ಅಧ್ಯಾಪಕರ ಮೀಸಲಾತಿ ಹುದ್ದೆಗಳು ಖಾಲಿಯಿದ್ದರೂ ತುಂಬಲು ಇನ್ನೂ ಯಾಕೆ ಸಾಧ್ಯವಾಗುತ್ತಿಲ್ಲ?
ಮೀಸಲಾತಿ ಅಧ್ಯಾಪಕರ ಹುದ್ದೆಗಳು ನಿರಂತರವಾಗಿ ಖಾಲಿ ಇರುವುದು ಭಾರತದ ಸಮಗ್ರ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತದೆ. ವಿಶ್ವವಿದ್ಯಾನಿಲಯಗಳು ಕೇವಲ ಕಲಿಕೆಯ ಕೇಂದ್ರಗಳಲ್ಲ, ಬದಲಾಗಿ ಸಾಮಾಜಿಕ ಪರಿವರ್ತನೆಗೆ ನೆಲೆಗಳಾಗಿವೆ. ಅಧ್ಯಾಪಕರ ಹುದ್ದೆಗಳಲ್ಲಿ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವುದು ಕೇವಲ ಕಾನೂನು ಬಾಧ್ಯತೆಯಲ್ಲ, ಬದಲಾಗಿ ಭಾರತದ ವೈವಿಧ್ಯಮಯ ಸಮಾಜವನ್ನು ಪ್ರತಿಬಿಂಬಿಸುವ ನೈತಿಕ ಅಗತ್ಯವಾಗಿರಬೇಕು.
ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಾಮಾಜಿಕ ನ್ಯಾಯಕ್ಕೆ ಭಾರತದ ಭದ್ರತೆಯು ಸಾರ್ವಜನಿಕ ಸಂಸ್ಥೆಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳಿಗೆ ಸಾಮಾನ್ಯ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸುತ್ತದೆ. ಪರಿಶಿಷ್ಟ ಜಾತಿಗಳು(ಪ.ಜಾ.), ಪರಿಶಿಷ್ಟ ಪಂಗಡಗಳು (ಪ.ಪಂ.), ಇತರ ಹಿಂದುಳಿದ ವರ್ಗಗಳು (ಒಬಿಸಿ), ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ(ಇಡಬ್ಲ್ಯುಎಸ್) ಮೀಸಲಾತಿ ನೀತಿಗಳು ಕ್ರಮವಾಗಿ ಶೇ. 15, ಶೇ. 7.5, ಶೇ. 27 ಮತ್ತು ಶೇ. 10ರಷ್ಟು ಹುದ್ದೆಗಳ ಕೋಟಾದೊಂದಿಗೆ ಐತಿಹಾಸಿಕ ಅಸಮಾನತೆಗಳನ್ನು ಪರಿಹರಿಸುವ ಗುರಿ ಹೊಂದಿವೆ. ಆದರೂ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಂತಹ ಪ್ರಮುಖ ಸಂಸ್ಥೆಗಳು ಈ ಸಂವಿಧಾನದ ಆದೇಶದತ್ತ ಕೇಂದ್ರೀಕರಿಸುವುದರ ಬದಲು ಮೀಸಲು ಅಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ನಿರಂತರವಾಗಿ ವಿಫಲವಾಗುತ್ತವೆ. ಮುಖ್ಯವಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಜಕೀಯ ವ್ಯವಸ್ಥೆಯು ಭಾರತದ ಸಂಸ್ಥೆಗಳನ್ನು ಹೆಚ್ಚು ಸಮಗ್ರ ಮತ್ತು ಪ್ರಜಾಪ್ರಭುತ್ವ ನೀತಿಯ ಬದ್ಧತೆಗೆ, ಸಾಮಾಜಿಕ ನ್ಯಾಯದ ಕಾರ್ಯಸೂಚಿಯನ್ನು ಪಾಲಿಸುವುದಾಗಿ ಭರವಸೆ ನೀಡಿದೆ. ಈ ಸಂದರ್ಭದಲ್ಲಿ ಈ ಸಂಸ್ಥೆಗಳು ಸಮಗ್ರ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುವುದನ್ನು ತಡೆಯುವ ವ್ಯವಸ್ಥಿತ ಅಡೆತಡೆಗಳು ಯಾವುವು?
ನಿರಂತರ ಅಂತರ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಪ್ರಿಲ್ 2021ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ದತ್ತಾಂಶದಲ್ಲಿ 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಮೀಸಲು ಅಧ್ಯಾಪಕರ ಹುದ್ದೆಗಳಲ್ಲಿ ಗಮನಾರ್ಹವಾಗಿ ಹುದ್ದೆಗಳು ಖಾಲಿ ಬಿದ್ದಿವೆ. ಅವೆಂದರೆ- 2,389 ಪರಿಶಿಷ್ಟ ಜಾತಿಗಳು, 1,199 ಪರಿಶಿಷ್ಟ ಪಂಗಡಗಳು ಮತ್ತು 4,251 ಇತರ ಹಿಂದುಳಿದ ವರ್ಗಗಳು. ಇತ್ತೀಚಿನ ವರದಿಗಳು ಕೆಲವು ವಿಶ್ವವಿದ್ಯಾನಿಲಯಗಳಲ್ಲಿ (ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯ) ನೇಮಕಾತಿಗಾಗಿ ವಿಶೇಷ ಚಾಲನೆಯೊಂದಿಗೆ ಕೆಲವು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಸೂಚಿಸುತ್ತವೆ. ಆದರೆ ಅಂತರ ಮಾತ್ರ ಮುಂದುವರಿದಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ವರದಿಯು (2023) ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸುಮಾರು ಶೇ. 30ರಷ್ಟು ಬೋಧನಾ ಹುದ್ದೆಗಳು ವಿಶೇಷವಾಗಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್‌ನಂತಹ ಹಿರಿಯ ಶ್ರೇಣಿಗಳಲ್ಲಿ ಭರ್ತಿಯಾಗದೆ ಉಳಿದಿವೆ ಎಂದು ಸೂಚಿಸಿದೆ.
ಈ ಕೊರತೆಯು ಇತರ ಸಾರ್ವಜನಿಕ ವಲಯಗಳಿಗೆ (ರೈಲ್ವೆ ಮತ್ತು ಬ್ಯಾಂಕುಗಳು) ವ್ಯತಿರಿಕ್ತವಾಗಿದೆ, ಕೆಳಹಂತಗಳಲ್ಲಿ (ಗುಂಪು ಸಿ ಮತ್ತು ಡಿ) ಮೀಸಲು ಹುದ್ದೆಗಳನ್ನು ಆಗಾಗ ಭರ್ತಿ ಮಾಡಲಾಗುತ್ತದೆ. ಆದರೂ ಅಧಿಕಾರ ಮತ್ತು ಸವಲತ್ತುಗಳನ್ನು ಹೊಂದಿರುವ ಹುದ್ದೆಗಳು ಅಂಚಿನಲ್ಲಿರುವ ಸಾಮಾಜಿಕ ಸಮುದಾಯಗಳಿಗೆ ಇನ್ನೂ ತಲುಪಲು ಸಾಧ್ಯವಾಗಿಲ್ಲ. ಶೈಕ್ಷಣಿಕ ವಲಯದಲ್ಲಿ ಮೇಲ್ಮಟ್ಟದ ಹುದ್ದೆಗಳು ಸಹ (ಉಪಕುಲಪತಿಗಳು, ನಿರ್ದೇಶಕರು, ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು) ಮೀಸಲಿಡದ ವರ್ಗಗಳಿಂದ ಪ್ರಾಬಲ್ಯ ಹೊಂದಿದ್ದು, ಉನ್ನತ ಶಿಕ್ಷಣದಲ್ಲಿ ರಚನಾತ್ಮಕ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.
ಮೀಸಲು ಅಧ್ಯಾಪಕರ ಹುದ್ದೆಗಳು ಪೂರ್ಣಗೊಳ್ಳದಿರಲು ಹಲವಾರು ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಗಮನಾರ್ಹ ರೀತಿಯಲ್ಲಿ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸುತ್ತವೆ, ಕೆಲವೊಮ್ಮೆ ಅವುಗಳನ್ನು ಸರಕಾರದ ಮೇಲ್ವಿಚಾರಣೆಯಿಂದ ಪ್ರತ್ಯೇಕಿಸುತ್ತವೆ. ಯುಜಿಸಿ, ಮೀಸಲಾತಿ ನೀತಿಗಳನ್ನು ಪಾಲಿಸಬೇಕೆಂದು ಆದೇಶಿಸಿದರೆ, ಮೀಸಲಾತಿ ಜಾತಿಯೇ ಮಾರ್ಪಾಡಾಗುತ್ತದೆ. ಆಗಾಗ ಪ್ರಬಲ ಸಾಮಾಜಿಕ ಸಮುದಾಯಗಳಿಂದ ಆರಿಸಲ್ಪಟ್ಟ ಉಪಕುಲಪತಿಗಳು ಮತ್ತು ಆಯ್ಕೆ ಸಮಿತಿಗಳು, ಸಾಮಾಜಿಕ ನ್ಯಾಯದ ಕಾರ್ಯಸೂಚಿಯ ಆದ್ಯತಾ ತುರ್ತು ಅಥವಾ ಹೊಣೆಗಾರಿಕೆಯ ಕೊರತೆಯನ್ನು ತೋರಿಸುತ್ತವೆ.
ಎರಡನೆಯದಾಗಿ, 2018ರಲ್ಲಿ ಅಧ್ಯಾಪಕರ ನೇಮಕಾತಿಗೆ ಯುಜಿಸಿ 13 ಪಾಯಿಂಟ್ ರೋಸ್ಟರ್ ವ್ಯವಸ್ಥೆಗೆ ಬದಲಾಯಿಸಿದ್ದು ವಿವಾದಾಸ್ಪದವಾಗಿದೆ. ಮೀಸಲಾತಿಯನ್ನು ಲೆಕ್ಕಾಚಾರ ಮಾಡಲು ಇಡೀ ಸಂಸ್ಥೆಯನ್ನು ಒಂದು ಘಟಕವಾಗಿ ಪರಿಗಣಿಸುತ್ತಿದ್ದ ಹಿಂದಿನ 200 ಪಾಯಿಂಟ್ ವ್ಯವಸ್ಥೆಗಿಂತ ಭಿನ್ನವಾಗಿ ಹೊಸ ವ್ಯವಸ್ಥೆಯು ಪ್ರತ್ಯೇಕ ಇಲಾಖೆಗಳನ್ನು ಘಟಕಗಳಾಗಿ ಪರಿಗಣಿಸುತ್ತದೆ. ಸೀಮಿತ ಹುದ್ದೆಗಳನ್ನು ಹೊಂದಿರುವ ಸಣ್ಣ ಇಲಾಖೆಗಳಲ್ಲಿ (ಉದಾಹರಣೆಗೆ- ಆರು ಅಧ್ಯಾಪಕರ ಹುದ್ದೆಗಳು), ಕೇವಲ ಒಂದು ಹುದ್ದೆಯನ್ನು ಒಬಿಸಿಗಳಿಗೆ ಮೀಸಲಿಡಬಹುದು ಮತ್ತು 14 ಹುದ್ದೆಗಳನ್ನು ರಚಿಸುವವರೆಗೆ ಪರಿಶಿಷ್ಟ ಪಂಗಡಗಳಿಗೆ ಯಾವುದೇ ಹುದ್ದೆಯನ್ನು ಮೀಸಲಿಡಲಾಗುವುದಿಲ್ಲ. ಇದು ಮೀಸಲು ಹುದ್ದೆಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ವಿಶೇಷವಾಗಿ ಪರಿಶಿಷ್ಟ ಪಂಗಡಗಳಿಗೆ ಕಾನೂನು ಸಮರ ಸಾರಲು ಮತ್ತು ಪ್ರತಿಭಟನೆಗಳಿಗೆ ಅವಕಾಶ ನೀಡಿದೆ.
ಮೂರನೆಯದಾಗಿ, ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತದ ಆರೋಪಗಳು ಮುಂದುವರಿದಿವೆ. ಅಂಚಿನಲ್ಲಿರುವ ಸಮುದಾಯಗಳ ಅಭ್ಯರ್ಥಿಗಳು ಸಾಮಾನ್ಯವಾಗಿ ಸೂಕ್ತ ಅಭ್ಯರ್ಥಿ ಕಂಡುಬಂದಿಲ್ಲ ಎಂಬಂತಹ ಅಸ್ಪಷ್ಟ ಮಾನದಂಡಗಳ ಅಡಿಯಲ್ಲಿ ಹಂತ ಹಂತವಾಗಿ ತಿರಸ್ಕಾರಗೊಳ್ಳುತ್ತಾರೆ. ಇಂತಹ ಅಭ್ಯಾಸಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಹಿನ್ನೆಲೆಯ ಪ್ರತಿಭಾನ್ವಿತ ಶಿಕ್ಷಣ ತಜ್ಞರನ್ನು ವಿಶ್ವವಿದ್ಯಾನಿಲಯದ ವೃತ್ತಿ ಜೀವನವನ್ನು ಮುಂದುವರಿಸುವುದನ್ನು ನಿರುತ್ಸಾಹಗೊಳಿಸಬಹುದು. ಇದು ಹೊರಗಿಡುವಿಕೆಯ ಚಕ್ರವನ್ನು ಶಾಶ್ವತಗೊಳಿಸುತ್ತದೆ. 2022ರಲ್ಲಿ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘವು ನಡೆಸಿದ ಅಧ್ಯಯನವೂ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಶೇ.60ಕ್ಕಿಂತ ಹೆಚ್ಚು ಮೀಸಲಾತಿಗೊಳಪಡುವ ಖಾಲಿ ಹುದ್ದೆಗಳು ಅಂತಹ ವಿವೇಚನಾಯುಕ್ತ ನಿರಾಕರಣೆಗಳಿಗೆ ಕಾರಣವೆಂದು ಎತ್ತಿ ತೋರಿಸಿದೆ.
ಕೊನೆಯದಾಗಿ, ಸಾಂಸ್ಥಿಕ ಪದ್ಧತಿಗಳು ಕೆಲವೊಮ್ಮೆ ನ್ಯಾಯ ಸಮ್ಮತತೆಯನ್ನು ಹಾಳು ಮಾಡುತ್ತವೆ. ರಾಜಕೀಯ ಸಂಬಂಧಗಳು ಅಥವಾ ಸೈದ್ಧಾಂತಿಕ ಹೊಂದಾಣಿಕೆಯಿಂದ ಪ್ರಭಾವಿತವಾದ ನೇಮಕಾತಿಗಳ ವರದಿಗಳು ಪಾರದರ್ಶಕತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತವೆ. ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಎರಡೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರೂ, ಮನವೊಲಿಸುವ ನೀತಿ ಮತ್ತು ಅನುಷ್ಠಾನದ ನಡುವಿನ ಅಂತರವು ತಲುಪುವ ಗುರಿಯಿಂದ ಇನ್ನೂ ದೂರವಾಗಿದೆ.
ಸವಾಲನ್ನು ಎದುರಿಸುವುದು
ಮೀಸಲು ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಬಹುಮುಖಿ ವಿಧಾನದ ಅಗತ್ಯವಿದೆ. ಮೊದಲನೆಯದಾಗಿ, ಯುಜಿಸಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅತ್ಯಗತ್ಯ. ಇದು ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ಪೂರಕವಾಗಿದೆ. ನಿಯಮಿತ ಲೆಕ್ಕಪರಿಶೋಧನೆಗಳು, ಮೀಸಲಾತಿ ಅನುಸರಣೆಯನ್ನು ಸಾರ್ವಜನಿಕಗೊಳಿಸುವುದು ಮತ್ತು ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವುದು ಇತ್ಯಾದಿ. ಎರಡನೆಯದಾಗಿ 13 ಅಂಶಗಳ ರೋಸ್ಟರ್ ವ್ಯವಸ್ಥೆಯನ್ನು ಅದು ಸಾಂವಿಧಾನಿಕ ಆದೇಶಕ್ಕೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಮರುಪರಿಶೀಲಿಸುವುದು ನಿರ್ಣಾಯಕವಾಗಿದೆ. ಈ ವಿಷಯ ಕುರಿತು ನಡೆಯುತ್ತಿರುವ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಗಳು ಸ್ಪಷ್ಟತೆಯನ್ನು ಒದಗಿಸಬಹುದು.
ಮೂರನೆಯದಾಗಿ, ವಿಶ್ವವಿದ್ಯಾನಿಲಯಗಳು ನೇಮಕಾತಿಯಲ್ಲಿನ ಪಕ್ಷಪಾತಗಳನ್ನು, ಆಯ್ಕೆ ಸಮಿತಿಗಳಲ್ಲಿ ವೈವಿಧ್ಯವನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ಮೌಲ್ಯಮಾಪನ ಮಾನದಂಡಗಳನ್ನು ಪ್ರಾಮಾಣೀಕರಿಸುವ ಮೂಲಕ ಪರಿಹರಿಸಬೇಕು. ಶೈಕ್ಷಣಿಕ ನಾಯಕರನ್ನು ಸಾಮಾಜಿಕ ನ್ಯಾಯದ ತತ್ವಗಳಿಗೆ ಸಂವೇದನಾಶೀಲರನ್ನಾಗಿ ಮಾಡುವ ತರಬೇತಿ ಕಾರ್ಯಕ್ರಮಗಳು, ಒಳಗೊಳ್ಳುವಿಕೆಯನ್ನು ಪೋಷಿಸಬಹುದು. ಅಂತಿಮವಾಗಿ ಇದಕ್ಕೆ ಪರಿಸ್ಥಿತಿಯೊಂದನ್ನು ನಿಯಂತ್ರಿಸುವ ಪ್ರಭಾವ ಮತ್ತು ರಾಜಕೀಯ ಒತ್ತಡದ ಅಗತ್ಯವಿದೆ. ಸಾಮಾಜಿಕ ನ್ಯಾಯವೂ ಕೇವಲ ರಾಜಕೀಯ ಘೋಷಣೆಯಾಗಿ ಉಳಿಯಬಾರದು. ಆಡಳಿತವರ್ಗವು ಪ್ರತಿಯೊಂದು ಸಂಸ್ಥೆಯಲ್ಲಿಯೂ ಅದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು.
ಮೀಸಲಾತಿ ಅಧ್ಯಾಪಕರ ಹುದ್ದೆಗಳು ನಿರಂತರವಾಗಿ ಖಾಲಿ ಇರುವುದು ಭಾರತದ ಸಮಗ್ರ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತದೆ. ವಿಶ್ವವಿದ್ಯಾನಿಲಯಗಳು ಕೇವಲ ಕಲಿಕೆಯ ಕೇಂದ್ರಗಳಲ್ಲ, ಬದಲಾಗಿ ಸಾಮಾಜಿಕ ಪರಿವರ್ತನೆಗೆ ನೆಲೆಗಳಾಗಿವೆ. ಅಧ್ಯಾಪಕರ ಹುದ್ದೆಗಳಲ್ಲಿ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವುದು ಕೇವಲ ಕಾನೂನು ಬಾಧ್ಯತೆಯಲ್ಲ, ಬದಲಾಗಿ ಭಾರತದ ವೈವಿಧ್ಯಮಯ ಸಮಾಜವನ್ನು ಪ್ರತಿಬಿಂಬಿಸುವ ನೈತಿಕ ಅಗತ್ಯವಾಗಿರಬೇಕು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಬಹುಶಿಸ್ತೀಯ ಮತ್ತು ಒಳಗೊಳ್ಳುವ ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ತಮ್ಮ ನೇಮಕಾತಿ ಪದ್ಧತಿಗಳನ್ನು ಅಂಚಿನಲ್ಲಿರುವ ಸಾಮಾಜಿಕ ಸಮುದಾಯಗಳಿಂದ ಹೆಚ್ಚಿನ ಅಧ್ಯಾಪಕ ಸದಸ್ಯರನ್ನು ಖಚಿತಪಡಿಸಿಕೊಳ್ಳುವ ಗುರಿಗಳೊಂದಿಗೆ ಜೊತೆಗೂಡಿಸಬೇಕು. ಗಣನೀಯ ನೀತಿ ಸುಧಾರಣೆ, ಸಾಮಾಜಿಕ ನ್ಯಾಯದ ಕಡೆಗೆ ಹೆಚ್ಚಿನ ಸಾಂಸ್ಥಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಹೆಚ್ಚು ಸಮಗ್ರವಾಗಿಸಲು ಆಡಳಿತ ವರ್ಗದ ರಾಜಕೀಯ ದೃಷ್ಟಿಕೋನವನ್ನು ಸಂಯೋಜಿಸುವ ಸಂಘಟಿತ ಕ್ರಮ ಮಾತ್ರ, ಸಾಮಾಜಿಕ ನ್ಯಾಯದ ಆದೇಶ ಮತ್ತದರ ಕಡೆಗೆ ಶೈಕ್ಷಣಿಕ ಸಂಸ್ಥೆಗಳ ಪ್ರಸ್ತುತ ಹಿಂಜರಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಬಹುದು.
ಕೃಪೆ: thehindu