×
Ad

ರಾಯಚೂರು: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ 'ನ್ಯಾಯಕ್ಕಾಗಿ ಜನಾಗ್ರಹ' ದಿನಾಚರಣೆ

ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು, ಅಸಹಜ ಸಾವು ಪ್ರಕರಣಗಳ ತನಿಖೆಗೆ ಆಗ್ರಹಿಸಿ ಧರಣಿ

Update: 2025-10-09 14:53 IST

ರಾಯಚೂರು: ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಕೊಲೆ ಅತ್ಯಾಚಾರ, ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು ಹಾಗೂ ಧರ್ಮಸ್ಥಳದಲ್ಲಿ ದಾಖಲಾದ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರ, ಭೂ ಹಗರಣ, ದಲಿತರಿಗೆ ಸೇರಿದ ಭೂಮಿಯ ಕಬಳಿಕೆ, ಬಡ್ಡಿ ದಂಧೆಯ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ 'ನ್ಯಾಯಕ್ಕಾಗಿ ಜನಾಗ್ರಹ' ಧರಣಿಯು ರಾಯಚೂರು ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಗುರುವಾರ ನಡೆಯಿತು.

 

ಸೌಜನ್ಯಾ ಕೊಲೆಯಾಗಿ ಅಕ್ಟೋಬರ್ 9ಕ್ಕೆ 13 ವರ್ಷಗಳಾಗುತ್ತಿದ್ದು, ಇನ್ನೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿರುವುದು ಖಂಡನೀಯ. 2012ರ ಅಕ್ಟೋಬರ್ 9ರಂದು ಧರ್ಮಸ್ಥಳದ ಪಾಂಗಳ ನಿವಾಸಿಯಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ 17 ವರ್ಷ ಪ್ರಾಯದ ಸೌಜನ್ಯಾ ಅತ್ಯಾಚಾರ-ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 13 ವರ್ಷಗಳಾದರೂ ಸೌಜನ್ಯ ಅತ್ಯಾಚಾರಿ-ಹಂತಕರಾದ ನೈಜ ಆರೋಪಿಗಳನ್ನು ಬಂಧಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

 

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ, ಪ್ರಕರಣದ ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ’ ಎಂಬ ವಿಶೇಷ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಬೇಕು. ‘ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಖುಲಾಸೆ ಸಮಿತಿಯ ಮುಂದೆ ಇಡಲು ಇದು ಸೂಕ್ತವಾದ ಪ್ರಕರಣವಾಗಿದೆ’ ಎಂಬ ನ್ಯಾಯಾಲಯದ ಆದೇಶ ಜಾರಿಯಾಗಬೇಕು.

ವಿಶೇಷ ನ್ಯಾಯಾಲಯವು ಗುರುತಿಸಿದಂತೆ ‘ಸೌಜನ್ಯಾ ಅತ್ಯಾಚಾರ-ಕೊಲೆಯ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸದ, ಘಟನಾ ಸ್ಥಳದಿಂದ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸದೇ ಸಾಕ್ಷ್ಯ ನಾಶ ಮಾಡಿದ ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸೌಜನ್ಯಾ ಅತ್ಯಾಚಾರ-ಕೊಲೆಯ ನೈಜ ಆರೋಪಿಗಳನ್ನು ಬಂಧಿಸಲು ಸೂಕ್ತ ರೀತಿಯ ಕ್ರಮ, ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಮೃತದೇಹ ಹೂತಿಟ್ಟ ಪ್ರಕರಣ, ನೂರಾರು ಹುಡುಗಿಯರ ನಾಪತ್ತೆ ಪ್ರಕರಣವನ್ನು ಭೇದಿಸಲು ಎಸ್.ಐಟಿ ರಚಿಸಿದ್ದು, ಅದರಂತೆ ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾದ ಪ್ರಕರಣಗಳ ತನಿಖೆಯನ್ನು ಎಸ್.ಐ.ಟಿ. ನಡೆಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಬಿಜೆಪಿ ಹಾಗೂ ಪಟ್ಟಭದ್ರ ಶಕ್ತಿಗಳು ಎಸ್ಐಟಿ, ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಎಸ್ ಐಟಿ ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮೆಟಿಸುವ ಯತ್ನವೂ ಆಗುತ್ತಿದೆ. ಇವೆಲ್ಲ ಪಿತೂರಿಯನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು.

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಗ್ರಾಮೀಣ ಭಾಗದಲ್ಲಿ ಶ್ರಮಿಕ ಜನರ, ಕೂಲಿಕಾರರ, ಸಣ್ಣ ರೈತರು ಸೇರಿದಂತೆ ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ಹೋರಾಟಗಾರ ಕೆ.ಜಿ.ವೀರೇಶ, ಎಚ್.ಪದ್ಮಾ, ವರಲಕ್ಷ್ಮೀ, ಡಿ.ಎಸ್.ಶರಣಬಸವ, ಬಂಡಾಯ ಸಾಹಿತಿ ಆಂಜನೇಯ ಜಾಲಬೆಂಚಿ, ಶ್ರೀನಿವಾಸ ಕಲವಲದೊಡ್ಡಿ, ಬಶೀರ್ ಅಹ್ಮದ್ ಅಹ್ಮದ್ ಹೊಸಮನಿ, ಜೆ.ತಾಯಮ್ಮ, ಸಾಜಿದ್ ಹುಸೀನ್ ಮತ್ತಿತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News