×
Ad

ಗೌತಮ್ ಅದಾನಿ ತಮ್ಮ ಪ್ರಮುಖ ಕಂಪೆನಿಯ ಹುದ್ದೆಯಿಂದ ಹಠಾತ್ತನೆ ಕೆಳಗಿಳಿದದ್ದು ಏಕೆ?

Update: 2025-08-08 12:49 IST

ಗೌತಮ್ ಅದಾನಿ ತಮ್ಮದೇ ಸಮೂಹದ ಅತಿದೊಡ್ಡ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ತೊರೆದಿದ್ದಾರೆ.

ಮುಂದ್ರಾ ಬಂದರಿನ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅದಾನಿ ಪೋರ್ಟ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಗೆ ಅವರು ರಾಜೀನಾಮೆ ನೀಡಿರುವುದು ಅಚ್ಚರಿಗೆ ಮತ್ತು ಹಲವು ಬಗೆಯ ಕುತೂಹಲಗಳಿಗೆ ಕಾರಣವಾಗಿದೆ.

ಹಾಗಾದರೆ, ಅದಾನಿ ತಮ್ಮ ನೆಚ್ಚಿನ ಕಂಪೆನಿಯ ಹುದ್ದೆಯನ್ನು ಏಕೆ ತೊರೆದರು? ಅಮೆರಿಕದಲ್ಲಿ ತನಿಖೆ ನಡೆಯುತ್ತಿರುವುದು ಇದಕ್ಕೆ ಕಾರಣವೆ?

ಮುಂದ್ರಾ ಬಂದರು ಮೂಲಕ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲಾಗಿದೆ ಎಂದೇನಾದರೂ ಅಮೆರಿಕ ತನಿಖೆ ನಡೆಸುತ್ತಿದೆಯೇ?

ಇದರ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು.

ಅಮೆರಿಕದಲ್ಲಿ ಅದಾನಿ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಪ್ರಧಾನಿ ಮೋದಿ ಟ್ರಂಪ್ ಅವರ ಬೆದರಿಕೆಗಳಿಗೆ ನೇರವಾಗಿ ಪ್ರತಿಕ್ರಿಯಿಸುತ್ತಿಲ್ಲ. ಮೋದಿ, ‘ಎಎ’ ಮತ್ತು ರಶ್ಯದ ತೈಲ ಒಪ್ಪಂದದ ನಡುವಿನ ಹಣಕಾಸಿನ ವಹಿವಾಟುಗಳು ಬಹಿರಂಗಗೊಳ್ಳುವ ಬೆದರಿಕೆ ಇರುವುದರಿಂದ ಮೋದಿಯವರ ಕೈಗಳನ್ನು ಕಟ್ಟಿಹಾಕಿದಂತಾಗಿದೆ ಎಂದು ರಾಹುಲ್ ಬರೆದಿದ್ದರು.

ಇಲ್ಲಿ ಎಎ ಅಂದರೆ ಅದಾನಿ, ಅಂಬಾನಿ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತೀಯರು ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ರಾಹುಲ್ ಹೇಳಿದ್ದರು. ರಾಹುಲ್ ಗಾಂಧಿಯವರ ಆರೋಪಗಳ ಬಗ್ಗೆಯೂ ಪ್ರಧಾನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅದಾನಿ ರಾಜೀನಾಮೆ ನೀಡಿದ್ದೇಕೆ ಎಂಬುದರ ಬಗ್ಗೆ ಅದಾನಿ ಗ್ರೂಪ್ ಗಲ್ಫ್ ನ್ಯೂಸ್‌ಗೆ ಪ್ರತಿಕ್ರಿಯೆ ಕೊಟ್ಟಿದೆ.

ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕಂಪೆನಿಗಳಲ್ಲಿ ಕಾರ್ಯನಿರ್ವಾಹಕ ಹುದ್ದೆ ಹೊಂದುವುದನ್ನು ನಿಷೇಧಿಸುವ ಕಂಪೆನಿ ಕಾಯ್ದೆ ನಿಯಮಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಿರುವುದಾಗಿ ಹೇಳಲಾಗುತ್ತಿದೆ.

ಅದಾನಿ ಪೋರ್ಟ್ಸ್ ಈಗಾಗಲೇ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನು ಹೊಂದಿತ್ತು. ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು ಮತ್ತು ಸಿಇಒ ಇದ್ದಾರೆ. ಅದಾನಿ ಈಗ ಆ ಕಂಪೆನಿಯ ನಾನ್ ಎಕ್ಸಿಕ್ಯೂಟಿವ್ ಅಧ್ಯಕ್ಷರಾಗಿ ಉಳಿಯುತ್ತಾರೆ. ಕಾರ್ಯತಂತ್ರದ ಮೇಲೆ ಗಮನ ಹರಿಸುವುದಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ಕಾರ್ಪೊರೇಟ್ ಉತ್ತರ. ಇದು, ಜಗದೀಪ್ ಧನ್ಕರ್ ರಾಜೀನಾಮೆ ನೀಡುವಾಗ ಆರೋಗ್ಯದ ಕಾರಣ ಕೊಟ್ಟ ರೀತಿಯಲ್ಲೇ ಇದೆ.

ಕಂಪೆನಿ ನಿಯಮವನ್ನು ಇದ್ದಕ್ಕಿದ್ದಂತೆ ಗಮನಿಸಲಾಯಿತೆ? ಈ ಮೊದಲೇ ಅದರ ಬಗ್ಗೆ ತಿಳಿದಿರಲಿಲ್ಲವೆ? ಅದಾನಿ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಗೆ ಯಾವಾಗಿನಿಂದ ಬಂದಿದ್ದಾರೆ? ಅವರು ಆ ಹುದ್ದೆಗೆ ಬಂದಾಗ, ಈ ನಿಯಮ ಇರಲಿಲ್ಲವೆ ಅಥವಾ ಅವರು ಈಗ ಅದನ್ನು ಗಮನಿಸಿದರೆ?

ಅದಾನಿ ಗ್ರೂಪ್ ಪ್ರಕಾರ, ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ (ಎಪಿಎಸ್‌ಇಝಡ್) ಅದರ ಅತ್ಯುತ್ತಮ ಕಂಪೆನಿಗಳಲ್ಲಿ ಒಂದು. ಈ ಕಂಪೆನಿಯ ವಹಿವಾಟು ಸುಮಾರು 3 ಲಕ್ಷ ಕೋಟಿ ರೂ. ಎಂದು ಹೇಳಲಾಗುತ್ತದೆ. ಈ ಕಂಪೆನಿ ಭಾರತದಲ್ಲಿ ಕೇರಳದಿಂದ ಪಶ್ಚಿಮ ಬಂಗಾಳದವರೆಗೆ 14 ಬಂದರುಗಳು ಮತ್ತು ಟರ್ಮಿನಲ್‌ಗಳನ್ನು ನಿರ್ವಹಿಸುತ್ತದೆ.

ಗೌತಮ್ ಅದಾನಿ ಯಾವುದೇ ನಿಯಮದಡಿಯಲ್ಲಿ ತಮ್ಮ ಸಮೂಹದ ಯಾವುದೇ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆ ತೊರೆಯುವುದಾದರೆ, ಅವರು ಇನ್ನಾವುದೇ ಕಂಪೆನಿಯ ಹುದ್ದೆ ತೊರೆಯಬಹುದಿತ್ತು. ಅವರು ತಮ್ಮ ಅತ್ಯುತ್ತಮ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನೇ ಏಕೆ ತೊರೆದರು? ಆ ಕಂಪೆನಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳಿಂದ ತಾವು ಬೇರೆಯಾಗಿರಲು ಅವರು ಏಕೆ ಬಯಸುತ್ತಾರೆ?

ಭಾರತದ ಕಂಪೆನಿ ಕಾಯ್ದೆ 2013ರ ಸೆಕ್ಷನ್ 203ರ ಪ್ರಕಾರ, ಒಂದು ಕಂಪೆನಿಯಲ್ಲಿ ಸಿಇಒ ಅಥವಾ ಎಂಡಿ ಅಥವಾ ನಿರ್ದೇಶಕ ಹುದ್ದೆ ಹೊಂದಿರುವ ವ್ಯಕ್ತಿ ಬೇರೆ ಯಾವುದೇ ಕಂಪೆನಿಯಲ್ಲಿ ಅದೇ ಹುದ್ದೆಯನ್ನು ಹೊಂದಲು ಸಾಧ್ಯವಿಲ್ಲ.

ಅವರು ಶತಕೋಟಿ ರೂಪಾಯಿ ಮೌಲ್ಯದ ಕಂಪೆನಿಯನ್ನು ನಡೆಸುತ್ತಿದ್ದರೆ, ಕಾರ್ಯನಿರ್ವಾಹಕ ಅಧ್ಯಕ್ಷರಾಗುವ ಮೊದಲು ಈ ನಿಯಮಗಳನ್ನು ತಿಳಿದಿರುತ್ತಿದ್ದರು.

ಕಂಪೆನಿ ಕಾಯ್ದೆ 2013ರ ಸೆಕ್ಷನ್ 203ರ ಬಗ್ಗೆ ಅವರಿಗೆ ತಿಳಿದಿಲ್ಲದಿದ್ದರೆ, ಕಂಪೆನಿಯ ಇತರ ಅಧಿಕಾರಿಗಳಿಗೆ ತಿಳಿದಿರುತ್ತದೆ. ಹಾಗಿರುವಾಗ, ಅಂಥ ತಪ್ಪು ಹೇಗೆ ಆಯಿತು?

ಅದಾನಿಗೆ ಭಾರತದಲ್ಲಿನ ಯಾವುದೇ ತನಿಖಾ ಸಂಸ್ಥೆಯಿಂದ ಯಾವುದೇ ಬೆದರಿಕೆ ಇರಲಾರದು. ಅದಕ್ಕಾಗಿಯೇ ಮಾಧ್ಯಮಗಳು ಇದರ ಕಾರಣಗಳಿಗಾಗಿ ಹೊರಗೆ ನೋಡುತ್ತಿವೆ.

ಮಾಧ್ಯಮಗಳಲ್ಲಿ ಎರಡು ರೀತಿಯ ಥಿಯರಿಗಳ ಬಗ್ಗೆ ಹೇಳಲಾಗುತ್ತಿವೆ.

ಜೂನ್ ತಿಂಗಳಲ್ಲಿ ‘ವಾಲ್‌ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮುಂದ್ರಾ ಬಂದರಿನ ಮೂಲಕ ಇರಾನ್‌ನಿಂದ ಪೆಟ್ರೋಲಿಯಂ ಆಮದು ಮಾಡಿಕೊಳ್ಳಲಾಗಿದೆಯೇ ಎಂದು ಅಮೆರಿಕ ತನಿಖೆ ನಡೆಸುತ್ತಿದೆ. ಅಮೆರಿಕ ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.

ಈ ಸುದ್ದಿ ಪ್ರಕಟವಾದಾಗ, ಅದಾನಿ ಗ್ರೂಪ್ ಅದನ್ನು ನಿರಾಕರಿಸಿತು. ಅಂಥ ಯಾವುದೇ ತನಿಖೆಯ ಬಗ್ಗೆ ತಿಳಿದಿಲ್ಲ ಎಂದು ಅದು ಹೇಳಿದೆ.

ತನಿಖೆಯ ಕಾರಣದಿಂದಾಗಿ ಗೌತಮ್ ಅದಾನಿಯನ್ನು ನಿಷೇಧಿಸಿದರೆ ಕಂಪೆನಿಗೆ ಕಷ್ಟವಾಗುತ್ತದೆ. ಅದಕ್ಕಾಗಿಯೇ ಅವರು ಈ ಹುದ್ದೆಯನ್ನು ತೊರೆದರು ಎನ್ನಲಾಗುತ್ತಿದೆ.

ಜುಲೈ 31ರಂದು ಇರಾನ್‌ನಿಂದ ಇಂಧನ ಆಮದು ಮಾಡಿಕೊಂಡಿದ್ದಕ್ಕಾಗಿ ಅಮೆರಿಕ ಆರು ಭಾರತೀಯ ಕಂಪೆನಿಗಳ ಮೇಲೆ ನಿರ್ಬಂಧ ವಿಧಿಸಿತು. ಆ ಆರು ಕಂಪೆನಿಗಳಲ್ಲಿ ಅದಾನಿ ಗ್ರೂಪ್‌ನ ಯಾವುದೇ ಕಂಪೆನಿ ಇರಲಿಲ್ಲ. ಆದರೆ ಮುಂದ್ರಾ ಬಂದರಿನ ಯಾವುದೇ ಪಾತ್ರವಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ‘ಗಲ್ಫ್ ನ್ಯೂಸ್’ ಬರೆದಿದೆ.

ಲಂಚ ಪ್ರಕರಣದಲ್ಲಿ ಯುಎಸ್‌ನಲ್ಲಿ ನಡೆಯುತ್ತಿರುವ ತನಿಖೆಯಿಂದಾಗಿ ಸಾಲ ಪಡೆಯುವಲ್ಲಿ ಸಮಸ್ಯೆಗಳಿರಬಹುದು ಎಂಬ ಮತ್ತೊಂದು ಥಿಯರಿಯೂ ಇದೆ. ಈ ಕಾರಣಕ್ಕಾಗಿ, ಅವರು ತಮ್ಮದೇ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ಬಿಡಬೇಕಾಗಿ ಬಂದಿರಬಹುದು.

ಅದಾನಿ ಕಂಪೆನಿಗಳು ಮುಂದ್ರಾ ಬಂದರಿನ ಮೂಲಕ ಇರಾನ್‌ನ ಎಲ್‌ಪಿಜಿಯನ್ನು ಆಮದು ಮಾಡಿಕೊಂಡಿವೆಯೇ ಎಂದು ಅಮೆರಿಕ ತನಿಖೆ ನಡೆಸುತ್ತಿದೆ ಎಂಬುದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಅವರ ವಾದ.

ಇದು ಅಂತರ್‌ರಾಷ್ಟ್ರೀಯ ನಿರ್ಬಂಧಗಳನ್ನು ಉಲ್ಲಂಘಿಸುತ್ತದೆ.

ಹಿಂಡನ್‌ಬರ್ಗ್ ರಿಸರ್ಚ್ ಸಂಗ್ರಹಿಸಿದ 250 ಮಿಲಿಯನ್ ಡಾಲರ್‌ಗಳ ಲಂಚ ಮತ್ತು ವಂಚನೆಯ ಆರೋಪಗಳನ್ನು ಈಗ ಅಮೆರಿಕ ತನಿಖೆ ಮಾಡುತ್ತಿದೆ.

ಅದಾನಿ ಗ್ರೂಪ್ ಅಮೆರಿಕದ ಹೂಡಿಕೆದಾರರ ಹಣ ಪಡೆಯಲು ದಾರಿ ತಪ್ಪಿಸಿದೆ ಮತ್ತು ಶತಕೋಟಿ ಡಾಲರ್ ಮೌಲ್ಯದ ಇಂಧನ ಒಪ್ಪಂದಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದೆ ಎಂದು ಆರೋಪಿಸಲಾಗಿದೆ. ಲಂಚ ಪ್ರಕರಣದಲ್ಲಿ ಗೌತಮ್ ಅದಾನಿಯನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ ಎಂಬುದು ನಿಜ. ಅಲ್ಲಿಯೂ ಒಂದು ಪ್ರಕರಣ ನಡೆಯುತ್ತಿದೆ ಎಂದು ಸುಪ್ರಿಯಾ ಅವರು ಹೇಳಿದ್ದಾರೆ. ಟ್ರಂಪ್ ತಮ್ಮ ಬೆದರಿಕೆಯ ಹೇಳಿಕೆಯಲ್ಲಿ, ರಶ್ಯದಿಂದ ತೈಲ ಖರೀದಿಸಿ ಲಾಭ ಗಳಿಸಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ.

ಆದರೆ ಟ್ರಂಪ್ ಯಾವುದೇ ಕಂಪೆನಿಯ ಹೆಸರನ್ನು ಹೇಳಿಲ್ಲ.

ರಶ್ಯ ಮತ್ತು ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಮುಂದ್ರಾ ಬಂದರನ್ನು ಬಳಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಅಂದಹಾಗೆ, ಅದಾನಿ ಮತ್ತು ಅಂಬಾನಿ ಗ್ರೂಪ್ ಬಗ್ಗೆ ಕೆಲ ಇತರ ಸುದ್ದಿಗಳನ್ನು ಮೊದಲೇ ಪ್ರಕಟಿಸಲಾಗಿದೆ. ಅವು ರಶ್ಯ ಮತ್ತು ಇರಾನ್‌ನಿಂದ ತೈಲ ಆಮದಿಗೆ ಸಂಬಂಧಿಸಿವೆ.

ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧ ಫೆಬ್ರವರಿ 2022ರಿಂದ ನಡೆಯುತ್ತಿದೆ. ಅದು ಪ್ರಾರಂಭವಾದ 3 ತಿಂಗಳ ನಂತರದ ವರದಿಗಳಲ್ಲಿ, ಮುಕೇಶ್ ಅಂಬಾನಿ ಅವರ ಸಂಸ್ಕರಣಾಗಾರ ಯುದ್ಧದಿಂದ ಕೋಟಿಗಟ್ಟಲೆ ರೂ. ಗಳಿಸಿದೆ ಎಂದು ಬರೆಯಲಾಗಿದೆ.

ರಶ್ಯದ ಯುದ್ಧದಿಂದಾಗಿ ರಿಲಯನ್ಸ್ ಅನೇಕ ಲಾಭದಾಯಕ ಅವಕಾಶಗಳನ್ನು ಪಡೆಯುತ್ತಿದೆ ಎಂದು ವರದಿಯಲ್ಲಿ ಬರೆಯಲಾಗಿದೆ.

ಕಂಪೆನಿ ತನ್ನ ಅತಿದೊಡ್ಡ ಸಂಸ್ಕರಣಾಗಾರದಲ್ಲಿ ಡೀಸೆಲ್ ಮತ್ತು ನಾಫ್ತಾ ಉತ್ಪಾದನೆಯನ್ನು ಹೆಚ್ಚಿಸಿದೆ. ಏಕೆಂದರೆ ಅವುಗಳ ಬೆಲೆಗಳು ತೀವ್ರವಾಗಿ ಹೆಚ್ಚಿವೆ.

ರಶ್ಯದ ಮೇಲೆ ವಿಧಿಸಲಾದ ನಿರ್ಬಂಧಗಳಿಂದಾಗಿ, ಅಲ್ಲಿಂದ ಬರುವ ಕಚ್ಚಾ ತೈಲ ಅಗ್ಗವಾಯಿತು ಮತ್ತು ಅದರಿಂದ ಬರುವ ಕೆಲ ಉತ್ಪನ್ನಗಳ ಮೇಲಿನ ಲಾಭ 3 ವರ್ಷಗಳಲ್ಲಿ ಗರಿಷ್ಠವಾಗಿದೆ ಎಂದು ಸಹ ಬರೆಯಲಾಗಿದೆ.

ಜುಲೈ 2022ರಲ್ಲಿ ಮೋದಿ ಸರಕಾರ ಇಂಧನ ಕಂಪೆನಿಗಳ ಹೆಚ್ಚುವರಿ ಲಾಭದ ಮೇಲೆ ಅನಿರೀಕ್ಷಿತ ತೆರಿಗೆ ವಿಧಿಸಿತು.

ಇದು ರಿಲಯನ್ಸ್‌ನ ಮೇಲೂ ಪರಿಣಾಮ ಬೀರಿತು.

ಈ ತೆರಿಗೆಯನ್ನು 30 ತಿಂಗಳ ನಂತರ ಡಿಸೆಂಬರ್ 2024 ರಲ್ಲಿ ಹಿಂದೆಗೆದುಕೊಳ್ಳಲಾಯಿತು.

ಈಗ, ಯುರೋಪ್‌ನ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಂಡ್ ಕ್ಲೀನ್ ಏರ್ ಆಕ್ಷನ್ ವರದಿ ಉಲ್ಲೇಖಿಸಿ, ದಿ ಹಿಂದೂ ಪತ್ರಿಕೆ ಒಂದು ವರದಿ ಪ್ರಕಟಿಸಿದೆ. ಅದರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ರಿಲಯನ್ಸ್ ಕಂಪೆನಿ ಅಮೆರಿಕಕ್ಕೆ ರಶ್ಯದ ತೈಲ ಮಾರಾಟ ಮಾಡುವ ಮೂಲಕ 6,850 ಕೋಟಿ ರೂ ಲಾಭ ಗಳಿಸಿದೆ.

ಜನವರಿ 2024ರಿಂದ ಜನವರಿ 2025ರ ಅವಧಿಯಲ್ಲಿ, ಭಾರತ ಮತ್ತು ತುರ್ಕಿಯದ ಆರು ಸಂಸ್ಕರಣಾಗಾರಗಳಿಂದ 2.8 ಬಿಲಿಯನ್ ಯುರೋಗಳಷ್ಟು ಮೌಲ್ಯದ ತೈಲವನ್ನು ಅಮೆರಿಕ ಆಮದು ಮಾಡಿಕೊಂಡಿದೆ. ಇದರಲ್ಲಿ ರಶ್ಯದ ತೈಲದ ಮೌಲ್ಯ ಸುಮಾರು 1.3 ಬಿಲಿಯನ್ ಯುರೋಗಳಷ್ಟಿತ್ತು.

ಅಗ್ಗದ ತೈಲವನ್ನು ರಶ್ಯದಿಂದ ಆಮದು ಮಾಡಿಕೊಂಡಿರುವುದರಿಂದ ಭಾರತೀಯ ಜನಸಾಮಾನ್ಯರಿಗೆ ಲಾಭ ಸಿಗಲಿಲ್ಲ.

ಈಗ, ನಿಜವಾಗಿಯೂ ಅಮೆರಿಕದ ಕಾರಣದಿಂದಾಗಿ ಗೌತಮ್ ಅದಾನಿ ತಮ್ಮ ಅತಿದೊಡ್ಡ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ತೊರೆದಿದ್ದಾರೆಯೇ?

ಭಾರತದ ಬಂದರುಗಳಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಲ್ಲಿ ಅದಾನಿ ಗ್ರೂಪ್‌ನ ಈ ಕಂಪೆನಿ ಶೇ. 28 ಪಾಲನ್ನು ಹೊಂದಿದೆ.

ಅಲ್ಲದೆ, ಈ ಸಮಯವೂ ಬಹಳ ಮುಖ್ಯವಾಗಿದೆ.

ಅದೇ ಮುಂದ್ರಾ ಬಂದರಿನಿಂದ 6,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಕೊಕೇನ್ ಅಮಲು ಪದಾರ್ಥ ಪತ್ತೆಯಾಗಿದ್ದಾಗ, ಗೌತಮ್ ಅದಾನಿ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲಿಲ್ಲ. ಹೀಗಿರುವಾಗ, ಈಗಿನ ಬೆಳವಣಿಗೆ ನಿಗೂಢವಾಗಿರುವಾಗಲೇ, ಯಾವುದೋ ಒಂದರ ಬಗೆಗಿನ ಸೂಚನೆಯೂ ಆಗಿದೆ ಎಂಬ ಅನುಮಾನ ನಿಜವಾಗಿಯೂ ಬೆಳೆಯುವಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಜಿತ್ ಕೆ.ಸಿ.

contributor

Similar News