×
Ad

ಕಲ್ಯಾಣ ಕರ್ನಾಟಕ ಶಿಕ್ಷಣ ಅಭಿವೃದ್ಧಿ ಮಂಡಳಿಯಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ನೀಡದೆ ವಂಚನೆ : ರಾಘವೇಂದ್ರ ಕುಷ್ಟಗಿ ಆಕ್ರೋಶ

Update: 2025-02-12 20:42 IST

ರಾಯಚೂರು : ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಮಂಡಳಿಯ ಅಧೀನದಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಿದ್ದು, ರಾಯಚೂರು ಜಿಲ್ಲೆಯ ಯಾವುದೇ ಶಿಕ್ಷಣ ಪ್ರೇಮಿಗಳಿಗೆ ಆಯ್ಕೆ ಮಾಡದೇ ಅನ್ಯಾಯ ಮಾಡಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಅಸಮಾಧಾನ ವ್ಯಕ್ತಪಡಿಸಿದರು.

ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಶಿಕ್ಷಣ ಸಮಿತಿಯಲ್ಲಿ ಕಲಬುರಗಿ ಜಿಲ್ಲೆಯ ಶಿಕ್ಷಣ ತಜ್ಞರನ್ನೇ ಸಿಂಹಪಾಲು ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಹಲವು ಅನ್ಯಾಯಗಳನ್ನು ಮಾಡುತ್ತಾ ಬಂದಿದೆ. ಆದರೆ ಕಲ್ಯಾಣ ಕರ್ನಾಟಕದ ಕಲಬುರಗಿಯ ನಾಯಕರು ಈ ಭಾಗದ ಇತರೆ ಜಿಲ್ಲೆಗಳಿಗೆ ನಿರಂತರ ಅನ್ಯಾಯ ಮಾಡುತ್ತಿದ್ದಾರೆ. ಕ.ಕ.ಕ್ಕೆ ಯಾವುದೇ ಸವಲತ್ತು ಬಂದರೂ ಸಹ ಅದನ್ನು ಕಲಬುರಗಿಗೆ ತೆಗೆದುಕೊಂಡು ಹೋಗುತ್ತಾರೆ. ಇದೇ ರೀತಿ ಈಗ ಶಿಕ್ಷಣ ತಜ್ಞರ ಸಮಿತಿಗೆ ಶಿಕ್ಷಣ ತಜ್ಞರ ನೇಮಕಾತಿಯಲ್ಲಿ ಅನ್ಯಾಯ ಮುಂದುವರಿದಿದೆ ಎಂದರು.

ಕಲ್ಯಾಣ ಕರ್ನಾಟಕ ಸಮಿತಿಯಲ್ಲಿ ಶೈಕ್ಷಣಿಕ ಹಿನ್ನಲೆಯಲ್ಲಿ ಸರಿಪಡಿಸಲು ಶಿಕ್ಷಣ ಸಮಿತಿ ರಚಿಸಿದ್ದು, ಸ್ವಾಗತ ಆದರೆ ಸಮಿತಿಯಲ್ಲಿ ಕೇವಲ ಕಲಬುರಗಿ, ಬೀದರ್ ಹಾಗೂ ಬಳ್ಳಾರಿ ಜಿಲ್ಲೆಯ ಶಿಕ್ಷಣ ತಜ್ಞರನ್ನು ನೇಮಕ ಮಾಡಿ ಇನ್ನೀತರ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಸಚಿವರು, ಸಂಸದರು ಮತ್ತು ಶಾಸಕರು ಇದ್ದರ ಬಗ್ಗೆ ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಎಂದರೆ ಕಲಬುರಗಿ ಅಭಿವೃದ್ದಿ ಎಂಬ ಅರ್ಥವಾಗಿದೆ. ಕೇಂದ್ರ ಸರ್ಕಾರ ಇಎಸ್ಐ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಜಯದೇವ ಆಸ್ಪತ್ರೆ ಸೇರಿದಂತೆ ಎಲ್ಲವೂ ಕಲಬುರಗಿಗೆ ಸೀಮಿತವಾಗಿವೆ. ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮೀಟರ್ ಇಲ್ಲದಂತಾಗಿದೆ ಎಂದು ಲೇವಾಡಿ ಮಾಡಿದರು.

ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಕಲಬುರಗಿ ಜಿಲ್ಲೆಯ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಆಪ್ತ ಶಿಷ್ಯರಾದ ಡಾ.ಶರಣಪ್ರಕಾಶ್ ಪಾಟೀಲ್ರನ್ನು ಸರ್ಕಾರ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ. ಇವರಿಂದ ರಾಯಚೂರು ಜಿಲ್ಲೆಯ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವೇ ಎಂದರು.

ಜಿಲ್ಲೆಯ ಶಾಸಕರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದರೆ ಮಾತ್ರ ಜಿಲ್ಲೆಯ ಅಭಿವೃದ್ದಿಗೆ ಸಹಕಾರವಾಗುತ್ತದೆ ಎಂದು ಹೇಳಿದರು.

ಶಿಕ್ಷಣ ತಜ್ಞರ ಸಮಿತಿಯಲ್ಲಿ 21 ಸದಸ್ಯರನ್ನು ನೇಮಕ ಮಾಡಬೇಕು, ರಾಯಚೂರು ಜಿಲ್ಲೆಯಲ್ಲಿ ಸೈಯದ್ ಹಫೀಜ್ ಉಲ್ಲಾ, ಪ್ರೊ.ಬಿ.ವಿ.ಪಾಟೀಲ್, ಡಾ.ಅಮರೇಶ ನುಗಡೋಣಿ, ಡಾ.ಅಮರೇಶ ಯತಗಲ್, ಕೊಪ್ಪಳ ಜಿಲ್ಲೆಯಲ್ಲಿ ಅಲ್ಲಮಪ್ರಭು ಬೆಟ್ಟದೂರು, ಈ.ಧನರಾಜ್, ಸಾವಿತ್ರಿ ಮುಜುಮದಾರ, ವಿಜಯ ನಗರ ಜಿಲ್ಲೆಯಲ್ಲಿ ವೆಂಟಗಿರಿ ದಳವಾಯಿ, ಡಾ.ಹೆಚ್.ಡಿ.ಪ್ರಶಾಂತ, ಯಾದಗಿರಿ ಜಿಲ್ಲೆಯಲ್ಲಿ ಪ್ರೊ.ನಾಗಣ್ಣ ಕಿಲ್ಲಾರಿ, ಪ್ರೊ.ಲಿಂಗಣ್ಣ ಗೋನಾಳ, ಗೋನಾಳ ಭೀಮಪ್ಪ ಇದ್ದು, ಇವರನ್ನು ಈ ತಜ್ಞರ ಸಮಿತಿಗೆ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು, ಅತಿಥಿ ಶಿಕ್ಷಕರಲ್ಲಿ ಅರ್ಹ ಶಿಕ್ಷರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ಈ ಅನ್ಯಾಯವನ್ನು ಇದೇ ರೀತಿ ಮುಂದುವರಿಸಿದರೆ ಈ ಭಾಗದ ಜನ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಖಾಜಾ ಅಸ್ಲಾಂ ಅಹ್ಮದ್, ಟಿ.ಕೆ.ಜಾನವೆಸ್ಲಿ, ಬಿ.ಬಸವರಾಜ್, ಈರಣ್ಣ ಬಂಡಾರಿ, ಆರ್.ಬಸವರಾಜ್ ಪರಪ್ಪ ಆರೋಲಿ ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News