×
Ad

ಕನ್ನಡಕ್ಕೊಂದು ಅಂತರ್‌ರಾಷ್ಟ್ರೀಯ ಬಹುಮಾನ ದೊರಕುವುದೇ?

ಈ ಲೇಖನ ಪ್ರಕಟವಾಗುವ ಹೊತ್ತಿಗೆ 2025ರ ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರನ್ನು ಮೇ 20, 2025ರಂದು ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ಘೋಷಿಸಲಾಗುವುದು. ಕನ್ನಡಿಗರ ದುವಾದಂತೆಯೇ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿಯವರ ಶ್ರಮಕ್ಕೆ ಈ ಬಹುಮಾನ ಲಭಿಸಲೆಂದು ಆಶಿಸಬಹುದು. ಇದರಿಂದಾಗಿ ಕನ್ನಡ ಸಾಹಿತ್ಯವನ್ನು ಇಡೀ ಜಗತ್ತು ಗಮನಿಸುವಂತಾಗಲಿ ಎಂಬುದು ಅಂತಹ ಆಶಯದ ಹಿಂದಿರುವ ಸ್ವಾರ್ಥ. ಒಂದು ವೇಳೆ ಅವರಿಗೆ ಲಭಿಸದಿದ್ದಲ್ಲಿ, ಬೂಕರ್ ಬಹುಮಾನಕ್ಕೆ ಶಾರ್ಟ್ ಲಿಸ್ಟ್ ಆದಾಗಿನಿಂದ ತೋರುತ್ತಿರುವ ಪ್ರಶಂಸೆ, ಗೌರವವನ್ನು ಕನ್ನಡಿಗರು ತೋರುವರೇ? ಬರ್ಜರ್ ಹೇಳುವಂತೆ, ಈ ಬಹುಮಾನ ಕನ್ನಡದ ಕಲ್ಪನಾತ್ಮಕ ಸ್ವಾತಂತ್ರ್ಯವನ್ನು ಉತ್ತೇಜಿಸಲಿ, ಪರ್ಯಾಯಗಳನ್ನು ಹುಡುಕುವ ಮನಸ್ಸನ್ನು ಪ್ರೋತ್ಸಾಹಿಸಲಿ, ಜನ ಪ್ರಶ್ನಿಸುವುದನ್ನು ಪ್ರೋತ್ಸಾಹಿಸಲಿ ಎಂದು ಆಶಿಸಬಹುದೇ?

Update: 2025-05-20 11:22 IST

ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನವು ದಿ ಬೂಕರ್ ಇಂಟರ್ ನ್ಯಾಶನಲ್ 2025ಕ್ಕೆ ಶಾರ್ಟ್ ಲಿಸ್ಟ್ ಆಗುತ್ತಿದ್ದಂತೆ ಇಷ್ಟು ದೊಡ್ಡ ಚರ್ಚೆಯಾಗುತ್ತಿದೆಯಾದರೂ, ಅವರ ಕನ್ನಡ ಕಥೆಯೊಂದು ದೀಪಾ ಭಾಸ್ತಿಯವರ ಇಂಗ್ಲಿಷ್ ಅನುವಾದದಲ್ಲಿ ರೆಡ್ ಲುಂಗಿ ಹೆಸರಿನಲ್ಲಿ ಪ್ರತಿಷ್ಠಿತ ಸಾಹಿತ್ಯ ಪತ್ರಿಕೆ ‘ದಿ ಪ್ಯಾರಿಸ್ ರಿವ್ಯೆ’ನ 248ರ ಸಂಚಿಕೆಯಲ್ಲಿ 2024ರಲ್ಲಿ ಪ್ರಕಟವಾಗಿತ್ತು ಎಂಬುದನ್ನು ಹೆಚ್ಚಿನವರು ಗಮನಿಸಿರಲಾರರು. ಹಾಗೆಯೇ, ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕಥೆಗಳು’ ದೀಪಾ ಭಾಸ್ತಿಯವರ ಇಂಗ್ಲಿಷ್ ಅನುವಾದದಲ್ಲಿ ಪ್ರಕಟವಾಗಿ ಪೆನ್ ಟ್ರಾನ್ಸ್ ಲೇಟ್ಸ್ 2024 ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಕೂಡ. ಅದಕ್ಕೆ ಕಾರಣ, ಬೂಕರ್ ಬಹುಮಾನಕ್ಕಿರುವ ಜಾಗತಿಕ ಮನ್ನಣೆ. ಆ ಕಾರಣದಿಂದಾಗಿಯೇ ಸಹಜವಾಗಿಯೇ ಅದು 2013ರಲ್ಲಿ ಯು.ಆರ್. ಅನಂತಮೂರ್ತಿಯವರು ದಿ ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಪ್ರೈಝ್‌ಗೆ ನಾಮಿನೇಟ್ ಆಗಿದ್ದನ್ನು ನೆನಪಿಗೆ ತಂದಿದೆ. ಆದರೆ, ಇವೆರಡೂ ಬೂಕರ್‌ಗಳು ಒಂದೇ ಅಲ್ಲ ಅನ್ನುವುದನ್ನು ಗಮನಿಸಬೇಕು.

ಬರ್ಜರ್ ಹಾಗೂ ನೈಪಾಲ್ ಪಡೆದ ಇಂಗ್ಲಿಷ್ ಕಾದಂಬರಿಗೆಂದು ನೀಡಲಾಗುವ ದಿ ಬೂಕರ್ ಪ್ರೈಝ್ ಪಡೆದ ಭಾರತೀಯ ಮೂಲದ ಲೇಖಕರೆಂದರೆ: ಸಲ್ಮಾನ್ ರಶ್ದಿ (ಮಿಡ್ ನೈಟ್ಸ್ ಚಿಲ್ಡ್ರನ್, 1981), ಅರುಂಧತಿ ರಾಯ್ (ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್, 1997), ಕಿರಣ್ ದೇಸಾಯಿ (ದಿ ಇನ್ಹೆರಿಟೆನ್ಸ್ ಆಫ್ ಲಾಸ್, 2006), ಅರವಿಂದ್ ಅಡಿಗ (ದಿ ವೈಟ್ ಟೈಗರ್, 2008). ರಶ್ದಿಯವರು 2019ರವರೆಗೆ ಏಳು ಸಲ ಬೂಕರ್ ಬಹುಮಾನಕ್ಕೆ ನಾಮಾಂಕಿತರಾಗುವ ಮೂಲಕ ಬೂಕರ್ ಇತಿಹಾಸದಲ್ಲಿ ದಾಖಲೆ ಬರೆದಿದ್ದಾರೆ. ಹಾಗೆಯೇ, ಭಾರತೀಯ ಮೂಲದ ರೋಹಿಂಟನ್ ಮಿಸ್ಟ್ರಿ ಹಾಗೂ ಅನಿತಾ ದೇಸಾಯಿ ತಲಾ ಮೂರು ಸಲ ಹಾಗೂ ಜೀತ್ ತಾಯಿಲ್ ಕೂಡ ಶಾರ್ಟ್ ಲಿಸ್ಟ್ ಆಗಿರುವುದನ್ನು ಇಲ್ಲಿ ಹೆಸರಿಸಬಹುದು. ಈ ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ದೇಶಗಳನ್ನು ಕಾಮನ್‌ವೆಲ್ತ್ ಎಂದು ಕರೆಯಲಾಗುತ್ತದೆ. 1969ರಿಂದ 2013ರವರೆಗೆ ಇಂತಹ ಕಾಮನ್ ವೆಲ್ತ್ ದೇಶಗಳು ಹಾಗೂ ಐರ್ಲೆಂಡ್ ಮತ್ತು ಜಿಂಬಾಬ್ವೆಯನ್ನೊಳಗೊಂಡ ದೇಶಗಳ ಲೇಖಕರಿಗೆ ಮಾತ್ರ ಬೂಕರ್ ಬಹುಮಾನ ಲಭ್ಯವಿತ್ತು. 2014ರಲ್ಲಿ ನಿಯಮಗಳನ್ನು ಸಡಿಲಿಸಿ ಯುನೈಟೆಡ್ ಸ್ಟೇಟ್ಸ್ ಒಳಗೊಂಡಂತೆ ಜಗತ್ತಿನಾದ್ಯಂತ ಯಾವುದೇ ಇಂಗ್ಲಿಷ್ ಭಾಷೆಯ ಲೇಖಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂಬ ತೀರ್ಮಾನ ಕೈಗೊಂಡಿತು. ಬಹುಶಃ ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಮಹತ್ವದ ವಾರ್ಷಿಕ ಅಂತರ್‌ರಾಷ್ಟ್ರೀಯ ಪ್ರಶಸ್ತಿಯಾಗಿರುವ ಬೂಕರ್ ಅನ್ನು ನೊಬೆಲ್ ಸಾಹಿತ್ಯ ಪ್ರಶಸ್ತಿ ಮತ್ತು ಪುಲಿಟ್ಝರ್ ಪ್ರಶಸ್ತಿಗಳೊಂದಿಗೆ ಹೋಲಿಸಬಹುದೇನೋ. ನೊಬೆಲ್‌ನಂತೆ ದಿ ಬೂಕರ್ ನಿರ್ದಿಷ್ಟ ಲೇಖಕರ ಮೇಲೆ ಗಮನ ಹರಿಸುವುದಿಲ್ಲ, ಬದಲಿಗೆ ಇಂಗ್ಲಿಷ್‌ನಲ್ಲಿ ಬರೆದ ನಿರ್ದಿಷ್ಟ ಕಾದಂಬರಿಯ ಬಗ್ಗೆ ಪ್ರತೀ ವರ್ಷ ಗಮನ ಹರಿಸುತ್ತದೆ. ಇನ್ನು ಪುಲಿಟ್ಝರ್, ಯುಎಸ್‌ಎಗೆ ಸಂಬಂಧಿಸಿದ ಜರ್ನಲಿಸಂ, ಸಾಹಿತ್ಯ ಹಾಗೂ ಸಂಗೀತದ ಬಗ್ಗೆ ಗಮನ ಹರಿಸುತ್ತದೆ.

2005-2015ರ ನಡುವೆ, ದಿ ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಬಹುಮಾನವನ್ನು ಕಾದಂಬರಿ ಸಾಹಿತ್ಯ ಪ್ರಕಾರದಲ್ಲಿ ಮಾಡಿದ ಸಾಧನೆಗಾಗಿ ಲೇಖಕರೊಬ್ಬರಿಗೆ ನೀಡಲಾಗಿತ್ತು. 60,000 ಪೌಂಡ್ ಮೌಲ್ಯದ ಈ ಪ್ರಶಸ್ತಿಯನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಮೂಲತಃ ಇಂಗ್ಲಿಷ್‌ನಲ್ಲಿ ಕಾದಂಬರಿಯನ್ನು ಪ್ರಕಟಿಸಿದ ಅಥವಾ ಇಂಗ್ಲಿಷ್ ಅನುವಾದದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಬರಹಗಾರರಿಗೆ ನೀಡಲಾಗುತ್ತಿತ್ತು. ವಿಜೇತರನ್ನು ತೀರ್ಪುಗಾರರ ಸಮಿತಿಯ ವಿವೇಚನೆಯಿಂದ ಮಾತ್ರ ಆಯ್ಕೆ ಮಾಡಲಾಗುತ್ತಿತ್ತು ಮತ್ತು ಪ್ರಕಾಶಕರಿಂದ ಯಾವುದೇ ಸಲ್ಲಿಕೆಗಳು ಇರುತ್ತಿರಲಿಲ್ಲ. ದಿ ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಪ್ರೈಝ್ ಪ್ರತೀ ವರ್ಷ ನೀಡಲಾಗುವ ಮ್ಯಾನ್ ಬೂಕರ್ ಕಾದಂಬರಿ ಪ್ರಶಸ್ತಿಗಿಂತ ಭಿನ್ನವಾಗಿತ್ತು, ಏಕೆಂದರೆ ಇದು ವಿಶ್ವ ವೇದಿಕೆಯಲ್ಲಿ ಕಾದಂಬರಿಗೆ ಒಬ್ಬ ಲೇಖಕನ ಒಟ್ಟಾರೆ ಕೊಡುಗೆಯನ್ನು ಎತ್ತಿ ತೋರಿಸಿತು. ಒಟ್ಟಾರೆ ಸಾಹಿತ್ಯಕ ಶ್ರೇಷ್ಠತೆಯ ಮೇಲೆ ಕೇಂದ್ರೀಕರಿಸುವಲ್ಲಿ, ತೀರ್ಪುಗಾರರು ಒಂದು ಕಾದಂಬರಿಯ ಬದಲು ಲೇಖಕರೊಬ್ಬರ ಸಮಗ್ರ ಕೃತಿಗಳನ್ನು ಪರಿಗಣಿಸಿದ್ದರು. ಯು. ಆರ್. ಅನಂತಮೂರ್ತಿಯವರು ಈ ಬಹುಮಾನಕ್ಕೆ ನಾಮಿನೇಟ್ ಆಗಿದ್ದದ್ದು.

2013ರಲ್ಲಿ ತಮ್ಮ ಬದುಕಿನ ಕೊನೆಯ ಹಂತದಲ್ಲಿದ್ದ ಯು. ಆರ್. ಅನಂತಮೂರ್ತಿಯವರು ನಿರಂತರ ಡಯಾಲಿಸಿಸ್‌ನಿಂದ ಬಳಲಿದ್ದರೂ, ದಿ ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಪ್ರೈಝ್‌ಗೆ ನಾಮಿನೇಟಾದ ಸುದ್ದಿ ಕೇಳಿ ಇನ್ನಿಲ್ಲದ ಚೈತನ್ಯವನ್ನು ಮೈಗೂಡಿಸಿಕೊಂಡು, ಸೂಟ್ ಬೂಟ್ ತೊಟ್ಟು ಲಂಡನ್ ನ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅದನ್ನು ಕಂಡು ಟೀಕಿಸಿದ್ದ ಅವರ ಸಾಹಿತಿ ಮಿತ್ರರು, ‘‘ಈ ಮನುಷ್ಯನಿಗೆ ಸಾಯುವ ವಯಸ್ಸಿನಲ್ಲೂ ದುರಾಸೆ’’ ಎಂದು ಕೊಂಕು ನುಡಿದಿದ್ದರು. ‘‘ಇಂತಹ ಪರಿಸ್ಥಿತಿಯಲ್ಲೂ ನೀವು ಹೋಗಬೇಕಾ?’’ ಎಂದು ಕೇಳಿದ್ದ ಕೆಲವರಿಗೆ ತಮ್ಮ ಎಂದಿನ ಶೈಲಿಯಲ್ಲಿ ‘‘ಕನ್ನಡಕ್ಕಾಗಿ ನಾನು ಸಾಯಲೂ ಸಿದ್ಧ’’ ಎಂದು ನುಡಿದಿದ್ದರು ಅನಂತಮೂರ್ತಿಯವರು. ಬೂಕರ್ ಬಹುಮಾನಕ್ಕೆ ದಕ್ಷಿಣ ಏಶ್ಯದಿಂದ ಅನಂತಮೂರ್ತಿಯವರು, ಲೋಕಪ್ರಸಿದ್ಧ ಬಸ್ತಿ ಕಾದಂಬರಿಕಾರ ಪಾಕಿಸ್ತಾನದ ಇಂತಿಝಾರ್ ಹುಸೇನ್‌ರನ್ನೊಳಗೊಂಡಂತೆ ಜಗತ್ತಿನೆಲ್ಲೆಡೆಯಿಂದ ಹತ್ತು ಮಂದಿ ನಾಮಿನೇಟಾಗಿದ್ದರು. ಅಂತಿಮವಾಗಿ ಬೂಕರ್ ಅಮೆರಿಕದ ಲಿಡಿಯಾ ಡೇವಿಸ್‌ರಿಗೆ ಲಭಿಸಿತ್ತು. ಆದರೆ ಅನಂತಮೂರ್ತಿಯವರು 2014ರಲ್ಲಿ ದಿವಂಗತರಾದಾಗ ದಿ ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಪ್ರೈಝ್‌ಗೆ ನಾಮಿನೇಟಾಗಿದ್ದ ಮೊದಲ ಭಾರತೀಯ ಸಾಹಿತಿ ಎಂಬ ಹೆಗ್ಗಳಿಕೆಯನ್ನು ಮಾತ್ರ ತನ್ನೊಂದಿಗೆ ಕೊಂಡೊಯ್ದಿದ್ದರು.

ಒಂದು ವೇಳೆ ಬೂಕರ್ ಬಹುಮಾನ ಸಮಿತಿಯೇನಾದರೂ ಕೇವಲ ಅವರ ಕಾದಂಬರಿಗಳನ್ನಷ್ಟೇ ಗಮನಿಸಿದ್ದರೆ, ಅನಂತಮೂರ್ತಿಯವರ ಒಟ್ಟು ಕಾದಂಬರಿ ಕೃಷಿ ಗಮನಾರ್ಹವೆನಿಸುವ ಮಟ್ಟಿಗಿಲ್ಲ ಎಂದು ಯಾರಾದರೂ ತಕರಾರನ್ನೆತ್ತಬಹುದಿತ್ತೇನೋ. ಆದರೆ, ಅವರೆಲ್ಲ ಕನ್ನಡ ಕಾದಂಬರಿಗಳಿಗೂ ಇಂಗ್ಲಿಷ್ ಅನುವಾದದ ಯೋಗ ಪ್ರಾಪ್ತವಾಗಿರುವುದಂತೂ ಸುಳ್ಳಲ್ಲ. ಅದೂ ಕೇಂದ್ರ ಸಾಹಿತ್ಯ ಅಕಾಡಮಿಯಂತಹ ರಾಷ್ಟ್ರೀಯ ಸಾಹಿತ್ಯಕ ಸಂಸ್ಥೆಯಿಂದಲ್ಲ, ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಹಾಗೂ ಪೆಂಗ್ವಿನ್‌ನಂತಹ ಅಂತರ್‌ರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಿಂದ. ಹಾಗಾಗಿ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಸಾಹಿತ್ಯ ಅಕಾಡಮಿಯಿಂದ ಪ್ರಕಟವಾಗದಂತೆ ನೋಡಿಕೊಂಡರು ಎಂಬ ಆರೋಪ ಅದೆಷ್ಟೇ ನಿಜವಾಗಿದ್ದರೂ ಅದರಿಂದ ಪರೋಕ್ಷವಾಗಿ ಉಪಕಾರ ಮಾಡಿದ್ದಾರೆಂದೇ ಹೇಳಬಹುದು.

2016ರಲ್ಲಿ, ಇಂಗ್ಲಿಷ್‌ಗೆ ಅನುವಾದಿಸಲಾದ ಕಾದಂಬರಿಯೊಂದನ್ನು ಗುರುತಿಸಲು ದಿ ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಪ್ರೈಝ್ ಮರು ರಚನೆಗೊಂಡಾಗ, ಲೇಖಕ ಮತ್ತು ಅನುವಾದಕರ ನಡುವೆ 50,000 ಪೌಂಡ್ ಬಹುಮಾನವನ್ನು ಹಂಚಲಾಯಿತು. ಮ್ಯಾನ್ ಬೂಕರ್ ಇಂಟರ್ ನ್ಯಾಶನಲ್ ಪ್ರೈಝ್ ಅದರ ಪ್ರಾಯೋಜಕತ್ವವನ್ನು ಬದಲಾಯಿಸಿದಾಗ 2019ರಲ್ಲಿ ಇಂಟರ್ ನ್ಯಾಶನಲ್ ಬೂಕರ್ ಪ್ರೈಝ್ ಆಯಿತು. ಈ ಹಿಂದೆ, ಬಹುಮಾನವನ್ನು ಮ್ಯಾನ್ ಗ್ರೂಪ್‌ನಿಂದ ಧನಸಹಾಯ ಮಾಡಲಾಗಿತ್ತು, ಆದರೆ ಕ್ರ್ಯಾಂಕ್‌ಸ್ಟಾರ್ಟ್, ಚಾರಿಟೇಬಲ್ ಫೌಂಡೇಶನ್ ಪ್ರಾಯೋಜಕತ್ವವನ್ನು ವಹಿಸಿಕೊಂಡಾಗ, ಈ ಹೆಸರನ್ನು ಬೂಕರ್ ಪ್ರೈಝ್ ಮತ್ತು ಇಂಟರ್ ನ್ಯಾಶನಲ್ ಬೂಕರ್ ಪ್ರೈಝ್ ಎಂದು ಹಿಂದೆ ಇದ್ದ ಹಾಗೆಯೇ ಕರೆಯಲಾಯಿತು. ಈಗ ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಕಥಾ ಸಂಕಲನವು ನಾಮಿನೇಟ್ ಆಗಿರುವುದು ಇಂಟರ್ ನ್ಯಾಶನಲ್ ಬೂಕರ್ ಪ್ರೈಝ್‌ಗೆ. 2022ರಲ್ಲಿ ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಕಾದಂಬರಿಯ ಇಂಗ್ಲಿಷ್ ಅನುವಾದ ‘ದಿ ಟೂಂಬ್ ಆಫ್ ಸ್ಯಾಂಡ್’ ಇದೇ ಬಹುಮಾನ ಪಡೆದಾಗ ಯಾವುದೇ ಭಾರತೀಯ ಭಾಷೆಯಲ್ಲಿ ರಚಿತವಾದ ಮೊದಲ ಕಾದಂಬರಿಯೆಂಬ ಹೆಗ್ಗಳಿಕೆ ಪಡೆದಿತ್ತು. ಅದರ ನಂತರ ತಮಿಳಿನ ಲೇಖಕ ಪೆರುಮಾಳ್ ಮುರುಗನ್ ಅವರ ಕಾದಂಬರಿಯ ಇಂಗ್ಲಿಷ್ ಅನುವಾದ ‘ಪೈರ್’ 2023ರಲ್ಲಿ ಲಾಂಗ್ ಲಿಸ್ಟ್ ನಲ್ಲಿ ಸೇರಿದ್ದನ್ನು ಇಲ್ಲಿ ಹೆಸರಿಬಹುದು. ಈ ಕಾದಂಬರಿಗಳ ಯಶಸ್ಸು ಬಾನು ಮುಷ್ತಾಕ್ ಅವರ ಕಥಾಸಂಕಲನಕ್ಕೆ ಸಹಾಯ ಮಾಡಿರುವುದನ್ನು ತಳ್ಳಿ ಹಾಕಲಾಗದು.

‘ಘಾಚರ್ ಘೋಚರ್’ ಎಂಬ ಫೆನಾಮೆನನ್

ಆಧುನಿಕ ಕನ್ನಡ ಸಾಹಿತ್ಯ, ಬಹುಮುಖ್ಯವಾಗಿ ಫಿಕ್ಶನ್, ಹೇಗೆ ಅಂತರ್‌ರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳನ್ನು ಸೆಳೆಯಲಾರಂಭಿಸಿತು ಅನ್ನುವ ಪ್ರಶ್ನೆ ಕನ್ನಡ ಸಾಹಿತ್ಯ, ಸಂಸ್ಕೃತಿ ವಿಮರ್ಶೆಯನ್ನು ಏಕೆ ಕಾಡಿಲ್ಲ? 2010ರ ದಶಕದಲ್ಲಿ ಆರಂಭವಾದ ಈ ವಿದ್ಯಮಾನ ಇಂದು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಸಂಚಲನ ಮೂಡಿಸಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಇಂಗ್ಲಿಷ್ ಅನುವಾದದ ಮೂಲಕ ಜಾಗತಿಕ ಸಂಚಲನ ಮೂಡಿಸಿದ ಆಧುನಿಕ ಕನ್ನಡ ಸಾಹಿತ್ಯ ಕೃತಿಯೆಂದರೆ, ವಿವೇಕ್ ಶಾನ್‌ಭಾಗ್‌ರ ‘ಫಾಚರ್ ಘೋಚರ್’.

ಕನ್ನಡದಲ್ಲಿ ದೊಡ್ಡ ಸಂಚಲನವನ್ನೇನೂ ಉಂಟು ಮಾಡದ ಫಾಚರ್ ಘೋಚರ್, 2015ರಲ್ಲಿ ಹಾರ್ಪರ್ ಪೆರೆನಿಯಲ್ ಪ್ರಕಟಿಸಿದ ಇಂಗ್ಲಿಷ್ ಅನುವಾದದ ಮೂಲಕ ವಿಮರ್ಶಕರ ಅಪಾರ ಪ್ರಶಂಸೆಗೆ ಪಾತ್ರವಾಯಿತು. ಎಷ್ಟರ ಮಟ್ಟಿಗೆ ಎಂದರೆ, ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಂದೆನಿಸಿಕೊಂಡಿರುವ ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಒಂದು ಸಾವಿರ ಪದಗಳ ವಿಮರ್ಶೆ ಪ್ರಕಟವಾಗುವಷ್ಟು. ಅಷ್ಟು ಮಾತ್ರವಲ್ಲ, ‘ದಿ ಗಾರ್ಡಿಯನ್’ ಮತ್ತು ‘ದಿ ಐರಿಶ್ ಟೈಮ್ಸ್’ ಪತ್ರಿಕೆಗಳಿಂದಲೂ ಮನ್ನಣೆ ಗಳಿಸಿತ್ತು. 2017ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಪೆಂಗ್ವಿನ್ ಅವರ ವಿಂಟೇಜ್ ಇಂಟರ್ ನ್ಯಾಶನಲ್ ಪ್ರಕಟಿಸಿತು. ಅದೇ ವರ್ಷ ದಿ ನ್ಯೂಯಾರ್ಕ್ ಟೈಮ್ಸ್‌ನ 2017ರ ಅತ್ಯುತ್ತಮ ಪುಸ್ತಕಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು. ಯುನೈಟೆಡ್ ಕಿಂಗ್ಡಮ್ ನಲ್ಲಿ 2018ರಲ್ಲಿ ಪ್ರಕಟಿಸಿದ್ದು ಫೇಬರ್ ಆಂಡ್ ಫೇಬರ್. ಆದರೆ, ‘ಫಾಚರ್ ಘೋಚರ್’ನ ಆಯ್ದ ಭಾಗ ಮೊದಲು ಪ್ರಕಟವಾಗಿದ್ದು ಪ್ರತಿಷ್ಠಿತ ಸಾಹಿತ್ಯ ಪತ್ರಿಕೆ ಗ್ರ್ಯಾಂಟ 130: ಇಂಡಿಯಾ ವಿಂಟರ್ 2015ರ ಸಂಚಿಕೆಯಲ್ಲಿ. ಫಾಚರ್ ಘೋಚರ್ ಗೆ ನಾಮಿನೇಟ್ ಆಗದಿರುವುದಕ್ಕೆ ಕಾರಣಗಳು ತಾಂತ್ರಿಕವಿರಬಹುದೆಂದು ನನಗನಿಸುತ್ತದೆ. ಆದರದು ಬೂಕರ್ ಲಾಸ್ ಏಂಜಲೀಸ್ ಟೈಮ್ಸ್ ಬುಕ್ ಪ್ರೈಝ್ ಮತ್ತು ಇಂಟರ್ ನ್ಯಾಶನಲ್ ಡಬ್ಲಿನ್ ಲಿಟರರಿ ಅವಾರ್ಡ್‌ನ ಫೈನಲಿಸ್ಟ್ ಆಗಿತ್ತು. ಡಬ್ಲಿನ್ ಸಾಹಿತ್ಯ ಪ್ರಶಸ್ತಿಯು ವಿಶ್ವದಾದ್ಯಂತದ ಅತ್ಯಂತ ಮಹತ್ವದ ಸಾಹಿತ್ಯಕ ಗೌರವಗಳಲ್ಲಿ ಒಂದಾಗಿದ್ದು, 100,000 ಯೂರೋ ಬಹುಮಾನದೊಂದಿಗೆ ಮೂಲತಃ ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟಿರುವ ಅಥವಾ ಅನುವಾದಿಸಲ್ಪಟ್ಟಿರುವ ಅಂತರ್‌ರಾಷ್ಟ್ರೀಯ ಕಾದಂಬರಿಯ ಒಂದು ಕೃತಿಯನ್ನು ಗುರುತಿಸುತ್ತದೆ. ವಿಜೇತ ಕೃತಿಯು ಅನುವಾದವಾಗಿದ್ದರೆ, ಲೇಖಕರು 75,000 ಯೂರೋ ಪಡೆಯುತ್ತಾರೆ, ಆದರೆ ಅನುವಾದಕರಿಗೆ 25,000 ಯೂರೋ ನೀಡಲಾಗುತ್ತದೆ. ಬಹುಮಾನದ ಮೊತ್ತದ ದೃಷ್ಟಿಯಿಂದ ನೋಡಿದಾಗ ಇದು ಬೂಕರ್ ಬಹುಮಾನವನ್ನು ಮೀರಿಸುವಂತಹದ್ದು.

ಫಾಚರ್ ಘೋಚರ್ ನಂತರದಲ್ಲಿ ಕನ್ನಡ ಫಿಕ್ಶನ್‌ನ ಇಂಗ್ಲಿಷ್ ಅನುವಾದಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿತು. ಜಯಂತ್ ಕಾಯ್ಕಿಣಿ ಅವರ ಸಣ್ಣ ಕಥೆಗಳ ಸಂಕಲನವು ತೇಜಸ್ವಿನಿ ನಿರಂಜನ ಅವರ ಇಂಗ್ಲಿಷ್ ಅನುವಾದದಲ್ಲಿ ‘ನೋ ಪ್ರೆಸೆಂಟ್ಸ್ ಪ್ಲೀಸ್: ಮುಂಬೈ ಸ್ಟೋರೀಸ್’ ಹೆಸರಿನಲ್ಲಿ ಪ್ರಕಟವಾಗಿ, 2019ರಲ್ಲಿ ದಕ್ಷಿಣ ಏಶ್ಯದ ಸಾಹಿತ್ಯಕ್ಕಾಗಿ ಡಿಎಸ್‌ಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಗುಂಪಿಗೆ ಸೇರಿಸಬಹುದಾದ ಫಿಕ್ಶನ್‌ಗಳೆಂದರೆ, ವಸುಧೇಂದ್ರರವರ ‘ಮೋಹನಸ್ವಾಮಿ’, ಗುರುಪ್ರಸಾದ್ ಕಾಗಿನೆಲೆಯವರ ‘ಹಿಜಾಬ್’ ಹಾಗೂ ಇತ್ತೀಚೆಗೆ ಎಂ. ಆರ್. ದತ್ತಾತ್ರಿಯವರ ‘ವಾಟ್ಸ್ ಯುವರ್ ಪ್ರೈಸ್, ಮಿ. ಶಿವಸ್ವಾಮಿ?’ ಈ ಲೇಖಕರೆಲ್ಲರನ್ನೂ ಶಾನುಭಾಗ್‌ರ ಮಿತ್ರಬಳಗವೆಂದು, ಈ ಅನುವಾದಗಳ ಪ್ರಕಟಣೆಯಲ್ಲಿ, ಅವುಗಳಿಗೆ ದೊರಕುವ ಬಹುಮಾನಗಳಲ್ಲಿ ಅವರ ಹಸ್ತಕ್ಷೇಪವಿರಬಹುದೆಂದು ಯಾರಾದರೂ ತಕರಾರೆತ್ತಬಹುದು. ಈಗ ಇದೇ ಸಾಲಿಗೆ ವಿವೇಕ್ ಶಾನುಭಾಗ್ ಅವರ ಹೊಸ ಕನ್ನಡ ಕಾದಂಬರಿ ‘ಸಕೀನಾಳ ಮುತ್ತು’ ಶ್ರೀನಾಥ್ ಪೆರೂರ್ ಅವರ ಇಂಗ್ಲಿಷ್ ಅನುವಾದದಲ್ಲಿ ‘ಸಕೀನಾಸ್ ಕಿಸ್’ ಹೆಸರಿನಲ್ಲಿ ಅನುವಾದಗೊಂಡು ಮನ್ನಣೆ ಪಡೆಯುತ್ತಿರುವುದನ್ನು ಕಾಣಬಹುದು. ಈ ಕಾದಂಬರಿ ಕೂಡ ಕನ್ನಡದಲ್ಲಿ ದೊಡ್ಡ ಮನ್ನಣೆಯನ್ನೇನೂ ಪಡೆದುಕೊಂಡಿಲ್ಲ. ಬಹುಶಃ ಇಂಗ್ಲಿಷ್ ಅನುವಾದ ದೊಡ್ಡ ಬಹುಮಾನ ಪಡೆದುಕೊಂಡಲ್ಲಿ ಕನ್ನಡದಲ್ಲೂ ಚರ್ಚೆಯಾಗಬಹುದೇನೋ!

‘ಘಾಚರ್ ಘೋಚರ್’ ಒಂದು ಫೆನಾಮೆನನ್ ಎಂದು ಹೇಳಿದೆ. ಅದಕ್ಕೆ ಕಾರಣ, ಅದರ ನಂತರದಲ್ಲಿ ಇಂಗ್ಲಿಷ್ ಅನುವಾದದಲ್ಲಿ ಪ್ರಕಟವಾದ ಕನ್ನಡ ಫಿಕ್ಶನ್. ಈ ಕನ್ನಡ ಫಿಕ್ಶನ್ ಅನ್ನು ಕನ್ನಡ ವಿಮರ್ಶೆಯೇ ಕಡೆಗಣಿಸಿರುವಂತಿದೆ. ಈ ಕನ್ನಡ ಫಿಕ್ಶನ್ ಅನ್ನು ಬೆಳೆಸಿರುವ ಅನೇಕರ ಕೃತಿಗಳು ಇನ್ನೂ ಇಂಗ್ಲಿಷ್ ಅನುವಾದದಲ್ಲಿ ಪ್ರಕಟಗೊಳ್ಳದಿರುವುದರಿಂದಾಗಿ ಇದೇ ಕನ್ನಡ ಫಿಕ್ಶನ್ ಅನ್ನು ಜಾಗತಿಕವಾಗಿ ನಿರೂಪಿಸಿರುವಂತಹದ್ದು ಎಂದೇನು ನಾನು ಸೂಚಿಸುತ್ತಿಲ್ಲ. ಆದರೆ, ಘಾಚರ್ ಘೋಚರ್ ಫೆನಾಮೆನನ್ ನಂತರದಲ್ಲಿ ಕನ್ನಡ ಕಾದಂಬರಿಗಳ ಇಂಗ್ಲಿಷ್ ಅನುವಾದಕ್ಕೆ ದೊಡ್ಡ ಬೇಡಿಕೆ ಬಂದಿರುವುದಂತೂ ಸತ್ಯ. ಆದರೆ, ಎಲ್ಲ ಕಾದಂಬರಿಗಳೂ ಸುದ್ದಿ ಮಾಡಿವೆ ಎಂದು ಹೇಳಲಾಗದು. ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕೃತಿಯನ್ನು ‘ಘಾಚರ್ ಘೋಚರ್’ನಂತೆ ಒಂದು ಫೆನಾಮೆನನ್ ಆಗಿ ನೋಡಬಹುದೇ? ಮೊದಲಿಗೆ, ಹಾರ್ಟ್ ಲ್ಯಾಂಪ್ ಕಾದಂಬರಿಯಲ್ಲ ಅನ್ನುವುದು ಒಂದು ಕಾರಣವಾದರೆ, ಎರಡನೆಯದಾಗಿ, ಬಾನು ಮುಷ್ತಾಕ್ ಅವರು ಶಾನುಭಾಗ್ ತಲೆಮಾರಿನ ಲೇಖಕರ ಹಿಂದಿನ ತಲೆಮಾರಿನವರು. ಬಂಡಾಯ ಚಳವಳಿಯೊಂದಿಗೆ ಗುರುತಿಸಿಕೊಂಡು ಹತ್ತತ್ತಿರ ಐದು ದಶಕಗಳ ಕಾಲ ಸಾಹಿತ್ಯದಲ್ಲಿ ತೊಡಗಿಕೊಂಡವರು. ಆದರೂ, ಕನ್ನಡ ವಿಮರ್ಶೆ ಅವರನ್ನು ಹೇಗೆ ಗುರುತಿಸಿದೆ ಎಂದು ನೋಡಿದಾಗ ಸಿಗುವ ಉತ್ತರ ಅದ್ಭುತವೆನಿಸುವ ಮಟ್ಟಿಗೇನೂ ಇಲ್ಲ. ಅವರು ಬಂದ ಸಮುದಾಯವನ್ನು ಅವರ ಸಾಹಿತ್ಯದಲ್ಲಿನ ಸಂವೇದನೆಗೆ ತಳುಕು ಹಾಕುವ ಅಪ್ರಬುದ್ಧ ಪ್ರವೃತ್ತಿಯನ್ನು ಕಾಣುತ್ತೇವೆಯೇ ಹೊರತು, ಇಡೀ ಆಧುನಿಕ ಕನ್ನಡ ಸಾಹಿತ್ಯದೊಳಗೆ ಅವರನ್ನು ಯಾವ ಕಾರಣಕ್ಕೆ ಮುಖ್ಯ ಎಂದು ಗುರುತಿಸುವ ಕೆಲಸ ಏಕೆ ಆಗಿಲ್ಲ? ಇಂದು ಇಂಗ್ಲಿಷ್‌ಗೆ ಅನುವಾದಗೊಂಡು ಜಾಗತಿಕ ಮಟ್ಟದ ಬಹುಮಾನಕ್ಕೆ ನಾಮಿನೇಟ್ ಆದ ಮಾತ್ರಕ್ಕೆ ಏಕೆ ಅವರು ಮುಖ್ಯರಾಗುತ್ತಾರೆ? ಒಂದು ವೇಳೆ ಬೂಕರ್ ಬಹುಮಾನಕ್ಕೆ ಶಾರ್ಟ್ ಲಿಸ್ಟ್ ಆಗದಿದ್ದಿದ್ದರೆ, ಅವರ ಐದು ದಶಕಗಳ ಸಾಹಿತ್ಯ ಕೃಷಿ ನಗಣ್ಯವಾಗಿಬಿಡುತ್ತಿತ್ತೇ?

‘ಕನ್ನಡ ಸಂವೇದನೆ’ ಎಂದರೇನು?

ದಿ ಬೂಕರ್ ಪ್ರೈಝ್‌ನ ಜಾಲತಾಣಕ್ಕೆ ಹೋದರೆ ಅಲ್ಲಿ ಬಾನು ಮುಷ್ತಾಕ್‌ರ ‘ಹಾರ್ಟ್ ಲ್ಯಾಂಪ್’ ಕೃತಿಯ ಬಗ್ಗೆ ಹೀಗೆ ಬರೆಯಲಾಗಿದೆ:‘‘ ಹಾರ್ಟ್ ಲ್ಯಾಂಪ್‌ನ 12 ಕಥೆಗಳಲ್ಲಿ, ಬಾನು ಮುಷ್ತಾಕ್ ದಕ್ಷಿಣ ಭಾರತದ ಮುಸ್ಲಿಮ್ ಸಮುದಾಯಗಳ ಮಹಿಳೆಯರು ಮತ್ತು ಬಾಲಕಿಯರ ದೈನಂದಿನ ಜೀವನವನ್ನು ವಿಶಿಷ್ಟವಾಗಿ ಚಿತ್ರಿಸುತ್ತಾರೆ. ಅವರ ಒಣ ಮತ್ತು ನವಿರಾದ ಹಾಸ್ಯಕ್ಕಾಗಿ ಪ್ರಶಂಸೆಗೊಳಗಾಗಿರುವ ಈ ಕುಟುಂಬ ಮತ್ತು ಸಮುದಾಯದ ಸಂಘರ್ಷಗಳ ಚಿತ್ರಣಗಳು ಪರಂಪರಾವಾದಿ ವಲಯಗಳಿಂದ ಆಕ್ಷೇಪಿಸಲ್ಪಡುವುದರ ಜೊತೆಗೆ ಭಾರತದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳನ್ನು ಗಳಿಸಿವೆ. ವಿಪರ್ಯಾಸವೆಂದರೆ, ತಮ್ಮ ಐದು ದಶಕಗಳ ಸಾಹಿತ್ಯ ಕೃಷಿಯಲ್ಲಿ ಆರು ಕಥಾ ಸಂಕಲನಗಳು, ಒಂದು ಕಾದಂಬರಿ, ಒಂದು ಪ್ರಬಂಧ ಸಂಕಲನ ಹಾಗೂ ಒಂದು ಕಾವ್ಯ ಸಂಕಲನವನ್ನು ಪ್ರಕಟಿಸಿರುವ ಬಾನು ಮುಷ್ತಾಕ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಬಿಟ್ಟರೆ ‘ಭಾರತದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ’ ಎಂದು ಪರಿಗಣಿಸಲಾಗುವಂತಹ ಯಾವ ಪ್ರಶಸ್ತಿಯಾಗಲಿ, ಬಹುಮಾನವಾಗಲಿ ಬಂದಿಲ್ಲ. ಕನ್ನಡ ವಿಮರ್ಶೆ ಅವರನ್ನು ಮುಸ್ಲಿಮ್ ಲೇಖಕಿ ಎಂದೋ, ಅವರ ಕೃತಿಗಳಲ್ಲಿ ಮುಸ್ಲಿಮ್ ಸಂವೇದನೆ ಇದೆಯೆಂದೋ ಹೇಳಿ ಸುಮ್ಮನಾಗಿರುವುದನ್ನೇ ಕಾಣುತ್ತೇವೆ.

ಕನ್ನಡ ವಿಮರ್ಶೆಯಲ್ಲಿ ಈ ಸಂವೇದನೆ ಎಂಬ ಪದದಷ್ಟು ಕ್ಲೀಷೆ ಅನಿಸುವಂತಹ ಪದ ಮತ್ತೊಂದಿಲ್ಲ. ಇಂಗ್ಲಿಷ್‌ನ ಸೆನ್ಸಿಬಿಲಿಟಿ ಪದಕ್ಕೆ ಸಂವಾದಿಯಾಗಿ ಬಳಸಲಾಗುವ ಈ ಪದವನ್ನು ಯಾರಾದರೂ ತಾತ್ವಿಕವಾಗಿ ವ್ಯಾಖ್ಯಾನಿಸಿರುವುದನ್ನು ನಾನಂತೂ ಓದಿಲ್ಲ. ಲೇಖಕರು ಒಂದು ನಿರ್ದಿಷ್ಟ ಸಮುದಾಯದಿಂದ ಬಂದ ಮಾತ್ರಕ್ಕೆ ಅವರ ಕೃತಿಗಳಲ್ಲಿ ಆ ಸಮುದಾಯದ ಸಂವೇದನೆಯನ್ನು ಗುರುತಿಸುವುದನ್ನು ವಿಮರ್ಶೆ ಎಂದು ಕರೆಯಲಾಗುವುದಿಲ್ಲ, ಬದಲಿಗೆ ಬೇಜವಾಬ್ದಾರಿ ಎಂದು ಕರೆಯಬಹುದಷ್ಟೆ. 1970ರ ದಶಕದಲ್ಲಿ ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸೈದ್ಧಾಂತಿಕತೆಯ ಹಿನ್ನೆಲೆಯಲ್ಲಿ ಬರೆಯಲಾರಂಭಿಸಿದ ಲೇಖಕರನ್ನು ವಿಶಿಷ್ಟವಾಗಿ ಆಯಾ ಲೇಖಕರು ಬಂದ ನಿರ್ದಿಷ್ಟ ಸಮುದಾಯಗಳ ಸಂವೇದನೆ ಹೊಂದಿದ್ದಾರೆಂದು ಗುರುತಿಸಲಾಗಿದೆಯೇ ಹೊರತು, ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸದ ಹಿನ್ನೆಲೆಯಲ್ಲಿ ಗುರುತಿಸಲಾಗಿಲ್ಲ. ಮೇಲೆ ಹೆಸರಿಸಿದ ಕನ್ನಡ ಲೇಖಕರನ್ನು ಅವರವರ ಸಮುದಾಯದೊಂದಿಗೆ ಜೋಡಿಸಿ ಅವರ ಕೃತಿಗಳ ಸಂವೇದನೆಯನ್ನು ಚರ್ಚಿಸಲಾಗಿದೆಯೇ? ಈ ಸಂದರ್ಭವನ್ನು ನೆಪವಾಗಿಟ್ಟುಕೊಂಡಾದರೂ ಕನ್ನಡ ವಿಮರ್ಶೆ ಸಂವೇದನೆ ಎಂದು ಕರೆಯಲಾಗುವುದರ ಕುರಿತು ಚರ್ಚಿಸುವುದು ವಾಸಿ.

ಅದಿರಲಿ. ಜಾನ್ ಬರ್ಗರ್ ಭಾಷಣದಿಂದ ಕೆಲವು ಒಳನೋಟಗಳನ್ನು ಪಡೆದುಕೊಂಡು ಈ ಇಡೀ ವಿದ್ಯಮಾನವನ್ನು ಮತ್ತೊಂದು ಬಗೆಯಲ್ಲಿ ನೋಡುವ ಪ್ರಯತ್ನ ಮಾಡುತ್ತ, ಇಪ್ಪತ್ತೊಂದನೇ ಶತಮಾನದ ಕನ್ನಡ ವಿಮರ್ಶೆ ಸಾಗಬೇಕಾದ ಕಡೆ ಮುಖ ಮಾಡಿ ನಿಲ್ಲುವ ಸಾಹಸ ಮಾಡುತ್ತೇನೆ. ಇದಕ್ಕೆ ಪೀಠಿಕೆ ಒದಗಿಸುವುದಾದರೆ, ನವ ಉದಾರವಾದವು ಇಪ್ಪತ್ತನೇ ಶತಮಾನದ ತನ್ನ ಮೂಲದಿಂದ ಬೆಳೆದು ಇಪ್ಪತ್ತೊಂದನೇ ಶತಮಾನದಲ್ಲಿ ಹೊಸ ಜಾಗತಿಕ ಸವಾಲುಗಳು ಹಾಗೂ ಆರ್ಥಿಕ ಸಂರಚನೆಗೆ ಹೊಂದಿಕೊಳ್ಳುವ ಭರದಲ್ಲಿ ಹೊಸ ಟ್ರೆಂಡ್‌ಗಳನ್ನು ಹುಟ್ಟಿಹಾಕಿದೆ. ಈ ಟ್ರೆಂಡ್‌ಗಳು ಸಾಹಿತ್ಯ ಬಹುಮಾನಗಳು ಮತ್ತು ಉತ್ಸವಗಳ ಮೇಲೆ ಯಾವ ಪರಿಣಾಮ ಬೀರಿವೆ?

ಸಾಂಸ್ಕೃತಿಕ ಸ್ಫೋಟಗಳು: ಸಾಹಿತ್ಯ ಪ್ರಶಸ್ತಿಗಳು ಮತ್ತು ಉತ್ಸವಗಳು

ಇಪ್ಪತ್ತನೇ ಶತಮಾನದ ಕೊನೆಯ ದಶಕ ಹಾಗೂ ಇಪ್ಪತ್ತೊಂದನೇ ಶತಮಾನದ ಆರಂಭದ ದಶಕಗಳಲ್ಲಿ ಸಂಭವಿಸಿರುವ ಸಾಂಸ್ಕೃತಿಕ ಸ್ಫೋಟಗಳಲ್ಲಿ ಎದ್ದುಕಾಣುವಂತಹವು: ಸಾಹಿತ್ಯ ಬಹುಮಾನಗಳು ಮತ್ತು ಉತ್ಸವಗಳು. ಇದಕ್ಕೆ ಜಾಗತೀಕರಣ, ಡಿಜಿಟಲ್ ಮಾಧ್ಯಮ ಮತ್ತು ಹೆಚ್ಚಿದ ಕಾರ್ಪೊರೇಟ್ ಪ್ರಾಯೋಜಕತ್ವಗಳು ಕೆಲವು ಕಾರಣಗಳೆಂದು ಹೆಸರಿಸಬಹುದು. ಇದರ ಪರಿಣಾಮವಾಗಿ ಹುಟ್ಟಿಕೊಂಡ ಕೆಲವು ಪ್ರಮುಖ ಟ್ರೆಂಡ್‌ಗಳನ್ನು ಗುರುತಿಸಿದಲ್ಲಿ ಬರ್ಜರ್ ಹೇಳಿದ ಅನೇಕ ವಿಷಯಗಳೆಡೆ ಗಮನ ಹರಿಸಬಹುದು.

ಮೊದಲನೆಯದಾಗಿ, ಅಂತರ್‌ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಳ ಏರಿಕೆ - ದಿ ಇಂಟರ್ ನ್ಯಾಶನಲ್ ಬೂಕರ್ ಪ್ರೈಝ್ ಮತ್ತು ಡಬ್ಲಿನ್ ಲಿಟರರಿ ಅವಾರ್ಡ್ ನಂತಹ ದೊಡ್ಡ ಮೊತ್ತದ ಬಹುಮಾನಗಳು ಪ್ರಪಂಚದಾದ್ಯಂತದ ವೈವಿಧ್ಯಮಯ ಧ್ವನಿಗಳನ್ನು ಗುರುತಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಎರಡನೆಯದಾಗಿ, ಸಾಹಿತ್ಯ ಉತ್ಸವಗಳ ವಿಸ್ತರಣೆ-ಜೈಪುರ್ ಲಿಟರೇಚರ್ ಫೆಸ್ಟಿವಲ್ ಮತ್ತು ಬ್ರೂಕ್ಲಿನ್ ಲಿಟರೇಚರ್ ಫೆಸ್ಟಿವಲ್‌ನಂತಹ ಕಾರ್ಯಕ್ರಮಗಳು ಪ್ರಮುಖ ಸಾಂಸ್ಕೃತಿಕ ಕೂಟಗಳಾಗಿ ಬೆಳೆದಿದ್ದು, ಲೇಖಕರು, ಪ್ರಕಾಶಕರು ಮತ್ತು ಓದುಗರನ್ನು ಆಕರ್ಷಿಸುತ್ತಲೇ ಇವೆ. ಮೂರನೆಯದಾಗಿ, ಡಿಜಿಟಲ್ ಪ್ರಭಾವ - ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳು ಸಾಹಿತ್ಯ ಪ್ರಶಸ್ತಿಗಳ ಸುತ್ತ ಚರ್ಚೆಗಳನ್ನು ಹೆಚ್ಚಿಸುವ ಮೂಲಕ ಅವುಗಳನ್ನು ಎಂದಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿಸಿವೆ. ಕೊನೆಯದಾಗಿ, ಕಾರ್ಪೊರೇಟ್ ಮತ್ತು ಸರಕಾರಿ ಪ್ರಾಯೋಜಕತ್ವಗಳು - ಅನೇಕ ಸಾಹಿತ್ಯ ಉತ್ಸವಗಳು ಮತ್ತು ಬಹುಮಾನಗಳು ಈಗ ಪ್ರಕಾಶನ ಸಂಸ್ಥೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸರಕಾರಗಳಿಂದ ಹಣವನ್ನು ಪಡೆಯುತ್ತವೆ. ಆ ಮೂಲಕ ಸಾಹಿತ್ಯ ಉತ್ಸವಗಳು ಮತ್ತು ಬಹುಮಾನಗಳನ್ನು ವಿಶಾಲ ಬಂಡವಾಳಶಾಹಿ ವ್ಯವಸ್ಥೆಯ ಭಾಗವಾಗಿಸುತ್ತ ಅವುಗಳ ವ್ಯಾಪ್ತಿ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತವೆ.

ಇದನ್ನು ಮತ್ತಷ್ಟು ವಿಸ್ತರಿಸುವುದಾದರೆ, ಮಾರುಕಟ್ಟೆ ಪ್ರೇರಿತ ಮನ್ನಣೆಯಿಂದಾಗಿ ಸಾಹಿತ್ಯ ಬಹುಮಾನಗಳು ಸಾಮಾನ್ಯವಾಗಿ ಪುಸ್ತಕ ಮಾರಾಟ ಮತ್ತು ಲೇಖಕರ ಖ್ಯಾತಿಯನ್ನು ರೂಪಿಸುತ್ತವೆ. ಸಾಹಿತ್ಯವು ಸಂಪೂರ್ಣವಾಗಿ ಕಲಾತ್ಮಕ ಅರ್ಹತೆಗಿಂತ ಮಾರುಕಟ್ಟೆ ಶಕ್ತಿಗಳಿಂದ ಪ್ರಭಾವಿತವಾಗಿರುತ್ತದೆ ಎಂಬ ಕಲ್ಪನೆಯನ್ನು ಬಲಪಡಿಸುತ್ತದೆ. ನವ ಉದಾರವಾದದ ಪ್ರಭಾವದಿಂದಾಗಿ ಮುಕ್ತ ಮಾರುಕಟ್ಟೆ ಬಂಡವಾಳಶಾಹಿ ಮತ್ತು ಕನಿಷ್ಠ ಸರಕಾರಿ ಹಸ್ತಕ್ಷೇಪವನ್ನು ಆದ್ಯತೆಯನ್ನಾಗಿಸಿಕೊಂಡಿರುವ ನವ ಉದಾರವಾದದ ಉದಯವು ಸಾಹಿತ್ಯದ ಸರಕೀಕರಣಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ, ಪುಸ್ತಕಗಳನ್ನು ಸಾಂಸ್ಕೃತಿಕ ಕಲಾಕೃತಿಗಳೆಂದು ನೋಡುವುದರ ಬದಲು ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತದೆ. ಜಾಗತೀಕರಣ ಮತ್ತು ಸಾಂಸ್ಕೃತಿಕ ಬಂಡವಾಳದ ನಂಟಿನಿಂದಾಗಿ ಹುಟ್ಟಿಕೊಂಡಂತಹ ಸಾಹಿತ್ಯ ಉತ್ಸವಗಳು ಜಾಗತಿಕ ಕಾರ್ಯಕ್ರಮಗಳಾಗಿ ಮಾರ್ಪಟ್ಟು, ಪ್ರಾಯೋಜಕತ್ವಗಳು ಮತ್ತು ಮಾಧ್ಯಮ ಗಮನವನ್ನು ಸೆಳೆಯುತ್ತ, ಬಂಡವಾಳಶಾಹಿ ಸಂರಚನೆಗಳಲ್ಲಿ ಸಾಹಿತ್ಯವನ್ನು ಮತ್ತಷ್ಟು ಹುದುಗಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕುಮಾರ್ ಜಯರಾಮಪ್ಪ

contributor

ಕೆನಡಾದ ಯುನಿವರ್ಸಿಟಿ ಆಫ್ ಅಲ್ಬರ್ಟಾದಲ್ಲಿ ಇಂಗ್ಲಿಷ್ ಹಾಗೂ ಫಿಲ್ಮ್ ಸ್ಟಡೀಸ್ ವಿಭಾಗದ ಪ್ರಾಧ್ಯಾಪಕರು

Similar News