ಹಳಿ ತಪ್ಪಿದ ಜೆಡಿಎಸ್ ರೈಲು

Update: 2023-09-11 07:15 GMT

ಇಂಥದೊಂದು ಬೆಳವಣಿಗೆ ಅನಿರೀಕ್ಷಿತ ಆಗಿರಲಿಲ್ಲ. ಅಚ್ಚರಿದಾಯಕವೂ ಅಲ್ಲ. ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗಲೇ ಜಾತ್ಯತೀತ ಎಂದು ಹೆಸರಿಟ್ಟುಕೊಂಡ ಜನತಾದಳ ಕೋಮುವಾದಿ ಎಂದು ಟೀಕಿಸುತ್ತಾ ಬಂದ ಬಿಜೆಪಿ ಎದುರು ಮಂಡಿಯೂರುತ್ತದೆ ಎಂದು ರಾಜಕೀಯ ವಲಯಗಳಲ್ಲಿ ಅಂದಾಜು ಮಾಡಲಾಗುತ್ತಿತ್ತು. ಅದೀಗ ನಿಜವಾಗಿದೆ. ಇವೆರಡೂ ಪಕ್ಷಗಳ ಮೈತ್ರಿಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂದು ಲೆಕ್ಕಾಚಾರ ಹಾಕಬೇಕಾಗಿದೆ. ಇಂಥ ಅನೇಕ ಪ್ರಾದೇಶಿಕ ಪಕ್ಷಗಳನ್ನು ನುಂಗಿ ನೀರು ಕುಡಿದ ಬಿಜೆಪಿ ಸಹಜವಾಗಿ ಹಳೆಯ ಮೈಸೂರಿನ ಒಕ್ಕಲಿಗರ ಪ್ರಾಬಲ್ಯದ ಪ್ರದೇಶದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

ಜೆಡಿಎಸ್‌ನ ಇಂಥ ಎಡಬಿಡಂಗಿ ರಾಜಕಾರಣ ಆರಂಭವಾಗಿದ್ದು ಇದೇ ಮೊದಲಲ್ಲ. ಧರಂಸಿಂಗ್ ಸರಕಾರವನ್ನು ಉರುಳಿಸಿ, ಬಿಜೆಪಿ ಜೊತೆ ಕೈ ಜೋಡಿಸಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದಾಗಲೇ ಅದರ ಅವಕಾಶವಾದ ಬಯಲಿಗೆ ಬಂತು. ಆಗ ನಾನು ‘ಅನ್ನ ಹಳಸಿತ್ತು ನಾಯಿ ಹಸಿದಿತ್ತು’ ಎಂಬ ಪುಟ್ಟ ಪುಸ್ತಕವೊಂದನ್ನು ಬರೆದಿದ್ದೆ.

ಆ ನಂತರ ಏನೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಕರ್ನಾಟಕದ ಅಸ್ಮಿತೆಯನ್ನು ಪ್ರತಿನಿಧಿಸಬಹುದಾಗಿದ್ದ ಪ್ರಾದೇಶಿಕ ಪಕ್ಷವೊಂದು ಮಾಯವಾಗುವ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡ ಯಾವ ಪ್ರಾದೇಶಿಕ ಪಕ್ಷಗಳೂ ಉದ್ಧಾರವಾಗಿಲ್ಲ. ಕೆಲ ಪಕ್ಷಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಜಯಲಲಿತಾ ಅವರ ಸಾವಿನ ನಂತರ ಆಕೆಯ ಅಣ್ಣಾ ಡಿಎಂಕೆ ಪಕ್ಷ ಹೇಗೆ ಬಿಜೆಪಿ ಬಾಲವಾಯಿತೆಂದು ಎಲ್ಲರಿಗೂ ತಿಳಿದಿದೆ. ಬಿಜೆಪಿಯ ಬಾಲವಾಗಲು ನಿರಾಕರಿಸಿದ ಮಹಾರಾಷ್ಟ್ರದ ಶಿವಸೇನೆ ಹೇಗೆ ಮತ್ತು ಯಾರಿಂದ ಇಬ್ಭಾಗವಾಯಿತು ಎಂಬುದು ಗುಟ್ಟಿನ ಸಂಗತಿಯಲ್ಲ.

ಭಾರತ ಎಂಬುದು ಬಹುಧರ್ಮಗಳ, ಬಹುಭಾಷೆಗಳ, ವಿಭಿನ್ನ ರಾಷ್ಟ್ರೀಯತೆಗಳ ಹಾಗೂ ಸಂಸ್ಕೃತಿಗಳ ಬಹುತ್ವದ ದೇಶ. ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ಒಕ್ಕೂಟ ರಾಷ್ಟ್ರವೆಂದು ಕರೆದರು.ರಾಷ್ಟ್ರೀಯ ಪಕ್ಷಗಳು ಎಲ್ಲ ಪ್ರದೇಶಗಳ, ಸಮುದಾಯಗಳ ಭಾವನೆಗಳಿಗೆ ಸ್ಪಂದಿಸದಿದ್ದಾಗ ಇಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡವು. ಮುಖ್ಯವಾಗಿ ಉತ್ತರ ಭಾರತದ ಯಜಮಾನಿಕೆಯ ವಿರುದ್ಧ ದಕ್ಷಿಣದ ದ್ರಾವಿಡ ಸಂಸ್ಕೃತಿ ಪ್ರತಿನಿಧಿಸುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹೊರಹೊಮ್ಮಿತು. ಇದಕ್ಕೆ ಬೀಜಾಂಕುರ ಮಾಡಿದವರು ಪೆರಿಯಾರ್ ರಾಮಸ್ವಾಮಿ ನಾಯ್ಕರ್. ಇದನ್ನೊಂದು ರಾಜಕೀಯ ಶಕ್ತಿಯಾಗಿ ರೂಪಿಸಿ ಅಧಿಕಾರಕ್ಕೆ ತಂದವರು ಅಣ್ಣಾದೊರೈ. ಮನುವಾದಿ ಹಿಂದುತ್ವದ ಅಲೆಗಳು ಬಂದು ಅಪ್ಪಳಿಸುತ್ತಿದ್ದರೂ ತಮಿಳುನಾಡಿನಲ್ಲಿ ಇಂದಿಗೂ ದ್ರಾವಿಡ ಚಳವಳಿಯ ಬೇರುಗಳು ಗಟ್ಟಿಯಾಗಿವೆ.

ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರದಲ್ಲಿದೆ. ಅಧಿಕಾರ ಇರಲಿ, ಇಲ್ಲದಿರಲಿ ಡಿಎಂಕೆ ನಿಲುವು ಬದಲಾಗಿಲ್ಲ. ಅಂತಲೇ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಮಾತಾಡಿ ದಕ್ಕಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದಾರೆ.

ಅದೇ ರೀತಿ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ, ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ಅವರ ಟಿಆರ್‌ಎಸ್ ಪಕ್ಷಗಳು ಅಧಿಕಾರದಲ್ಲಿವೆ. ದಕ್ಷಿಣ ಮಾತ್ರವಲ್ಲ ಈಶಾನ್ಯ ಭಾರತದಲ್ಲೂ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಪ್ರಾದೇಶಿಕತೆ ನಾಶ ಮಾಡಲು ಹೋಗಿ ಮೋದಿ ಸರಕಾರ ಮಣಿಪುರದಲ್ಲಿ ಮಾಡಿದ ಅನಾಹುತ ಎಲ್ಲರಿಗೂ ಗೊತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹಿಂದೆ ಎಡಪಂಥೀಯ ಪಕ್ಷಗಳು ಅಧಿಕಾರದಲ್ಲಿದ್ದವು. ಈಗ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿದೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್‌ರ ಬಿಜು ಜನತಾದಳ ಅಧಿಕಾರದಲ್ಲಿದೆ. ಆಪರೇಶನ್ ಕಮಲದ ಕುತಂತ್ರದ ವರೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರಕಾರ ಅಸ್ತಿತ್ವದಲ್ಲಿತ್ತು. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಸರಕಾರವಿದೆ. ಆದರೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿ ಬೆಳೆದು ಅಧಿಕಾರಕ್ಕೆ ಬರಲು ಜಾತ್ಯತೀತ ಜನತಾದಳಕ್ಕೆ ಯಾಕೆ ಸಾಧ್ಯವಾಗಲಿಲ್ಲ?

ಡಿಎಂಕೆಗೆ ಇರುವ ದ್ರಾವಿಡ ಸಿದ್ಧಾಂತದ ಬದ್ಧತೆ, ಜಾತ್ಯತೀತತೆ ಅಥವಾ ಮತ ನಿರಪೇಕ್ಷತೆ ಜೆಡಿಎಸ್‌ಗೆ ಇದ್ದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿತ್ತು. ಜಾತ್ಯತೀತ ಜನತಾದಳವನ್ನು ಜನರೂ ಕೈ ಬಿಟ್ಟಿರಲಿಲ್ಲ. ಹಳೆಯ ಮೈಸೂರಿನ ಆಚೆ ಉತ್ತರ ಕರ್ನಾಟಕದಲ್ಲೂ ಅಲ್ಲಲ್ಲಿ ಜೆಡಿಎಸ್ ನೆಲೆಯೂರಿದೆ. ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಕಾಂಗ್ರೆಸ್ ನಂತರದ ಎರಡನೇ ಆಯ್ಕೆ ಜೆಡಿಎಸ್ ಆಗಿತ್ತು ಮತ್ತು ಆಗಿದೆ. ಒಕ್ಕಲಿಗರು ಮಾತ್ರವಲ್ಲ ಕೆಲವು ಹಿಂದುಳಿದ ಸಮುದಾಯಗಳು ಜೆಡಿಎಸ್ ಜೊತೆಗಿದ್ದವು. ಆದರೆ ದೇವೇಗೌಡರ ಪುತ್ರ ವ್ಯಾಮೋಹ, ಸಿದ್ದರಾಮಯ್ಯನವರನ್ನು ಪಕ್ಷದಿಂದ ಹೊರದಬ್ಬುವಂತೆ ಮಾಡಿತು. ಜೊತೆಗೆ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕೆಂಬ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆ ಜೆಡಿಎಸ್ ಬಲ ಕುಗ್ಗಿಸಿ ಬಿಜೆಪಿ ಮನೆ ಬಾಗಿಲಿಗೆ ಹೋಗಿ ಅಂಗಲಾಚುವಂತೆ ಮಾಡಿದೆ.

ಜಾತ್ಯತೀತ ಜನತಾದಳ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸೋಲು, ಗೆಲುವುಗಳನ್ನು ತಾಳ್ಮೆಯಿಂದ ಸ್ವೀಕರಿಸಿ ಸಮಗ್ರ ಕರ್ನಾಟಕದ ಅಸ್ಮಿತೆಯನ್ನು ಪ್ರತಿನಿಧಿಸಿದ್ದರೆ, ಕುಟುಂಬ ರಾಜಕಾರಣದ ಆಚೆ ಬೆಳೆದಿದ್ದರೆ, ಮುಂದೊಂದು ದಿನ ಅದಕ್ಕೆ ಉತ್ತಮ ಭವಿಷ್ಯವಿತ್ತು. ಆದರೆ, ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಲೇಬೇಕೆಂಬ ಕುಮಾರಸ್ವಾಮಿ ಅವರ ಹಠ ದೇವೇಗೌಡರು ಕಟ್ಟಿದ ಪಕ್ಷವನ್ನು ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಲೆಕ್ಕಾಚಾರ ಉಲ್ಟಾ ಆಗಿರುವುದರಿಂದ ತೀವ್ರ ಹತಾಶರಾಗಿದ್ದಾರೆ. ಮೂರು ತಿಂಗಳ ಹಿಂದೆ ಚುನಾವಣೆಯಲ್ಲಿ ಯಾರನ್ನು ಕೋಮುವಾದಿ ಎಂದು ಹಿಯಾಳಿಸಿದ್ದರೋ ಅವರ ಜೊತೆಗೆ ಸೇರಲು ತವಕಿಸುತ್ತಿದ್ದಾರೆ. ಇದು ಎಲ್ಲಿಯವರೆಗೆ ಹೋಗಿದೆಯೆಂದರೆ ರಾಜ್ಯಪಾಲರಿಗೆ ಬಿಜೆಪಿ ಲೆಟರ್ ಹೆಡ್‌ನಲ್ಲಿ ಬರೆದ ಪತ್ರಕ್ಕೆ ಬಿಜೆಪಿ ಶಾಸಕರೊಂದಿಗೆ ಕುಮಾರಸ್ವಾಮಿ ಅವರೂ ಸಹಿ ಹಾಕಿದ್ದರು. ಇದರಿಂದ ತಮ್ಮ ರಾಜಕೀಯ ಭವಿಷ್ಯದ ಮೇಲೆ ಮತ್ತು ವಿಶ್ವಾಸಾರ್ಹತೆ ಮೇಲೆ ಎಂಥ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಅರಿವೂ ಅವರಿಗಿಲ್ಲ.

ಮೂರು ತಿಂಗಳ ಹಿಂದೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮಾತ್ರವಲ್ಲ ಆರೆಸ್ಸೆಸ್ ವಿರುದ್ಧ ಕೆಂಡ ಕಾರುತ್ತಿದ್ದ ಕುಮಾರಣ್ಣ ಅವರ ಭಾಷೆ ಬದಲಾಗಿದೆ. ಪ್ರಹ್ಲಾದ್ ಜೋಶಿಯವರನ್ನು ಪೇಶ್ವೆ ವಂಶಸ್ಥ ಎಂದು ಹೀಯಾಳಿಸಿದ್ದನ್ನು ಮರೆತಿದ್ದಾರೆ. ಚುನಾವಣಾ ಫಲಿತಾಂಶದ ಲೆಕ್ಕಾಚಾರ ತಪ್ಪಿದ ನಂತರ ಯಾರನ್ನು ಕೋಮುವಾದಿಗಳೆಂದು ಬೈಯುತ್ತಿದ್ದರೋ ಅವರ ಪಾಳೆಯ ಸೇರಿದ್ದಾರೆ. ರಾಜಕೀಯದಲ್ಲಿ ತಾಳ್ಮೆಯಿಂದ ಕಾಯ್ದರೆ ಅವಕಾಶಗಳು ಸಿಗುತ್ತವೆ ಎಂಬುದನ್ನು ಮರೆತಿದ್ದಾರೆ. ಅವರ ತಂದೆಯವರನ್ನು ಪ್ರಧಾನಿಯನ್ನಾಗಿ ಮಾಡಿದವರು ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ನವರು. ಜಾತ್ಯತೀತ ಹೆಸರು ಹೇಳಿಕೊಂಡು ಕುಮಾರಸ್ವಾಮಿ ಶಾಸಕರಾದರು. ಪತ್ನಿ ಅನಿತಾ ಅವರನ್ನು ಶಾಸಕರನ್ನಾಗಿ ಮಾಡಿದರು. ಆದರೂ ಸಮಾಧಾನವಿಲ್ಲ. ಈಗ ಬಿಜೆಪಿ ಜೊತೆ ಸೇರಲು ಹಾತೊರೆಯುತ್ತಿದ್ದಾರೆ. ಆದರೆ ಯಡಿಯೂರಪ್ಪನವರನ್ನೇ ಬಳಸಿಕೊಂಡು ಬಿಸಾಡಿದವರು ಕುಮಾರಸ್ವಾಮಿಯವರನ್ನು ಸುಮ್ಮನೇ ಬಿಡುತ್ತಾರೆಯೇ? ಆದರೆ, ಕರ್ನಾಟಕದ ಜನ ಮೂರ್ಖರಲ್ಲ ಎಂಬುದನ್ನು ಕುಮಾರಸ್ವಾಮಿ ಅರ್ಥಮಾಡಿಕೊಳ್ಳಲಿ.

ದೇವೇಗೌಡರ ಕುಟುಂಬ ವ್ಯಾಮೋಹ ಏನೇ ಇರಲಿ ಅವರು ಕೋಮುವಾದಿ ಅಲ್ಲ. ಬಹುತ್ವ ಭಾರತದ ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿದವರು. ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದಿದ್ದರೂ ಅದರ ಪ್ರಭಾವ ಅವರ ಮೇಲಿದೆ. 1996ರಲ್ಲಿ ಕಮ್ಯುನಿಸ್ಟ್ ನಾಯಕ ಜ್ಯೋತಿಬಸು ಅವರಿಗೆ ಪ್ರಧಾನಿಯಾಗುವ ಅವಕಾಶ ಬಂದಾಗ ತಮ್ಮ ಪಕ್ಷದ ತೀರ್ಮಾನದಂತೆ ಪ್ರಧಾನಿ ಸ್ಥಾನವನ್ನು ನಿರಾಕರಿಸಿ ಆ ಸ್ಥಾನಕ್ಕೆ ದೇವೇಗೌಡರ ಹೆಸರನ್ನು ಸೂಚಿಸಿದವರು ಜ್ಯೋತಿ ಬಸು ಅವರು. ಇದನ್ನು ದೇವೇಗೌಡರೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಕಳೆದ ವಿಧಾನಸಭಾ ಚುನಾವಣೆಯ ಹಿನ್ನೆಡೆಯಿಂದ ಹತಾಶರಾಗದೇ ಗಟ್ಟಿ ಮನಸ್ಸು ಮಾಡಿ ಕರ್ನಾಟಕದ ಕನ್ನಡಿಗರ ಆಶಯಗಳ ಪರವಾಗಿ ಧ್ವನಿಯೆತ್ತುತ್ತಾ ತಳ ಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೆ, ಕುಟುಂಬದ ಆಚೆಗೆ ಪಕ್ಷದ ನೆಲೆಯನ್ನು ವಿಸ್ತರಿಸಲು ದುಡಿದಿದ್ದರೆ ಮುಂದೊಮ್ಮೆ ರಾಷ್ಟ್ರೀಯ ಪಕ್ಷಗಳ ಬಗ್ಗೆ ಭ್ರಮ ನಿರಸನವಾದ ಜನರು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನತ್ತ ಒಲವು ತೋರಿಸಬಹುದಿತ್ತು. ಅದಕ್ಕಾಗಿ ಕಾಯುವ ತಾಳ್ಮೆ, ಸಹನೆಯನ್ನು ಕುಮಾರಸ್ವಾಮಿ ಅವರು ಕಳೆದುಕೊಂಡಿದ್ದಾರೆ. ಜೊತೆಗೆ ಮತ್ತೆ ಮೇಲೇಳುವ ಅವಕಾಶವನ್ನೂ ಕಳೆದುಕೊಂಡರು.

ಒಮ್ಮೆ ಎಡವಿದರೆ ಮುಗಿಯಿತು. ಕುಮಾರಸ್ವಾಮಿ ಅವರು ಕೂಡ ಬಸವರಾಜ ಬೊಮ್ಮಾಯಿಯವರಂತೆ ಆಡುತ್ತಾ ಬಂದ ಮಾತುಗಳನ್ನು ಬದಲಿಸಬೇಕಾಗುತ್ತದೆ. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ ಕ್ರಿಯೆಗೆ ಪ್ರತಿಕ್ರಿಯೆ ಎನ್ನಬೇಕಾಗುತ್ತದೆ. ಹಿಂದೆ ರಾಷ್ಟ್ರಪ್ರೇಮಿ ಎಂದು ಹೊಗಳಿದ್ದ ಟಿಪ್ಪುಸುಲ್ತಾನ್ ಅವರನ್ನು ಕ್ರೂರಿ, ಮತಾಂಧ ಎಂದು ಹೇಳಬೇಕಾಗುತ್ತದೆ. ಉರಿಗೌಡ ಮತ್ತು ನಂಜೇಗೌಡರು ಎಂಬ ದೇಶ ಭಕ್ತರು ಟಿಪ್ಪುವನ್ನು ಕೊಂದರು ಎಂದು ನುಡಿಯಬೇಕಾಗುತ್ತದೆ. ತಾವು ಅಧಿಕಾರದಲ್ಲಿ ಇದ್ದಾಗ ಮುಸಲ್ಮಾನರಿಗೆ ನೀಡಿದ್ದ ಮೀಸಲಾತಿ ತಪ್ಪು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ಕೋಮುವಾದಿಗಳ ಪರಿಕಲ್ಪನೆಯ ಮನುವಾದಿ ಹಿಂದೂ ರಾಷ್ಟ್ರದ ಪರವಾಗಿ ನಿಲ್ಲಬೇಕಾಗುತ್ತದೆ.

ಅನೈತಿಕ ಪೊಲೀಸಗಿರಿಯನ್ನು ಸಮರ್ಥಿಸಬೇಕಾಗುತ್ತದೆ. ಲವ್ ಜಿಹಾದ್ ಎಂಬ ಕೋಮುವಾದಿಗಳ ಕಟ್ಟುಕತೆಗಳಿಗೆ ಧ್ವನಿ ನೀಡಬೇಕಾಗುತ್ತದೆ. ಏಕ ರಾಷ್ಟ್ರ, ಏಕ ಭಾಷೆಯ ಹೆಸರಿನಲ್ಲಿ ಹಿಂದಿ ಹೇರಿಕೆ ಬೆಂಬಲಿಸಬೇಕಾಗುತ್ತದೆ ಹೀಗಾದಾಗ ಕರ್ನಾಟಕದ, ಕನ್ನಡಿಗರ ಹಿತಾಸಕ್ತಿಗಳಿಗೆ ಎಳ್ಳುನೀರು ಬಿಟ್ಟು ಸಂಘಪರಿವಾರದ ನಾಗಪುರದ ಗುರುಗಳಿಗೆ ಶರಣಾಗತ ಆಗಬೇಕಾಗುತ್ತದೆ. ಇದು ಕುಮಾರಣ್ಣನವರ ಇಂದಿನ ದುರವಸ್ಥೆ.

ಬಿಜೆಪಿ ಜೊತೆಗೆ ಮೈತ್ರಿ ಇಲ್ಲವೇ ಹೊಂದಾಣಿಕೆ ಮಾಡಿಕೊಂಡ ಯಾವ ಪ್ರಾದೇಶಿಕ ಪಕ್ಷವೂ ಸುರಕ್ಷಿತವಾಗಿ ಉಳಿದಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಮಹಾರಾಷ್ಟ್ರದ ಶಿವಸೇನೆ. ತಾತ್ವಿಕವಾಗಿಯೂ ಬಿಜೆಪಿಗೆ ಹತ್ತಿರವಾಗಿದ್ದ ಶಿವಸೇನೆಯಲ್ಲಿ ಏಕನಾಥ್ ಶಿಂಧೆಯನ್ನು ಸೃಷ್ಟಿಸಿ ಪಕ್ಷವನ್ನೇ ಇಬ್ಭಾಗ ಮಾಡಲಾಯಿತು. ಕುಮಾರಸ್ವಾಮಿ ದುಡುಕಿ ತರಾತುರಿಯಲ್ಲಿ ನಿರ್ಣಯ ಕೈಗೊಂಡರೆ ಮುಂದೊಂದು ದಿನ ಅವರ ಪಕ್ಷದ ಅಸ್ತಿತ್ವವೇ ಇರುವುದಿಲ್ಲ. ಇನ್ನ್ನೂ ಕಾಲ ಮಿಂಚಿಲ್ಲ. ಸಹನೆ, ಸಮಾಧಾನದಿಂದ ಜನಸಾಮಾನ್ಯರ ನಡುವೆ ಕೆಲಸ ಮಾಡಿದರೆ ಜೆಡಿಎಸ್ ಗೆ ಅವಕಾಶವಿದೆ. ಬಹುತ್ವ ಭಾರತದ ಉಳಿವಿಗೆ ಪ್ರಾದೇಶಿಕ ಪಕ್ಷಗಳೂ ಬೇಕು. ಇದನ್ನು ದೇವೇಗೌಡರು ಸೇರಿದಂತೆ ಜೆಡಿಎಸ್ ನಾಯಕರು ಅರ್ಥ ಮಾಡಿಕೊಳ್ಳಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸನತ್ ಕುಮಾರ ಬೆಳಗಲಿ

contributor

Similar News