ಸಣ್ಣ ನೀರಾವರಿ, ನೀರಿನಾಸರೆಗಳ ಗಣತಿ ಅಚ್ಚುಕಟ್ಟಾಗಿ ನಡೆಯಲಿ: ರಾಯಚೂರು ಅಪರ ಜಿಲ್ಲಾಧಿಕಾರಿ ಶಿವಾನಂದ ಸೂಚನೆ
ರಾಯಚೂರು: ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ನಿರ್ದೇಶನದಂತೆ 7ನೇ ಸಣ್ಣ ನೀರಾವರಿ ಮತ್ತು 2ನೇ ನೀರಿನಾಸರೆಗಳ ಕುರಿತು ಈ ಬಾರಿಯ ಗಣತಿಯನ್ನು ಸಂಪೂರ್ಣವಾಗಿ ಮೊಬೈಲ್ ಆ್ಯಪ್‌ನಲ್ಲಿ ಕೈಗೊಳ್ಳಲಾಗುತ್ತಿದ್ದು, ಎಲ್ಲಾ ಗಣತಿದಾರರು ತಮ್ಮ-ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದರು.
ಇತ್ತಿಚೇಗೆ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ 7ನೇ ಸಣ್ಣ ನೀರಾವರಿ ಮತ್ತು 2ನೇ ನೀರಿನಾಸರೆಗಳ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ನಿರ್ದೇಶನದ -ಮೇರೆಗೆ ಪ್ರತಿ 5 ವರ್ಷಗಳಿಗೊಮ್ಮ ಸಣ್ಣ ನೀರಾವರಿ ಗಣತಿ ಕೈಕೊಳ್ಳಲಾಗುತ್ತಿದೆ. ಪ್ರಪಥಮ ಬಾರಿಗೆ 1986-87 ವರ್ಷದ ಆಧಾರದ ಮೇಲೆ 1 ನೇ ಸಣ್ಣ ನೀರಾವರಿ ಗಣತಿ ಕೈಕೊಂಡಿದೆ. 2017-18ನೇ ವರ್ಷದಲ್ಲಿ 1ನೇ ನೀರಿನಾಸರೆ ಗಣತಿ ಕಾರ್ಯವನ್ನು ಕೈಕೊಳ್ಳಲಾಗಿದ್ದು, ಪ್ರಸ್ತುತ 2023-24ನೇ ವರ್ಷವನ್ನು ಆಧಾರಿಸಿ 7ನೇ ಸಣ್ಣ ನೀರಾವರಿ ಗಣತಿ ಮತ್ತು 2ನೇ ನೀರಿನಾಸರೆ ಗಣತಿ ಕಾರ್ಯವನ್ನು ಕೈಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಸಣ್ಣ ನೀರಾವರಿ ಯೋಜನೆಗಳ ಹಾಗೂ ನೀರಿನಾಸರೆಗಳ ಸಮಗ್ರ ಹಾಗೂ ಮೂಲ ಅಂಕಿ ಸಂಗ್ರಹಣೆ ಹಾಗೂ ಮಾಹಿತಿ ಕಲೆ ಹಾಕುವಿಕೆ, ಮುಂಗಾರು, ಹಿಂಗಾರು ಅಥವಾ ಬೇಸಿಗೆ ಋತುಗಳ ನೀರಾವರಿ ಕ್ಷೇತ್ರದ ಮಾಹಿತಿ ಕಲೆ ಹಾಕುವಿಕೆ, ನೀರಿನಾಸರೆಗಳ ಸದ್ಬಳಕೆ, ನಿರ್ವಹಣೆ ಮತ್ತು ಆದಾಯ ಸಂಗ್ರಹಣೆ, ಅಂತರ್ಜಲದ ಪ್ರಮಾಣ ಅಂದಾಜಿಸುವುದು ಮತ್ತು ನೀತಿ ನಿರೂಪಣೆ ಮತ್ತು ನಿರ್ದಾರ ತೆಗೆದುಕೊಳ್ಳಲು, ಭಾರಿ ನೀರಾವರಿ ಯೋಜನೆಗಳ ಅಂಕಿ ಅಂಶಗಳ ಸಂಗ್ರಹ ಮತ್ತು ಪ್ರಚಾರ ಬುಗ್ಗೆಗಳ ದತ್ತಾಂಶ ಸಂಗ್ರಹ ಮತ್ತು ಪ್ರಚಾರಗೊಳ್ಳುವುದು ಗಣತಿಯ ಉದ್ದೇಶವಾಗಿದೆ ಎಂದರು.
ಯೋಜನಾ ವ್ಯಾಪ್ತಿಯಲ್ಲಿ 0-40 ಹೆಕ್ಟೇರ್ ಯೋಜನೆಗಳು ಗ್ರಾಮೀಣಾಭಿವೃದ್ಧಿ ಇಲಾಖೆ, 40-2000 ಹೆಕ್ಟೇರ್ ಯೋಜನೆಗಳು ಸಣ್ಣ ನೀರಾವರಿ ಇಲಾಖೆ, 2000 ಹೆಕ್ಟೇರ್ ಕ್ಕಿಂತ ಹೆಚ್ಚಿನ ಯೋಜನೆಗಳು ಮಧ್ಯಮ ಅಥವಾ ಬೃಹತ್ ನೀರಾವರಿ ಆಧೀನದಲ್ಲಿರುತ್ತವೆ. ನೀರೀನಾಸರೆಯ ಗಣತಿಯಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ಯೋಜನೆಯ ಪ್ರಮಾಣಗಳನ್ನು ಲೆಕ್ಕಿಸದೇ ಮಾಹಿತಿ ಕಲೆ ಹಾಕಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಗಣತಿಯಲ್ಲಿ ಗ್ರಾಮ ಪ್ರಪತ್ರ, ನಮೂನೆ-1 ಅಂತರ್ಜಲ ಪ್ರಪತ್ರ, ನಮೂನೆ-2 ಮೇಲ್ಮೆ ಯೋಜನೆ ಪ್ರಪತ್ರ, ನಗರ ಪ್ರಪತ್ರ ಹಾಗೂ ನೀರಿನಾಸರೆಗಳ ಪ್ರಪತ್ರ ಸೇರಿದಂತೆ ಒಟ್ಟು 5 ಗಣತಿಯ ಪ್ರಪತ್ರಗಳು ಬರುತ್ತವೆ ಎಂದು ಮಾಹಿತಿ ನೀಡಿದರು.
ಈ ವೇಳೆ ಸಣ್ಣ ನೀರಾವರಿ ಹಾಗೂ ಅಂತರ್ಜಾಲ ಇಲಾಖೆಯ ಕೊಪ್ಪಳ ವಿಭಾಗದ ಅಧಿಕಾರಿ ಬಸವರಾಜ ಪಾಟೀಲ್ ಅವರು ಮಾತನಾಡಿ, ಗಣತಿ ಮಾಡುವಾಗ ಗ್ರಾಮದ ನೀರಿನಾಸರೆಗಳನ್ನು ಮೊದಲು ಗಣತಿ ಮಾಡಬೇಕು. ಅಂದರೆ ಮೊಬೈಲ್ ಆಪ್‌ನಲ್ಲಿ ಮೊದಲು ನೀರಿನಾಸರೆಗಳ ನಮೂನೆ ಅನ್ನು ಭರ್ತಿ ಮಾಡಬೇಕು. ನಂತರ ಮೇಲ್ಮೆಜಲ ಯೋಜನೆಗಳನ್ನು ಗಣತಿ ಮಾಡಬೇಕು. ನಂತರ ಅಂತರ್ಜಲ ಯೋಜನೆಗಳನ್ನು ಗಣತಿ ಮಾಡಬೇಕು ಎಂದರು.
ಜಿಲ್ಲೆಯ ಗ್ರಾಮದಲ್ಲಿನ ಎಲ್ಲಾ ನೀರಿನಾಸರೆಗಳನ್ನು ಹಾಗೂ ಎಲ್ಲಾ ಮೇಲ್ಮೇ ಯೋಜನೆಗಳನ್ನು ಮತ್ತು ಎಲ್ಲಾ ಅಂತರ್ಜಲ ಯೋಜನೆಗಳನ್ನು ಗಣತಿ ಮಾಡಿದ ನಂತರವಷ್ಟೇ ಗ್ರಾಮ ಪ್ರಪತ್ರವನ್ನು ಭರ್ತಿ ಮಾಡಬೇಕು. ಗ್ರಾಮದ ಎಲ್ಲಾ ಯೋಜನೆಗಳ ವಿವರಗಳು ಮತ್ತು ಗ್ರಾಮದ ಇತರೇ ವಿವರಗಳು ಸಂಪೂರ್ಣವಾಗಿ ಪ್ರಪತ್ರದಲ್ಲಿ ನಮೂದಿಸಬೇಕು. ಒಮ್ಮೆ ಗ್ರಾಮ ಪ್ರಪತ್ರವನ್ನು ಒಪ್ಪಿಸಿದರೆ ಆ ಗ್ರಾಮದ ಗಣತಿ ಪೂರ್ಣಗೊಂಡಿದೆ ಎಂದರ್ಥ. ಗ್ರಾಮ ಪ್ರಪತ್ರವನ್ನು ಒಪ್ಪಿಸಿದರೆ ನಂತರ ಆ ಗ್ರಾಮದ ಯಾವುದೇ ಸಣ್ಣ ನೀರಾವರಿ ಯೋಜನೆಗಳನ್ನು ಮತ್ತೆ ಸೇರಿಸಲು ಗಣತಿದಾರರಿಗೆ ಅವಕಾಶ ಇರುವುದಿಲ್ಲ ಎಂದರು. ಗಣತಿ ಕಾರ್ಯಕ್ಕಾಗಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯು ಒಂದು ವೆಬ್ ಪೋರ್ಟೋಲ್ ಅನ್ನು ರೂಪಿಸಿದೆ. ರಾಜ್ಯ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳ ಬಳಕೆದಾರಗಳನ್ನು ನೋಂದಾಯಿಸಿ ಬಳಕೆದಾರ ಐಡಿ ಮತ್ತು ಪಾಸವಾರ್ಡಗಳನ್ನು ಸೃಜಿಸಲಾಗುವುದು. ನಂತರ ಜಿಲ್ಲಾ ಹಂತದಲ್ಲಿ ಗಣತಿಗೆ ಸಂಬಂಧಿಸಿದ ಬ್ಲಾಕ್ ಹಂತದಿಂದ ಸಲ್ಲಿಸಲಾದ ಗಣತಿಯ ವಿವರಗಳನ್ನು ಪರಿಶೀಲಿಸಿ, ಅದು ಸರಿ ಎಂದು ಕಂಡು ಬಂದಲ್ಲಿ ರಾಜ್ಯ ಹಂತಕ್ಕೆ ಕಳುಹಿಸುವುದು. ಅಲ್ಲದೆ ಒಂದು ವೇಳೆ ಜಿಲ್ಲಾ ಹಂತದಲ್ಲಿ ಗಣತಿಗೆ ಸಂಬಂಧಿಸಿದ ತಪ್ಪುಗಳು ಕಂಡು ಬಂದಲ್ಲಿ ಬ್ಲಾಕ್ ಹಂತಕ್ಕೆ ಹಿಂದಿರುಗಿಸಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.