×
Ad

ಮೇ 26ರಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ : ಡಾ.ಎಂ.ಹನುಮಂತಪ್ಪ

Update: 2025-05-24 19:17 IST

ರಾಯಚೂರು : ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮೇ 26ರ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆಯಲಿದ್ದು, ರಾಜ್ಯಪಾಲರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಹೇಳಿದರು.

ಮೇ 24ರ ಶನಿವಾರದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಂದು ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಘಟಿಕೋತ್ಸವದ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಹಾಗೂ ಘಟಿಕೋತ್ಸವ ಭಾಷಣ ಮಾಡಲು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಗೌರವಾನ್ವಿತ ಮಹಾಕಾರ್ಯದರ್ಶಿಗಳಾದ ಡಾ.ಪಂಕಜ ಮಿತ್ತಲ್ ಅವರು ಆಗಮಿಸುತ್ತಿದ್ದಾರೆ. ಜೊತೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಗೌರವಾನ್ವಿತ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಪದವಿ ಪುರಸ್ಕೃತ ವಿದ್ಯಾರ್ಥಿಗಳು ಮತ್ತು ಪೋಷಕರು, ಗಣ್ಯರು, ಹಿತೈಷಿಗಳು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿರುವರು ಎಂದರು.

ಕೃಷಿಯಲ್ಲಿ ಸ್ನಾತಕ ಪದವಿಯನ್ನು ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ ಮತ್ತು ಹಗರಿಗಳಲ್ಲಿ ಸ್ಥಾಪಿತವಾದ ಮಹಾವಿದ್ಯಾಲಯಗಳಲ್ಲಿ ನಡೆಸಲಾಗುತ್ತಿದೆ. ಕೃಷಿ ತಾಂತ್ರಿಕ ಸ್ನಾತಕ ಪದವಿಯನ್ನು ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಭ್ಯಸಿಸಲಾಗುತ್ತಿದೆ. ರಾಯಚೂರು ಆವರಣದ ವಿವಿಧ ವಿಭಾಗಗಳಲ್ಲಿ 15 ಸ್ನಾತಕೋತ್ತರ ಹಾಗೂ 14 ಪಿ.ಹೆಚ್.ಡಿ ಪದವಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ.

2022-23ನೇ ಸಾಲಿನಲ್ಲಿ 464 ವಿದ್ಯಾರ್ಥಿಗಳು ಪ್ರವೇಶ :

ವಿವಿಯಲ್ಲಿ 2022-23ನೇ ಸಾಲಿನಲ್ಲಿ ಸ್ನಾತಕ ಪದವಿಗೆ 216 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 464 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಕೃಷಿ ಪದವಿಗೆ 387 ವಿದ್ಯಾರ್ಥಿಗಳು, ಬಿ.ಟೆಕ್ ಕೃಷಿ ತಾಂತ್ರಿಕ ಪದವಿಗೆ ಒಟ್ಟು 77 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಲ್ಲದೇ ಸ್ನಾತಕೋತ್ತರ ಪದವಿಗಳಿಗೆ 132, ಪಿ.ಹೆಚ್.ಡಿ ಕೋರ್ಸಗಳಿಗೆ 43 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅದರಲ್ಲಿ ಒಟ್ಟು 82 ವಿದ್ಯಾರ್ಥಿನಿಯರು ಪ್ರವೇಶ ಪಡೆದಿರುತ್ತಾರೆ. ಕೃಷಿ ಡಿಪ್ಲೋಮಾ ಅಧ್ಯಯನಕ್ಕೆ 77 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು.

ಸ್ನಾತಕ ಪದವಿ ಯೋಜನೆಯಲ್ಲಿ 65 ವಿದ್ಯಾರ್ಥಿಗಳಿಗೆ ಕೃವಿವಿಯ ಮೆರಿಟ್ ಹಾಗೂ 17 ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಷ್ಯವೇತನ ದೊರೆತಿದೆ. ಸ್ನಾತಕೋತ್ತರ ವಿಭಾಗದಲ್ಲಿ 50 ವಿದ್ಯಾರ್ಥಿಗಳು ಕೃವಿವಿ ಮೆರಿಟ್ ಶಿಷ್ಯವೇತನಗಳನ್ನೂ ಮತ್ತು 174 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರೋತ್ಸಾಹಕ ಶಿಷ್ಯವೇತನಗಳನ್ನು, 3 ವಿದ್ಯಾರ್ಥಿಗಳು ರಾಜೀವ್ ಗಾಂಧಿ ಫೆಲೋಶಿಫ್‌ಗಳನ್ನೂ, 3 ವಿದ್ಯಾರ್ಥಿಗಳು ಯುಜಿಸಿ, ಎನ್‌ಇಟಿ, ಜೆಆರ್‌ಎಫ್ ಶಿಷ್ಯವೇತನವನ್ನು ಪಡೆದಿರುತ್ತಾರೆ. 3 ವಿದ್ಯಾರ್ಥಿಗಳು ಕೃಷಿ ನೇಮಕಾತಿ ಸೇವಾ ಪರೀಕ್ಷೆಯಲ್ಲಿ ಮತ್ತು 37 ವಿದ್ಯಾರ್ಥಿಗಳು ರಾಷ್ಟೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದರು.

39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ :

ಕೃಷಿ ವಿವಿಯ 14ನೇ ಘಟಿಕೋತ್ಸವದಲ್ಲಿ 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ ವಿದ್ಯಾರ್ಥಿನಿಯರು 152 ಸ್ನಾತಕ ಪದವಿ, 62 ಸ್ನಾತಕೋತ್ತರ ಪದವಿ ಹಾಗೂ 19 ಡಾಕ್ಟರೇಟ್ ಪದವಿಗಳನ್ನು ಹೊಂದುತ್ತಿದ್ದು, ಸ್ನಾತಕ ಪದವಿಯಲ್ಲಿ 27 ಚಿನ್ನದ ಪದಕಗಳನ್ನು ಮತ್ತು 2 ಸ್ನಾತಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವಿಯಲ್ಲಿ 17 ಚಿನ್ನದ ಪದಕಗಳನ್ನು ಹಾಗೂ 15 ಚಿನ್ನದ ಪದಕಗಳನ್ನು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ. ಈ ಘಟಿಕೋತ್ಸವದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಉತ್ಕೃಷ್ಠ ಸಾಧನೆ ಮಾಡಿದ ಒಬ್ಬ ರೈತರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದರು.

ಪ್ರಮುಖವಾಗಿ ಭತ್ತದಲ್ಲಿ ಪೌಷ್ಠಿಕಾಂಶ ಬಲವರ್ಧಿತ ತಳಿಯಾದ ಜಿಎನ್‌ವಿ-1109ಯು ಈ ಭಾಗದಲ್ಲಿ ತಲೆದೋರಿರುವ ಅಪೌಷ್ಠಕತೆಯನ್ನು ಹೋಗಲಾಡಿಸುವ ಆಶಾಭಾವನೆಯನ್ನು ಹೊಂದಿದೆ. ಕೊರಲೆ ಬೆಳೆಯಲ್ಲಿ ಹೆಚ್‌ಬಿಆರ್-2, ಶೇಂಗಾದಲ್ಲಿ ಐಸಿಆರ್‌ಸಿ-1 ತಳಿಗಳು ಬಿಡುಗಡೆಗೊಂಡಿದ್ದು, ಬೆಳೆಗಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

2022-23ನೇ ಸಾಲಿನಲ್ಲಿ ಒಟ್ಟು 7,292 ಕ್ವಿಂಟಲ್ ಪ್ರಮಾಣೀಕರಿಸಿದ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸಿದೆ. ಅಲ್ಲದೇ ವಿಶ್ವವಿದ್ಯಾಲಯವು 67,965 ಕೆ.ಜಿ ಜೈವಿಕ ಪರಿಕರ ಮತ್ತು ಸಾವಯವ ಗೊಬ್ಬರಗಳನ್ನು ಉತ್ಪಾದಿಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಿದೆ. ವಿಶ್ವವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಾಂತ್ರಿಕತೆ, ಸಸ್ಯ ರೋಗ ಶಾಸ್ತ್ರ ನವೀಕರಿಸಬಹುದಾದ ಶಕ್ತಿ ತಂತ್ರಜ್ಞಾನ ವಿಷಯಗಳಲ್ಲಿ 3 ಪೆಟೆಂಟ್‌ಗಳು ವಿಶ್ವವಿದ್ಯಾಲಯಕ್ಕೆ ದೊರೆತಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ವಿವಿಯ ಹಾಲಿ ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ನಿರ್ಮಮಿತ ಕುಲ ಸಚಿವ ಡಾ.ಗುರುರಾಜ್ ಸುಂಕದ, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News