×
Ad

ಬಿಹಾರ, ತೆಲಂಗಾಣ ಮತ್ತು ರಾಷ್ಟ್ರಮಟ್ಟದಲ್ಲಿನ ಸಮೀಕ್ಷೆಯನ್ನು ಬಹಿರಂಗವಾಗಿ ಬೆಂಬಲಿಸುವ ಬಿಜೆಪಿ ಕರ್ನಾಟಕದಲ್ಲಿ ಏಕೆ ವಿರೋಧಿಸುತ್ತಿದೆ?

Update: 2025-10-01 12:21 IST

ಈ ವಿರೋಧ ಖಂಡಿತವಾಗಿಯೂ ರಚನಾತ್ಮಕವಾದುದಲ್ಲ. ಇದು ದತ್ತಾಂಶ ಆಧಾರಿತ ಆಡಳಿತದ ಕಲ್ಪನೆಗೆ ಮತ್ತು ರಾಜ್ಯ ಸರಕಾರ ತನ್ನ ಜನಸಂಖ್ಯೆಯನ್ನು ಅರ್ಥಮಾಡಿಕೊಳ್ಳುವ ಮೂಲಭೂತ ಕರ್ತವ್ಯದ ತತ್ವಕ್ಕೆ ನೇರ ಸವಾಲಾಗಿದೆ.

ಇದು ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದ ವರ್ಗಗಳು ಹಿಂದುಳಿದಿರಬೇಕು, ಮಹಿಳೆಯರು ಅವಕಾಶಗಳಿಂದ ವಂಚಿತರಾಗಿರಬೇಕು ಮತ್ತು ಜಾತಿಗಳು, ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎಂದೇ ಬಯಸುವ ಮನಸ್ಥಿತಿಯಲ್ಲವೇ?

ಭಾರತದ ಪ್ರಜಾಪ್ರಭುತ್ವದಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಮಾನ ಅಭಿವೃದ್ಧಿ ಆಧಾರಸ್ತಂಭದಂತೆ ಇವೆ.ಅದನ್ನು ಸಾಧಿಸುವ ದಾರಿಯೆಂದರೆ, ಜನಸಂಖ್ಯೆಯ ಸಂಕೀರ್ಣ ಸಾಮಾಜಿಕ-ಆರ್ಥಿಕ ಸ್ವರೂಪವನ್ನು, ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು. ಸಮಗ್ರ ಸಮೀಕ್ಷೆಗಳ ಮೂಲಕ ಇದನ್ನು ಮಾಡಲಾಗುತ್ತದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆ ನಿಟ್ಟಿನ ಒಂದು ಮಹತ್ವಪೂರ್ಣ ಪ್ರಯತ್ನವಾಗಿದೆ. ಹಾಗಿದ್ದೂ, ಈ ಸಮೀಕ್ಷೆಯನ್ನು ರಾಜ್ಯ ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ.

ಇದೊಂದು ಅಪಾಯಕಾರಿ ನಿಲುವಾಗಿದೆ.

ಈ ವಿರೋಧ ರಾಜಕೀಯ ಭಿನ್ನಾಭಿಪ್ರಾಯ ಮಾತ್ರವಾಗಿರದೆ, ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವಿಕೆಯ ಬಗೆಗಿನ ನಿಜವಾದ ಪ್ರಯತ್ನಗಳನ್ನು ದುರ್ಬಲಗೊಳಿಸುವ ತಂತ್ರದಂತೆ ಕಾಣುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘‘ಈ ಸಮೀಕ್ಷೆ ಯಾರಿಗೂ ವಿರುದ್ಧವಲ್ಲ, ಅದು ಎಲ್ಲರಿಗಾಗಿ ಇದೆ’’ ಎಂದು ಹೇಳಿದ್ದಾರೆ. ಎಲ್ಲರಿಗೂ ಸಮಾನ ಪಾಲು ಮತ್ತು ಅವಕಾಶಗಳನ್ನು ನೀಡುವ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳುವ ಅವರ ದೃಷ್ಟಿಕೋನ ಸ್ಪಷ್ಟವಾಗಿದೆ.

ಮುಂದುವರಿದ ಜಾತಿಗಳಲ್ಲಿ ಬಡವರು ಮತ್ತು ವಂಚಿತರು ಸೇರಿದಂತೆ ಅದರ ಎಲ್ಲಾ ವಿಭಾಗಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸುವ ಸದುದ್ದೇಶವೂ ಅಲ್ಲಿ ಕಾಣಿಸುತ್ತದೆ.

ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಬಿಡಿಸಿಡುವ ಉದ್ದೇಶ ಈ ಸಮೀಕ್ಷೆಯದ್ದಾಗಿದೆ.

ಯಾವುದೇ ಸಮುದಾಯ ಹಿಂದುಳಿಯದಂತೆ ನೋಡಿಕೊಳ್ಳುವ ಗುರಿಯನ್ನು ಈ ಸಮೀಕ್ಷೆ ಮೂಲಕ ಸಾಧಿಸಬೇಕೆಂಬುದು ಸರಕಾರದ ನಿಲುವು.

ಪುರಾವೆ ಆಧಾರಿತ ನೀತಿ ನಿರೂಪಣೆಗೆ ಸರಕಾರ ಬದ್ಧವಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಆದರೆ ಇದನ್ನು ಬಿಜೆಪಿ ವಿರೋಧಿಸುತ್ತಿರುವುದು, ಅದು ಹೇಳಿಕೊಳ್ಳುವುದೇ ಒಂದು ಮಾಡುವುದೇ ಇನ್ನೊಂದು ಎಂಬಂತೆ ಕಾಣುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವಂತೆ, ಬಿಜೆಪಿಯ ಈ ವಿರೋಧ ರಾಜಕೀಯ ಪ್ರೇರಿತವಾಗಿದೆಯೇ? ಇತರ ರಾಜ್ಯಗಳಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಇದೇ ರೀತಿಯ ಸಮೀಕ್ಷೆಗಳ ವಿಷಯವಾಗಿ ಬಿಜೆಪಿ ತೋರಿಸಿರುವ ನಿಲುವನ್ನು ಗಮನಿಸಿದರೆ, ಅವರ ಈ ಆರೋಪ ಮಹತ್ವ ಪಡೆಯುತ್ತದೆ.

ಬಿಹಾರ ಮತ್ತು ತೆಲಂಗಾಣದಲ್ಲಿ ಈಗಾಗಲೇ ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಅವನ್ನು ಬಿಜೆಪಿ ವಿರೋಧಿಸಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಮೋದಿ ಸರಕಾರ ಸ್ವತಃ ಜಾತಿ ಜನಗಣತಿಯನ್ನು ನಡೆಸಲು ತಯಾರಿ ನಡೆಸುತ್ತಿರುವುದರ ಬಗ್ಗೆಯೂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿರುವಾಗ ಕರ್ನಾಟಕದಲ್ಲಿನ ಸಮೀಕ್ಷೆಯನ್ನು ಬಿಜೆಪಿ ವಿರೋಧಿಸುತ್ತಿರುವುದೇಕೆ?

ಅದರ ಈ ಸ್ಪಷ್ಟ ವಿರೋಧಾಭಾಸದ ನಡೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಬಿಜೆಪಿ ಸರಕಾರವಿರುವ ಆಡಳಿತ ಅಥವಾ ಅದರ ಪ್ರಭಾವವಿರುವ ರಾಜ್ಯಗಳಲ್ಲಿ ಇಂಥ ಸಮೀಕ್ಷೆಗಳು ನಡೆದರೆ ಅದನ್ನು ಬಿಜೆಪಿ ಒಪ್ಪುತ್ತದೆ. ಮೋದಿ ಸರಕಾರ ನಡೆಸಲು ಮುಂದಾಗಿರುವುದು ಕೂಡ ಅದನ್ನು ಬಿಜೆಪಿ ಒಪ್ಪಿಕೊಂಡಿದೆ ಎಂಬುದರ ಸೂಚನೆಯಾಗಿದೆ. ಹಾಗಿರುವಾಗ, ಕರ್ನಾಟಕದಲ್ಲಿ ಅದೇ ಜಾತಿ ಗಣತಿಗೆ ತೀವ್ರ ಪ್ರತಿರೋಧ ಏಕೆ?

ರಾಜಕೀಯ ಪಕ್ಷವೊಂದು ಯಾರು ಈ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ ಎಂಬ ಆಧಾರದ ಮೇಲೆ ವಿರೋಧಿಸಲು ನಿಂತಾಗ, ಅದು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿನ ಜನರ ನಂಬಿಕೆಯನ್ನು ಹಾಳು ಮಾಡುತ್ತದೆ. ಹೀಗಾದಾಗ, ಸರಕಾರದ ನೀತಿಗಳ ನ್ಯಾಯಯುತ ಮೌಲ್ಯಮಾಪನಕ್ಕೆ ಅಡಚಣೆಯಾಗುತ್ತದೆ. ಪರಿಣಾಮವಾಗಿ, ನಿರ್ಣಾಯಕ ಪ್ರಗತಿಯನ್ನು ಅದು ತಡೆಯುತ್ತದೆ.

ಬಿಜೆಪಿ ನಾಯಕರ ನಿರ್ದಿಷ್ಟ ಆರೋಪಗಳು ಅವರ ನಿಲುವಿನಲ್ಲಿರುವ ಸಮಸ್ಯೆಗಳನ್ನೇ ಎತ್ತಿ ತೋರಿಸುತ್ತವೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದಕ್ಕೆ ಅಸಹಕಾರ ತೋರಿಸುವುದಾಗಿ ಹೇಳಿದ್ದಾರೆ. ಸಮೀಕ್ಷೆ ಮಾಡಲು ತಮ್ಮ ಮನೆಗೆ ಬಂದರೆ ಮಾಹಿತಿ ಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆದಾಯ ಮತ್ತು ಜಾತಿ ತಾರತಮ್ಯದ ಅನುಭವಗಳ ಕುರಿತಾದ ಪ್ರಶ್ನೆಗಳು ಅನಗತ್ಯ ಎಂಬ ಅವರ ತರ್ಕವೇ ಕಳವಳಕಾರಿಯಾಗಿದೆ.

ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ಸಮಾನತೆಗಾಗಿ ಶ್ರಮಿಸುತ್ತಿರುವಲ್ಲಿ ಜನರ ಆದಾಯದ ಮಟ್ಟವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಅದು ಪ್ರಗತಿಪರ ತೆರಿಗೆ ನೀತಿಗಳು, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಲು ಅತ್ಯವಶ್ಯ. ಅಂತಹ ವಿವರ ಪಡೆಯುವುದನ್ನೇ ಅನಗತ್ಯ ಎಂದು ತಳ್ಳಿಹಾಕುವುದು ಎಷ್ಟು ಸರಿ?

ಅದು, ಆರ್ಥಿಕ ವಾಸ್ತವ ಮತ್ತು ಸಾಮಾಜಿಕ ಅಸಮಾನತೆಯ ಸಂಭಾವ್ಯತೆಯನ್ನು ಗೊತ್ತಿದ್ದೂ ನೋಡದಿರುವಂತೆ ಮಾಡುತ್ತದೆ.

ಅದೇ ರೀತಿ, ಜಾತಿ ತಾರತಮ್ಯದ ಬಗೆಗಿನ ಪ್ರಶ್ನೆಗಳನ್ನು ಅನಗತ್ಯ ಎಂದು ಹೇಳುವುದು ಲಕ್ಷಾಂತರ ಜನರ ಜೀವಂತ ಅನುಭವಗಳನ್ನು ನಿರಾಕರಿಸಿದಂತಾಗುತ್ತದೆ. ಅವರಿಗಾದ ಶತಮಾನಗಳ ವ್ಯವಸ್ಥಿತ ಅನ್ಯಾಯ ಇನ್ನು ಮುಂದೆಯೂ ಹಾಗೇ ಇರುವುದಕ್ಕೆ ಈ ನಿಲುವು ಅವಕಾಶ ಮಾಡಿಕೊಡುತ್ತದೆ.

ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಹೋರಾಟಗಳು ದಾಖಲೀಕರಣಕ್ಕೆ ಯೋಗ್ಯವಾಗಿಲ್ಲ ಎಂಬ ಭಯಾನಕ ಸಂದೇಶವನ್ನು ಇದು ನೀಡುತ್ತದೆ.

ಜಾತಿ ಸಮೀಕ್ಷೆಯ ಡೇಟಾವನ್ನು ಮಾರಾಟ ಮಾಡಬಹುದೆಂಬ ಜೋಶಿ ಅವರ ಆತಂಕ ಕೂಡ ಅನುಮಾನ ಮತ್ತು ಅಪನಂಬಿಕೆಯ ವಾತಾವರಣ ಉಂಟಾಗಲು ಕಾರಣವಾಗುತ್ತದೆ. ಇದು ಕಾನೂನುಬದ್ಧ ಸರಕಾರಿ ಪ್ರಕ್ರಿಯೆಯ ಬಗ್ಗೆಯೇ ಜನರಲ್ಲಿ ನಂಬಿಕೆ ಇಲ್ಲವಾಗುವಂತೆ ಮಾಡುತ್ತದೆ. ಅವರ ಇಂಥ ಹೇಳಿಕೆಗಳು, ನಾಗರಿಕರು ಈ ಸಮೀಕ್ಷೆಯಲ್ಲಿ ಭಾಗವಹಿಸುವುದನ್ನೇ ತಡೆಯಬಹುದು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಇದೇ ರೀತಿಯಲ್ಲಿ ಮಾತಾಡಿದ್ದಾರೆ.

ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿ ಒದಗಿಸಬೇಕೆಂದು ಯಾವುದೇ ಬಲವಂತವಿಲ್ಲ ಎಂದು ಅವರು ಹೇಳಿದ್ದಾರೆ.

ಸಮೀಕ್ಷೆಗಳಲ್ಲಿ ಭಾಗವಹಿಸುವುದು ಅವರಿಗೆ ಬಿಟ್ಟದ್ದು ಎಂಬುದು ತಾಂತ್ರಿಕವಾಗಿ ನಿಜವಾಗಿದ್ದರೂ, ಬಿಜೆಪಿಯವರು ಹೀಗೆಲ್ಲ ಮಾತಾಡತೊಡಗಿದಾಗ, ಅಂಥ ಹೇಳಿಕೆಗಳು ದಾರಿತಪ್ಪಿಸುವ ಹೇಳಿಕೆಗಳಾಗುತ್ತವೆ. ಮತ್ತವು ಎಲ್ಲಿ ಸಮೀಕ್ಷೆ ನಿಜವಾಗಿಯೂ ಅಗತ್ಯವಿತ್ತೋ ಅಲ್ಲಿ ಆಗದೇ ಹೋಗಬಹುದಾದ ಸಾಧ್ಯತೆಗೂ ಎಡೆ ಮಾಡಿಕೊಡುತ್ತದೆ.

ಈ ಸಮೀಕ್ಷೆಯನ್ನು ರೇಶನ್ ಕಾರ್ಡ್‌ಗಳ ರದ್ದತಿ ಸೇರಿದಂತೆ ರಾಜಕೀಯ ಉದ್ದೇಶಗಳಿಗಾಗಿ ನಡೆಸಲಾಗುತ್ತಿದೆ ಎಂದು ಕೂಡ ಅಶೋಕ್ ಹೇಳಿರುವುದು ಆಘಾತಕಾರಿ.

ಇವು ಸರಕಾರದ ಬೆಂಬಲವನ್ನೇ ನೆಚ್ಚಿರುವ ದುರ್ಬಲರಲ್ಲಿ ಆತಂಕ ಮೂಡಿಸುವ ಹೇಳಿಕೆಗಳಾಗಿವೆ. ಅಗತ್ಯ ಪ್ರಯೋಜನಗಳ ರದ್ದತಿಯ ಬಗ್ಗೆ ತಪ್ಪು ಮಾಹಿತಿ ಹರಡುವುದು ಈ ಸಮೀಕ್ಷೆಯಲ್ಲಿ ಜನರ ಭಾಗವಹಿಸುವಿಕೆಯ ಮೇಲೆಯೇ ನೇರ ಪರಿಣಾಮ ಬೀರಬಹುದು. ಅದು ನಿಖರವಾದ ಡೇಟಾದಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾದವರು ಅಂಥ ಅವಕಾಶ ತಪ್ಪಿಸಿಕೊಳ್ಳಲು ಕಾರಣವಾಗಬಹುದು.

ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸುವ ಈ ಸಮೀಕ್ಷೆಯನ್ನು, ರೇಶನ್ ಕಾರ್ಡ್ ಗಳ ರದ್ದತಿಗೆ ಕಾರಣವಾಗುತ್ತದೆ ಎಂದು ಬಿಂಬಿಸುವುದು ಆಧಾರರಹಿತ ಮಾತ್ರವಲ್ಲದೆ ನಾಗರಿಕರ ಕಲ್ಯಾಣದ ಮೇಲೆಯೂ ಪರಿಣಾಮ ಬೀರಬಹುದು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಲಿಂಗಾಯತರು ಎಂದು ಗುರುತಿಸಿಕೊಳ್ಳುವ ಜನರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಉಲ್ಲೇಖಿಸುವಂತೆ ಸಲಹೆ ನೀಡಿದ್ದಾರೆ.

ವ್ಯಕ್ತಿಗಳು ತಾವು ಆಯ್ಕೆ ಮಾಡುವ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳುವ ಹಕ್ಕನ್ನು ಖಂಡಿತವಾಗಿಯೂ ಹೊಂದಿದ್ದಾರೆ. ಆದರೆ ಈ ಸಮೀಕ್ಷೆಯ ಸಮಯದಲ್ಲಿ ನಿರ್ದಿಷ್ಟ ಗುರುತಿನ ಬಗ್ಗೆ ಸಲಹೆ ನೀಡುವುದು, ಜನಸಂಖ್ಯಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಮತ್ತು ರಾಜಕೀಯ ಬಲವರ್ಧನೆಗಾಗಿ ವಿಭಿನ್ನ ಸಮುದಾಯದ ಗುರುತುಗಳನ್ನು ನಿಗ್ರಹಿಸುವ ಪ್ರಯತ್ನದಂತೆ ಕಾಣುತ್ತದೆ.

ಹೀಗೆ ಸೂಚಿಸಿದಾಗ, ಲಿಂಗಾಯತರು ಮತ್ತು ವೀರಶೈವರಂತಹ ಸಮುದಾಯಗಳಲ್ಲಿ ಅವರ ಧಾರ್ಮಿಕ ಗುರುತಿನ ಬಗ್ಗೆ ಈಗಾಗಲೇ ಇರುವ ಆಂತರಿಕ ಚರ್ಚೆಗಳು ತೀವ್ರಗೊಳ್ಳುವ ಅಪಾಯ ಇದೆ. ಆ ಸಮುದಾಯಗಳನ್ನು ಚುನಾವಣಾ ಲಾಭಕ್ಕಾಗಿ ಅಸ್ತ್ರವಾಗಿ ಬಳಸಿಕೊಳ್ಳುವ ಅಪಾಯವೂ ಕಾಣುತ್ತದೆ. ಇದು ವೈವಿಧ್ಯಮಯ ಸಾಮಾಜಿಕ ಗುಂಪುಗಳ ನಿಜವಾದ ಮಾಹಿತಿ ಮತ್ತು ಗುರುತಿಸುವಿಕೆಯನ್ನು ತಡೆಯುತ್ತದೆ.

ಈ ರೀತಿಯ ಗುರುತಿನ ರಾಜಕೀಯ ಆ ಸಮುದಾಯದವರನ್ನು ಒಂದೇ ಗುರುತಿನ ಅಡಿಯಲ್ಲಿ ಏಕರೂಪಗೊಳಿಸಲು ಪ್ರಯತ್ನಿಸುತ್ತದೆ. ವಿಭಿನ್ನ ಸಮುದಾಯಗಳ ನಿರ್ದಿಷ್ಟ ಅಗತ್ಯಗಳು ಮತ್ತು ಸವಾಲುಗಳನ್ನು ಕಡೆಗಣಿಸಿಬಿಡುತ್ತದೆ.

ಬಿಜೆಪಿ ನಾಯಕರ ಇಂಥ ಹೇಳಿಕೆಗಳು ಮತ್ತು ನಡವಳಿಕೆಯ ಪರಿಣಾಮವೆಂದರೆ, ಜನರಿಗೆ ಯಾವ ಸಮೀಕ್ಷೆಯಿಂದ ಪ್ರಯೋಜನವಾಗಬೇಕಿತ್ತೋ ಅಂಥ ಮಹತ್ವದ ಸಮೀಕ್ಷೆಯಲ್ಲಿ ಜನರು ಪಾಲ್ಗೊಳ್ಳದೆ ಹೋಗಬಹುದಾದ ಸಾಧ್ಯತೆ ಇದೆ.

ಸಮೀಕ್ಷೆಯ ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಹರಡುವ ಮೂಲಕ, ಅದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವ ಮೂಲಕ ಮತ್ತು ಅದರ ಪರಿಣಾಮಗಳ ಬಗ್ಗೆ ತಪ್ಪು ಮಾಹಿತಿ ಹರಡುವ ಮೂಲಕ, ಇಡೀ ಸಮೀಕ್ಷೆಯ ಉದ್ದೇಶವನ್ನೇ ಬದಿಗೆ ಸರಿಸಿದಂತಲ್ಲವೇ?

ಹೆಚ್ಚಿನ ಸಮಾನತೆಯನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಪ್ರಜಾಸತ್ತಾತ್ಮಕ ಪ್ರಕ್ರಿಯೆ ದುರ್ಬಲಗೊಳ್ಳಲು ಬಿಜೆಪಿ ಕಾರಣವಾಗುತ್ತಿದೆ.

ಅದರ ಈ ವಿರೋಧ ಖಂಡಿತವಾಗಿಯೂ ರಚನಾತ್ಮಕವಾದುದಲ್ಲ. ಅದು ದತ್ತಾಂಶ ಆಧಾರಿತ ಆಡಳಿತದ ಕಲ್ಪನೆಗೆ ಮತ್ತು ರಾಜ್ಯ ಸರಕಾರ ತನ್ನ ಜನಸಂಖ್ಯೆಯನ್ನು ಅರ್ಥಮಾಡಿಕೊಳ್ಳುವ ಮೂಲಭೂತ ಕರ್ತವ್ಯದ ತತ್ವಕ್ಕೆ ನೇರ ಸವಾಲಾಗಿದೆ.

ಇದು ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದ ವರ್ಗಗಳು ಹಿಂದುಳಿದಿರಬೇಕು, ಮಹಿಳೆಯರು ಅವಕಾಶಗಳಿಂದ ವಂಚಿತರಾಗಿರಬೇಕು ಮತ್ತು ಜಾತಿಗಳು, ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎಂದೇ ಬಯಸುವ ಮನಸ್ಥಿತಿಯಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಸ್. ಸುದರ್ಶನ್

contributor

Similar News