×
Ad

ರಾಯಚೂರು | ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ

Update: 2026-03-04 20:05 IST

ರಾಯಚೂರು : ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸದೇ 56 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಮಾದಿಗ ಸಮಾಜಕ್ಕೆ ಅನ್ಯಾಯವಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡ ಎಸ್. ಮಾರೆಪ್ಪ (ವಕೀಲ) ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು ಎಂದು ಹೇಳಿಕೊಳ್ಳುತ್ತಾ, ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಚಿವ ಕೆ.ಎಚ್.ಮುನಿಯಪ್ಪ ಅವರು 15ರೊಳಗೆ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಉಳಿದ ಮಾದಿಗ ಸಮಾಜದ ಶಾಸಕರು ಮತ್ತು ಸಚಿವರುಗಳು ಕೂಡ ಸಮಾಜದ ಹಿತ ಕಾಪಾಡಲು ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕು ಎಂದು ಮನವಿ ಮಾಡಿದರು.

56 ಸಾವಿರ ಹುದ್ದೆಗಳ ಭರ್ತಿಯಲ್ಲಿ ಮಾದಿಗ ಸಮಾಜಕ್ಕೆ ಶೇ.6ರಷ್ಟು, ಅಂದರೆ ಸುಮಾರು 2 ಸಾವಿರ ಹುದ್ದೆಗಳು ಲಭಿಸಬೇಕಾಗುತ್ತದೆ. ಆದರೆ ಎಲ್ಲ ಸಮುದಾಯಗಳು ಸಮಾನವಾಗಿ ಹಂಚಿಕೊಳ್ಳಬೇಕಾದ ಹುದ್ದೆಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದರು.

10 ವರ್ಷಗಳ ಬಳಿಕ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದ್ದು, ಒಳ ಮೀಸಲಾತಿ ವಂಚಿಸುವ ಉದ್ದೇಶ ಇದರಲ್ಲಿ ಗೋಚರಿಸುತ್ತದೆ. ಈ ಹಿಂದೆ 10 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲೂ ಸಮಾಜಕ್ಕೆ ಸಿಗಬೇಕಾದ 1 ಸಾವಿರ ಹುದ್ದೆಗಳು ಲಭಿಸಿಲ್ಲ. ಇದೀಗ ಮತ್ತೊಮ್ಮೆ ಹುದ್ದೆಗಳ ವಂಚನೆಗೆ ಒಳಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಂ. ವಿರೂಪಾಕ್ಷಿ, ನರಸಿಂಹಲು ಮಾಡಗಿರಿ, ಪಿ. ಯಲ್ಲಪ್ಪ, ಜೆ.ಬಿ. ರಾಜು, ಆಂಜನೇಯ, ಬೀಮಣ್ಣ ಮಂಚಾಲ, ನರಸಪ್ಪ, ಮೌನೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News