×
Ad

Raichur | ಅನುಸೂಚಿತ ಉದ್ಯಮಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ಪ್ರಕಟಿಸಲು ಪ್ರತಿಭಟನೆ

Update: 2026-03-04 20:10 IST

ರಾಯಚೂರು: ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠವೇತನದ ಪ್ರಕಟಣೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ನಗರದ ಮಂತ್ರಾಲಯ ರಸ್ತೆಯ ಬಳಿಯ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರವು ಏಪ್ರಿಲ್ 2025ರಲ್ಲಿ ರಾಜ್ಯದಲ್ಲಿನ ಅನುಸೂಚಿತ, ಸೂಚಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯವಾಗುವ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಗಳಿಗೆ ಕಾರ್ಮಿಕ ಸಂಘಟನೆಗಳು, ಮಾಲಕರ ಸಂಘಟನೆಗಳು ಮತ್ತು ಇತರರು ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸಿದ್ದು, ಕನಿಷ್ಟ ವೇತನ ಸಲಹಾ ಮಂಡಳಿಯು ಇದರ ಕುರಿತು ಎರಡು ಸುತ್ತುಗಳ ಚರ್ಚೆಯನ್ನು ನಡೆಸಿದೆ. ಕನಿಷ್ಠ ವೇತನ ಸಲಹಾ ಮಂಡಳಿಯು ತಮ್ಮ ಅಭಿಪ್ರಾಯವನ್ನು 2025 ಆಗಸ್ಟ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಿ ಹಲವು ತಿಂಗಳು ಕಳೆದರೂ ವೈಜ್ಞಾನಿಕವಾಗಿ ಹಾಗೂ ಕಾನೂನು ಬದ್ಧವಾದ ಕನಿಷ್ಟವೇತನದ ಅಂತಿಮ ಪ್ರಕಟಣೆ ಹೊರಡಿಸಿಲ್ಲವೆಂದು ದೂರಿದರು.

ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳು ವರ್ಷಗಳು ಕಳೆದಿದೆ ಈ ಹಿನ್ನೆಲೆಯಲ್ಲಿ, ಅಂತಿಮ ಅಧಿಸೂಚನೆಯನ್ನು ಸರ್ಕಾರವು ಮಾಡದಿರುವುದು ನ್ಯಾಯಸಮ್ಮತವಲ್ಲ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸ್ವಾವಲಂಬನೆಯನ್ನು ಖಾತರಿಪಡಿಸುವ ಕನಿಷ್ಠವೇತನದ ಪ್ರಕಟಣೆಯನ್ನು ಕೂಡಲೇ ರಾಜ್ಯ ಸರ್ಕಾರವು ಮಾಡಬೇಕೆಂದು ಒತ್ತಾಯಿಸಿದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಯವ್ಯಯದಲ್ಲಿ ಇವತ್ತಿನ ಗ್ರಾಹಕ ಬೆಲೆ ಸೂಚ್ಯಾಂಕ, ಮನೆ ಬಾಡಿಗೆ ಹಾಗು ಇತರೆ ಖರ್ಚುಗಳ ಆಧಾರದಲ್ಲಿ ರಾಜ್ಯದ ಕಾರ್ಮಿಕ ಸಂಘಟನೆಗಳು ಸಲಹೆಗಳನ್ನು ಪರಿಗಣಿಸಿ ಅಂತಿಮ ಅಧಿಸೂಚನೆಯನ್ನು ಕೂಡಲೇ ಪ್ರಕಟಿಸಲು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ಹೆಚ್. ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣ ಬಸವ, ಶಬ್ಬೀರ್, ಗಿರಿಯಪ್ಪ ಪೂಜಾರಿ, ಶರ್ಫುದ್ದಿನ್ ಪೋತ್ನಾಳ, ಮಹಮದ್ ಹನೀಫ್, ಅನ್ವರ್ ಪಾಶ ಹಾಗೂ ಕಾರ್ಮಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News