×
Ad

ಕಲ್ಯಾಣ ಕರ್ನಾಟಕವೆಂದರೆ ಕೇವಲ ಕಲಬುರಗಿಯಲ್ಲ : ಚಂದ್ರಶೇಖರ ಗೋರೆಬಾಳ

Update: 2025-05-18 17:05 IST

ರಾಯಚೂರು : ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಎಂದರೆ ಕೇವಲ ಕಲಬುರಗಿಯ ಅಭಿವೃದ್ಧಿಯಲ್ಲ, ದೇಶದಲ್ಲಿಯೇ ಅತ್ಯಂತ ಹಿಂದುಳಿದ ರಾಯಚೂರು, ಯಾದಗಿರಿ‌‌ ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳು ಪರಿಹಾರವಾಗದೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗದು ಎಂದು ಕವಿ, ಹೋರಾಟಗಾರ ಚಂದ್ರಶೇಖರ ಗೋರಬಾಳ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸತ್ಯಾ ಗಾರ್ಡನ್‌ನಲ್ಲಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ಸಿಂಧನೂರು ಸಹಯೋಗದಲ್ಲಿ ಆಯೋಜಿಸಿದ್ದ ಮೆದಿಕಿನಾಳ ಭೂ ಹೋರಾಟ ನೆನಪಿನ ವೇದಿಕೆಯಲ್ಲಿ ನಡೆದ ಎರಡನೇ ದಿನದ ‘ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು’ ಎಂಬ ಘೋಷವಾಕ್ಯದ 11ನೇ ಮೇ ಸಾಹಿತ್ಯ ಮೇಳದಲ್ಲಿ ಎರಡನೇ ದಿನ ಭಾನುವಾರ ಅಭಿವೃದ್ಧಿಯ ಸತ್ಯ-ಮಿಥ್ಯೆ ಎಂಬ ಗೋಷ್ಠಿಯಲ್ಲಿ ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ’ ಎಂಬ ವಿಷಯದ ಕುರಿತು ಮಾತನಾಡಿದರು.

ದೇಶದಲ್ಲಿ ಅತ್ಯಂತ ಹಿಂದುಳಿದ ಭಾಗವಾದ ಕಲ್ಯಾಣ ಕರ್ನಾಟಕವನ್ನು ಆಳುವ ಸರ್ಕಾರ ಕೇವಲ ಹೆಸರು ಬದಲಿಸಿದ್ದೆ ಕಲ್ಯಾಣ ಮಾಡಿದೆ. ಈ ಭಾಗದ ಅಸಮಾನತೆ ಹೋಗಲಾಡಿಸಬೇಕಾದರೆ ಆಲೋಚನೆ ಮಾಡುವ ದಿಕ್ಕು ಬದಲಾಗಬೇಕು. 371 ಜೆ ಕಲಂ ಜಾರಿಯಾದರೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಯಾಗಿಲ್ಲ. ಭೂಮಿ ಹಂಚಿಕೆ, ವಸತಿ ಮತ್ತು ಭೂ ವಂಚಿತರ ಬಗ್ಗೆ ಇದುವರೆಗೆ ಹೋರಾಟ ನಡೆಯುತ್ತಿದೆ ಅವರ ಹಕ್ಕು ಸಿಕ್ಕಿಲ್ಲ ಎಂದು ಕಳವಳ‌ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯಲ್ಲಿ ಅತಿ‌ಹೆಚ್ಚು ಹತ್ತಿ,‌ ಭತ್ತ ಬೆಳೆಯಲಾಗುತ್ತಿದೆ. ಆದರೂ ಜವಳಿ ಪಾರ್ಕ್ ಹಾಗೂ ದೊಡ್ಡದಾದ ಯೋಜನೆಗಳು ಕಲಬುರಗಿ ಪಾಲಾಗುತ್ತಿದೆ. ದೀರ್ಘಾವಧಿ ಕಾಲ ಒಂದೇ ಪಕ್ಷ, ಒಬ್ಬ ನಾಯಕ ಅಧಿಕಾರ ಹಿಡಿದಿಟ್ಟುಕೊಂಡ ಕಾರಣ ಇತರೆ ಜಿಲ್ಲೆಗಳ ಅಭಿವೃದ್ಧಿ ಆಗುತ್ತಿಲ್ಲ. ಕಲ್ಯಾಣ ಕರ್ನಾಟಕ ಎಂದರೆ‌‌ ಕೇವಲ‌ ಕಲಬುರಗಿಯಲ್ಲ, ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳಿಗೂ‌ ಹಕ್ಕು ಸಿಗಬೇಕು ಎಂದು ಹೇಳಿದರು

‘ಅಭಿವೃದ್ಧಿ ಪರಿಕಲ್ಪನೆ- ವಾಸ್ತವಾಂಶಗಳು’ ಕುರಿತು ನಾಗೇಗೌಡ ಕಿಲಾರ ಮಾತನಾಡಿದರು.

ಕಂದೇಗಾಲ ಶ್ರೀನಿವಾಸ ಮಾತನಾಡಿ, ಟಿಪ್ಪು ಸುಲ್ತಾನ್ ಭೂ‌ ಸುಧಾರಣೆ ಕಾಯ್ದೆ ಜಾರಿಯಾಗುವ ಮುಂಚೆಯೇ ಬಡವರಿಗೆ, ತುಳಿತಕ್ಕೊಳಗಾದವರಿಗೆ ಭೂಮಿ ಹಂಚಿದ್ದರು. ಸಂಪತ್ತಿನ ಸಮಾನ ಹಂಚಿಕೆಯನ್ನು ಇಂದಿನ ಸರ್ಕಾರ ಅರಿತುಕೊಳ್ಳಬೇಕಿದೆ.

ಕಾಟನ್ ಬೆಳೆಯುವ ರಾಯಚೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗಳಿಲ್ಲ ಎನ್ನುವುದು ದುರಂತ. ದಾಲ್ ಮಿಲ್ ಗಳು ಮುಚ್ಚಿ ಹೋಗಿವೆ. ಉದ್ಯೋಗ ಸೃಷ್ಠಿಸುವ ಕೈಗಾರಿಕೆಗಳು ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುತ್ತಿವೆ. ಪರಿಸ್ಥಿತಿ ಬದಲಾಗಬೇಕು, ಅಸಮಾನತೆ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಹಾರ ಹೊರತುಪಡಿಸಿ ಕಲ್ಯಾಣ ಕರ್ನಾಟಕದಲ್ಲಿ ಅತಿಹೆಚ್ಚು ಪೌಷ್ಠಿಕತೆ, ಗರ್ಭಿಣಿಯರು, ಬಾಣಂತಿಯರ ಸಾವಾಗುತ್ತಿದೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

‘ಉತ್ತರ ಕರ್ನಾಟಕ’ದ ಕುರಿತು ಬಿ.ಎಸ್ ಸೊಪ್ಪಿನ ಮಾತನಾಡಿದರು. ರೈತ ಮುಖಂಡ ಶರಣಪ್ಪ ಮರಳಿ, ನಾಗರಾಜ ಪೂಜಾರ್, ಶೇಖಣ್ಣ ಕವಳಿಕಾಯಿ, ಶರೀಫ ಬಿಳಿಯಲಿ ಉಪಸ್ಥಿತರಿದ್ದರು. ಸೋಮಶೇಖರ ಕನಕಾಚಲ ನಿರ್ವಹಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News