೈಕೋರ್ಟ್‌ನ ವಿಚಿತ್ರ ವಾದಗಳನ್ನು ಓದುತ್ತಾ ಹೋದರೆ, ನನಗೆ ಆ ನಕ್ಷತ್ರಗಳು ಒಂದೊಂದಾಗಿ ಕಳಚಿ ಬೀಳುತ್ತಿವೆಯೇನೂ ಅನಿಸುತ್ತಿದೆ. ನನ್ನನ್ನು ಸಮಾಧಾನಪಡಿಸಲು ನಾನು ಮತ್ತೆ ಆಮಿರ್ ಅಝೀಝ್‌ನ ಮೊರೆ ಹೋಗುತ್ತೇನೆ: ‘‘ತುಮ್ ರಾತ್ ಲಿಖೋ ಹಮ್‌ಚಾಂದ್ ಲಿಖೇಂಗೇ. ತುಮ್ ಜೈಲ್ ಮೇ ಡಾಲೋ ಹಮ್ ದೀವಾರ್ ಫಾಂದ್‌ಲಿಖೇಂಗೇ’’ (ನೀವು ರಾತ್ರಿಯನ್ನು ಚಿತ್ರಿಸಿ. ನಾವು ಚಂದ್ರನನ್ನು ಚಿತ್ರಿಸುವೆವು. ನೀವು ಜೈಲಿನ ಚಿತ್ರ ಬರೆಯಿರಿ. ನಾವು ಜೈಲು ಹಾರುವ ಚಿತ್ರವನ್ನು ಬರೆಯುವೆವು). ನಾನಂತೂ ಆ ಚಂದಿರನನ್ನು ನೋಡಲು ಕಾತರಿಸುತ್ತಿದ್ದೇನೆ.
ಈ 133 ಪುಟಗಳ ತೀರ್ಪನ್ನು ಇತಿಹಾಸ ಹೇಗೆ ನೆನಪಿಡಬಹುದು ಎಂಬ ಕುತೂಹಲವೂ ನನಗಿದೆ. ಕಾನೂನು ಪಂಡಿತ ಗೌತಮ್ ಭಾಟಿಯಾ ತಮ್ಮ ‘ಭಾರತದ ಸಾಂವಿಧಾನಿಕ ಕಾನೂನು ಮತ್ತು ತತ್ವಶಾಸ್ತ್ರ’ ಎಂಬ ಬ್ಲಾಗ್‌ಪೋಸ್ಟ್‌ನಲ್ಲಿ ಈ ಅಸಾಮಾನ್ಯ ಪ್ರಕರಣವನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ಈ ಪ್ರಕರಣದಲ್ಲಿ ಕೋರ್ಟ್‌ಗಳು ‘ಸಂಪೂರ್ಣವಾಗಿ ಕಣ್ಣು ಮುಚ್ಚುವ’ ತಂತ್ರವನ್ನು ಅನುಸರಿಸಿದ್ದು ‘ಪ್ರಾಸಿಕ್ಯೂಶನ್‌ನ ಪರವಾಗಿ ಶೀಘ್ರಲಿಪಿಕಾರನಾಗಿ’ ಕೆಲಸ ಮಾಡಿವೆ. ಹೈಕೋರ್ಟ್‌ನ ಪ್ರಸ್ತುತ ಆದೇಶದಲ್ಲಿರುವ ವಿಚಿತ್ರ ತರ್ಕವನ್ನೂ ಅವರು ಪ್ರಶ್ನಿಸಿದ್ದಾರೆ: ‘‘ನ್ಯಾಯಾಲಯವು ಈ ಪ್ರಕರಣದಲ್ಲಿ ಮಾಸ್ಕೋ ವಿಚಾರಣೆ ಮಾದರಿಯ ‘ಷಡ್ಯಂತ್ರ’ದ ಮೊರೆ ಹೋಗಿದೆ. ಅನಾಮಧೇಯ ‘ಗೌಪ್ಯ’ ಸಾಕ್ಷಿಗಳ ಅಸ್ಪಷ್ಟ ಮತ್ತು ಪರಸ್ಪರ ತಾಳೆಯಾಗದ ಹೇಳಿಕೆಗಳ ಮೇಲೆ ಈ ಪ್ರಕರಣ ನಿಂತಿದೆ. ಪ್ರಾಸಿಕ್ಯೂಶನ್‌ನ ವಾದದಲ್ಲಿರುವ ಅಸಾಂಗತ್ಯವನ್ನು (ನ್ಯಾಯಾಯಲವು) ತನ್ನದೇ ಆದ ಊಹೆಗಳು ಮತ್ತು ವ್ಯಾಖ್ಯಾನಗಳ ಮೂಲಕ ಮರೆಮಾಚಲು ಪ್ರಯತ್ನಿಸುತ್ತಿದೆ.’’ ಎಡಿಎಂ ಜಬಲ್‌ಪುರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಕುಖ್ಯಾತ ತೀರ್ಪಿನಂತೆಯೇ ನ್ಯಾಯ ನಿರಾಕರಣೆಗೆ ಸಂಬಂಧಿಸಿ ಒಂದು ಟೆಕ್ಸ್ಟ್‌ಬುಕ್ ಕೇಸ್ ಆಗಿ ದಾಖಲೆಗೆ ಸೇರುವ ಎಲ್ಲಾ ಅರ್ಹತೆ ಹೊಂದಿರುವ ದಿಲ್ಲಿ ಹೈಕೋರ್ಟ್‌ನ ಈ ತೀರ್ಪಿನ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ ಎನಿಸುತ್ತಿದೆ.
ದಿಲ್ಲಿ ಗಲಭೆ ಷಡ್ಯಂತ್ರದ ಕಟ್ಟುಕಥೆಯ ಅಸಂಬದ್ಧತೆಯನ್ನು ಒಂದಿಲ್ಲೊಂದು ದಿನ ಚರಿತ್ರೆಕಾರನೊಬ್ಬ ದಾಖಲಿಸಿಯೇ ತೀರುತ್ತಾನೆ. ಸಂತ್ರಸ್ತರನ್ನು ಅಪರಾಧಿಗಳನ್ನಾಗಿಯೂ ಪ್ರತಿಭಟನಾಕಾರರನ್ನು ಸಂಚುಕೋರರನ್ನಾಗಿಯೂ ಚಿತ್ರೀಕರಿಸಿದ ಕಟ್ಟುಕತೆ. ಒಂದು ಸಿ-ಗ್ರೇಡ್ ಚಿತ್ರಕತೆಯೂ ನಿಜವೆಂದು ತೋರಿಸಲು ಕಷ್ಟಪಡುವಂತಹ ಕಟ್ಟುಕತೆೆ. ಯಾಕೆಂದರೆ 2018ರ ನಂತರ ದಿನದ ಇಪ್ಪತ್ತನಾಲ್ಕು ಗಂಟೆಯೂ ಪೊಲೀಸ್ ಕಾವಲಿನಲ್ಲಿರುವ ಮತ್ತು ಇಲೆಕ್ಟ್ರಾನಿಕ್ ಕಣ್ಗಾವಲಿನಲ್ಲಿರುವ ಉಮರ್ ಖಾಲಿದ್ ಎಂಬ ವ್ಯಕ್ತಿ ದಿಲ್ಲಿ ಗಲಭೆಗೆ ಸಂಚು ರೂಪಿಸಿದ್ದ ಎಂಬುದನ್ನು ನಂಬಿಸಬೇಕಾದರೂ ದೊಡ್ಡ ಸೃಜನಶೀಲ ಮೆದುಳು ಬೇಕು. ಅಷ್ಟೇ ಅಲ್ಲ ಆತ ಅದನ್ನು 100 ಮಂದಿಯ ವಾಟ್ಸ್‌ಆ್ಯಪ್ ಗುಂಪು ಕಟ್ಟಿಕೊಂಡು ಕಾರ್ಯರೂಪಕ್ಕೆ ಇಳಿಸಿದ ಮತ್ತು ಮುಸ್ಲಿಮ್ ಆಕ್ಟಿವಿಸ್ಟ್‌ಗಳು ಆರಂಭಿಸಿದ ಈ ಗಲಭೆಯು ಹೆಚ್ಚಿನ ಸಂಖ್ಯೆಯ ಮುಸ್ಲಿಮರನ್ನೇ ಬಲಿತೆಗೆದುಕೊಂಡಿತು ಎಂಬುದನ್ನೂ ನಿರೂಪಿಸಬೇಕಾಗಿತ್ತು ತಾನೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ವೈಯಕ್ತಿಕವಾಗಿಯೂ ಒಂದಷ್ಟು ತಿಳುವಳಿಕೆ ಇದೆ. ವಿಶೇಷವಾಗಿ ಸಿಎಎ ವಿರೋಧಿ ಚಳವಳಿಯಲ್ಲಿ ನಾನು ನೇರವಾಗಿ ಸಂಪರ್ಕಕ್ಕೆ ಬಂದ ಮತ್ತು ಜತೆಗೆ ಕೆಲಸ ಮಾಡಿದ ಇಬ್ಬರ ಬಗ್ಗೆ ಹೇಳಬಲ್ಲೆ. ಉಮರ್ ಖಾಲಿದ್‌ನನ್ನು ಅರಿತವರು, ಆತನನ್ನು ನೋಡಿದವರು ಅಥವಾ ಆತನ ಮಾತುಗಳನ್ನು ಕೇಳಿದವರಾರೂ ಆತನ ದೇಹದಲ್ಲಿ ಕೋಮುವಾದಿ ಮೂಳೆಯೊಂದು ಇದೆ ಎಂದು ನಂಬಲಾರರು. ಆತ ಸಿಎಎ ವಿರೋಧಿ ಆಂದೋಲನದ ಒಬ್ಬ ಶಿಲ್ಪಿಯೂ, ರಾಯಭಾರಿಯೂ ಆಗಿದ್ದ. 2020ರ ಜನವರಿ ಮತ್ತು ಫೆಬ್ರವರಿಯಲ್ಲಿ ಅವನು ದಿಲ್ಲಿಯಿಂದ ದೂರವೇ ಇದ್ದ. ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಲೂ ಅವನು ದೂರವಿದ್ದ.
ಪೂರ್ವ ದಿಲ್ಲಿ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರ ನಡುವೆಯೂ ಸಮಾನ ಜನಪ್ರಿಯತೆ ಪಡೆದಿದ್ದ ಇನ್ನೊಬ್ಬ ಹೋರಾಟಗಾರ ಖಾಲಿದ್ ಸೈಫಿ ಕೂಡಾ ಚಳವಳಿಯು ಯಾವುದೇ ಕಾರಣಕ್ಕೂ ಸಂಘರ್ಷಾತ್ಮಕ ರೂಪ ಪಡೆಯಬಾರದು, ಹಿಂಸಾತ್ಮಕವಾಗಬಾರದು ಎಂಬ ಕಾಳಜಿ ಹೊಂದಿದ್ದವರಲ್ಲಿ ಒಬ್ಬನಾಗಿದ್ದ. ಕೋಮುಗಲಭೆಯೊಂದಿಗೆ ಇವರಿಬ್ಬರಿಗೆ ಯಾವುದೇ ದೂರದ ಸಂಬಂಧವೂ ಇದೆ ಎಂಬುದನ್ನು ನಾನು ಒಪ್ಪಲಾರೆ. ಉಳಿದ ಆರೋಪಿಗಳ ಬಗ್ಗೆಯೂ ಈ ಮಾತು ನಿಜವಿರಬಹುದು. ಆದರೆ ಅವರ ಪ್ರಕರಣಗಳ ಬಗ್ಗೆ ಖಚಿತವಾಗಿ ಹೇಳಬಲ್ಲ ವೈಯಕ್ತಿಕ ಮಾಹಿತಿಯಾಗಲೀ, ಅನುಭವವಾಗಲೀ ನನ್ನ ಬಳಿ ಇಲ್ಲ.
ಸಿಎಎ ಒಂದು ಮುಸ್ಲಿಮ್ ವಿರೋಧಿ ಕಾಯ್ದೆ ಎಂದು ಹೇಳಿದ್ದಕ್ಕಾಗಿ ಉಮರ್‌ನನ್ನು ಜೈಲಿಗೆ ಹಾಕಿದ್ದಾದರೆ ನಾನು ಕೂಡಾ ಕಂಬಿಯ ಹಿಂದೆ ಇರಬೇಕಾಗಿತ್ತು. ಒಂದು ವೇಳೆ ಖಾಲಿದ್ ಸಿಎಎ ವಿರುದ್ದ ಸ್ಥಳೀಯವಾಗಿ ಪ್ರತಿಭಟನೆಗಳನ್ನು ಸಂಘಟಿಸಿದ ಕಾರಣಕ್ಕಾಗಿ ಜೈಲುವಾಸ ಅನುಭವಿಸುತ್ತಿದ್ದಾನೆಂದಾದರೆ ನನಗೂ ಆ ಗತಿ ಆಗಬೇಕಿತ್ತಲ್ಲವೇ? ನಿಜವಾಗಿ, ದಿಲ್ಲಿ ಪೊಲೀಸರು ತಯಾರಿಸಿದ ಚಾರ್ಜ್‌ಷೀಟ್ ನನ್ನನ್ನೂ ಒಬ್ಬ ಪ್ರಮುಖ ಸಂಚುಕೋರನಾಗಿ ಗುರುತಿಸಿತ್ತು. ಕೆಲವು ಮೊಗಾಂಬೋ ಶೈಲಿಯ ಡಯಲಾಗ್‌ಗಳನ್ನೂ ನನ್ನ ಕತ್ತಿಗೆ ಕಟ್ಟಲಾಗಿತ್ತು. ಕನಿಷ್ಠ ಪಕ್ಷ ಹೈಕೋರ್ಟ್ ನ್ಯಾಯಾಧೀಶರು ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿಷ್ಟೆ: ದಿಲ್ಲಿ ಪೊಲೀಸರು ತಮ್ಮ ಷಡ್ಯಂತ್ರದ ಕತೆಯ ಬಗ್ಗೆ ನಿಜವಾಗಿಯೂ ಗಂಭೀರವಾಗಿದ್ದೇ ಆದಲ್ಲಿ ಅವರು ಈವರೆಗೂ ನನ್ನ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಈ ಐದು ವರ್ಷಗಳಲ್ಲಿ ಒಮ್ಮೆಯೂ ನನ್ನನ್ನು ಯಾಕೆ ವಿಚಾರಣೆಗೆ ಕರೆದಿಲ್ಲ?
ಈ ಪ್ರಕರಣದ ಪಠ್ಯಕ್ಕಿಂತಲೂ ಇದರ ಉದ್ದಕ್ಕೂ ಕಂಡುಬರುವ ಕೆಲವು ಕುತೂಹಲಕಾರಿ ಕಾಕತಾಳೀಯತೆಗಳನ್ನು (curious coincidences) ಇತಿಹಾಸ ಖಂಡಿತ ನೆನಪಿಡಲಿದೆ. ಕೇವಲ ಒಂದು ವಾರದೊಳಗೆ ನಿರ್ಧರಿಸಬಹುದಾಗಿದ್ದ ಜಾಮೀನು ಪ್ರಕರಣವು ಕನಿಷ್ಠ ಮೂರು ಬಾರಿಯಾದರೂ ತಿಂಗಳುಗಟ್ಟಲೆ ಮುಂದಕ್ಕೆ ಹೋಯಿತು. ಒಬ್ಬರ ನಂತರ ಒಬ್ಬರಂತೆ ದಿಲ್ಲಿ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರು ವಿಚಾರಣೆ ಮುಗಿಸಿ ಆದೇಶ ಕಾದಿರಿಸುವ ಮೂಲಕ ಪ್ರಕರಣವನ್ನು ವಿಳಂಬಗೊಳಿಸಿದರು. ಈ ಪ್ರಕರಣದಲ್ಲಿ ಯಾವುದೇ ತೀರ್ಪು ನೀಡದೆಯೇ ಅವರಿಬ್ಬರೂ ಬೇರೆ ರಾಜ್ಯಗಳಿಗೆ ವರ್ಗವಾದರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಭಡ್ತಿ ಪಡೆದರು. ಇದೀಗ ಬಂದಿರುವ ಆದೇಶದ ಹಿನ್ನೆಲೆಯನ್ನು ಗಮನಿಸಿ. ಈ ಆದೇಶ ಹೊರಬಿದ್ದಿರುವುದು ಎರಡು ತಿಂಗಳ ವಿಚಾರಣೆ ಮುಗಿದ ನಂತರ. ಅದೂ ಜಸ್ಟಿಸ್ ಶೈಲೇಂದ್ರ ಕೌರ್ ನಿವೃತ್ತಿಗೊಳ್ಳುವುದಕ್ಕೆ ಮೂರು ದಿನಗಳಷ್ಟೆ ಬಾಕಿಯಿರುವಾಗ.
ಇತಿಹಾಸವು ನೆನಪಿನಲ್ಲಿಟ್ಟುಕೊಳ್ಳಲಿರುವ ಇನ್ನೊಂದು ಸಂಗತಿಯೂ ಇದೆ. ಉಮರ್ ಖಾಲಿದ್‌ನ ಭಾಷಣಗಳಲ್ಲಿ ಕೋಮು ಪ್ರಚೋದನೆಯನ್ನು ಪತ್ತೆಹಚ್ಚುತ್ತಾ ಕಾಲಕಳೆಯುತ್ತಿದ್ದ ನ್ಯಾಯಾಧೀಶರು ಮತ್ತೊಂದೆಡೆ ಬಹಿರಂಗವಾಗಿ ದ್ವೇಷಭಾಷಣದಲ್ಲಿ ತೊಡಗಿದ್ದ ಹಲವರ ವೀಡಿಯೊಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ರಾಗಿಣಿ ತಿವಾರಿ, ಪ್ರದೀಪ್‌ಸಿಂಗ್, ಯತಿ ನರಸಿಂಘಾನಂದ್, ಮಂತ್ರಿದ್ವಯರಾದ ಕಪಿಲ್‌ಮಿಶ್ರಾ ಮತ್ತು ಅನುರಾಗ್ ಠಾಕೂರ್ ಮಾಡಿದ ಭಾಷಣಗಳು ನ್ಯಾಯಾಧೀಶರ ಗಮನಕ್ಕೂ ಬರಲಿಲ್ಲ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುರ್‌ಮೀತ್ ರಾಮ್ ರಹೀಂ ಎಂಬ ಅಪರಾಧಿಗೆ ಕಳೆದ ಎಂಟು ವರ್ಷಗಳಲ್ಲಿ 14 ಬಾರಿ ನ್ಯಾಯಾಲಯವು ಪೆರೋಲ್ ನೀಡಿ ಹೊರಗೆ ಕಳುಹಿಸಿದೆ. ಅದೇ ವೇಳೆ, ದಿಲ್ಲಿ ಗಲಭೆ ಸಂಚು ಪ್ರಕರಣದ ವಿಚಾರಣಾಧೀನ ಕೈದಿಗಳಿಗೆ ಕಳೆದ ಐದು ವರ್ಷಗಳಿಂದ ಜಾಮೀನು ನಿರಾಕರಿಸಲಾಗುತ್ತಿದೆ. ಇತಿಹಾಸವು (ಭಾರತೀಯ ನ್ಯಾಯ ವ್ಯವಸ್ಥೆಯ) ಈ ವಿರೋಧಾಭಾಸವನ್ನೂ ನೆನಪಿಡಲಿದೆ. ವಾಸ್ತವದಲ್ಲಿ ಇತಿಹಾಸವು ಈ ಪ್ರಕರಣವನ್ನು ಒಂಭತ್ತು ಮಂದಿಯ ಜಾಮೀನು ವಿಚಾರಣೆ ಎನ್ನುವುದಕ್ಕಿಂತಲೂ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯ ವಿಚಾರಣೆ ಎಂಬ ನೆಲೆಯಲ್ಲಿ ನೆನಪಿಡಲಿದೆ. ಇತಿಹಾಸದ ಆ ತೀರ್ಪು ಖಂಡಿತವಾಗಿಯೂ ಲಘುವಾಗಿರಲಾರದು.
ದಿಲ್ಲಿ ಹೈಕೋರ್ಟ್ ಕಡೆಯದಾಗಿ ಒಂದು ಅಡಿಟಿಪ್ಪಣಿಯ ರೂಪದಲ್ಲಿ ಸ್ವಲ್ಪ ದಯೆಯನ್ನೂ ತೋರಿದೆ. ಸುದೀರ್ಘ ಕಾಲ ಆರೋಪಿಗಳನ್ನು ಜೈಲಿನಲ್ಲಿಟ್ಟಿರುವ ಬಗ್ಗೆ ಪ್ರಸ್ತಾವಿಸುತ್ತಾ, ವಿಚಾರಣೆ ‘‘ಮುಂದುವರಿಯುತ್ತಿದೆ’’ ಮತ್ತು ‘‘ವಿಚಾರಣೆಯ ಗತಿಯು ಸಹಜ ಗತಿಯಲ್ಲೇ ಮುಂದುವರಿಯಲಿದೆ’’ ಎಂಬ ಭರವಸೆಯನ್ನೂ ನ್ಯಾಯಾಧೀಶರು ನೀಡಿದ್ದಾರೆ. ಅಷ್ಟು ಮಾತ್ರವಲ್ಲ, ‘‘ಲಗುಬಗೆಯಿಂದ ವಿಚಾರಣೆ ನಡೆಸುವುದು ಪ್ರತಿವಾದಿಗಳು ಮತ್ತು ಪ್ರಭುತ್ವ ಎರಡರ ಹಕ್ಕುಗಳಿಗೂ ತದ್ವಿರುದ್ಧವಾಗಬಹುದು’’ ಎಂದು ಎಚ್ಚರಿಸುವ ದಯೆಯನ್ನೂ ಅವರು ತೋರಿದ್ದಾರೆ. ಅಂದ ಹಾಗೆ, ಈ ಪ್ರಕರಣದ ಜಾಮೀನು ವಿಚಾರಣೆಯೇ ಕಳೆದ ಐದು ವರ್ಷಗಳಿಂದ ತೆವಳುತ್ತಾ ಸಾಗುತ್ತಿದೆ. ಗಲಭೆ ಪ್ರಕರಣದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಾಗಿದೆ. ಈಗಿನ ವೇಗವನ್ನು ಗಮನಿಸಿದರೆ ಕನಿಷ್ಠ ಹತ್ತು ವರ್ಷಗಳಾದರೂ ಅದಕ್ಕೆ ತಗಲಬಹುದು.
ನಾನು ಆರಂಭದಲ್ಲಿ ಉಲ್ಲೇಖಿಸಿದ ಕವಿಯ ಮತ್ತೆರಡು ಸಾಲುಗಳು ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಅನಿಸುತ್ತಿದೆ: ‘‘ತುಮ್ ಅದಾಲತೋಂಸೆ ಬೈಟ್‌ಕರ್ ಚುಟ್ಕುಲೇ ಲಿಖೋ. ಹಮ್ ಸಡಕೋ, ದೀವಾರೋಂ ಪರ್ ಇನ್ಸಾಫ್ ಲಿಖೇಂಗೇ’’. (ನೀವು ನ್ಯಾಯಾಲಯಗಳಲ್ಲಿ ಕೂತು ಜೋಕ್‌ಗಳನ್ನು ಬರೆಯಿರಿ. ನಾವು ಬೀದಿಗಳಲ್ಲಿ, ಗೋಡೆಗಳ ಮೇಲೆ ನ್ಯಾಯವನ್ನು ಬರೆಯುತ್ತೇವೆ)
(ಕೃಪೆ: ದ ಇಂಡಿಯನ್‌ಎಕ್ಸ್‌ಪ್ರೆಸ್)