ಇರಾನ್ -ಇಸ್ರೇಲ್ ಯುದ್ಧಕ್ಕೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಲಿ : ಮಲ್ಲಿಕಾರ್ಜುನ ಖರ್ಗೆ
PC | X @siddaramaiah
ರಾಯಚೂರು : ಇರಾನ್ -ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಅನೇಕ ಆಸ್ತಿಪಾಸ್ತಿ ನಾಶವಾಗಿ ನಾಗರಿಕರ ನೆಮ್ಮದಿ ಹಾಳಾಗುತ್ತಿದೆ. ಯುದ್ಧದಿಂದ ಏನು ಸಾಧಿಸಲು ಆಗುವುದಿಲ್ಲ. ಜನರು ಯುದ್ಧ ಬೇಕೋ, ಶಾಂತಿಯ ಬುದ್ಧ ಬೇಕೋ ಎಂದು ಆಲೋಚಿಸಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.
ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ 936 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಬುಡಕಟ್ಟು ಉತ್ಸವ, 371 (ಜೆ) ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇರಾನ್ -ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಅಮೆರಿಕಾ ಇಸ್ರೇಲ್ ಪರ ಮಧ್ಯ ಪ್ರವೇಶಿಸಿ ಯುದ್ಧಕ್ಕೆ ಇಳಿದಿದೆ. ವಿಶ್ವದಾದ್ಯಂತ ಯುದ್ಧ ನಡೆದರೆ ಪ್ರಪಂಚದಲ್ಲಿ ಅಶಾಂತಿ ಸೃಷ್ಠಿಯಾಗುತ್ತದೆ. ಯುದ್ಧಬೇಡವೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈಗಾಗಲೇ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ವಿಶ್ವ ಗುರು ಎಂದು ಪ್ರಚಾರ ಪಡೆಯುವ ದೇಶದ ಪ್ರಧಾನಿ ಮೋದಿಯವರು ಇದರ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.
ಇರಾನ್ ಭಾರತಕ್ಕೆ ಹಿಂದಿನಿಂದಲೂ ಸಹಕಾರ ನೀಡಿದೆ. ಅಮೆರಿಕಾದ ಅಧ್ಯಕ್ಷರ ಚುನಾವಣೆಯಲ್ಲಿ ಮತ್ತೊಮ್ಮೆ ಟ್ರಂಪ್ ಅಂತ ಪ್ರಚಾರ ಮಾಡಿದ ಮೋದಿ ಅವರು ಇರಾನ್ ಪರ ನಿಲ್ಲಬೇಕು. ಯುದ್ಧ ಮುಂದುವರೆದರೆ ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿ ಜನರಿಗೆ ಹೊರೆಯಾಗಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಪಠ್ಯಪುಸ್ತಕಗಳಲ್ಲಿ ಆರೆಸೆಸ್ಸ್ ವಿಚಾರಗಳನ್ನು ಸಿಲೆಬಸ್ ನಲ್ಲಿ ಅಳವಡಿಸುತ್ತಿದೆ. ವಿಶ್ವವಿದ್ಯಾಲಯ, ಕೇಂದ್ರೀಯ ವಿದ್ಯಾಲಯಗಳಲ್ಲಿ ಆರೆಸೆಸ್ಸ್ ಬೆಂಬಲಿಗರನ್ನು ಸೇರಿಸಿ ದೇಶದಲ್ಲಿ ವಿಷಬೀಜ ಬಿತ್ತಿ ಇತಿಹಾಸವನ್ನು ಮರೆಮಾಚುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಶಿವರಾಜ ತಂಗಡಗಿ, ಶರಣಪ್ಪ ದರ್ಶಾನಾಪೂರ, ಎನ್.ಎಸ್.ಬೋಸರಾಜು, ಅಜಯ್‌ಸಿಂಗ್, ಕೆ.ಜೆ.ಜಾರ್ಜ್, ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ಎಂ.ಸಿ.ಸುಧಾಕರ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಂಸದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಶರಣೇಗೌಡ ಬಯ್ಯಾಪುರ, ಶಾಸಕ ಹಂಪನಗೌಡ ಬಾದರ್ಲಿ ಮತ್ತಿತರರು ಇದ್ದರು.