×
Ad

ಸಿಂಧನೂರು-ರಾಯಚೂರು ನಡುವೆ 81 ಕಿ.ಮೀ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ

Update: 2025-05-15 19:39 IST

ರಾಯಚೂರು : ಮುನಿರಾಬಾದ್ (ಗಿಣಿಗೇರಾ)-ರಾಯಚೂರು ಹೊಸ ರೈಲು ಮಾರ್ಗದ ಯೋಜನೆಯಡಿ ಸಿಂಧನೂರು–ರಾಯಚೂರು ನಡುವೆ 81 ಕಿ.ಮೀ ನೂತನ ರೈಲು ಮಾರ್ಗ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವು ಮೇ 15 ರಂದು ರಾಯಚೂರು ಜಿಲ್ಲೆಯ ಸಿಂಧನೂರು ರೈಲ್ವೆ ನಿಲ್ದಾಣದಲ್ಲಿ ನೆರವೇರಿತು.

ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಸಿಂಧನೂರು ರೈಲು ನಿಲ್ದಾಣದಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಬಟನ್ ಒತ್ತುವ ಮೂಲಕ ನೂತನ ರೈಲುಮಾರ್ಗಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ನೈರುತ್ಯ ರೈಲ್ವೆ ವಿಭಾಗದಿಂದ‌ ನಡೆದ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವಿ ಸೋಮಣ್ಣ ಅವರು, ದೇಶದ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿಗಳು ಬದ್ಧರಾಗಿದ್ದು, 44 ಸಾವಿರ ಕೋಟಿ ರೂ.ಗಳ ಅಧಿಕ ಅನುದಾನವನ್ನು ಕರ್ನಾಟಕದ ರೈಲ್ವೆಗೆ ನೀಡಿದ್ದಾರೆ ಎಂದರು.

ಸಿಂಧನೂರು- ರಾಯಚೂರು ನೂತನ ರೈಲ್ವೆ ಮಾರ್ಗದಲ್ಲಿ ಸುಮಾರು 17 ರೈಲ್ವೆ ನಿಲ್ದಾಣ ಬರುತ್ತವೆ. ಕಲ್ಯಾಣ ಕರ್ನಾಟಕ ರೈಲ್ವೆ ಸಂಪರ್ಕ ವೃದ್ಧಿಗಾಗಿ ಬುಧವಾರ ಆದೇಶ ನೀಡಲಾಗಿದೆ. ರೈಲ್ವೆ ಕಾಮಗಾರಿಗಳು ಕನಿಷ್ಠ 3 ವರ್ಷದೊಳಗಾಗಿ ಮುಗಿಸುವ ಆದೇಶವನ್ನು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಹೊಂದಿದ್ದಾರೆ ಎಂದರು.

ಉಗ್ರರಿಗೆ ತಕ್ಕ ಪಾಠ : 

ಕಾಶ್ಮೀರದ ಪಹಲ್ಲಾಮ್‌ದಲ್ಲಿ ಭಾರತೀಯರನ್ನು ಹತ್ಯೆಗೈದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಪ್ರಧಾನಿ  ನರೇಂದ್ರ ಮೋದಿ ಅವರು ಸಿಂಧೂರ ಕಾರ್ಯಾಚರಣೆ ಕೈಗೊಂಡು ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಈ ವೇಳೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಹೊಸ ರೈಲ್ವೆ ಮಾರ್ಗ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇದಕ್ಕೆ ಬಹಳ‌ ಪರಿಶ್ರಮ, ಇಚ್ಛಾಶಕ್ತಿ ಬೇಕು. 1996 ರಲ್ಲಿ ನಾನು ಸಂಸದನಾಗಿದ್ದಾಗ ದೇವೆಗೌಡ್ರು ಅವರು ಪ್ರಧಾನಮಂತ್ರಿಗಳಾಗಿದ್ದರು. ಆ ವೇಳೆಯಲ್ಲಿ ಹೊಸ ರೈಲ್ವೆ ಮಾರ್ಗಕ್ಕೆ ಸಾಕಷ್ಟು ಪರಿಶ್ರಮ ವಹಿಸಲಾಯಿತು. ಗದಗ- ವಾಡಿ ಸಂಪರ್ಕದ ರೈಲು ಕುಷ್ಟಗಿವರೆಗೆ ಸಂಚಾರ ಆರಂಭಿಸಿದ್ದು ಮತ್ತು ಕೊಪ್ಪಳ ಜಿಲ್ಲೆಯ ಸರಹದ್ದು ಸಿಂಧನೂರು-ರಾಯಚೂರು ನಡುವೆ ನೂತನ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿದ್ದು ಕಂಡು ತಮಗೆ ಬಹಳಷ್ಟು ಸಂತಸವಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ,

ರಾಯಚೂರು‌ ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಮಾತನಾಡಿದರು.

ಹಿಂದುಳಿದ‌ ವರ್ಗಗಳ‌ ಕಲ್ಯಾಣ ಇಲಾಖೆ ಹಾಗೂ‌ ಕ‌ನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಸಂಗಪ್ಪ ತಂಗಡಗಿ, ರೈಲ್ವೆ ಇಲಾಖೆಯ ಅಧಿಕಾರಿಗಾದ ಮೀನಾ, ಶರ್ಮಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಿಂಧನೂರ, ಮಾನವಿ, ಮಸ್ಕಿ, ಸಿರವಾರ, ರಾಯಚೂರ ಸೇರಿದಂತೆ ನಾನಾ ಪ್ರದೇಶದ ಗಣ್ಯರು, ಸಾರ್ವಜನಿಕರು, ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News