ಮಾನ್ವಿ | ಜೋಳ ಖರೀದಿ ಕೇಂದ್ರ ಆರಂಭಕ್ಕೆ ರೈತರ ಒತ್ತಾಯ
Update: 2025-03-11 11:18 IST
ಮಾನ್ವಿ: 'ತಾಲ್ಲೂಕಿನಲ್ಲಿ ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ರೈತ ಮುಖಂಡ ದುರುಗಪ್ಪ ತಡಕಲ್ ಒತ್ತಾಯಿಸಿದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ' ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯಿಸಿ ಫೆ.28ರಂದು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ತಹಶೀಲ್ದಾರ್ ಅವರು ಒಂದು ವಾರದೊಳಗೆ ಖರೀದಿ ಕೇಂದ್ರಗಳ ಆರಂಭಕ್ಕೆ ನೀಡಿದ್ದ ಭರವಸೆ ಈಡೇರಿಸಿಲ್ಲ' ಎಂದರು.
'ರೈತರು ಜೋಳ ಕಟಾವು ಮುಗಿಸಿವೆ ಎರಡು ತಿಂಗಳು ಗತಿಸಿವೆ. ಆದರೆ ಖರೀದಿ ಕೇಂದ್ರಗಳು ಪ್ರಾರಂಭವಾಗದ ಕಾರಣ ತಾಲ್ಲೂಕಿನ ಜೋಳ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ' ಎಂದು ಅವರು ತಿಳಿಸಿದರು.
ಮುಖಂಡರಾದ ಹನುಮೇಶ ನಾಯಕ ಜೀನೂರು, ಮಹೇಂದ್ರ ಯಾಪಲಪರ್ವಿ,ಶಿವಕುಮಾರ್ ತಡಕಲ್, ಮಹಾದೇವ್ ತಡಕಲ್ ಉಪಸ್ಥಿತರಿದ್ದರು.