ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತದೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರು : ಮಂಗಳೂರಿನಲ್ಲಿ ನಡೆಯುತ್ತಿರುವ ಕೊಲೆ, ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಯಾವುದೇ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದರೂ ಸರ್ಕಾರ ಸಹಿಸಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿರೋಧ ಪಕ್ಷದ ನಾಯಕರು ಹತಾಶೆಯಲ್ಲಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಲಹೆ ನೀಡದೇ, ಕೇವಲ ಒಂದು ಅಜೆಂಡಾ ಇಟ್ಟುಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜನರು ಪ್ರಬುದ್ಧರಾಗಿದ್ದಾರೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಬಿಹಾರ ಚುನಾವಣೆ ಹಿನ್ನೆಲೆ ಜಾತಿ ಗಣತಿ ಮುನ್ನೆಲೆಗೆ :
ದೇಶದಲ್ಲಿ ಜಾತಿ ಗಣತಿ ಮಾಡಲು ಒತ್ತಾಯಿಸಿ ವಿರೋಧ ಪಕ್ಷದ ನಾಯಕಾರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ವಿರೋಧಿಸುವುದಲ್ಲದೇ ಇದು ಸಮಾಜವನ್ನು ಒಡೆಯುವ ನೀತಿ ಎಂಬೆಲ್ಲಾ ಹೇಳಿಕೆ ನೀಡುತ್ತಿದ್ದರು. ಈಗ ಮೋದಿ ಅವರು ಜಾತಿ ಗಣತಿ ಮಾಡುತ್ತೇವೆ ಎಂದು ಹೇಳಿದ್ದು, ಕಾಂಗ್ರೆಸ್ ಪಕ್ಷ ಸ್ವಾಗತಿಸಿದೆ. ಇಷ್ಟು ವರ್ಷ ಮಾಡದೇ ಈಗ ನಿರ್ಧಾರ ಕೈಗೊಂಡಿದ್ದು ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ. ಇವರ ರಾಜಕೀಯ ಉದ್ದೇಶ ಏನೇ ಇದ್ದರೂ, ಇದನ್ನು ಸ್ವಾಗತಿಸುತ್ತೇವೆ. ಪಾರದರ್ಶಕವಾಗಿ ನಡೆಸಲಿ ಎಂದು ಒತ್ತಾಯಿಸಿದರು.