×
Ad

ನಾನು ಯಾವುದೇ ಭೂಮಿ ಒತ್ತುವರಿ ಮಾಡಿಲ್ಲ, ರಾಜ್ಯಪಾಲರು ನೋಟಿಸ್ ನೀಡಿಲ್ಲ: ಸಚಿವ ಎನ್. ಎಸ್. ಬೋಸರಾಜು ಸ್ಪಷ್ಟನೆ

Update: 2025-05-05 14:25 IST

ರಾಯಚೂರು: ಅರಣ್ಯ ಇಲಾಖೆಯ ಭೂಮಿ‌ ಒತ್ತುವರಿ ಮಾಡಿದ್ದಾರೆ ಎಂಬುವುದು ಸುಳ್ಳು, ನಾನು ಯಾವುದೇ ಭೂಮಿ‌ ಒತ್ತುವರಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸ್ಪಷ್ಟಪಡಿಸಿದ್ದಾರೆ.

ಅವರಿಂದು ತಮ್ಮ‌ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಭೂಮಿ ಒತ್ತುವರಿ ಮಾಡಿದ್ದೇನೆ ಎಂದು ಈ ಹಿಂದೆ ರಾಜ್ಯಪಾಲರಿಂದ ನೋಟೀಸ್ ಬಂದಿತ್ತು ಅದಕ್ಕೆ‌ ನಾನು ಹಿಂದೆಯೇ ಸ್ಪಷ್ಟನೆ ನೀಡಿದ್ದೇನೆ, ಇದನ್ನು ಮರೆಮಾಚಿ ಮತ್ತೊಮ್ಮೆ ನೋಟೀಸ್ ನೀಡಲಾಗಿದೆ ಎಂದು ಸುಳ್ಳು ಮಾಹಿತಿ ಹಾಕುತ್ತಿದ್ದಾರೆ, ನೋಟೀಸ್ ಬಂದರೆ ನನಗೆ ತೋರಿಸಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸವಾಲು ಹಾಕಿದರು.

ನಾನು ಜಮೀನಿನ ಕುರಿತು ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ನಾನು ಭೂಮಿ ಖರೀದಿಸಿದ್ದು, 1988ರಲ್ಲಿ ಅಗ ನಾನು ಯಾವುದೇ ಹುದ್ದೆಯಲ್ಲಿರಲಿಲ್ಲ. ರಾಜ್ಯಪಾಲರು ಈಗ ಮತ್ತೆ ನೋಟಿಸ್‌ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ನನ್ನ ಹೆಸರಿಗೆ ತೇಜೋವಧೆ ಮಾಡಲು ಈರೀತಿ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 250 ರೂ. ಇಳಿಕೆಯಾದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಸಿಲಿಂಡ‌ರ್ ಬೆಲೆ ಹೆಚ್ಚಿಸಿದೆ. ಇದರಿಂದ ಪ್ರತಿ ತಿಂಗಳು ರಾಜ್ಯದ ಜನತೆಯ ಮೇಲೆ 5 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಒಂದೆರೆಡು ರೂಪಾಯಿ ಅನಿವಾರ್ಯವಾಗಿ ಏರಿಕೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

ರಾಜ್ಯ ಸರ್ಕಾರ ಕೇಂದ್ರಕ್ಕೆ ಒಂದು ತೆರಿಗೆ ಕೊಟ್ಟರೆ ರಾಜ್ಯಕ್ಕೆ ಕೇವಲ 13 ಪೈಸೆ ಮರಳಿ ಬರುತ್ತಿದೆ. ಹಿಂದೆ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶೇ.50 ರಷ್ಟು ತೆರಿಗೆ ಹಣ ರಾಜ್ಯಗಳಿಗೆ ಮರಳಿ ಕೊಡಬೇಕು ಎಂದು ಒತ್ತಾಯಿಸಿದ್ದರು. ಈಗ ಅವರು ಅದನ್ನೇ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಬೆಲೆ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ ಆದರೂ ರಾಜ್ಯದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಿ ಜನರನ್ನು ದಿಕ್ಕು ತಪ್ಪಿಸಿದ್ದರು ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ವಿರುದ್ಧ ಮೇ.07 ರಂದು ನಗರದ ಜಿಲ್ಲಾ ಕ್ರೀಡಾಂಗದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ. ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ರಾಜ್ಯದ ಸಚಿವರು, ಪಕ್ಷದ ಶಾಸಕರು,ಮಾಜಿ ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ನಗರಸಭೆ ಸದಸ್ಯ ಜಯಣ್ಣ, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಶಾಲಂ, ಮಹಾನಗರಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News