ನೀರಾವರಿ ವಿಚಾರದಲ್ಲಿ ಎನ್.ಎಸ್.ಬೋಸರಾಜು ಅವರು ನಮಗೆ ಗುರು: ಸಚಿವ ಎಚ್.ಕೆ.ಪಾಟೀಲ್
ರಾಯಚೂರು : ಸಚಿವ ಎನ್.ಎಸ್.ಬೋಸರಾಜು ಅವರು 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದು, ಅನೇಕರಿಗೆ ಮಾದರಿಯಾಗಿದ್ದಾರೆ. ನನಗೆ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದ ಗುರುವಾಗಿದ್ದಾರೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರ 79ನೇ ಜನ್ಮದಿನೋತ್ಸವದ ಅಂಗವಾಗಿ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ‘ಚೈತನ್ಯ ಸಾಗರ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಲಾಶಯಗಳಲ್ಲಿನ ನೀರಿನ ಮಟ್ಟ ಅಳೆಯಲು ಕ್ಯೂಸೆಕ್ಸ್, ಟಿಎಲ್ ಬಿಸಿ (ತುಂಗಭದ್ರಾ ಎಡದಂಡೆ ಕಾಲುವೆ) ಅಂದರೇನು ಎಂದು ನನಗೆ ಗೊತ್ತಿರಲಿಲ್ಲ. ನೀರಾವರಿ ತಜ್ಞರಂತೆ ಹಿಂದಿನಿಂದಲೂ ಚಾಣಕ್ಷರಾಗಿದ್ದ ಬೋಸರಾಜು ಅವರು ನನಗೆ ಮಾರ್ಗದರ್ಶನ ಮಾಡಿದ್ದಾರೆ. ನನ್ನ ತಂದೆಯ ಕಾಲದಿಂದಲೂ ಎನ್.ಎಸ್.ಬೋಸರಾಜು ಅವರು ರಾಜಕೀಯದಲ್ಲಿದ್ದಾರೆ. ಅವರು ರಾಜಕೀಯ ಮುತ್ಸದ್ದಿ. ಅವರು ಜಿಲ್ಲೆಯ ಜನರ ಪ್ರೀತಿ, ವಿಶ್ವಾಸಗಳಿಸಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಿ ಅನೇಕರಿಗೆ ಮಾದರಿಯಾಗಿದ್ದಾರೆ. ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಅವರು, ಅಧಿಕಾರ ಸಿಗಲಿ, ಸಿಗದಿರಲಿ 50 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದು ಪ್ರಸಕ್ತ ಸರಕಾರದಲ್ಲಿ ಸಚಿವರಾಗಿದ್ದಾರೆ. ರಾಜಕೀಯದಲ್ಲಿ ಅವರ ತಾಳ್ಮೆ ಮೆಚ್ಚುವಂತಹದ್ದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅನೇಕ ಏಳು ಬೀಳುಗಳನ್ನು ಕಂಡಿದೆ. ಇಂದಿರಾಗಾಂಧಿ ಅವರ ಕಾಲದಿಂದ ಈಗಿನ ಕಾಲದ ವರೆಗೆ ಎಲ್ಲ ಹಂತದಲ್ಲೂ ಎನ್.ಎಸ್.ಬೋಸರಾಜು ಪಕ್ಷದಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಪಕ್ಷ ನೀಡಿದ ಜವಾಬ್ದಾರಿ ವಹಿಸಿ ಅನೇಕ ರಾಜ್ಯಗಳಲ್ಲಿ ಉಸ್ತುವಾರಿ ಸರಕಾರ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಅವರೊಬ್ಬ ಛಲಗಾರ ಎಂದು ಬಣ್ಣಿಸಿದರು.
ಅವರ ಜೀವನ ಸಾಧನೆಯ ಕುರಿತು ‘ಚೈತನ್ಯ ಸಾಗರ’ ಗ್ರಂಥ ರಚನೆ ಮಾಡಿದ್ದು ಶ್ಲಾಘನೀಯ. ಇದರಿಂದ ಯುವ ಪೀಳಿಗೆಗೆ ಇತಿಹಾಸ ತಿಳಿದು ಮಾದರಿಯಾಗಬಹುದು ಎಂದರು.
ಸಚಿವ ಶಿವರಾಜ್ ತಂಗಡಗಿ, ತೆಲಂಗಾಣ ಸಚಿವ ವಾಕಿಟಿ ಶ್ರೀಹರಿ ಮತ್ತಿತರರು ಮಾತನಾಡಿದರು.
ಗ್ರಂಥದ ಪರಿಚಯವನ್ನು ರಾಜ್ಯ ಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾಡಿದರು. ಪ್ರಾಸ್ತಾವಿಕವಾಗಿ ಮಹಾನಗರ ಪಾಲಿಕೆ ಸದಸ್ಯ ಜಯಣ್ಣ ಮಾತನಾಡಿದರು.
ಮುಖಂಡರಾದ ಕೆ.ಶಾಂತಪ್ಪ ಸ್ವಾಗತಿಸಿದರು. ವೇದಿಕೆ ಮೇಲೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸ್ಮಿತಾ ಅಕ್ಕ, ಸಂಸದರಾದ ಜಿ.ಕುಮಾರ ನಾಯಕ, ಶಾಸಕರಾದ ಹಂಪಯ್ಯ ನಾಯಕ, ಕರೆಮ್ಮ ಜಿ.ನಾಯಕ, ಬಸವನಗೌಡ ತುರ್ವಿಹಾಳ, ಬಂಡ್ಲ ಕೃಷ್ಣಾ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪೂರು, ವೆಂಕಟರಾವ್ ನಾಡಗೌಡ, ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದರಾದ ಬಿ.ವಿ.ನಾಯಕ, ಅಮರೇಶ್ವರ ನಾಯಕ, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಡಿ.ಎಸ್.ಹೂಲಗೇರಿ, ಎಸ್.ಆರ್.ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ಮಹಾನಗರ ಪಾಲಿಕೆ ಮಹಾಪೌರ ನರಸಮ್ಮ ನರಸಿಂಹಲು ಮಾಡಗಿರಿ , ಉಪಮಹಾಪೌರ ಸಾಜಿದ್ ಸಮೀರ ಮುಖಂಡರಾದ ಪಾರಸಮಲ್ ಸುಖಾಣಿ ಮತ್ತಿತರರು ಉಪಸ್ಥಿತರಿದ್ದರು.
ಬೋಸರಾಜು ಅವರದ್ದು ಸಾಮೂಹಿಕ ನಾಯಕತ್ವ: ಯು.ಟಿ.ಖಾದರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಸಚಿವ ಎನ್.ಎಸ್.ಬೋಸರಾಜು ಕಲ್ಯಾಣ ಕರ್ನಾಟಕದ ಹಿರಿಯ ನಾಯಕ. ಸರ್ವಧರ್ಮ, ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು, ಸಾಮೂಹಿಕ ನಾಯಕತ್ವದಲ್ಲಿ ನಡೆದು ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ. ಅವರು ಕೇವಲ ಅಧಿಕಾರದ ದಾಹಕ್ಕೆ ಒಳಗಾಗದೇ ಅಭಿವೃದ್ಧಿಗೆ, ಜನಸೇವೆಗೆ ರಾಜಕೀಯದಲ್ಲಿ ಉಳಿದುಕೊಂಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೇ ಸಮಸ್ಯೆಗಳ ಬಗೆಹರಿಸಿಕೊಳ್ಳುವ ಅವರ ಗುಣ, ವ್ಯಕ್ತಿತ್ವ ಇಂದಿನ ಯುವ ರಾಜಕಾರಣಿಗಳಿಗೆ ಅನುಕರಣೀಯ. ಎನ್ ಎಸ್ ಬೋಸರಾಜು ಅವರ ಕುರಿತ ಈ ‘ಚೈತನ್ಯ ಸಾಗರ’ ಗ್ರಂಥ ಅವರ ಆತ್ಮಕಥನವಲ್ಲ ಯುವ ಪೀಳಿಗೆಗೆ ದಾರಿದೀಪವಾಗಲಿದೆ ಎಂದರು.
ತೆಲಂಗಾಣ ಸರಕಾರ ರಚನೆಗೆ ಬೋಸರಾಜು ಕೊಡುಗೆ ಅಪಾರ: ತೆಲಂಗಾಣ ಡಿಸಿಎಂ
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ತೆಲಂಗಾಣದ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು, ಇಂಧನ ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿರುವ ಗಾಂಧಿವಾದಿ ಎನ್.ಎಸ್ .ಬೋಸರಾಜ ಇವರು ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ರಚನೆಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು, ಸಲಹೆಗಾರರಾಗಿ, ಸಂಘಟನಾ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲ ಸಂದರ್ಭದಲ್ಲಿ ಪಕ್ಷಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಎಲ್ಲರೂ ನಮ್ಮವರು ಎಂಬ ಭಾವನೆ ಅವರದ್ದು. ತೆಲಂಗಾಣ ಹಾಗೂ ಕರ್ನಾಟಕ ಸರಕಾರ ಅಧಿಕಾರಕ್ಕೆ ಬರಲು ಅವರು ಶಕ್ತಿವಿ ುೀರಿ ಕೆಲಸ ಮಾಡಿದ್ದಾರೆ ಎಂದರು.