×
Ad

ಮಾನ್ವಿ | ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿ ಪ್ರಗತಿಪರ ಸಂಘಟನೆಗಳಿಂದ ಧರಣಿ

Update: 2025-01-21 12:15 IST

ರಾಯಚೂರು : ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಹಾಗೂ ಗ್ರಾಮಸ್ಥರು ಮಾನ್ವಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ನಡೆಸಿದರು.

ನೀರಮಾನ್ವಿ ಗ್ರಾಮದಲ್ಲಿರುವ ಕೃಷಿ ಜಮೀನಿನೊಂದರಲ್ಲಿ ಸಣ್ಣ ಪ್ರಮಾಣದ ಕಲ್ಲುಬಂಡೆಗಳನ್ನು ತೆಗೆಯುತ್ತೇವೆ ಎಂದು ಗಣಿ ಇಲಾಖೆಯಿಂದ ಪರವಾನಿಗೆ ಪಡೆದು ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಕುರಿತು ದೂರಿನ ಅನ್ವಯ ಗಣಿ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಕಛೇರಿ ಸಿಬ್ಬಂದಿ ಹಾಗೂ ರಾಯಚೂರು ಗಣಿ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸ್ಥಾನಿಕ ಪರಿಶೀಲನೆ ಮಾಡಿ ಹಾಗೂ ಡಿ.ಜಿ.ಪಿ.ಎಸ್ ಡೋಸ್ ಸರ್ವೆ ಮಾಡಿ ಪರವಾನಿಗೆ ಪಡೆದ 84 ಸಾವಿರ ಟನ್‌ಗಿಂತ ಅಧಿಕ ಹೆಚ್ಚುವರಿ 18 ಸಾವಿರ ಟನ್ ಕಲ್ಲುಬಂಡೆಗಳನ್ನು ತೆಗೆದಿರುತ್ತಾರೆ ಎಂದು ಅಧಿಕಾರಿಗಳು ವರದಿ ನೀಡಿರುತ್ತಾರೆ. ಇದುವರೆಗೂ 18 ಸಾವಿರ ಟನ್ ಗೆ ಸಂಬಂಧಿಸಿದ ಅಧಿಕಾರಿಗಳು ದಂಡ ವಸೂಲಾತಿ ಮಾಡಿರುವುದಿಲ್ಲ ಎಂದು ದೂರಿದರು.

ಜಮೀನುಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಅಂದಾಜು ಒಂದು ಲಕ್ಷ ಟನ್ ಹೆಚ್ಚುವರಿ ಕಲ್ಲನ್ನು ಗಣಿಗಾರಿಕೆ ಮಾಡಿದ್ದು, ಇದರ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಪುನಃ ಸರ್ವೆ ಮಾಡಿಸಬೇಕು. ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಪುಷ್ಪಲತಾ ಕವಲೂರು ಅವರನ್ನು ವರ್ಗಾಯಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ದಲಿತ ಸೇನೆಯ ಮುಖಂಡ ಗುರುರಾಜ ಎನ್ ನಾಗಲಾಪುರ, ರೈತ ಸಂಘದ ಅಧ್ಯಕ್ಷ ಹೊಳೆಯಪ್ಪ ಉಟಕನೂರು, ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ನರಸಪ್ಪ ಜೂಕೂರು ಹಾಗೂ ಹನುಮಂತ ಸೀಕಲ್, ನೀರಮಾನ್ವಿ ಗ್ರಾಮಸ್ಥರಾದ ಶಿವು, ಮರಿಸ್ವಾಮಿ, ವೆಂಕಟೇಶ, ಜಗದೀಶ, ರಾಜ, ಕೃಷ್ಣ, ಸುರೇಶ, ರಾಮಣ್ಣ ಭೋವಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News