ಲಿಂಗಸುಗೂರು | ಸಿಐಟಿಯು ಸಂಯೋಜಿತ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ 2ನೇ ತಾಲ್ಲೂಕು ಸಮ್ಮೇಳನ
ಲಿಂಗಸುಗೂರು: ಭವ್ಯ ಕಟ್ಟಡಗಳ ನಿರ್ಮಾಣದ ಮೂಲಕ ಸುಂದರ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಸಿಐಟಿಯು ರಾಜ್ಯ ಜಂಟಿ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಹೇಳಿದರು.
ಲಿಂಗಸುಗೂರು ಪಟ್ಟಣದ ಪೈ ಭವನದಲ್ಲಿ ನಡೆದ ಸಿಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಸಿಡಬ್ಲ್ಯೂಎಫ್ಐ) 2 ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ವೇಳೆಯಲ್ಲಿ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿಯಿಂದ ಕೆಲ ಸೌಲಭ್ಯಗಳು ನೀಡಿದರು. ಕೋವೀಡ್ ಸಂದರ್ಭದಲ್ಲಿಯೂ ಸಹ ಸರ್ಕಾರ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಲೂಟಿ ಮಾಡಿತು. ಕಟ್ಟಡ ಸೇರಿ ಎಲ್ಲಾ ಕಾರ್ಮಿಕರ ನೆಮ್ಮದಿಯ ಬದುಕಿಗಾಗಿ ಸಂಘವನ್ನು ಬಲಗೊಳಿಸಿ ಸೌಲಭ್ಯ ಕೊಡಿಸಬೇಕು ಎಂದರು.
ಸಿಐಟಿಯು ಮುಖಂಡರಾದ ರಮೇಶ ವೀರಾಪೂರು, ಹನೀಫ್, ಜೆಎಂಎಸ್ ಮುಖಂಡರಾದ ವನಜಾಕ್ಷಿ ಮಾತನಾಡಿ, ಸಮ್ಮೇಳನಕ್ಕೆ ಶುಭ ಕೋರಿದರು. ತಾಲೂಕು ಕಾರ್ಯದರ್ಶಿ ನಿಂಗಪ್ಪ ವೀರಾಪೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ತಾಲೂಕು 19 ಸದಸ್ಯರನ್ನೊಳಗೊಂಡ ತಾಲೂಕು ಸಮಿತಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಹಟ್ಟಿ ಘಟಕದ ಅಧ್ಯಕ್ಷ್ಯ ಫಕೃದ್ದೀನ್, ಕಾರ್ಯದರ್ಶಿ ವೆಂಕಟೇಶ, ಹಿರಿಯ ಮುಖಂಡ ಪೆಂಚಲಯ್ಯ, ಸಾಹಿರಾ ಬೇಗಂ, ರಜಿಯಾ ಬೇಗಂ ಸೇರಿಂದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳು ಉಪಸ್ಥಿತರಿದ್ದರು.