‘ಚುನಾವಣಾ ಬಾಂಡ್’ ತೀರ್ಪಿಗೆ ಬೆದರಿದ ‘ಚೌಕಿದಾರ’

400 ಸ್ಥಾನಗಳನ್ನು ಗೆಲ್ಲುವುದಾಗಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಮೋದಿಯವರು ಹೇಳುತ್ತಿದ್ದರೂ ಅವರ ನಿರೀಕ್ಷೆ ಹುಸಿಯಾಗುವ ಸೂಚನೆಗಳು ಗೋಚರಿಸುತ್ತಿವೆ. ಹಿಂದಿನ ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ಪಡೆದ ಮತಗಳ ಶೇಕಡಾವಾರು ಪ್ರಮಾಣ ಕೇವಲ 35 ಮಾತ್ರ. ಉಳಿದಂತೆ 65 ರಷ್ಟು ಜನ ಬಿಜೆಪಿಗೆ ವಿರೋಧವಾಗಿ ಮತ ಚಲಾಯಿಸಿದ್ದಾರೆ. ಈ ಬಾರಿ ಪ್ರತಿಪಕ್ಷ ಗಳು ಬಿಜೆಪಿ ನಾಗಾಲೋಟವನ್ನು ತಡೆದು ನಿಲ್ಲಿಸುವ ಲಕ್ಷಣಗಳು ಕಾಣುತ್ತಿವೆ. ಈ ಸಂದರ್ಭದಲ್ಲಾದರೂ ಪ್ರಧಾನಮಂತ್ರಿ ಅವರು ಬಾಂಡ್ ಹಗರಣದ ಬಗ್ಗೆ ಸತ್ಯ ಸಂಗತಿಯನ್ನು ಜನರ ಮುಂದೆ ಹೇಳಲಿ. ಅಧಿಕಾರ ಇರುವವರೆಗೆ ಸಿಬಿಐ, ಐಟಿ, ಈ.ಡಿ.ಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಬಹುದು. ನಾಳೆ ಜನತೆ ಮತದಾನದ ಮೂಲಕ ಈ ಅಧಿಕಾರವನ್ನು ಕಿತ್ತುಕೊಂಡರೆ ಇದೇ ತನಿಖಾ ಸಂಸ್ಥೆಗಳ ದಾಳಿಗೆ ಬಿಜೆಪಿ ನಾಯಕರೂ ಒಳಪಡಬೇಕಾಗುತ್ತದೆ ಎಂಬುದನ್ನು ಮರೆಯದಿರಲಿ.

Update: 2024-04-01 03:50 GMT

ಚುನಾವಣಾ ಬಾಂಡ್ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪು ರಾಜಕೀಯ ಮತ್ತು ಔದ್ಯಮಿಕ ವಲಯದ ಭ್ರಷ್ಟರನ್ನು ಬೆಚ್ಚಿ ಬೀಳಿಸಿದೆ. ಈ ಚುನಾವಣಾ ಬಾಂಡ್ ಎಂಬುದೇ ಅಸಾಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿರುವುದು ಕೆಲವರಲ್ಲಿ ಗಾಬರಿ ಉಂಟು ಮಾಡಿದೆ. ಅದರಲ್ಲೂ ಈ ಹಗರಣವನ್ನು ಮುಚ್ಚಿ ಹಾಕಿ ತಿಪ್ಪೆಸಾರಿಸಲು ಹೊರಟ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಕಿತಾಪತಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿಗಳು ಹಗರಣದ ಸಂಪೂರ್ಣ ವಿವರ ನೀಡುವವರೆಗೆ ಬಿಡಲಿಲ್ಲ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು ಭಾರತದ ಜನರನ್ನು ಪೊಳ್ಳು ಮಾತುಗಳ ಮೂಲಕ ಯಾಮಾರಿಸುತ್ತಾ ಬಂದಿರುವ ನಿರಂಕುಶ ಪ್ರಭುಗಳಲ್ಲಿ ನಡುಕನ್ನುಂಟು ಮಾಡಿವೆ.

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಭಿನ್ನಾಭಿಪ್ರಾಯಗಳ ಬಗ್ಗೆ ಹಾಗೂ ಪ್ರತಿಪಕ್ಷಗಳ ಬಗ್ಗೆ ಅಸಹನೆ ಬೆಳೆಸಿಕೊಂಡರು. ಪ್ರತಿಪಕ್ಷ ಮುಕ್ತ ಚುನಾವಣೆ ಮತ್ತು ಭಾರತ ಅವರ ಬಯಕೆಯಾಗಿದೆ. ಈ ಗುರಿ ಸಾಧನೆಗಾಗಿ ಸಕಲ ರಾಜಕೀಯ ಅಧಿಕಾರವನ್ನು ಬಳಸಿಕೊಂಡರು. ಸಿಬಿಐ, ಜಾರಿ ನಿರ್ದೇಶನಾಲಯ (ಈ.ಡಿ.), ಆದಾಯ ತೆರಿಗೆ ಇಲಾಖೆ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಉಪಯೋಗಿಸಿಕೊಂಡು ಪ್ರತಿರೋಧ ಹತ್ತಿಕ್ಕಲು, ಪ್ರತಿಪಕ್ಷಗಳನ್ನು ಮೂಲೆಗುಂಪು ಮಾಡಲು ಹುನ್ನಾರ ನಡೆಸಿದರು. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ನಿಯಂತ್ರಿಸಲು ಮುಂದಾದರು. ಚುನಾವಣಾ ಆಯೋಗದ ನಡೆಯ ಬಗ್ಗೆ ಜನರು ಸಂಶಯಪಡುವಂತಾಯಿತು. ರಾಜ್ಯಪಾಲರನ್ನು ಬಳಸಿ, ಬಿಜೆಪಿಯೇತರ ಸರಕಾರಗಳನ್ನು ಉರುಳಿಸಲು ಹಿಂಜರಿಯಲಿಲ್ಲ. ಆದರೆ, ಇವರ ನಿಯಂತ್ರಣಕ್ಕೆ ಸಿಗದ ಏಕೈಕ ಸಾಂವಿಧಾನಿಕ ಅಂಗ ನ್ಯಾಯಾಂಗ. ಅದರಲ್ಲೂ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳನ್ನು ಸಹಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ.

ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್ ಬಿಗಿಯಾದ ನಿಲುವು ತಾಳಿದ ನಂತರ ಸುಮಾರು 600 ಮಂದಿ ವಕೀಲರು ಸಹಿ ಹಾಕಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರವೊಂದನ್ನು ಬರೆದರು .ಇದರಲ್ಲಿ ಇತ್ತೀಚೆಗೆ ನ್ಯಾಯಾಂಗದಲ್ಲಿ ಬಾಹ್ಯ ರಾಜಕೀಯ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಬರೆದರು. ಈ ಪತ್ರಕ್ಕೆ ಚುನಾವಣಾ ಬಾಂಡ್ ಕುರಿತ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಆದೀಶ್ ಅಗರ್‌ವಾಲಾ ಕೂಡ ಸಹಿ ಹಾಕಿದ್ದಾರೆ.ಈ ವಕೀಲರು ಅರ್ಜಿ ಸಲ್ಲಿಸಿದ ವಿವರ ಬಹಿರಂಗವಾಗುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ 600 ವಕೀಲರನ್ನು ಬೆಂಬಲಿಸಿ ಟ್ವೀಟ್ ಮಾಡಿದರು. ಕಾಂಗ್ರೆಸ್‌ನವರು ಹಸ್ತಕ್ಷೇಪ ಮಾಡುತ್ತಾ ಬಂದಿದ್ದಾರೆ ಎಂದು ಲೇವಡಿ ಮಾಡಿದರು.

ಇದಿಷ್ಟೇ ಅಲ್ಲ, ಇತ್ತೀಚೆಗೆ ಬಹಿರಂಗ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತ ಭಕ್ತ ಕುಚೇಲನ ಕತೆ ಹೇಳಿದರು. ಭಕ್ತ ಕುಚೇಲ ತನ್ನ ಮಿತ್ರ ಕೃಷ್ಣನನ್ನು ಭೇಟಿಯಾದಾಗ ಒಂದು ಮುಷ್ಟಿ ಅಕ್ಕಿಯ ಕತೆಯನ್ನು ಉಲ್ಲೇಖಿಸಿ ಆಗ ಸುಪ್ರೀಂ ಕೋರ್ಟ್ ಇದ್ದಿದ್ದರೆ ಅದನ್ನೂ ಭ್ರಷ್ಟಾಚಾರ ಎಂದು ಕರೆಯುತ್ತಿತ್ತು ಎಂದು ಪರೋಕ್ಷವಾಗಿ ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟಿನ ತೀರ್ಪನ್ನು ವ್ಯಂಗ್ಯ ಭಾಷೆಯಲ್ಲಿ ಟೀಕಿಸಿದರು.

ಚುನಾವಣಾ ಬಾಂಡ್ ಕುರಿತು ತನ್ನ ಇಷ್ಟದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಲಿಲ್ಲ ಎಂಬುದು ಮೋದಿಯವರ ಆಕ್ರೋಶಕ್ಕೆ ಕಾರಣ. ಯಾರಿಗೂ ಹೆದರದ, ಬೆದರದ ವಿಶ್ವ ಗುರುಗಳು ಈಗೇಕೆ ಹೆದರಿದ್ದಾರೆ ಎನ್ನುವುದನ್ನು ಅವಲೋಕಿಸಬೇಕಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವಿಶ್ರಾಂತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೋಗಿ ಆ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ತಮ್ಮ ಮತ್ತು ತಮ್ಮ ಪಕ್ಷದ ಮುಖಕ್ಕೆ ಅಂಟಿಕೊಂಡಿರುವ ಚುನಾವಣಾ ಬಾಂಡ್ ಹಗರಣದ ಮಸಿಯ ಬಗ್ಗೆ ಅವರಿಗೆ ಸಂಕೋಚವಾಗುತ್ತಿಲ್ಲ. ಈ ಬಾಂಡ್ ಹಗರಣದ ಸಿಂಹಪಾಲು ಹೋಗಿದ್ದು ಬಿಜೆಪಿಗೆ. ಕಮ್ಯುನಿಸ್ಟ್ ಪಕ್ಷಗಳನ್ನು ಹೊರತುಪಡಿಸಿ ಇತರ ಪಕ್ಷಗಳು ಇದರ ಫಲಾನುಭವಿಗಳು. ಕಮ್ಯುನಿಸ್ಟರು ರಾಜಕೀಯವಾಗಿ ಈಗ ಪ್ರಭಾವಶಾಲಿಯಾಗಿಲ್ಲದಿರಬಹುದು.ಆದರೆ ಅವುಗಳ ನೈತಿಕ ಬಲ ಹೆಮ್ಮೆಯನ್ನುಂಟು ಮಾಡುತ್ತದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಗರಣವೆಂದು ಚುನಾವಣಾ ಬಾಂಡ್ ಹೆಸರು ಮಾಡಿದೆ. ‘ನಾನೂ ತಿನ್ನುವುದಿಲ್ಲ ಇತರರಿಗೂ ತಿನ್ನಲು ಬಿಡುವುದಿಲ್ಲ’ ಎಂದು ಕೊಚ್ಚಿಕೊಳ್ಳುತ್ತಿದ್ದ ಮಹಾಪ್ರಭುಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೇ ಚುನಾವಣಾ ಪ್ರಚಾರಕ್ಕಾಗಿ ದೇಶ ಸುತ್ತುತ್ತಿದ್ದಾರೆ. ತಾವು ಮಹಾ ಹರಿಶ್ಚಂದ್ರ ಎಂಬಂತೆ ಪೋಜು ಕೊಡುತ್ತ ಪ್ರತಿಪಕ್ಷಗಳ ಮೇಲೆ ತಳಬುಡವಿಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಎಲ್ಲೂ ಅಪ್ಪಿತಪ್ಪಿಯೂ ಬಿಜೆಪಿ ಮೇಲೆ ಬಂದಿರುವ ಬಹುದೊಡ್ಡ ಆರೋಪಕ್ಕೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ವಂಚಕ ನಕಲಿ ಕಂಪೆನಿಗಳು ಸುಮಾರು 12 ಸಾವಿರ ಕೋಟಿ ರೂ. ಭಾರೀ ಮೊತ್ತದ ಭ್ರಷ್ಟಾಚಾರದ ಹಣವನ್ನು ಸಂಗ್ರಹ ಮಾಡಿ ಅದಕ್ಕೆ ಚುನಾವಣಾ ಬಾಂಡ್ ಎಂದು ಹೆಸರಿಟ್ಟು ಹೇಗೆ ಕೊಳ್ಳೆ ಹೊಡೆಯಬಹುದೆಂಬುದನ್ನು ಚಾರಿತ್ರ್ಯವಂತರ ಪಕ್ಷ ತೋರಿಸಿದೆ. ಸುಪ್ರೀಂ

ಕೋರ್ಟ್‌ನ ಸಕಾಲಿಕ ಮಧ್ಯ ಪ್ರವೇಶದಿಂದ ಬಿಜೆಪಿ ಮುಖವಾಡ ಕಳಚಿ ಬಿದ್ದಿದೆ. ಇದರಿಂದ ‘ವಿಶ್ವಗುರುಗಳು’ ಬೆವತಿದ್ದಾರೆ. ಆದರೂ 400 ಸೀಟು ಗೆಲ್ಲುವ ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದಾರೆ.

ಈ ಬಾಂಡ್ ಹಗರಣ ಸಾಮಾನ್ಯವಾದುದಲ್ಲ. ತಾನಾಗಿ ಬಂದ ಹಣವಲ್ಲ. ಈ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಛೂ ಬಿಟ್ಟು ಲೂಟಿ ಮಾಡಲಾಗಿದೆ. ಹೆದ್ದಾರಿ ನಿರ್ಮಾಣ, ರಕ್ಷಣಾ ಇಲಾಖೆ, ರೈಲ್ವೆ ಗುತ್ತಿಗೆಗಳನ್ನು ಮಂಜೂರು ಮಾಡಿ ಹೆದರಿಸಿ,ಬೆದರಿಸಿ ಹಣ ವಸೂಲಿ ಮಾಡಲಾಗಿದೆ. ಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆಯನ್ನು ( 6,987 ಕೋಟಿ ರೂ.) ಬಿಜೆಪಿ ಪಡೆದಿರುವುದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವ ಸಂಘಟನೆಗೆ ಸೇರಿದವರೆಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವವರ ಹಗರಣ ಬಯಲಿಗೆ ಬಂದಿದೆ. ಕಮ್ಯುನಿಸ್ಟ್ ಪಕ್ಷಗಳನ್ನು ಹೊರತುಪಡಿಸಿ ಕೆಲವು ಪ್ರತಿಪಕ್ಷ ಗಳೂ ದೇಣಿಗೆ ಪಡೆದಿವೆ.ಆದರೆ, ಅವುಗಳ ಮೊತ್ತ ಕಡಿಮೆ.

ಎಲ್ಲಾ ಸಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದವರು ಈ ಹಗರಣದಲ್ಲಿ ಸುಪ್ರೀಂ ಕೋರ್ಟ್‌ನ ದಿಟ್ಟ ಕ್ರಮದಿಂದ ದಿಗಿಲುಗೊಂಡಿದ್ದಾರೆ. ಚುನಾವಣಾ ಬಾಂಡ್ ವ್ಯವಹಾರ ಕಾನೂನು ಬದ್ಧವಾಗಿ ನಡೆದಿದ್ದರೆ ಮಾಹಿತಿಯನ್ನು ಮುಚ್ಚಿಡಲು ಈ ಪರಿ ಪರದಾಡಿದ್ದೇಕೆ? ಹಗಲೂ ರಾತ್ರಿ ಪ್ರತಿಪಕ್ಷಗಳನ್ನು ಟೀಕಿಸುವ ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಮೌನವಾಗಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಸ್ವಿಸ್ ಬ್ಯಾಂಕಿನಲ್ಲಿ ಇರುವ ಕಪ್ಪು ಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ. ಹಾಕುತ್ತೇವೆ ಎಂದವರು, ನೋಟು ಅಮಾನ್ಯೀಕರಣ ಮಾಡಿ ಕಪ್ಪು ಹಣ ಬಯಲಿಗೆಳೆಯುವುದಾಗಿ ಹೇಳಿಕೊಂಡವರು, ತನ್ನನ್ನು ಚೌಕಿದಾರ ಎಂದು ಕರೆದುಕೊಂಡವರು ಈಗ ಯಾಕೆ ಬಾಯಿ ಬಿಡುತ್ತಿಲ್ಲ?

ಇದು ಮೇಲ್ನೋಟಕ್ಕೆ ಚುನಾವಣಾ ಬಾಂಡ್ ಎಂದು ಕರೆಯಲ್ಪಟ್ಟರೂ ವಾಸ್ತವವಾಗಿ ಇದು ಬ್ಲ್ಯಾಕ್‌ಮೇಲ್ ಹಗರಣ. ಉದ್ಯಮಿಗಳು, ಗುತ್ತಿಗೆದಾರರು, ಲಾಟರಿ ದಂಧೆಕೋರರ ಮನೆ ಮತ್ತು ಕಚೇರಿಗಳ ಮೇಲೆ ಐಟಿ, ಸಿಬಿಐ, ಈ.ಡಿ. ದಾಳಿ ನಡೆದ ಮರುದಿನವೇ ಚುನಾವಣಾ ಬಾಂಡ್‌ಗಳು ಖರೀದಿಯಾಗಿವೆ. ಕಾರಣ ಇನ್ನೂ ಬಯಲಿಗೆ ಬರಬೇಕಾದ ಸತ್ಯ ಸಾಕಷ್ಟಿದೆ. ಆದ್ದರಿಂದ ಸುಪ್ರೀಂಕೋರ್ಟ್ ನೇಮಕ ಮಾಡುವ ಉನ್ನತಾಧಿಕಾರ ಸಮಿತಿಯ ಮೂಲಕ ತನಿಖೆ ನಡೆಸಬೇಕಾಗಿದೆ. ತನಿಖೆ ಮುಗಿಯುವವರೆಗೆ ಬಿಜೆಪಿ ಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕಾಗಿದೆ.

ಬಿಜೆಪಿಯೊಳಗಿನ ಮತ್ತು ಹೊರಗಿನ ವಿದ್ಯಮಾನಗಳನ್ನು ಗಮನಿಸಿದರೆ ಹಿಂದಿನ ಎರಡು ಚುನಾವಣೆಗಳಲ್ಲಿ ಹಾಗೂ ಹಲವಾರು ಉಪ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗಿದ್ದ ವರ್ಚಸ್ಸು ಕ್ಷೀಣಿಸುತ್ತಿರುವುದು ಸ್ಪಷ್ಟವಾಗುತ್ತದೆ. ಮೋದಿಯವರು ಬಂದರೆ ಕೈ ಕಟ್ಟಿಕೊಂಡು ಸ್ವಾಗತಕ್ಕೆ ನಿಲ್ಲುತ್ತಿದ್ದ ಬಿಜೆಪಿ ನಾಯಕರು ಈ ಬಾರಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಅವರ ಸಭೆಯನ್ನೇ ಬಹಿಷ್ಕರಿಸುವವರೆಗೆ ಹೋಗಿದ್ದಾರೆ.

ಜನಸಾಮಾನ್ಯರನ್ನು ಕೋಮು ಉನ್ಮಾದದಲ್ಲಿ ಇಟ್ಟು ದಾರಿ ತಪ್ಪಿಸುವ ಹುನ್ನಾರ ಗಳಿಗೂ ಈ ಬಾರಿ ಯಶಸ್ಸು ಕಾಣುತ್ತಿಲ್ಲ. ದೇಶದ ಸಂಪತ್ತನ್ನು ಕಾರ್ಪೊರೇಟ್ ಬಂಡವಾಳ ಶಾಹಿ ಗಳಿಗೆ ಸಮರ್ಪಿಸಿ ಜನಸಾಮಾನ್ಯರನ್ನು ಕಷ್ಟಕಾರ್ಪಣ್ಯಗಳ ಯಾತನೆಯ ಮಡುವಿಗೆ ತಳ್ಳಿದವರ ಮುಖವಾಡ ಚುನಾವಣಾ ಬಾಂಡ್ ಹಗರಣದಲ್ಲಿ ಕಳಚಿ ಬಿದ್ದಿದೆ. 400 ಸ್ಥಾನಗಳನ್ನು ಗೆಲ್ಲುವುದಾಗಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಮೋದಿಯವರು ಹೇಳುತ್ತಿದ್ದರೂ ಅವರ ನಿರೀಕ್ಷೆ ಹುಸಿಯಾಗುವ ಸೂಚನೆಗಳು ಗೋಚರಿಸುತ್ತಿವೆ. ಹಿಂದಿನ ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ಪಡೆದ ಮತಗಳ ಶೇಕಡಾವಾರು ಪ್ರಮಾಣ ಕೇವಲ 35 ಮಾತ್ರ. ಉಳಿದಂತೆ 65 ರಷ್ಟು ಜನ ಬಿಜೆಪಿಗೆ ವಿರೋಧವಾಗಿ ಮತ ಚಲಾಯಿಸಿದ್ದಾರೆ. ಈ ಬಾರಿ ಪ್ರತಿಪಕ್ಷ ಗಳು ಬಿಜೆಪಿ ನಾಗಾಲೋಟವನ್ನು ತಡೆದು ನಿಲ್ಲಿಸುವ ಲಕ್ಷಣಗಳು ಕಾಣುತ್ತಿವೆ.

ಈ ಸಂದರ್ಭದಲ್ಲಾದರೂ ಪ್ರಧಾನಮಂತ್ರಿ ಅವರು ಬಾಂಡ್ ಹಗರಣದ ಬಗ್ಗೆ ಸತ್ಯ ಸಂಗತಿಯನ್ನು ಜನರ ಮುಂದೆ ಹೇಳಲಿ. ಅಧಿಕಾರ ಇರುವವರೆಗೆ ಸಿಬಿಐ, ಐಟಿ, ಈ.ಡಿ.ಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಬಹುದು. ನಾಳೆ ಜನತೆ ಮತದಾನದ ಮೂಲಕ ಈ ಅಧಿಕಾರವನ್ನು ಕಿತ್ತುಕೊಂಡರೆ ಇದೇ ತನಿಖಾ ಸಂಸ್ಥೆಗಳ ದಾಳಿಗೆ ಬಿಜೆಪಿ ನಾಯಕರೂ ಒಳಪಡಬೇಕಾಗುತ್ತದೆ ಎಂಬುದನ್ನು ಮರೆಯದಿರಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News