ಪ್ರಧಾನಿಯವರ ಮೊದಲ ಆದ್ಯತೆ ಯಾವುದಾಗಬೇಕಿತ್ತು?
ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಜಗತ್ತಿಗೆ ತಿಳಿಸಲು 51 ಸಂಸದರು ಮತ್ತು ಎಂಟು ಮಾಜಿ ರಾಯಭಾರಿಗಳ ತಂಡವನ್ನು 33 ದೇಶಗಳಿಗೆ ಕಳಿಸಲಾಗಿದೆ. ಬಿಕ್ಕಟ್ಟು ಮತ್ತು ಸವಾಲಿನ ಸಮಯದಲ್ಲಿ ಇದು ಅತ್ಯುತ್ತಮ ತಂತ್ರವೇ ಆಗಿರಬಹುದು. ಆದರೆ, ಒಂದು ಪ್ರಶ್ನೆಯ ಬಗ್ಗೆ ಯೋಚಿಸಬೇಕಿದೆ.
ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ, ಪಂದ್ಯ ತೊಂದರೆಯಲ್ಲಿದ್ದಾಗ ತಂಡದ ಅತ್ಯಂತ ವಿಶ್ವಾಸಾರ್ಹ ಆಟಗಾರ ಅಥವಾ ನಾಯಕ ಕ್ರೀಡಾಂಗಣವನ್ನು ಬಿಟ್ಟು ಶಾಪಿಂಗ್‌ಗೆ ಹೋಗುತ್ತಾರೆಯೆ? ಅಥವಾ ಅವರು ತಮ್ಮ ಕ್ರಮಾಂಕ ಬದಲಿಸಿ ತಕ್ಷಣ ಬ್ಯಾಟಿಂಗ್‌ಗೆ ಇಳಿಯುತ್ತಾರೆಯೇ?
ಹಾಗಾದರೆ, ಭಾರತವನ್ನು ವಿಶ್ವಗುರುವಾಗಿ ಮಾಡುತ್ತೇನೆಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಎಲ್ಲಿದ್ದಾರೆ?
ಪ್ರಧಾನಿ ಮೋದಿ ವಡೋದರಾ, ಗಾಂಧಿನಗರ, ಭುಜ್, ಅಹ್ಮದಾಬಾದ್‌ನಲ್ಲಿ ರೋಡ್ ಶೋಗಳನ್ನು ನಡೆಸಿದ್ದಾರೆ ಹಾಗೂ ಪಾಟ್ನಾ ಮತ್ತು ಭೋಪಾಲ್‌ನಲ್ಲಿ ರೋಡ್ ಶೋಗಳನ್ನು ನಡೆಸಲಿದ್ದಾರೆ.
11 ವರ್ಷಗಳಲ್ಲಿ ಪ್ರಧಾನಿ ಮೋದಿ 151 ದೇಶಗಳಿಗೆ ಭೇಟಿ ನೀಡಿದ್ದಾರೆ. ಇದಕ್ಕಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡಲಾಗಿದೆ. ವಿದೇಶ ಪ್ರವಾಸಗಳಲ್ಲಿ ಅತ್ಯಂತ ಅನುಭವಿ ಈ ನಾಯಕ ಪಾಟ್ನಾ ಮತ್ತು ಭೋಪಾಲ್‌ನಲ್ಲಿ ರೋಡ್ ಶೋಗಳನ್ನು ಮಾಡಲಿದ್ದಾರೆ.
ಅದೇ ಪಾಟ್ನಾ ಸಾಹಿಬ್‌ನ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅವರು ಫ್ರಾನ್ಸ್ ಮತ್ತು ರೋಮ್‌ಗೆ ಹೋಗುವ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದು ವಿಪರ್ಯಾಸವಲ್ಲವೆ?
ಭಾರತೀಯ ಸೇನೆ ಶೌರ್ಯ ಪ್ರದರ್ಶಿಸಿದಾಗ, ಪಾಕಿಸ್ತಾನವನ್ನು ಹೊಡೆದು ಪುಡಿಮಾಡಲಾಯಿತು ಎಂದು ಪ್ರಧಾನಿಯವರೇ ಹೇಳುತ್ತಿದ್ದಾರೆ. ಆ ಸಮಯದಲ್ಲಿ ವಿದೇಶಗಳಿಗೆ ಹೋಗಿ ಟ್ರಂಪ್ ಅವರನ್ನು ಭೇಟಿ ಮಾಡಿ, ಮ್ಯಾಕ್ರೋನ್‌ರನ್ನು ಭೇಟಿ ಮಾಡಿ, ಬ್ರಿಟನ್‌ಗೆ ಹೋಗಿ, ಇಟಲಿಗೆ ಹೋಗಿ ಪಾಕಿಸ್ತಾನದ ವಿರುದ್ಧ ಮಾತಾಡಿದ್ದರೆ ನೈತಿಕತೆ ಹೆಚ್ಚುತ್ತಿರಲಿಲ್ಲವೇ?
151 ದೇಶಗಳಿಗೆ ಭೇಟಿ ನೀಡಿದ ಅನುಭವ ಹೊಂದಿರುವ ಪ್ರಧಾನಿ ಮೋದಿ, ಈ ನಿರ್ಣಾಯಕ ಹೊತ್ತಲ್ಲಿ ರೋಡ್ ಶೋಗಳನ್ನು ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆಂದರೆ ಏನು ಹೇಳುವುದು?
ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಅವರ ಭೇಟಿಗಳ ಮೇಲೂ ನಿಗಾ ಇಡಬೇಕು. ಪಹಲ್ಗಾಮ್ ದಾಳಿಯ ಸಮಯದಲ್ಲಿ ಶಹಬಾಝ್ ಶರೀಫ್ ತುರ್ಕಿಯದಲ್ಲಿದ್ದರು. ಎಪ್ರಿಲ್‌ನಲ್ಲಿ ಅವರು ಸೌದಿ ಅರೇಬಿಯಕ್ಕೂ ಭೇಟಿ ನೀಡಿದ್ದರು. ಈ ವಾರ ಅವರು ತುರ್ಕಿಯ, ಅಝರ್‌ಬೈಜಾನ್, ಇರಾನ್ ಮತ್ತು ತಝಕಿಸ್ತಾನ್ ಪ್ರವಾಸದಲ್ಲಿದ್ದಾರೆ. ಭಾರತದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಭೇಟಿಯನ್ನು ವಿಶೇಷವಾಗಿ ಆಯೋಜಿಸಲಾಗಿದೆ.
ಸೌದಿ ಅರೇಬಿಯ ಮತ್ತು ಇರಾನ್ ಪಾಕಿಸ್ತಾನದ ಬಗ್ಗೆ ತಮ್ಮ ನಿಲುವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದನ್ನು ಗಮನಿಸಬೇಕು.
ಇರಾನ್‌ನಿಂದ ಬರುವ ವರ್ತಮಾನಗಳಲ್ಲಿ, ಪಾಕಿಸ್ತಾನ ಸೇನೆಯ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನೂ ಕಾಣಬಹುದು.
ಫೆಲೆಸ್ತೀನ್ ಕುರಿತಾದ ಪಾಕಿಸ್ತಾನದ ನಿಲುವನ್ನು ಇರಾನ್ ಹೊಗಳಿದೆ. ಇರಾನ್‌ನ ಪರಮೋಚ್ಚ ನಾಯಕ ಶಹಬಾಝ್ ಶರೀಫ್ ಅವರೊಂದಿಗಿನ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಸೌದಿ ಅರೇಬಿದಿಂದ ಇರಾನ್ ಮತ್ತು ತುರ್ಕಿಯವರೆಗಿನ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡುತ್ತಿರುವ ಸಮಯದಲ್ಲಿ, ನಮ್ಮ ಪ್ರಧಾನಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ಪ್ರತೀ ಮನೆಗೆ ಸಿಂಧೂರ ವಿತರಿಸುವ ಕಾರ್ಯಕ್ರಮಗಳನ್ನು ಶುರು ಮಾಡಲಾಗುತ್ತಿದೆ.
ಪಹಲ್ಗಾಮ್‌ನಲ್ಲಿ ಮಡಿದವರ ಮನೆಗಳಲ್ಲಿ ಶೋಕ ಇರುತ್ತದೆ. ಅದು ಎಂದಿಗೂ ಕೊನೆಯಾಗದ ಸಂಕಟ. ಆದರೆ ಸಿಂಧೂರ ವಿತರಿಸುವ ಮೂಲಕ ರಾಜಕೀಯ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ಇದಾವುದೂ ತಪ್ಪೆಂದು ಅನ್ನಿಸುವುದಿಲ್ಲವೇ?
ರಾಮ ಮಂದಿರದ ಹೆಸರಲ್ಲಿನ ರಾಜಕಾರಣ ಉಪಯೋಗವಾಗಲಿಲ್ಲ. ಈಗ ಸಿಂಧೂರವನ್ನು ಕಳಿಸಲಾಗುತ್ತದೆ. ತಮ್ಮ ಜೀವನ ಸಂಗಾತಿಗಳನ್ನು ಕಳೆದುಕೊಂಡ ಮಹಿಳೆಯರ ಮನೆಗಳಿಗೂ ಸಿಂಧೂರ ಹೋಗುತ್ತದೆಯೇ? ಆ ಮಹಿಳೆಯರನ್ನು, ಅವರ ಕುಟುಂಬಗಳನ್ನು ಭೇಟಿಯಾಗಲು ಸಹ ಹೋಗದ ಪ್ರಧಾನಿ ಸಿಂಧೂರ ವಿತರಿಸಿ ಯಾವ ರಾಜಕೀಯ ಮಾಡುತ್ತಾರೆ?
ಸಂಸದರ ನಿಯೋಗಗಳ ವಿದೇಶ ಭೇಟಿಯ ಫಲಿತಾಂಶಗಳೇನು ಎಂಬುದು ಕಾಣಿಸುತ್ತಿಲ್ಲ. ಆ ದೇಶಗಳಿಂದ ಅಧಿಕೃತ ಹೇಳಿಕೆ ಏನು ಎಂಬುದು ತಿಳಿದಿಲ್ಲ.
ದೇಶದಲ್ಲಿ ವಿರೋಧ ಪಕ್ಷದ ಮೇಲೆ ಎಷ್ಟು ದಾಳಿ ಮಾಡಲಾಯಿತು? ಮಡಿಲ ಮೀಡಿಯಾ ವಿರೋಧ ಪಕ್ಷವನ್ನು ದೇಶದ ಶತ್ರುವೆಂಬಂತೆ ಮಾಡಿತು. ಈಗ ವಿರೋಧ ಪಕ್ಷದ ಸದಸ್ಯರನ್ನು ದೇಶದ ಮಹತ್ವದ ನಿಯೋಗದ ಮುಖವಾಗಿ ತೋರಿಸಲಾಗುತ್ತಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರ x ಹ್ಯಾಂಡಲ್‌ನಲ್ಲಿ ಸಂಸದರ ಗುಂಪುಗಳ ಚಿತ್ರಗಳನ್ನು ನೀವು ಕಾಣಬಹುದು.
ಪ್ರತೀ ದೇಶದ ಭಾರತೀಯ ರಾಯಭಾರ ಕಚೇರಿಯ ಟ್ವಿಟರ್ ಹ್ಯಾಂಡಲ್‌ಗಳಿಂದಲೂ ಫೋಟೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಈ ಚಿತ್ರಗಳು ಸಂಸದರು ಎಲ್ಲಿಗೆ ತಲುಪಿದರು ಮತ್ತು ಅವರು ಎಲ್ಲಿಗೆ ಹೋದರು ಎಂಬುದನ್ನು ತೋರಿಸುತ್ತವೆ.
ಪ್ರತಿಯೊಂದು ದೇಶದ ಭಾರತೀಯ ರಾಯಭಾರ ಕಚೇರಿಯಿಂದ ಒಂದು ಸಂಕ್ಷಿಪ್ತ ಹೇಳಿಕೆ ನೀಡಲಾಗುತ್ತದೆ. ಆದರೆ ಈ ಮಾಹಿತಿ, ಆ ದೇಶದ ಅಧ್ಯಕ್ಷರು, ಪ್ರಧಾನಿ, ವಿದೇಶಾಂಗ ಸಚಿವರು ಅಥವಾ ರಕ್ಷಣಾ ಸಚಿವರೊಂದಿಗೆ ಏಕೆ ಸಭೆ ನಡೆಸಲಿಲ್ಲ ಎಂಬುದರ ಬಗ್ಗೆ ಹೇಳುವುದಿಲ್ಲ. ಈ ದೇಶಗಳು ಭಾರತೀಯ ನಿಯೋಗವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ?
ಖತರ್, ಸಿಂಗಾಪುರ್, ಜಪಾನ್ ವಿದೇಶಾಂಗ ಸಚಿವರು ಮತ್ತು ರಶ್ಯದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರೊಂದಿಗೆ ಸಭೆಗಳನ್ನು ನಡೆಸಲಾಗಿದೆ. ಇದರರ್ಥ ಕನಿಷ್ಠ ವಿದೇಶಾಂಗ ಸಚಿವರನ್ನು ವಿದೇಶಾಂಗ ಸಚಿವಾಲಯಗಳು ಸಂಪರ್ಕಿಸಿರಬೇಕು. ಹಾಗಾದರೆ ಎಲ್ಲಾ ದೇಶಗಳ ವಿದೇಶಾಂಗ ಮಂತ್ರಿಗಳೊಂದಿಗೆ ಏಕೆ ಸಭೆಗಳು ನಡೆಯಲಿಲ್ಲ? ಕೆಲ ದೇಶಗಳು ನಿರಾಕರಿಸಿದವೆ? ಇದಕ್ಕೆ ಏನು ಉತ್ತರ? ಈ ಸಭೆಗಳ ನಂತರ ಈ ದೇಶಗಳು ಯಾವುದೇ ಹೇಳಿಕೆಯನ್ನು ನೀಡಿಲ್ಲ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪೋಸ್ಟ್ ಮಾಡಿದ ಪತ್ರಿಕಾ ಪ್ರಕಟಣೆ ಇದೆ.
ಫ್ರಾನ್ಸ್ ಅಧ್ಯಕ್ಷರಾಗಲಿ ಅಥವಾ ವಿದೇಶಾಂಗ ಸಚಿವರಾಗಲಿ ಸರ್ವಪಕ್ಷ ನಿಯೋಗವನ್ನು ಭೇಟಿಯಾಗಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಫ್ರಾನ್ಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಪತ್ರಿಕಾ ಪ್ರಕಟಣೆಯಲ್ಲಿ ಯಾವುದೇ ವಿಶೇಷ ಮಾಹಿತಿ ಇಲ್ಲ.
ಭಾರತದಿಂದ ಇಷ್ಟು ದೊಡ್ಡ ಮತ್ತು ಮಹತ್ವದ ಅಧಿಕೃತ ನಿಯೋಗ ಬರುತ್ತಿದ್ದರೆ, ಅದಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಬೇಕು ಎಂದು ಫ್ರಾನ್ಸ್ ಅಥವಾ ಬೇರೆ ಯಾವುದೇ ದೇಶ ಅರ್ಥಮಾಡಿಕೊಂಡಿಲ್ಲವೆ?
ಈಗ ಫ್ರಾನ್ಸ್ ಏಕೆ ಭಾರತದ ನಿಯೋಗಕ್ಕೆ ಪ್ರಾಮುಖ್ಯತೆ ನೀಡಲಿಲ್ಲ ಎಂಬುದರ ಕುರಿತು ಚರ್ಚೆ ನಡೆಯಬೇಕು. ಜಾಗತಿಕ ಮಟ್ಟದಲ್ಲಿ ಭಾರತದ ಯಾವುದೇ ನೀತಿಯ ಬಗ್ಗೆ ಫ್ರಾನ್ಸ್ ಕೋಪಗೊಂಡಿದೆಯೆ? ಪಾಕಿಸ್ತಾನದ ಪಾತ್ರವನ್ನು ಅದು ಬಹಿರಂಗವಾಗಿ ಖಂಡಿಸುತ್ತಿಲ್ಲವೇ?
ಭಾರತ ಮತ್ತು ಸೌದಿ ಅರೇಬಿಯ ನಡುವಿನ ಸಂಬಂಧಗಳ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಮೂರು ಬಾರಿ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ಸೌದಿ ಅರೇಬಿಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಿಂಗ್ ಅಬ್ದುಲ್ ಅಝೀಝ್ ಪ್ರಶಸ್ತಿ ನೀಡಲಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಾರೆಂದು ಸೌದಿ ಅರೇಬಿಯದಲ್ಲಿ ಹೇಳಿಕೊಳ್ಳುತ್ತಿದ್ದಾಗ, ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಚಪ್ಪಾಳೆ ತಟ್ಟುತ್ತಿದ್ದರು. ಈಗ ಸಂಸದರ ತಂಡಕ್ಕೆ ಸೌದಿ ಅರೇಬಿಯಾದಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆಯೇ?
ಅಲ್ಲಿಗೆ ಹೋದ ತಂಡ ಸೌದಿ-ಭಾರತ ಸ್ನೇಹ ಸಮಿತಿಯನ್ನು ಭೇಟಿ ಮಾಡಿತು. ಆದರೆ ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡುವಲ್ಲಿ ಈ ಸಮಿತಿ ಅಥವಾ ಅದರ ಸದಸ್ಯರು ಏನು ಮಾಡಬಲ್ಲರು ಎಂಬುದು ಸ್ಪಷ್ಟವಾಗಿಲ್ಲ.
ಸಂಸದರ ತಂಡದ ನಿಯೋಗ ಕಳುಹಿಸುವ ಬದಲು ಅವರು ಹೋದ ದೇಶಗಳಿಗೆ ಸ್ವತಃ ಪ್ರಧಾನಿಯೇ ಭೇಟಿ ಕೊಟ್ಟಿದ್ದರೆ ಅದಕ್ಕೊಂದಿಷ್ಟು ತೂಕವಿರುತ್ತಿತ್ತು. ಆದರೆ 151 ದೇಶಗಳಿಗೆ ಭೇಟಿ ನೀಡಿದವರು, ಈಗ ನಿಜವಾಗಿಯೂ ವಿದೇಶ ಪ್ರವಾಸ ಮಾಡಬೇಕಿದ್ದ ಹೊತ್ತಲ್ಲಿ, ಭಾರತದಲ್ಲಿ ರೋಡ್ ಶೋ ನಡೆಸುತ್ತಿರುವುದು ಯಾರಿಗೋಸ್ಕರ?