×
Ad

ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ

Update: 2025-05-26 20:53 IST

ರಾಯಚೂರು : ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಗೃಹದಲ್ಲಿ ನಡೆದ 14ನೇ ಘಟಿಕೋತ್ಸವದಲ್ಲಿ 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.

ವಿದ್ಯಾರ್ಥಿನಿಯರು 152 ಸ್ನಾತಕ ಪದವಿ, 62 ಸ್ನಾತಕೋತ್ತರ ಪದವಿ ಹಾಗೂ 19 ಡಾಕ್ಟರೇಟ್ ಪದವಿಗಳನ್ನು ಹೊಂದುತ್ತಿದ್ದು, ಸ್ನಾತಕ ಪದವಿಯಲ್ಲಿ 27 ಚಿನ್ನದ ಪದಕಗಳು ಮತ್ತು 2 ಸ್ನಾತಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವಿಯಲ್ಲಿ 17 ಚಿನ್ನದ ಪದಕಗಳನ್ನು ಹಾಗೂ 15 ಚಿನ್ನದ ಪದಕಗಳನ್ನು ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ರೈತನ ಮಗನಿಗೆ 6 ಪದಕ :

ಬಿಟೆಕ್ (ಅಗ್ರಿ ಎಂಜಿನಿಯರ್) ನಲ್ಲಿ 6 ಚಿನ್ನದ ಪದಕ ಪಡೆದ ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಪುಟ್ಟರಾಜ ಪೊಲೀಸ್ ಪಾಟೀಲ ಮಾತನಾಡಿ, ನಾನು ಸಿಂಧನೂರು ತಾಲೂಕಿನ‌ ಕೆ.ಬಸ್ಸಾಪುರ ಗ್ರಾಮದವನು. ಮೂಲತಃ ರೈತ ಕುಟುಂಬದಿಂದ ಬಂದಿದ್ದೇನೆ. ಒಂದುವರೆ ಎಕರೆ ಕೃಷಿ ಭೂಮಿಯಿದ್ದು, ತಂದೆ ವ್ಯವಸಾಯದಲ್ಲಿ‌ ತೊಡಗಿದ್ದರಿಂದ ಕೃಷಿ ಎಂಜಿನಿಯರಿಂಗ್ ಪದವಿ ಪಡೆದೆ. ನಾನು 6 ಪದಕ ಪಡೆಯಲು ಕುಟುಂಬದ ಸಹಕಾರ ಮುಖ್ಯವಾಗಿತ್ತು. ಪ್ರಾಧ್ಯಾಪಕರು ಮಾಡಿದ ಪಾಠ ಚೆನ್ನಾಗಿ ಆಲಿಸಿ ಗುಂಪು ಚರ್ಚೆ, ಗೆಳೆಯರ ಜೊತೆ ನಿರಂತರ ಸಂವಹನ ಮಾಡಿದ್ದರಿಂದ ಸಾಧನೆಗೆ ಕಾರಣವಾಗಿದೆ. ನಾನು ಮುಂದೆ ಯುಪಿಎಸ್ಸಿ ಪರೀಕ್ಷೆಯ ತಯಾರಿ ನಡೆಸುತ್ತೇನೆ, ನಾನು ಕೃಷಿ ಪದವಿ ಪಡೆದರೂ ಪರೋಕ್ಷವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತೇನೆ, ನಾಗರಿಕ ಸೇವೆಗೆ ಬಂದು ರೈತಪರ ಕಾರ್ಯಕ್ರಮ ರೂಪಿಸಿ ನೆರವಾಗುವೆ ಎಂದು ಸಂತಸ ಹಂಚಿಕೊಂಡರು.

ವಿಜ್ಞಾನಿಯಾಗಿ ರೈತರ ಸೇವೆ ಮಾಡುವೆ :

ಭೀಮರಾಯಗುಡಿ ಕೃಷಿ ಕಾಲೇಜಿನಲ್ಲಿ ಬಿಎಸ್ ಸಿ (ಹಾನರ್) ಕೃಷಿ ಪದವಿಯಲ್ಲಿ 6 ಪದಕ ಪಡೆದ ಸಾಗರ್ ಮಾತನಾಡಿ, ನಾನು ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನವನು. ಇಲ್ಲಿ ಕೃಷಿಯೇ ಪ್ರಧಾನವಾಗಿದೆ. ಬಾಲ್ಯದಿಂದ ಕೃಷಿ ಚಟುವಟಿಕೆಗಳನ್ನು ನೋಡುತ್ತಾ ಬೆಳೆದಿದ್ದೇನೆ, ಭವಿಷ್ಯದಲ್ಲಿ ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದೇನೆ, ಪಿಯುಸಿ ಮುಗಿದಾಗ ಕೃಷಿ ಬಗ್ಗೆ ಪದವಿ ಇರುವುದನ್ನು ಕಂಡು ಆಶ್ಚರ್ಯವಾಗಿದ್ದೆ, ಬಳಿಕ ಇದೇ ನನಗೆ ಬಿಎಸ್ ಸಿ (ಅಗ್ರಿ) ಪ್ರವೇಶ ಪಡೆಯಲು ಪ್ರೇರಣೆಯಾಯಿತು.

ನಾನು ಎಂಎಸ್ ಸಿ, ಪಿಎಚ್ಡಿ ಮಾಡಿ ವಿಜ್ಞಾನಿಯಾಗುವೆ, ಕೃಷಿ ತಂತ್ರಾಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಪ್ರಸ್ತುತ ರೈತರು ಬೆಳೆಯಲ್ಲಿ ಹೆಚ್ಚಾಗಿ ಕೀಟನಾಶಕ ಬಳಸುವುದರಿಂದ ಮಣ್ಣಿನ ಫಲವತ್ತೆ ನಾಶವಾಗುತ್ತಿದೆ ಹಾಗೂ ಬೆಳೆಯ ಇಳುವರಿಯೂ ಕಡಿಮೆಯಾಗುತ್ತಿದೆ. ಹವಾಮಾನ ವೈಪರೀತ್ಯಗಳಿಂದ ರೈತರು ಕಂಗಾಲಾಗಿದ್ದಾರೆ. ಸುಸ್ಥಿರ ಕೃಷಿ ಮಾಡಿ ಲಾಭದಾಯಕವಾಗಿ ಕೈತುಂಬ ಹಣಗಳಿಸಬಹುದು. ರೈತರಿಗೆ ಸುಸ್ಥರ ಕೃಷಿಯ ಬಗ್ಗೆ ನಾವೆಲ್ಲಾ ಜಾಗೃತಿಗೊಳಿಸಿ ಹೊಸ ತಂತ್ರಜ್ಞಾನದ ಜೊತೆ ವೈಜ್ಞಾನಿಕವಾಗಿ ಆಲೊಚಿಸುವಂತೆ ಮಾಡಬೇಕು. ಇದು ನಮ್ಮ ಜವಾಬ್ದಾರಿ ಯೂ ಹೌದು ಎಂದರು.

ಹೋಟೆಲ್ ನಡೆಸುವ ಮಹಿಳೆಯ ಮಗಳಿಗೆ 4 ಪದಕ:

ಬಿಎಸ್ ಸಿ (ಹಾನರ್) ಯಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಗಾಯಿತ್ರಿ ಮಾತನಾಡಿ, ‘ನಾನು ಬಡ ಕುಟುಂಬದ ಹಿನ್ನೆಲೆಯಿಂದ ಬಂದವಳು. ತಂದೆ ಇಲ್ಲ ತಾಯಿ ಹೋಟೆಲ್ ನಡೆಸುವ ಮೂಲಕ ನಮ್ಮನ್ನು ವಿದ್ಯಭ್ಯಾಸ ಕೊಡಿಸಿದ್ದಾರೆ. ನನ್ನ ಇಬ್ಬರು ಹಿರಿಯ ಸಹೋದರಿಯರು ವಿವಾಹವಾಗಿದ್ದು, ಕುಟುಂಬದಲ್ಲಿ ನಾನೇ ಉನ್ನತ ವಿದ್ಯಭ್ಯಾಸ ಪಡೆದ ಹೆಗ್ಗಳಿಕೆ. ನನಗೆ ಸಿಕ್ಕ ಅವಕಾಶ ಸದುಪಯೋಗ ಪಡೆದುಕೊಂಡು ಈ ಸಾಧನೆ ಮಾಡಿದ್ದೇನೆ. ನಾನು ಆಕಸ್ಮಿಕವಾಗಿ ಬಿಎಸ್ ಸಿ ಮಾಡಿದ್ದೇನೆ, ಆದರೂ ಕೃಷಿ ಕ್ಚೇತ್ರ ಆಸಕ್ತಿ ಮೂಡಿಸಿದೆ. ನಾನು ಯುಪಿಎಸ್ ಸಿ ಪರೀಕ್ಷೆಯ ತಯಾರಿ ನಡೆಸುವೆ. ನನಗೆ ನಂಬಿಕೆ, ಆತ್ಮವಿಶ್ವಾಸವಿದ್ದು ನಾನು ಯಶಸ್ವಿಯಾಗುವೆ, ನಾನು 4 ಚಿನ್ನದ ಪದಕದ ಸಾಧನೆಯೇ ನನಗೆ ಮೆಟ್ಟಿಲು ಆಗಲಿದೆ. ನಿರಂತರ ಅಧ್ಯಯನದಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎಂದರು.

ಪ್ರಗತಿಪರ ರೈತನಿಗೆ ಒಲಿದ ಡಾಕ್ಟರೇಟ್ :

ಘಟಿಕೋತ್ಸವದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ರೈತನಿಗೆ ನೀಡುವ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಕೊಪ್ಪಳ ತಾಲ್ಲೂಕಿನ ಕುಷ್ಠಗಿಯ ಕೆ.ಗೋನಾಳ ಗ್ರಾಮದ ದೇವೇಂದ್ರಪ್ಪ ಬಳೂಟಗಿ ಅವರಿಗೆ ಪ್ರದಾನ ಮಾಡಲಾಯಿತು.

ನಂತರ ದೇವೆಂದ್ರಪ್ಪ ಮಾತನಾಡಿ, ನಾನು ಕೇವಲ ಎಸೆಸೆಲ್ಸಿ ಓದಿರುವೆ, ನನ್ನ ಕೃಷಿಯಲ್ಲಿನ ಸಾಧನೆ ನೋಡಿ ಡಾಕ್ಟರೇಟ್ ನೀಡಿದ್ದು ಬಹಳ ಖುಷಿಯಾಗಿದೆ. ಇದು ರೈತರಿಗೆ ಸಲ್ಲಬೇಕಾದ ಗೌರವ. ಕೃಷಿ ಲಾಭದಾಯಕವಾಗಿಲ್ಲ ಎಂದು ಅನೇಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಕೃಷಿಯನ್ನು ನಂಬಿ ದುಡಿದರೆ ಕೈ ಹಿಡಿಯಲಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಆರಂಭದಲ್ಲಿ ಗುತ್ತಿಗೆದಾರನಾಗಿದ್ದೆ, ಪ್ರಗತಿಪರ ರೈತರೊಬ್ಬರ ಸಾಧನೆಯಿಂದ ಕೃಷಿ ಕ್ಷೇತ್ರಕ್ಕೆ ಧುಮುಕಿದ್ದೇನೆ ಎಂದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News