Raichur | ರಿಮ್ಸ್ ಆಸ್ಪತ್ರೆಯಲ್ಲಿ ಕಾರ್ಮಿಕರಿಂದ ಮಲಗುಂಡಿ ಶುಚಿಗೊಳಿಸಿದ ಆರೋಪ; ಸಮಾಜ ಕಲ್ಯಾಣ ಉಪನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ
ರಾಯಚೂರು: ರಾಯಚೂರು ವೈಧ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ನಲ್ಲಿ ಮಲಗುಂಡಿ ತೆಗೆಯುವ ಕೆಲಸವನ್ನು ಕಾರ್ಮಿಕರಿಂದ ರಿಮ್ಸ್ ನಿರ್ದೇಶಕರು ಹಾಗೂ ಹೊರಗುತ್ತಿಗೆ ಪಡೆದ ಏಜೆನ್ಸಿ ನಡೆಸುತ್ತಿದ್ದಾರೆಂದು ಆರೋಪಿಸಲಾಗಿದ್ದು, ರಿಮ್ಸ್ ನಿರ್ದೇಶಕರು, ಸಮಾಜ ಕಲ್ಯಾಣ ಅಧಿಕಾರಿಯನ್ನು ಅಮಾನತುಗೊಳಿಸಿ ಹೊರಗುತ್ತಿಗೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆಸೇರಿಸುವಂತೆ ಬಹುಜನ ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಸಾದ ಭಂಡಾರಿ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಡಿ.6ರಂದು ರಿಮ್ಸ್ ಆಸ್ಪತ್ರೆಯ ಗುಂಡಿಗಳನ್ನು ಕಾರ್ಮಿಕರಿಂದ ನಿರ್ವಹಿಸಲಾಗಿರುವ ವಿಡಿಯೋ ಮತ್ತು ಭಾವಚಿತ್ರಗಳು ಲಭ್ಯವಾಗಿವೆ. ಮ್ಯಾನುವೆಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಹಾಗೂ ಪುರ್ನವಸತಿ ಕಾಯ್ದೆ 2013 ಅನ್ವಯ ನಿಷೇಧಿಸಲಾಗಿದೆ. ಆದರೆ ರಿಮ್ಸ್ ಆಸ್ಪತ್ರಯೆಲ್ಲಿ ಬಡ ಕಾರ್ಮಿಕರಿಂದ ಶೌಚಾಲಯ ಚರಂಡಿಯನ್ನು ಶುಚಿಗೊಳಿಸಿರುವುದು ನ್ಯಾಯಾಂಗ ನಿಂದನೆಯಾಗಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷತೆಯಲ್ಲಿರುವ ಸಮಿತಿ ಕೂಡಲೇ ರಿಮ್ಸ್ ನಿರ್ದೆಶಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ವಿರುದ್ದ ಕೇಸ್ ದಾಖಲಿಸಬೇಕು. ಹೊರಗುತ್ತಿಗೆ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕೇಸ್ ದಾಖಲಿಸಬೇಕು. ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕೆಂದರು.
ಈ ಸಂದರ್ಭದಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ನರಸಿಂ ಗಧಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ನೆಲಹಾಳ, ಸಾಗರ ಉರುಕುಂದಪ್ಪ ಉಪಸ್ಥಿತರಿದ್ದರು.