×
Ad

ಮಹಿಳೆಯರ ಕುರಿತು ನ್ಯಾ. ಶ್ರೀಶಾನಂದ ಅವರ ಹೇಳಿಕೆ ನ್ಯಾಯಾಲಯದ ಘನತೆಗೆ ತಕ್ಕುದ್ದಲ್ಲ : ದೇವದಾಸಿ ವಿಮೋಚನಾ ಸಂಘ ಖಂಡನೆ

Update: 2025-01-17 16:03 IST

ಎಚ್.ಪದ್ಮಾ

ರಾಯಚೂರು : ಕರ್ನಾಟಕ ಹೈಕೋರ್ಟ್ ನ್ಯಾ.ವೇದವ್ಯಾಸಾಚಾರ್ ಶ್ರೀಶಾನಂದರವರು ಪುರುಷ ಪ್ರಧಾನ ಪಾಳೆಗಾರಿಕೆ ದೌರ್ಜನ್ಯದ ಕುರಿತು ಹೇಳುವ ಭರದಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಮಾತನಾಡಿದ್ದು, ಉಚ್ಛ ನ್ಯಾಯಾಲಯದ ಹಾಗು ನ್ಯಾಯ ಮೂರ್ತಿಗಳ ಘನತೆಗೆ ತಕ್ಕುದಾಗಿಲ್ಲವೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಹಾಗೂ ಗೌರವಾಧ್ಯಕ್ಷ ಕೆ.ಜಿ ವೀರೇಶ ಖಂಡಿಸಿದ್ದಾರೆ.

ಮಹಿಳೆಯರ ಮೇಲಿನ ಪುರುಷ ಪ್ರಧಾನ ಪಾಳೆಯಗಾರಿ ದೌರ್ಜನ್ಯವನ್ನು ವಿವರಿಸುವ ಭರದಲ್ಲಿ ಮಹಿಳೆಯರ ಹಾಗು ದೇವದಾಸಿ ಮಹಿಳೆಯರ ಕುರಿತು ಆಡಿದ ಮಾತುಗಳು, ಅವರ ಹಾಗೂ ಅವರ ಕುಟುಂಬದ ಸದಸ್ಯರನ್ನೇ ನಿಂದಿಸಿ, ಅವಹೇಳನ ಮಾಡಿದಂತಿವೆ ಎಂದು ದೂರಿದ್ದಾರೆ.

ಸಮಾಜದಲ್ಲಿ ನಮ್ಮದಲ್ಲದ ತಪ್ಪಿಗೆ ದಿನ ನಿತ್ಯ ನಾವುಗಳು ಮತ್ತು ನಮ್ಮ ಕುಟುಂಬದ ಸದಸ್ಯರು ಅಪಮಾನ ಹಾಗು ಅವಹೇಳನದ ಸಂಕಟಕ್ಕೊಳಗಾಗುತ್ತಿರುವಾಗ ನ್ಯಾಯಮೂರ್ತಿಗಳು ಹಾಗು ಘನ ನ್ಯಾಯಾಲಯ, ಸಮಾಜದ ಅತ್ಯಂತ ಕಟ್ಟಕಡೆಯ ದಲಿತ ಮಹಿಳೆಯರು ಹಾಗು ಅವರ ಕುಟುಂಬದ ಸದಸ್ಯರಾದ ನಮ್ಮನ್ನು ಹೀಗೆ ಅಪಮಾನಿಸಬೇಕಾ? ನ್ಯಾಯಾಲಯವೇ ಹೀಗಾದರೆ ನಮಗಾರು ರಕ್ಷಕರು? ಎಂದು ಪ್ರಶ್ನಿಸಿದ್ದಾರೆ.

ಹಿಂದೆಯೂ ಮಹಿಳಾ ವಕೀಲರೊಬ್ಬರ ವಿಚಾರದಲ್ಲೂ ಇದೇ ನ್ಯಾಯಮೂರ್ತಿಗಳು ಮುಕ್ತ ನ್ಯಾಯಾಲಯದ ಕಲಾಪದಲ್ಲಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ. ಸಾರ್ವಜನಿಕ ವೀಕ್ಷಣೆಯಲ್ಲಿರುವ ಮುಕ್ತ ನ್ಯಾಯಾಲಯದಲ್ಲಿ ನ್ಯಾಯ ಮೂರ್ತಿಗಳು ಮಾತನಾಡುವಾಗ ನ್ಯಾಯ ಸ್ಥಾನದ ಘನತೆಗೆ ತಕ್ಕುದಾಗಿ ನಡೆದುಕೊಳ್ಳಬೇಕು ಎಂದರು.

ಸಾಮಾಜಿಕ ತಾರತಮ್ಯದ ಹಾಗು ದೌರ್ಜನ್ಯಕ್ಕೊಳಗಾದ ಮಹಿಳೆಯರು, ಅಲ್ಪ ಸಂಖ್ಯಾತರ ಮತ್ತು ದಲಿತ ಹಾಗು ಇತರೆ ದುರ್ಬಲ ಸಮುದಾಯಗಳ ವಿಚಾರದಲ್ಲಿ ನ್ಯಾಯ ಮೂರ್ತಿಗಳು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಈ ಕುರಿತಂತೆ ಸೂಚನೆ ನೀಡಿ ನ್ಯಾಯಾಲಯದ ಘನತೆಯನ್ನು ರಕ್ಷಿಸಬೇಕೆಂದು ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯ ಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News