ಲಿಂಗಸುಗೂರು | ಗುರುಗುಂಟಾ ಹೋಬಳಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಬಾರದು ಎಂದು ಒತ್ತಾಯಿಸಿ ಪ್ರತಿಭಟನೆ
ಲಿಂಗಸುಗೂರು: ತಾಲೂಕಿನ ಗುರುಗುಂಟಾ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆರ್ಗೆ ಏರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಲಿಂಗಸುಗೂರು ತಾಲೂಕು ಘಟಕದ ನೇತೃತ್ವದಲ್ಲಿ ನರೇಗಾ ಕೂಲಿ ಕಾರ್ಮಿಕರು ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಗುರುಗುಂಟಾ ಹೋಬಳಿಯಲ್ಲಿ ಸುಮಾರು 70 ಹಳ್ಳಿ, ದೊಡ್ಡಿಗಳಿವೆ, ಇಲ್ಲಿ ಹೆಚ್ಚಾಗಿ ಪರಿಶಿಷ್ಟ ಪಂಗಡದ ಜನರು ವಾಸವಾಗಿದ್ದು, ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಶೇ.80 ರಷ್ಟು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗುರುಗುಂಟಾ ಹೋಬಳಿಯಲ್ಲಿ ಅನಕ್ಷರತೆ ಹೆಚ್ಚಾಗಿದ್ದು, ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಊರಲ್ಲಿ ಉದ್ಯೋಗ ಸಿಗದೇ ಕೆಲಸಕ್ಕೆ ಆರಿಸಿ ಮಹಾನಗರದ ಕಡೆಗೆ ಗುಳೆ ಹೋಗುತ್ತಾರೆ. ಗ್ರಾಮೀಣ ಭಾಗದಲ್ಲಿ ಮನೆಯ ಕರ(ತೆರಿಗೆ) 5.5 ರಷ್ಟು ಇದ್ದು, ಪಟ್ಟಣಕ್ಕೆ 7.7 ರಷ್ಟು ಹೆಚ್ಚಿರುತ್ತದೆ. ಹೀಗಾಗಿ ಪಟ್ಟಣ ಪಂಚಾಯಿಯಾಗಿ ಮೇಲ್ದರ್ಜೆಗೆ ಏರಿಸಬಾರದು ಎಂದು ಮನವಿ ಮಾಡಿದ ಪ್ರತಿಭಟನಾಕಾರರು ಪ್ರಭಾವಿ ನಾಯಕರ ಒತ್ತಡಕ್ಕೆ ಮಣಿದು ಮೇಲ್ದರ್ಜೆಗೆ ಏರಿಸಿದರೆ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ದುರ್ಗಪ್ರಸಾದ್, ಉಪಾಧ್ಯಕ್ಷ ಆನಂದ್ ಕುಂಬಾರ್, ಶಿವಪ್ಪ ನಾಯಕ, ಶರಣೋಜಿ ಪವಾರ್, ಲಾಲ್ ಸಾಬ್, ಹನುಮಂತ ಮತ್ತಿತರರು ಇದ್ದರು