ಕಲ್ಯಾಣ ಕರ್ನಾಟಕ ಉತ್ಸವ | ಸಿಎಂ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯಲ್ಲೂ ಭಾಗವಹಿಸಲಿ : ರಝಾಕ್ ಉಸ್ತಾದ್
ರಾಯಚೂರು: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಸೆ.17ರಂದು ಆಚರಿಸಲಾಗುತ್ತಿರುವ ‘ಕಲ್ಯಾಣ ಕರ್ನಾಟಕ ಉತ್ಸವ’ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಕಲಬುರಗಿಯಲ್ಲಿ ಮಾತ್ರ ಭಾಗವಹಿಸುತ್ತಿದ್ದು, ಈ ಬಾರಿ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ದೇಶಕ್ಕೆ 1947ರ ಆ.15 ರಂದು ಸ್ವಾತಂತ್ರ್ಯ ಸಿಕ್ಕಿದರೂ, ಅಂದಿನ ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ಸೇರದೇ ಇರುವದರಿಂದ, ಪೋಲಿಸ್ ಆಕ್ಷನ್ ಮೂಲಕ ಸೆ.17ರ 1948ರಂದು ಈ ಪ್ರದೇಶವು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು. ಈ ದಿನದ ಮಹತ್ವವನ್ನು 1998ರಿಂದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಹೆಸರಿನಲ್ಲಿ ಆಚರಿಸಲಾಗುತ್ತಿತ್ತು.
ಕಳೆದ ಅವಧಿಯ ಬಿಜೆಪಿ ಸರಕಾರ ಇದನ್ನು ಕಲ್ಯಾಣ ಕರ್ನಾಟಕ ಉತ್ಸವವೆಂದು ಘೋಷಿಸಿದೆ. 1998ರಿಂದಲೂ ರಾಜ್ಯದ ಮುಖ್ಯಮಂತ್ರಿಗಳು ಈ ಉತ್ಸವದಲ್ಲಿ ಭಾಗವಹಿಸುತ್ತ ಬಂದಿದ್ದಾರೆ.
ಅಂದಿನ ಹೈದರಾಬಾದ್ ಸಂಸ್ಥಾನದ ಭಾಗಗಳಾದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ರಾಜ್ಯಗಳ ಪುನರ್ವಿಂಗಡಣೆಯ ಸಂದರ್ಭದಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿದವು. ಆದ್ದರಿಂದ, ಈ ಕಲ್ಯಾಣ ಕರ್ನಾಟಕ ಉತ್ಸವ ಅವಿಭಜಿತ ಕಲಬುರಗಿ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ನಡೆಯುತ್ತಿದೆ, ಈಗ ಅವು ಕೊಪ್ಪಳ ಮತ್ತು ಯಾದಗಿರಿ ಸೇರಿ ಐದು ಜಿಲ್ಲೆಗಳಾಗಿವೆ. ದುರಾದೃಷ್ಟವಷಾತ್ ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ವರ್ಷ ಕಲಬುರಗಿ ಜಿಲ್ಲೆಯಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಬಂದಿರುತ್ತಾರೆ. ಇದು ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಿಗೆ ತಾರತಮ್ಯ ಎನ್ನುವಂತಿದ್ದು, ಕಲಬುರಗಿ ಜಿಲ್ಲೆಯ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಸಮಾನತೆ ಕಲ್ಪಿಸಬೇಕು ಎಂದರು.
ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ಹೋರಾಟ ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲೂ ಸಾಕಷ್ಟು ಜನರಿದ್ದರು. ಅವರನ್ನು ಸ್ಮರಿಸದಿರುವುದು ದುರಾದೃಷ್ಟಕರ ಸಂಗತಿ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಈ ಭಾಗದ ಎರಡನೆಯ ಸ್ವಾತಂತ್ರ್ಯ ದಿನಾಚರಣೆಯೆಂದು ಆಚರಿಸುವ ಸೆ.17ರ ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿಯೂ ಭಾಗವಹಿಸುವದರ ಮೂಲಕ ಸಮಾನತೆಯ ಪ್ರತಿಪಾದನೆಗೆ ಮುನ್ನಡಿಯಿಡಬೇಕು ಎಂದು ಮನವಿ ಮಾಡಿದರು.