ಸಂವಿಧಾನದ ಬೆಳಕು ಎಲ್ಲೆಡೆ ವ್ಯಾಪಿಸಲಿ

Update: 2024-02-26 04:07 GMT

ಇಂದು ಸಂವಿಧಾನ ಸಮರ್ಪಣಾ ದಿನ. ಸ್ವತಂತ್ರ ಭಾರತ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳಾದವು. ಇದು ಅಮೃತ ಮಹೋತ್ಸವದ ಸಂಭ್ರಮದ ವರ್ಷ. ಆದರೆ ಭಾರತಕ್ಕೆ ಬೆಳಕನ್ನು ನೀಡಿ ಮುನ್ನಡೆಸಿದ ಸಂವಿಧಾನ ಈಗ ಬಿರುಗಾಳಿಗೆ ಸಿಲುಕಿದೆ. 12ನೇ ಶತಮಾನದ ವಚನ ಚಳವಳಿ ಮತ್ತು ಅದಕ್ಕಿಂತ ಹಿಂದಿನ ಬೌದ್ಧ, ಜೈನ್, ಚಾರ್ವಾಕ, ಲೋಕಾಯತರ ಬೆಳಕಿನ ಜ್ಯೋತಿಗಳನ್ನು ನಂದಿಸುತ್ತ ಬಂದ ಜೀವ ವಿರೋಧಿ ಮನುವಾದಿ ಶಕ್ತಿಗಳು ಜಾಗತೀಕರಣದ ಕಾಲದಲ್ಲಿ ಮರುಜೀವ ಪಡೆದಿವೆ.

ಹಿಂದಿನ ವೈಚಾರಿಕ ಪರಂಪರೆಗಳನ್ನು ನಾಶ ಮಾಡಿದಂತೆ, ಸರ್ವರಿಗೂ ಸಮಾನಾವಕಾಶ ನೀಡಿದ ಸಂವಿಧಾನದ ಚಟ್ಟ ಕಟ್ಟಲು ಮಸಲತ್ತು ನಡೆದಿದೆ. ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಈ ಸಂವಿಧಾನ ಬಹುತ್ವ ಭಾರತದ ಬುನಾದಿ. ಸ್ವಾತಂತ್ರ್ಯ ನಂತರ ಈ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಂಡು ಬಂದ ಈ ಸಂವಿಧಾನ ಕಾಪಾಡುವುದು ಇಂದು ನಮ್ಮೆಲ್ಲರ ಹೊಣೆ. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1949ರ ಜನವರಿ 26 ರಂದು ಸಂವಿಧಾನ ರಚನಾ ಸಭೆಯಲ್ಲಿ ನೀಡಿದ ಎಚ್ಚರಿಕೆ ಮತ್ತು ವ್ಯಕ್ತಪಡಿಸಿದ ಆತಂಕಗಳು ನಾವೀಗ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ. ‘ಜಾತಿ, ಮತ, ಪಂಥಗಳು ಭಾರತದ ಹಳೆಯ ಶತ್ರುಗಳು. ಇವುಗಳ ಜೊತೆಗೆ ವಿಭಿನ್ನ ಸೈದ್ಧಾಂತಿಕ ಹಿನ್ನೆಲೆಯ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬರಲಿವೆ. ಇವೆಲ್ಲ ಮುಂಬರುವ ದಿನಗಳಲ್ಲಿ ಭಾರತದ ಭದ್ರತೆ, ಏಕತೆ, ಬಹುತ್ವ, ಪ್ರಗತಿ ಇವೆಲ್ಲವು ಕಡೆಗಣಿಸಿ ತಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ದೇಶದ ಮೇಲೆ ಹೇರಲಿವೆಯೇ ಎಂಬ ಆತಂಕ ಕಾಡುತ್ತಿದೆ. ತಮ್ಮ ಪಕ್ಷದ ಸಿದ್ಧಾಂತಗಳಿಗಿಂತ ಭಾರತದ ಏಕತೆ, ಭದ್ರತೆಗಳನ್ನು ಮುಖ್ಯವಾಗಿ ಪರಿಗಣಿಸುವವೇ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.

ಸಂವಿಧಾನದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಾಬಾಸಾಹೇಬರು ‘ಸ್ವತಂತ್ರ ಭಾರತದಲ್ಲಿ ರಾಜಕೀಯ ಪಕ್ಷಗಳು ಬಹುತ್ವ ಭಾರತದ ಏಕತೆ, ಭದ್ರತೆ ಮತ್ತು ಪ್ರಗತಿಗಿಂತ ತಮ್ಮ ಕಾರ್ಯಸೂಚಿ, ಸಿದ್ಧಾಂತಗಳನ್ನು ಮಹತ್ವ ಎಂದು ಪರಿಗಣಿಸಿದಲ್ಲಿ ನಾವು ಮತ್ತೊಮ್ಮೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ಕಳೆದುಕೊಂಡ ಸ್ವಾತಂತ್ರ್ಯವನ್ನು ಇನ್ನೆಂದೂ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಕೊನೆಯ ಹನಿ ರಕ್ತ ಇರುವವರೆಗೆ ಈ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ನಾವು ಜೀವನ್ಮರಣದ ಹೋರಾಟ ಮಾಡಬೇಕಿದೆ’ ಎಂದಿದ್ದರು.

ಸ್ವಾತಂತ್ರ್ಯಾ ನಂತರ ಮೂರು ದಶಕದವರೆಗೆ ಸಂವಿಧಾನ ಸುರಕ್ಷಿತವಾಗಿ ಇತ್ತು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಅತ್ಯಂತ ಎಚ್ಚರದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸಿದವು. ಆದರೆ, ಈಗೇನಾಗಿದೆ? ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಅದೇ ಸಂವಿಧಾನವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ನಡೆಸಿರುವ ಅವಾಂತರ ಎಲ್ಲರಿಗೂ ಗೊತ್ತಿದೆ. ಕೋಟಿ, ಕೋಟಿ ಲೂಟಿ ಮಾಡಿದವರು ತಮ್ಮ ಹಗರಣಗಳನ್ನು ದಕ್ಕಿಸಿಕೊಳ್ಳಲು ದೇವರು, ಧರ್ಮದ ಮೊರೆ ಹೋಗುತ್ತಿದ್ದಾರೆ. ಇಂಥ ಅಪಾಯಕಾರಿ ವ್ಯಕ್ತಿಗಳು ಮತ್ತು ಅವರ ಸಂಘಟನೆಗಳಿಂದ ಸಂವಿಧಾನದ ಬದಲಾವಣೆಯ ಮಾತು ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಯಾವುದೋ ಒಂದು ಧರ್ಮದ ಹೆಸರಿನಲ್ಲಿ ರಾಷ್ಟ್ರವನ್ನು ನಿರ್ಮಿಸುವ ಕರ್ಕಶದ ಧ್ವನಿಗಳು ಕೇಳುತ್ತಿವೆ.

ಭಾರತ ಎಂಬುದು ಯುರೋಪಿನ ದೇಶಗಳಂತೆ ಯಾವುದೇ ಒಂದು ಧರ್ಮ ಮತ್ತು ಸಮುದಾಯಗಳು ನೆಲೆಸಿರುವ ದೇಶವಲ್ಲ. ಇದು ವಿಭಿನ್ನ ಜಾತಿ, ಮತ, ಜನಾಂಗ, ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳಿಂದ ಕೂಡಿದ ಒಕ್ಕೂಟ. ನಮ್ಮ ಸಂವಿಧಾನ ನಿರ್ಮಾಪಕರು ಈ ಬಹುತ್ವ ಭಾರತವನ್ನು ನಿರಂತರವಾಗಿ ಕಾಪಾಡಲು ಹೋಗುವ ಸಂವಿಧಾನ ಎಂಬ ಬೆಳಕನ್ನು ನೀಡಿ ಹೋದರು. ಆದರೆ, ಐದು ಸಾವಿರ ವರ್ಷ ಭಾರತವನ್ನು ಕಾರ್ಗತ್ತಲ ಕೂಪಕ್ಕೆ ತಳ್ಳಿದ ಶಕ್ತಿಗಳು ಸಂವಿಧಾನದ ಈ ಬೆಳಕನ್ನು ನಂದಿಸಲು ಹುನ್ನಾರ ನಡೆಸಿವೆ.

‘ಭಾರತದ ಸಮಾಜ ಪ್ರಜಾಪ್ರಭುತ್ವವಾಗದೇ, ಬರೀ ರಾಜಕೀಯ ಪ್ರಜಾಪ್ರಭುತ್ವದಿಂದ ಪ್ರಯೋಜನವಿಲ್ಲ’ ಎಂದು ಅಂಬೇಡ್ಕರ್ ಅವರು ಆಗ ಹೇಳಿದ ಮಾತು ಮತ್ತೆ ಮತ್ತೆ ನೆನಪಾಗುತ್ತಿದೆ. ಸ್ವಾತಂತ್ರ್ಯದ ಏಳು ದಶಕಗಳ ನಂತರ ಪ್ರಜಾಪ್ರಭುತ್ವದ ಆಧುನಿಕ ಆಲೋಚನೆಗಳಿಗೆ ಮತ್ತು ಸಂವಿಧಾನದ ಜೀವಪರ ಆಶಯಗಳಿಗೆ ಸ್ಪಂದಿಸಬೇಕಿದ್ದ ಭಾರತೀಯ ಸಮಾಜ ಅದರಲ್ಲೂ ಯುವ ಪೀಳಿಗೆ ಮತಾಂಧತೆಯ ಕೂಪದಲ್ಲಿ ಬಿದ್ದು ಉರುಳಾಡುತ್ತಿದೆ. ಇತ್ತೀಚಿನ ದೇಶದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬಾಬಾಸಾಹೇಬರು ಆಗ ವ್ಯಕ್ತಪಡಿಸಿದ ಆತಂಕ ನಿಜವಾಗುವುದೇ ಎಂದೆನಿಸುತ್ತದೆ.

ವೈವಿಧ್ಯತೆ ಭಾರತದ ಜೀವಾಳ. ಆದರೆ, ಕಳೆದ ಎರಡು ದಶಕಗಳಿಂದ ‘ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿ, ಏಕ ಪಕ್ಷ, ಏಕ ನಾಯಕ ಎಂಬ ಕೂಗು ಕೇಳಿ ಬರುತ್ತಿದೆ. ನಮ್ಮ ಜನರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳಿಗಿಂತ ತಮ್ಮ ಮತ ಧರ್ಮಗಳು ಮುಖ್ಯವಾಗಿರುವಂತೆ ಕಾಣುತ್ತಿದೆ. ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದವರ ಬಾಯಿಯಿಂದಲೇ ‘ಹಿಂದೂ ರಾಷ್ಟ್ರ’ ನಿರ್ಮಾಣದ ಘೋಷಣೆಗಳು ಕೇಳಿ ಬರುತ್ತವೆ. ಇದರ ಅರ್ಥವಿಷ್ಟೆ ಈಗಿರುವ ಸಂವಿಧಾನವನ್ನು ಕಿತ್ತು ಬಿಸಾಡಿ ಪ್ರಜಾಪ್ರಭುತ್ವದ ಸಮಾಧಿಯ ಮೇಲೆ ಹಿಂದೂರಾಷ್ಟ್ರ ನಿರ್ಮಾಣದ ಮಸಲತ್ತುಗಳು ನಡೆಯುತ್ತಿವೆ.

ಭಾರತ ಸ್ವತಂತ್ರಗೊಂಡು ಸಂವಿಧಾನ ಬರುವ ಮೊದಲು ಭಾರತ ಹೇಗಿತ್ತು ಎಂಬುದನ್ನು ವಿವರಿಸಬೇಕಿಲ್ಲ. ಇಲ್ಲಿ ಶ್ರೇಣೀಕೃತ ಜಾತಿ ಪದ್ಧತಿ ಬಲಿಷ್ಠವಾಗಿತ್ತು. ಅಸ್ಪಶ್ಯತೆಯ ನಗ್ನ ತಾಂಡವ ನೃತ್ಯವಿತ್ತು. ತುಳಿಯುವ ವರ್ಗವನ್ನು ಕಾಪಾಡುವ ನ್ಯಾಯವ್ಯವಸ್ಥೆ ಇತ್ತು. ತಳ ಸಮುದಾಗಳಿಗೆ ಅಕ್ಷರ ಜಗತ್ತಿನಿಂದ ದೂರವಿಡುವ ಗುರುಕುಲ ಪದ್ಧತಿ ಇತ್ತು. ಹೆಣ್ಣು ಮಕ್ಕಳು ಅಡುಗೆಯ ಮನೆಯಿಂದ ಹೊರಗೆ ಬರುವಂತೆ ಇರಲಿಲ್ಲ. ಇದನ್ನು ಪ್ರತಿರೋಧಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಸಂವಿಧಾನ ಬಂದ ನಂತರ ಇದೆಲ್ಲ ಕ್ರಮೇಣ ಬದಲಾಗತೊಡಗಿತು.ಅವಕಾಶ ವಂಚಿತ ಲೋಕದ ಪ್ರತಿಭಾವಂತರು ಮುನ್ನೆಲೆಗೆ ಬಂದರು.ಈ ಬದಲಾವಣೆಯನ್ನು ಇಷ್ಟ ಪಡದವರು ಧರ್ಮ ರಕ್ಷಣೆಯ ಹೊಸ ವೇಷ ಹಾಕಿಕೊಂಡು ಬಂದಿದ್ದಾರೆ.

ಅಸ್ಪಶ್ಯತೆ, ಅಸಮಾನತೆ ಮುಂದುವರಿಯಬೇಕೆಂದು ಬಯಸುವವರು ಈಗ ತಮ್ಮ ವರಸೆ ಬದಲಿಸಿ ಹಿಂದುತ್ವದ ಸೋಗು ಹಾಕಿಕೊಂಡು ಬಂದಿದ್ದಾರೆ. ನಮ್ಮ ಸಂವಿಧಾನದ ಮೂಲತತ್ವವಾದ ಧರ್ಮನಿರಪೇಕ್ಷತೆಯ ಮೇಲೆ ದಾಳಿ ಆರಂಭಿಸಿದ್ದಾರೆ. ಯಾರು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಯಾವ ಬಟ್ಟೆಯನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂದು ಆದೇಶ ಹೊರಡಿಸತೊಡಗಿದ್ದಾರೆ. ರಾಜಕೀಯ ಅಧಿಕಾರವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಚುನಾವಣಾ ಆಯೋಗ, ತನಿಖಾ ಸಂಸ್ಥೆಗಳು ಮಾತ್ರವಲ್ಲ ನ್ಯಾಯಾಂಗದಂಥ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿರೋಧ ವ್ಯಕ್ತಪಡಿಸುವವರನ್ನು ಹತ್ತಿಕ್ಕುತ್ತಿದ್ದಾರೆ.

ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವುದು ನಮ್ಮ ಸಂವಿಧಾನದ ಗುರಿ. ಕಲ್ಯಾಣ ರಾಜ್ಯವೆಂದರೆ ಜನಸಾಮಾನ್ಯರಿಗೆ ಆಹಾರ, ಕುಡಿಯುವ ನೀರು,ಉದ್ಯೋಗ, ಉಚಿತ ಶಿಕ್ಷಣ, ಆರೋಗ್ಯ ಸೌಕರ್ಯಗಳನ್ನು ಕಲ್ಪಿಸುವುದು. ಆದರೆ, ಈಗ ಅಧಿಕಾರದಲ್ಲಿವವರ ಆದ್ಯತೆ ಇದಲ್ಲ. ಬೃಹತ್ ಕಾರ್ಪೊರೇಟ್ ಕಂಪೆನಿಗಳ ಲಕ್ಷಾಂತರ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದವರು ಜನರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳು ಗೊತ್ತಾಗದಂತೆ ಮರೆಮಾಚಲು ಮಂದಿರ ನಿರ್ಮಾಣದಂಥ ಸರಕಾರಕ್ಕೆ ಸಂಬಂಧಿಸದ ಕೆಲಸದಲ್ಲಿ ತೊಡಗಿದ್ದಾರೆ.

ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುವ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಅತ್ಯಂತ ವೈವಿಧ್ಯಪೂರ್ಣವಾದ ಬಹುಧರ್ಮೀಯ, ಬಹು ಜನಾಂಗೀಯ, ಬಹು ಭಾಷಿಕ, ಬಹು ಸಂಸ್ಕೃತಿ ಮತ್ತು ಬಹುರಾಷ್ಟ್ರೀಯತೆಗಳನ್ನು ಒಳಗೊಂಡ ಈ ಭೂ ಪ್ರದೇಶಕ್ಕೆ ಅತ್ಯಂತ ಸೂಕ್ತವಾದ ಎಲ್ಲ ಜನರ ಭಾವನೆಗಳನ್ನು ಗೌರವಿಸುವ ಸಂವಿಧಾನವಿದು. ನಮ್ಮ ಆಧುನಿಕ ಭಾರತಕ್ಕೆ ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ. ದೇಶದ 140 ಕೋಟಿ ಜನ ಒಪ್ಪಿದ ಇದನ್ನು ಪ್ರಶ್ನಿಸುವ ಯಾವುದೇ ಧರ್ಮವಿರಲಿ, ಧರ್ಮ ಗುರುವಿರಲಿ, ಸಂಘಟನೆ ಇರಲಿ ಅವರ ಆಟ ಬಹಳ ದಿನ ನಡೆಯುವುದಿಲ್ಲ.

ಭಾರತವೆಂದರೆ ಯಾವುದೇ ಒಂದು ಮತಧರ್ಮಕ್ಕೆ, ಜನಾಂಗಕ್ಕೆ ಸೇರಿದ ದೇಶವಲ್ಲ.ಇಲ್ಲಿ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಯಾವುದೇ ಮತಧರ್ಮಕ್ಕೆ ಸೇರದ ಆದಿವಾಸಿಗಳು, ಆಸ್ತಿಕರು, ನಾಸ್ತಿಕರು ಎಲ್ಲರೂ ಇದ್ದಾರೆ. ಇದೊಂದು ವೈವಿಧ್ಯಮಯ ಸುಂದರ ಭೂ ಪ್ರದೇಶ. ಜಗತ್ತಿನಲ್ಲಿ ಹುಡುಕಿದರೂ ಇಂಥ ದೇಶ ಸಿಗುವುದಿಲ್ಲ. ಇದು ಸರ್ವ ಜನಾಂಗದ ಶಾಂತಿಯ ತೋಟ. ಅಂತಲೇ ಇದಕ್ಕೆ ಪೂರಕವಾದ ಸಂವಿಧಾನ ಇಲ್ಲಿದೆ. ಅದಕ್ಕೆ ಯಾರಿಂದಲೂ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ. ಇದೇ ನಮ್ಮೆಲ್ಲರ ಮುಖ್ಯ ಕರ್ತವ್ಯ.

ಕರ್ನಾಟಕ ಸರಕಾರ ಸಂವಿಧಾನ ಜಾಥಾ ಮೂಲಕ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಿದೆ. ಇದು ಮೊದಲೇ ಆಗಬೇಕಾಗಿತ್ತು. ತಡವಾಗಿಯಾದರೂ ಮಾಡಿದ್ದು ಸ್ವಾಗತಾರ್ಹ ಕ್ರಮ. ಇದಿಷ್ಟೇ ಸಾಲದು. ಶಾಲಾ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪಾಠಗಳಿರಲಿ. ಸಂವಿಧಾನದ ಮಹತ್ವದ ಬಗ್ಗೆ ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಿ. ಭಾರತದ ಶತಮಾನದ ಕಾರ್ಗತ್ತಲನ್ನು ತೊಲಗಿಸಿ ಸಂವಿಧಾನದ ಸೂರ್ಯ ಪ್ರಜ್ವಲಿಸಲಿ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಸನತ್‌ ಕುಮಾರ ಬೆಳಗಲಿ

contributor

Similar News