‘ಗ್ಯಾರಂಟಿ’ಯ ಬಲ ಕಾಂಗ್ರೆಸ್‌ಗೆ ಜಯ ದೊರಕಿಸೀತೇ?

ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವೂ ಒಂದು. ಈ ಬಾರಿ ಕಾಂಗ್ರೆಸ್ ಪಕ್ಷ ಸರಕಾರದ ಪ್ರಭಾವಿ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿಯನ್ನು ಕಣಕ್ಕಿಳಿಸಿದರೆ, ಎರಡನೇ ಬಾರಿ ಅಗ್ನಿ ಪರೀಕ್ಷೆಗೆ ಬಿಜೆಪಿ ಕಡೆಯಿಂದ ಹಾಲಿ ಸಂಸದ ತೇಜಸ್ವಿ ಸೂರ್ಯ ಮುಂದಾಗಿದ್ದಾರೆ. ಹಿಂದುತ್ವದ ಬಲವಿದೆ ಎನ್ನುವ ಯುವ ನಾಯಕನ ಎದುರು ಗ್ಯಾರಂಟಿಗಳ ಆಶೀರ್ವಾದವಿದೆ ಎನ್ನುವ ಕಾಂಗ್ರೆಸ್ ಪಾಲಿಗೆ ಜಯವಾಗುವುದೇ ಎಂಬ ಕುತೂಹಲವೂ ಇದೆ.

Update: 2024-03-29 06:56 GMT

ಸರಣಿ- 30

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿಧಾನಸಭೆ ಕ್ಷೇತ್ರಗಳು 8. ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ.

ವಿಜಯನಗರ -ಎಂ.ಕೃಷ್ಣಪ್ಪ(ಕಾಂಗ್ರೆಸ್)

ಬಿಟಿಎಂ ಲೇಔಟ್ -ರಾಮಲಿಂಗಾರೆಡ್ಡಿ(ಕಾಂಗ್ರೆಸ್)

ಗೋವಿಂದರಾಜನಗರ ಪ್ರಿಯಾಕೃಷ್ಣ(ಕಾಂಗ್ರೆಸ್)

ಜಯನಗರ -ಸಿ.ಕೆ. ರಾಮಮೂರ್ತಿ(ಬಿಜೆಪಿ)

ಪದ್ಮನಾಭ ನಗರ -ಆರ್. ಅಶೋಕ್(ಬಿಜೆಪಿ)

ಬಸವನಗುಡಿ -ರವಿಸುಬ್ರಹ್ಮಣ್ಯ(ಬಿಜೆಪಿ)

ಬೊಮ್ಮನಹಳ್ಳಿ -ಎಂ. ಸತೀಶ್ ರೆಡ್ಡಿ(ಬಿಜೆಪಿ)

ಚಿಕ್ಕಪೇಟೆ -ಉದಯ್ ಬಿ. ಗರುಡಾಚಾರ್ (ಬಿಜೆಪಿ)

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರರು 23,17,472. ಅವರಲ್ಲಿ ಪುರುಷರು 11,95,285, ಮಹಿಳೆಯರು 11,21,788 ಮತ್ತು ಇತರರು 399.

ಈ ಕ್ಷೇತ್ರದ ಹಿನ್ನೆಲೆಯನ್ನು ಗಮನಿಸುವುದಾದರೆ,

1977ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿ ಚುನಾವಣೆ ನಡೆಯಿತು.

ಮೊದಲ ಮೂರು ಚುನಾವಣೆಯಲ್ಲಿಯೂ ಜನತಾ ಪಕ್ಷ ಗೆದ್ದರೆ, 1989ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್. ಗುಂಡೂರಾವ್ ಗೆದ್ದಿದ್ದರು.

ಅದನ್ನು ಹೊರತುಪಡಿಸಿದರೆ ನಂತರ ನಡೆದ 1991ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ. ವೆಂಕಟಗಿರಿ ಗೌಡ ಚೊಚ್ಚಲ ಗೆಲುವು ದಾಖಲಿಸಿ ಬಿಜೆಪಿಯ ಖಾತೆ ತೆರೆದರು.

ಆನಂತರ 1996ರಿಂದ 2014ರವರೆಗೆ ಸತತವಾಗಿ ಆರು ಬಾರಿ ಬಿಜೆಪಿಯಿಂದ ಅನಂತ ಕುಮಾರ್ ಗೆದ್ದು ದಾಖಲೆ ಬರೆದಿದ್ದರು. ಅವರ ನಿಧನದ ಬಳಿಕ 2019ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಮೊತ್ತ ಮೊದಲ ಬಾರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದರು.

ಹೀಗೆ, ನಿರಂತರವಾಗಿ 8 ಬಾರಿ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿಯೇ ಇದೆ.

ಕಾಂಗ್ರೆಸ್‌ಗೆ ಈ ಬಾರಿ ‘ಗ್ಯಾರಂಟಿ’ ಆಶೀರ್ವಾದ?

ಸಾಕಷ್ಟು ಪ್ರಯೋಗ ನಡೆಸಿದರೂ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರಕಾರ ಇದ್ದರೂ ಬೆಂಗಳೂರು ದಕ್ಷಿಣ ಕ್ಷೇತ್ರ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಈ ಹಿಂದೆ ಅಚ್ಚರಿ ಅಭ್ಯರ್ಥಿ ಹಾಕುವ ಪ್ರಯೋಗಗಳನ್ನು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ದೇಶದ ಜನರಿಗೆ ಆಧಾರ್ ಕಾರ್ಡ್ ಸಿಗುವಂತೆ ಮಾಡುವಲ್ಲಿ ಹೆಸರಾಗಿದ್ದ ಐಟಿ ಉದ್ಯಮಿ ನಂದನ್ ನೀಲೇಕಣಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.

ನಂತರ ಹಿರಿಯ ನಾಯಕ ರಾಜ್ಯಸಭಾ ಸದಸ್ಯರಾಗಿ ಅನುಭವ ಇದ್ದ ಬಿ.ಕೆ.ಹರಿಪ್ರಸಾದ್‌ಗೆ ಟಿಕೆಟ್ ನೀಡಿದರೂ ಅನಂತ ಕುಮಾರ್ ವಿರುದ್ಧ ಗೆಲುವು ದಾಖಲಿಸಿ ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲಾಗಿಲ್ಲ.

ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದಿದ್ದ ಆರ್.ಗುಂಡೂರಾವ್ ಪುತ್ರ ದಿನೇಶ್ ಗುಂಡೂರಾವ್ ಅವರನ್ನು ಕಣಕ್ಕಿಳಿಸಬೇಕು ಎನ್ನುವುದು ಕಾಂಗ್ರೆಸ್ ನಾಯಕರ ಆಲೋಚನೆಯಾಗಿತ್ತು.

ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಬೇಕು ಎನ್ನುವ ಅಪೇಕ್ಷೆ ಕಾಂಗ್ರೆಸ್ ಹೈಕಮಾಂಡ್‌ನದ್ದಾಗಿತ್ತು. ಅದರಂತೆ ದಿನೇಶ್ ಗುಂಡೂರಾವ್ ಸ್ಪರ್ಧಿಸಬೇಕಾದ ಸನ್ನಿವೇಶ ಎದುರಾಗಬಹುದು ಎನ್ನುವ ಮಾತುಗಳು ಗಟ್ಟಿಯಾಗಿ ಕೇಳಿಬಂದಿದ್ದವು.

ಆದರೆ ಕೊನೆಗೆ ಬಿಜೆಪಿಯ ಭದ್ರಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಎದುರಾಳಿಯಾಗಿ ಸೌಮ್ಯಾ ರೆಡ್ಡಿ ಕಣದಲ್ಲಿದ್ದಾರೆ.

ಈ ಹಿಂದೆ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಈ ಭಾಗದ ಮತದಾರರೊಂದಿಗೆ ಸಂಪರ್ಕ ಹೊಂದಿದ್ದಾರೆ.

ಜತೆಗೆ, ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ವಿಧಾನಸಭಾ ಕ್ಷೇತ್ರವೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.

ಗ್ಯಾರಂಟಿಗಳ ಬಲವೂ ಕಾಂಗ್ರೆಸ್ ಕೈಹಿಡಿಯಬಹುದು ಎಂದು ಪಕ್ಷದ ನಾಯಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಿಜೆಪಿ-ಕಾಂಗ್ರೆಸ್

ನೇರ ಹಣಾಹಣಿ

ಇನ್ನು, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಈ ಬಾರಿ ಬಿಜೆಪಿ ಮಣೆ ಹಾಕಲಿದೆ ಎನ್ನುವ ಮಾತುಗಳ ನಡುವೆಯೇ ಹಾಲಿ ಸಂಸದ ತೇಜಸ್ವಿ ಸೂರ್ಯಗೆ ಬಿಜೆಪಿ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಿದೆ.

ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಇರುವ ಕಾರಣ ಕ್ಷೇತ್ರ ಬಿಜೆಪಿ ಪಾಲಾಗಿದ್ದು ಜೆಡಿಎಸ್ ಅಭ್ಯರ್ಥಿ ಇರುವುದಿಲ್ಲ.

ವಿಧಾನ ಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತ ಪುತ್ರಿಯನ್ನು ಲೋಕಸಭೆಗೆ ಕಳಿಸುವ ಉಮೇದಿನಲ್ಲಿ ಟಿಕೆಟ್ ಪಡೆದಿರುವ ರಾಮಲಿಂಗಾ ರೆಡ್ಡಿ ಅವರಿಗೆ ಪ್ರತಿಷ್ಠೆಯ ಕಣವಾಗಿದೆ ಬೆಂಗಳೂರು ದಕ್ಷಿಣ. ಹಾಗಾಗಿ ಈ ಬಾರಿ ತೇಜಸ್ವಿ ಸೂರ್ಯ ಪಾಲಿಗೆ ಗೆಲುವು ತೀರಾ ಸುಲಭ ಅಂತೂ ಅಲ್ಲ. ಆದರೆ ಅವರನ್ನು ಸೋಲಿಸಿ ಹೊಸ ದಾಖಲೆ ಸೃಷ್ಟಿಸುವುದು ಕಾಂಗ್ರೆಸ್‌ಗೆ ಸಾಧ್ಯ ಆಗಲಿದೆಯೇ ಎಂದು ನೋಡಬೇಕಾಗಿದೆ.

ಹಾಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನೇರ ಪೈಪೋಟಿ ನಿರೀಕ್ಷಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಮೀರ್ ದಳಸನೂರು

contributor

Similar News