ರಾಯಚೂರು: ಎನ್‌ಆರ್‌ಐ ಕೋಟಾವನ್ನು ಖಂಡಿಸಿ ಎಐಡಿಎಸ್ಒ ಪ್ರತಿಭಟನೆ
ರಾಯಚೂರು: ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾವನ್ನು ಖಂಡಿಸಿ ಇಂದು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷರಾದ ಅಭಯ ದಿವಾಕರ್ ಅವರು ಮಾತಾನಾಡಿ, "ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ 25 ಲಕ್ಷ ರೂ.ಗಳ ದುಬಾರಿ ಶುಲ್ಕದೊಂದಿಗೆ 15% ಎನ್‌ಆರ್‌ಐ ಕೋಟಾವನ್ನು ಆರಂಭಿಸಲು ನಿರ್ಧರಿಸಿದ್ದು ಖಂಡನೀಯ. ಇದರಿಂದ ವೈದ್ಯಕೀಯ ಕಾಲೇಜುಗಳಿಗೆ ಹಣ ಹರಿದುಬರಲಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಈ ವಿಧಾನವು ಬಡ- ಮಧ್ಯಮವರ್ಗದ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದ ಸರ್ಕಾರಿ ಸೀಟುಗಳನ್ನು ಶ್ರೀಮಂತರಿಗೆ ಹರಾಜು ಹಾಕುವ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣದತ್ತ ತಳ್ಳುವ ಪ್ರಯತ್ನವಾಗಿದೆ ಎಂದು ಆಪಾದಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಯಾವುದೇ ಆರ್ಥಿಕ ಹಿನ್ನಲೆಯನ್ನು ಲೆಕ್ಕಿಸದೆ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾಗಿದೆ. ಶ್ರೀಮಂತ ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡುವ ಮೂಲಕ, ಸರ್ಕಾರವು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವ ನೂರಾರು ಶ್ರಮಜೀವಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ, ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವು ದೇಶದಲ್ಲಿಯೇ ಅತಿ ಹೆಚ್ಚಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಭಾರತದ ಹಲವು ರಾಜ್ಯಗಳ ಶುಲ್ಕಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ. ಈ ಅನ್ಯಾಯದ ಹೊರೆಯನ್ನು ಕಡಿಮೆ ಮಾಡುವ ಬದಲು, ಸರ್ಕಾರವು ವಿದ್ಯಾರ್ಥಿಗಳಿಂದ ಇನ್ನಷ್ಟು ಹಣವನ್ನು ವಸೂಲಿ ಮಾಡಲು ನಿರ್ಲಜ್ಜವಾಗಿ ಪ್ರಯತ್ನಿಸುತ್ತಿದೆ. ಈ ಕ್ರಮವು ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ಮತ್ತು ಜನವಿರೋಧಿ ಮನೋಭಾವವನ್ನು ಬಟಾಬಯಲಾಗಿಸಿದೆ ಎಂದರು.
ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇರುವ ಈ ಸಂಧರ್ಭದಲ್ಲಿ , ಸರ್ಕಾರವು ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯವನ್ನು ಖಾತ್ರಿಪಡಿಸಲು ಆದ್ಯತೆ ನೀಡಬೇಕಿರುವುದು ಅತ್ಯಗತ್ಯವಾಗಿದೆ. ಸಂಪನ್ಮೂಲ ಕ್ರೋಢೀಕರಣದ ನೆಪದಲ್ಲಿ ಶ್ರೀಮಂತರಿಗೆ ಸೀಟುಗಳನ್ನು ಮಾರಾಟ ಮಾಡುವುದಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ನಂದಗೋಪಾಲ್,ಹೇಮಂತ್, ಶಿವಕುಮಾರ್ ಹಾಗೆಯೇ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು