×
Ad

ರಾಯಚೂರು | ಬಜೆಟ್ ನಲ್ಲಿ ಯರಗೇರಾ ತಾಲೂಕು ರಚನೆಗೆ ಒತ್ತಾಯ

Update: 2026-03-04 20:08 IST

ರಾಯಚೂರು : ರಾಯಚೂರು ತಾಲೂಕಿನ ಯರಗೇರಾ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಬಜೆಟ್‌ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ನಿಜಾಮುದ್ದಿನ್ ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಗೇರಾ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಹೋರಾಟ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ತಾಲೂಕು ರಚನೆಗೆ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಸಹ ತಾಲೂಕು ಕೇಂದ್ರ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಬೆಂಬಲ ವ್ಯಕ್ತಪಡಿಸಿದ್ದು, ಈ ಬಾರಿ ಬಜೆಟ್‌ನಲ್ಲಿ ಘೋಷಣೆ ಆಗುವ ಆಶಾಭಾವನೆ ಇದೆ ಎಂದು ಹೇಳಿದರು.

ಯರಗೇರಾ ಹೋಬಳಿಯಲ್ಲಿ 326 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಅದರಲ್ಲಿ 250 ಎಕರೆ ರಾಯಚೂರು ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. 19 ಗ್ರಾಮ ಪಂಚಾಯತಿಗಳ 64 ಗ್ರಾಮಗಳ ಜನರು ನಿತ್ಯ ಕೆಲಸಗಳಿಗೆ ರಾಯಚೂರು ನಗರಕ್ಕೆ ಅಲೆದಾಡುವ ಪರಿಸ್ಥಿತಿ ಇದೆ. ತಾಲೂಕು ಕೇಂದ್ರ ಮಾಡಿದಲ್ಲಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಹೂಗಾರ, ಪಿ. ಮಲ್ಲಿಕಾರ್ಜುನ ರೆಡ್ಡಿ, ಮಹಿಬೂಬ್ ಪಟೇಲ್, ಬಸವರಾಜ ರೆಡ್ಡಿ, ವಿದ್ಯಾನಂದ ರೆಡ್ಡಿ, ಕೆಸಿ ಲಕ್ಷ್ಮಿಪತಿಸ್ವಾಮಿ, ಶಾಂತಕುಮಾರ, ರವಿತಾತ, ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News