ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯ ಆರೋಪ : ಲಿಂಗಸೂಗೂರು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಮಾನತು
ರಾಯಚೂರು, ಸೆ.27: ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವ ಕಾರಣ, ಲಿಂಗಸೂಗೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಜಿ. ರಾಠೋಡ್ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ, ಅವರು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ-98ರ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಟ್ಟುಕೊಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ರಾಜ್ಯಾದ್ಯಂತ ಸೆ.22ರಿಂದ ಅ.7ರವರೆಗೆ ನಡೆಯುತ್ತಿರುವ ಈ ಸಮೀಕ್ಷೆಯಲ್ಲಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರರೊಂದಿಗೆ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಸರ್ಕಾರ ರಾಠೋಡ್ ಅವರಿಗೆ ನೀಡಿತ್ತು. ಆದರೆ, ಅವರು ತಹಶೀಲ್ದಾರರಿಗೆ ಸಹಕರಿಸದೇ ತಾಲೂಕಿನ ಸಮೀಕ್ಷಾ ಪ್ರಗತಿಗೆ ಅಡ್ಡಿಯಾಗಿದ್ದಾರೆ ಎಂದು ಸೆ.26ರಂದು ನಡೆದ ಸಭೆಯಲ್ಲಿ ಸದಸ್ಯರು ಲಿಖಿತವಾಗಿ ದೂರು ನೀಡಿದ್ದರು.
ಪರಿಶೀಲನೆ ನಡೆಸಿದ ಬಳಿಕ, ರಾಠೋಡ್ ಅವರ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ಸಾಬೀತಾಗಿದ್ದು, ಸರ್ಕಾರದ ಮಹತ್ವದ ಸಮೀಕ್ಷಾ ಕಾರ್ಯಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.