ರಾಹುಲ್ ಗಾಂಧಿಯವರ ‘ಹೈಡ್ರೋಜನ್ ಬಾಂಬ್’ ಎಚ್ಚರಿಕೆಯ ಅರ್ಥವೇನು?
ಬಿಹಾರದ ರಸ್ತೆಗಳಲ್ಲಿ 16 ದಿನ, 1,300 ಕಿಲೋಮೀಟರ್, 25 ಜಿಲ್ಲೆಗಳನ್ನು ಕ್ರಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ವೋಟರ್ ಅಧಿಕಾರ್ ಯಾತ್ರೆ’ ಪಾಟ್ನಾದಲ್ಲಿ ಮುಕ್ತಾಯಗೊಂಡಿರಬಹುದು. ಆದರೆ ಅದು ಸೃಷ್ಟಿಸಿರುವ ರಾಜಕೀಯ ಕಂಪನಗಳು ಸದ್ಯಕ್ಕೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಬದಲಾಗಿ, ಇದು ಮತ್ತಷ್ಟು ದೊಡ್ಡ ಹೋರಾಟದ ಮುನ್ನುಡಿ ಎಂಬ ಸ್ಪಷ್ಟ ಸಂದೇಶವನ್ನು ರಾಹುಲ್ ಗಾಂಧಿ ನೀಡಿದ್ದಾರೆ.
ರಾಹುಲ್ ಗಾಂಧಿ ಉಲ್ಲೇಖಿಸಿ ರುವ, ಅಣುಬಾಂಬ್‌ಗಿಂತಲೂ ದೊಡ್ಡ ‘ಹೈಡ್ರೋಜನ್ ಬಾಂಬ್’ ಯಾವುದು?
ಆಗಸ್ಟ್ 7, 2025. ಭಾರತದ ಚುನಾವಣಾ ರಾಜಕೀಯದಲ್ಲಿ ಒಂದು ಪ್ರಮುಖ ತಿರುವು ಎಂದೇ ಹೇಳಬಹುದು. ಅಂದು ರಾಹುಲ್ ಗಾಂಧಿ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ‘ಅಣುಬಾಂಬ್’ ಎಂದು ಬಣ್ಣಿಸಿ, ದಾಖಲೆ ಸಮೇತ ಆರೋಪಗಳನ್ನು ಮುಂದಿಟ್ಟಾಗ, ಸರಕಾರ ಅದನ್ನು ಮೊದಲು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ, ಆ ಆರೋಪಗಳು ದೇಶಾದ್ಯಂತ ಶುರು ಮಾಡಿದ ವ್ಯಾಪಕ ಚರ್ಚೆ ಮತ್ತು ಚುನಾವಣಾ ಆಯೋಗ ಅನಿವಾರ್ಯವಾಗಿ ಕೊಟ್ಟ ಪ್ರತಿಕ್ರಿಯೆಗಳು, ವಿಷಯವನ್ನು ಜೀವಂತವಾಗಿರಿಸಿದವು.
ಈಗ, ಬಿಹಾರ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ, ರಾಹುಲ್ ಗಾಂಧಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘‘ಬಿಜೆಪಿಯವರು ಸಿದ್ಧರಾಗಿ, ಈಗ ಅಣುಬಾಂಬ್‌ಗಿಂತ ದೊಡ್ಡದಾದ ಹೈಡ್ರೋಜನ್ ಬಾಂಬ್ ಬರಲಿದೆ. ಆ ಬಾಂಬ್ ಸ್ಫೋಟಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮುಖ ತೋರಿಸಲು ಸಾಧ್ಯವಾಗುವುದಿಲ್ಲ’’ ಎಂದು ಗುಡುಗಿದ್ದಾರೆ.
ಈ ‘ಹೈಡ್ರೋಜನ್ ಬಾಂಬ್’ ಯಾವುದು ಎಂಬ ಪ್ರಶ್ನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ.
‘ಎಚ್’ ಅಕ್ಷರವು ‘ಹರ್ಯಾಣ’ವನ್ನು ಪ್ರತಿನಿಧಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಂತೆಯೇ, ಹರ್ಯಾಣದ ಮತದಾರರ ಪಟ್ಟಿಯಲ್ಲೂ ನಡೆದಿರುವ ವ್ಯವಸ್ಥಿತ ಅಕ್ರಮಗಳ ಕುರಿತು ಕಾಂಗ್ರೆಸ್ ಆಳವಾದ ಅಧ್ಯಯನ ನಡೆಸಿದ್ದು, ಶೀಘ್ರದಲ್ಲೇ ಅದನ್ನು ದೇಶದ ಮುಂದಿಡಲಿದೆ ಎಂದು ಜನರು ಚರ್ಚಿಸುತ್ತಿದ್ದಾರೆ.
‘ವೋಟರ್ ಅಧಿಕಾರ್ ಯಾತ್ರೆ’ಯುದ್ದಕ್ಕೂ ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷ ನಾಯಕರು ಚುನಾವಣಾ ಆಯೋಗವನ್ನು ನೇರವಾಗಿ ಗುರಿಯಾಗಿಸಿಕೊಂಡರು.
ಮತಗಳ್ಳತನ ಚುನಾವಣಾ ಆಯೋಗದ ಸಹಕಾರದಿಂದಲೇ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘‘ಇಂತಹ ಆಧಾರರಹಿತ ಆರೋಪಗಳಿಗೆ ಆಯೋಗ ಹೆದರುವುದಿಲ್ಲ. ಸಂವಿಧಾನಕ್ಕೆ ಅಗೌರವ ತೋರುವ ಕೆಲಸವಿದು’’ ಎಂದು ಹೇಳಿದ್ದಾರೆ.
ಈ ಯಾತ್ರೆಯ ಇನ್ನೊಂದು ಗಮನಾರ್ಹ ಅಂಶವೆಂದರೆ, ರಾಹುಲ್ ಗಾಂಧಿ ಮುಖ್ಯವಾಹಿನಿ ಮಾಧ್ಯಮಗಳು ಅಥವಾ ‘ಗೋದಿ ಮೀಡಿಯಾ’ ಎಂದು ಅವರು ಕರೆಯುವ ಮಾಧ್ಯಮಗಳನ್ನು ಸಂಪೂರ್ಣವಾಗಿ ಬದಿಗೊತ್ತಿ, ಪರ್ಯಾಯ ಮತ್ತು ಬಹುಜನ ಮಾಧ್ಯಮಗಳೊಂದಿಗೆ ಹೆಚ್ಚು ಸಂವಾದ ನಡೆಸಿದ್ದು.
ಯಾತ್ರೆಯುದ್ದಕ್ಕೂ ಅವರು ಸ್ಥಳೀಯ ಯೂಟ್ಯೂಬರ್‌ಗಳು, ಡಿಜಿಟಲ್ ಪತ್ರಕರ್ತರು ಮತ್ತು ಬಹುಜನ ಚಿಂತನೆಗಳನ್ನು ಪ್ರತಿನಿಧಿಸುವ ಪತ್ರಕರ್ತರನ್ನು ಹತ್ತಿರಕ್ಕೆ ಕರೆದು ಮಾತನಾಡಿದರು.
ಅವರು ಈ ಮೂಲಕ ಹೊಸ ಮಾಧ್ಯಮ ಸಮೀಕರಣಕ್ಕೆ ನಾಂದಿ ಹಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಸಂವಹನ ತಂತ್ರದಲ್ಲಿನ ದೊಡ್ಡ ಬದಲಾವಣೆಯ ಸಂಕೇತವಾಗಿದೆ.
ಒಂದು ಕಾಲದಲ್ಲಿ ‘ರಾಜಕುಮಾರ’ ಎಂದು ಟೀಕಿಸಲ್ಪಡುತ್ತಿದ್ದ ರಾಹುಲ್ ಗಾಂಧಿ, ‘ಭಾರತ ಜೋಡೊ ಯಾತ್ರೆ’ಯ ನಂತರ ನಿರಂತರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಬಿಹಾರದ ಸುಡು ಬಿಸಿಲಿನಲ್ಲಿ, ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಿ, ಬೈಕ್ ಓಡಿಸಿಕೊಂಡು ಹಳ್ಳಿಗಳನ್ನು ತಲುಪಿದ ದೃಶ್ಯಗಳು, ಅವರ ರಾಜಕೀಯ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿವೆ.
ಅವರು ‘ಅರಮನೆಯ ರಾಜಕಾರಣಿ’ ಅಲ್ಲ, ಬದಲಿಗೆ ‘ರಸ್ತೆಗಿಳಿಯುವ ಹೋರಾಟಗಾರ’ ಎಂಬ ಚಿತ್ರಣವನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಬದಲಾವಣೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ.
ರಾಹುಲ್ ಗಾಂಧಿಯನ್ನು ತಮಾಷೆ ಮಾಡುತ್ತಿದ್ದ, ಲೇವಡಿ ಮಾಡುತ್ತಿದ್ದವರ ಬಾಯಿ ಬಂದಾಗಿದೆ.
ಈಗ ರಾಹುಲ್ ಗಾಂಧಿ ಬಾಯಿ ತೆರೆದರೆ ಯಾವ ಬಾಂಬ್ ಹಾಕುತ್ತಾರೆ ಎಂಬ ಭಯ ಬಿಜೆಪಿಗೆ ಬಂದಿದೆ. ಅಷ್ಟರಮಟ್ಟಿಗೆ ರಾಹುಲ್ ಗಾಂಧಿ ಸಂಪೂರ್ಣವಾಗಿ ಬದಲಾದ ಪ್ರಬುದ್ಧ ನಾಯಕನಾಗಿ ವಿಶ್ವಾಸ ಗಳಿಸಿದ್ದಾರೆ .
ವಿಪಕ್ಷದ ಬಹುತೇಕ ಎಲ್ಲ ಪಕ್ಷಗಳೂ ಅವರ ನಾಯಕತ್ವದಲ್ಲಿ ನಂಬಿಕೆ ತೋರಿಸಿವೆ.
‘ವೋಟರ್ ಅಧಿಕಾರ್ ಯಾತ್ರೆ’ ಬಿಹಾರ ಚುನಾವಣೆಯ ದೃಷ್ಟಿಯಿಂದ ಮಹಾಘಟಬಂಧನಕ್ಕೆ ಲಾಭ ತಂದುಕೊಡಬಹುದು. ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡಬಹುದು. ಆದರೆ ಇದರ ನಿಜವಾದ ಮಹತ್ವ ಅದರಾಚೆಗಿದೆ.
ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯ ವಿರುದ್ಧದ ಹೋರಾಟವಲ್ಲ. ಬದಲಿಗೆ, ಪ್ರಜಾಪ್ರಭುತ್ವದ ಮೂಲ ತತ್ವವಾದ ‘ಒಬ್ಬ ವ್ಯಕ್ತಿ, ಒಂದು ವೋಟು’ ಎಂಬ ಹಕ್ಕನ್ನು ಉಳಿಸಿಕೊಳ್ಳುವ ದೊಡ್ಡ ಆಂದೋಲನದ ಭಾಗವಾಗಿದೆ.
ರಾಹುಲ್ ಗಾಂಧಿಯವರ ‘ಹೈಡ್ರೋಜನ್ ಬಾಂಬ್’ ಎಚ್ಚರಿಕೆ, ಮುಂಬರುವ ದಿನಗಳಲ್ಲಿ ದೇಶದ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ.
ಯಾತ್ರೆ ಮುಗಿದಿರಬಹುದು, ಆದರೆ ಹೋರಾಟ ಈಗಷ್ಟೇ ಶುರುವಾಗಿದೆ. ‘ವೋಟ್ ಚೋರ್, ಗದ್ದಿ ಛೋಡ್’ ಎಂಬ ಘೋಷಣೆ ಬಿಹಾರದಿಂದ ದೇಶದಾದ್ಯಂತ ಹರಡಿದರೆ, ಅದು ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಸಂಶಯವಿಲ್ಲ.
ಈ ಹೋರಾಟದ ಮುಂದಿನ ಅಧ್ಯಾಯಕ್ಕಾಗಿ ದೇಶ ಕಾಯುತ್ತಿದೆ.