×
Ad

ಲಿಂಗಸುಗೂರು | ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2025-10-24 21:36 IST

ರಾಯಚೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಬಿಜೆಪಿ ನಾಯಕರು ಹಾಗೂ ಆರೆಸ್ಸೆಸ್‌ ಸಂಘಟಕರಿಂದ ಬರುತ್ತಿರುವ ಜೀವ ಬೆದರಿಕೆಗಳು ಮತ್ತು ನಿಂದನೆಗಳನ್ನು ತೀವ್ರವಾಗಿ ಖಂಡಿಸಿ, ಲಿಂಗಸೂಗೂರು ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಲಿಂಗಸುಗೂರು ಪಟ್ಟಣದ ಗಡಿಯಾರ ಚೌಕ್‌ನಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಹಳೆ ಕೋರ್ಟ್ ಮಾರ್ಗವಾಗಿ ಸಹಾಯಕ ಆಯುಕ್ತ ಕಚೇರಿವರೆಗೆ ಮೆರವಣಿಗೆ ನಡೆಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಹಾಗೂ ಆರೆಸ್ಸೆಸ್‌ ವಿರುದ್ಧ ಘೋಷಣೆ ಕೂಗಿ ಸಹಾಯಕ ಆಯುಕ್ತರವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಲಿಂಗಸೂಗೂರು ಮಾಜಿ ಶಾಸಕ ಡಿ.ಎಸ್.ಹುಲಗೇರಿ ಮಾತನಾಡಿ, ಸರ್ಕಾರ, ಕಾಂಗ್ರೆಸ್ ಪಕ್ಷ ಹಾಗೂ ನಾಡಿನ ಎಲ್ಲಾ ಸಮಾಜದ ವರ್ಗಗಳು ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಜನಹಿತದ ನಿಲುವುಗಳಲ್ಲಿ ಪ್ರಿಯಾಂಕ್ ಖರ್ಗೆ ಅವರು ತೋರಿಸಿರುವ ಧೈರ್ಯ ಮತ್ತು ಬದ್ಧತೆ ಶ್ಲಾಘನೀಯ. ಅವರ ವಿರುದ್ಧ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಎಲ್ಲರೂ ಒಂದಾಗಿ ನಿಲ್ಲಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿರುವ ಬೆದರಿಕೆ ಮತ್ತು ನಿಂದನೆಗಳನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ. ಪಕ್ಷದ ಎಲ್ಲಾ ನಾಯಕರೂ ಹಾಗೂ ಕಾರ್ಯಕರ್ತರೂ ಅವರ ಬೆಂಬಲಕ್ಕೆ ದೃಢವಾಗಿ ನಿಂತಿದ್ದಾರೆ. ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್‌ ಸಂಘಟನೆ ಸರಕಾರಿ ಜಾಗಗಳನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮ್ಜದ್ ಸೇಠ್, ಉಮೇಶ್ ಐಹೊಳೆ, ಸಂಗಮೇಶ ನಾಯಕ, ಗಂಗಾಧರ, ಹಟ್ಟಿ ಯುವ ಘಟಕದ ಅಧ್ಯಕ್ಷ ಲಾಲ್ ಪೀರ, ಕಾಂಗ್ರೆಸ್ ಕಾರ್ಯಕರ್ತರು ಇನ್ನಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News