×
Ad

ಮೇಲ್ದರ್ಜೆಗೇರಿಸಿದ ಜಿಲ್ಲಾ ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ಅನುದಾನ : ಸಚಿವ ಸತೀಶ್ ಜಾರಕಿಹೊಳಿ

Update: 2025-06-16 18:12 IST

ರಾಯಚೂರು: ಮೇಲ್ದರ್ಜೆಗೇರಿಸಿದ ಜಿಲ್ಲಾ ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ಅನುದಾನ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಜೂ.16ರಂದು ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ದೇಶದ ಸಮಗ್ರ ಅಭಿವೃದ್ಧಿಯು ಸುಗಮ ಸಂಚಾರದ ವ್ಯವಸ್ಥೆಯನ್ನು ಸಹ ಅವಲಂಭಿಸಿರುತ್ತದೆ. ಈ ನಿಟ್ಟಿನಲ್ಲಿ ರಸ್ತೆ ನಿರ್ವಹಣೆಗೆ ಬೇಕಾಗುವಷ್ಟು ಅನುದಾನ ನೀಡುವುದಾಗಿ ಸಚಿವರು ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿನ ಬೇರೆ ಬೇರೆ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಚಿವರು ಇದೆ ವೇಳೆ ಪರಿಶೀಲಿಸಿದರು. ರಾಯಚೂರು ಜಿಲ್ಲೆಯ ಮಹತ್ವದ ಬೆಳಗಾವಿ-ರಾಯಚೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ವೇಗ ನೀಡಬೇಕು ಎಂದು ಇದೆ ವೇಳೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸಚಿವರು ನಿರ್ದೇಶನ ನೀಡಿದರು. ಇದಕ್ಕೆ ಬೇಕಾಗುವ ಮಷಿನರಿ, ಮಾನವ ಸಂಪನ್ಮೂಲದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲಾ ಕೇಂದ್ರದ ರಸ್ತೆಗಳು ಸುಧಾರಣೆಯಾದರಷ್ಟೇ ಸಾಲದು ಜಿಲ್ಲೆಯ ಎಲ್ಲ ತಾಲೂಕಿನ, ಎಲ್ಲ ಹೋಬಳಿಗಳ, ಗ್ರಾಮಗಳ ರಸ್ತೆಗಳು ಸಹ ಸಂಚಾರಿ ಸ್ನೇಹಿಯಾಗಿರಬೇಕು. ಈ ನಿಟ್ಟಿನಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರೊಂದಿಗೆ ಪ್ರತಿ ತಿಂಗಳಿಗೊಮ್ಮೆ ನಿಯಮಿತವಾಗಿ ಸಭೆ ನಡೆಸಿ, ರಸ್ತೆ ನಿರ್ಮಾಣ, ದುರಸ್ತಿ, ನಿರ್ವಹಣೆಯ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಮಾತನಾಡಿ, ಜಿಲ್ಲೆಯಲ್ಲಿನ ವಿವಿಧ ಹೆದ್ದಾರಿಗಳ ನಿರ್ಮಾಣ ಕಾರ್ಯವು ನಿಧಾನಗತಿಯಲ್ಲಿದೆ. ಅಲ್ಲಿಂದ ಬರುವ ಧೂಳು, ತಗ್ಗು ದಿನ್ನೆಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು :

ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಮಳೆ ಆರಂಭವಾಗಿದ್ದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಮಳೆ ನೀರು ಗಟಾರಿನಲ್ಲಿ ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಚರಂಡಿಯನ್ನು ಶುಚಿಗೊಳಿಸಬೇಕು. ನೀರು ರಸ್ತೆಯಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿರಗುಪ್ಪ-ಬಳ್ಳಾರಿ ರಸ್ತೆ ಸರಿಪಡಿಸಿ :

ಶಿರಗುಪ್ಪದಿಂದ ಬಳ್ಳಾರಿಗೆ ಹೊರಡುವ ರಸ್ತೆಯು ರಾಯಚೂರ ಜಿಲ್ಲಾ ವ್ಯಾಪ್ತಿಯ ದಡೇಸಗೂರು ಬಳಿಯಲ್ಲಿ ತುಂಬಾ ಹದಗೆಟ್ಟಿದೆ. ಬೀದರ್‌, ಕಲಬುರಗಿ, ಯಾದಗಿರಿ, ಸುರಪುರ, ಶಹಾಪುರ, ಜೇವರಗಿ, ಲಿಂಗಸೂರ, ಮಸ್ಕಿಯಿಂದ ಬೆಂಗಳೂರಿಗೆ ಹೊರಡುವ ಎಲ್ಲ ಬಸ್‌ಗಳು ಇದೆ ಮಾರ್ಗವಾಗಿ ಸಂಚರಿಸುತ್ತವೆ. ಕಲ್ಯಾಣ ಕರ್ನಾಟಕ ಭಾಗದ ಅನೇಕ ಜನರು ಬೆಂಗಳೂರಿಗೆ ಸಂಚರಿಸಲು ಈ ರಸ್ತೆ ಅತ್ಯಂತ ಪ್ರಮುಖವಾಗಿದೆ. ಈ ರಸ್ತೆಯ ದುರಸ್ತಿಯನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಸಿಂಧನೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಆಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರವಿಹಾಳ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗುಣಮಟ್ಟ ಕಾಯ್ದುಕೊಳ್ಳಿ :

ಮಳೆಗಾಲದ ಈ ವೇಳೆಯಲ್ಲೂ ಅಲ್ಲಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ. ಸುಗಮ ಸಂಚಾರಕ್ಕೆ ರಸ್ತೆ ನಿರ್ಮಾಣ ಕಾರ್ಯ ಸದ್ಯ ಅನಿವಾರ್ಯವಾದರು ಸಹ ಮಳೆ ನೀರಿನ ಕಾರಣಕ್ಕೆ ಕಾಮಗಾರಿ ಕಳಪೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲಿಸಬೇಕು. ಮತ್ತೆ ಮತ್ತೆ ದುರಸ್ತಿಗೆ ಬಾರದಂತೆ ರಸ್ತೆಗಳು ಶಾಶ್ವತವಾಗಿ ಸುಸ್ಥಿತಿಯಿಂದಿರುವ ಹಾಗೆ ಕಾಮಗಾರಿಯ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಶಿವರಾಜ ಪಾಟೀಲ್‌ ಅವರು ತಿಳಿಸಿದರು.

ದೇವದುರ್ಗದಲ್ಲಿ ಟೋಲ್ ಸ್ಥಗಿತಗೊಳಿಸಿ :

ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಡೆಗಳಲ್ಲಿ ಟೋಲ್ ಇರುವುದರಿಂದ ಜನಸಾಮಾನ್ಯರಿಗೆ ಟೋಲ್ ಪಾವತಿಸಿ ಸಂಚರಿಸಲು ಅನಾನುಕೂಲವಾಗುತ್ತಿದೆ. ಈ ಟೋಲ್‌ಗಳನ್ನು ಸ್ಥಗಿತಗೊಳಿಸಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಇದೆ ವೇಳೆ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕರೆಮ್ಮ ನಾಯಕ ಅವರು ಸಚಿವರಲ್ಲಿ ಮನವಿ ಮಾಡಿದರು.

ಅಪಘಾತ ತಪ್ಪಿಸಿ :

ಕುರ್ಡಿಯಿಂದ ಕಪಗಲ್ ಮಧ್ಯೆದ ರಸ್ತೆಯು ತಿರುವು ಮುರುವು ಇದ್ದುದರಿಂದಾಗಿ ಅಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದು ತಪ್ಪಬೇಕು. ತಿರುವು ಮುರುವು ತಪ್ಪಿಸಿ ರಸ್ತೆಯು ನೇರವಾಗಿ ನಿರ್ಮಾಣವಾಗುವಂತೆ ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಂಸದರಾದ ಜಿ ಕುಮಾರನಾಯಕ, ಮಾನವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ವೆಂಕಟೇಶ ಗಳಗ, ರಾಘವೇಂದ್ರ ಕುಲಕರ್ಣಿ, ಅಸ್ಲಾಂ, ಪ್ರಕಾಶ, ಹೊನ್ನೇಶ, ಶಿವಾಜಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News