ಮಾನ್ವಿ | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜೋಳ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಚಾಲನೆ
ಮಾನ್ವಿ: ನಗರದ ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವತಿಯಿಂದ 2024-25 ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ಖರೀದಿ ಮಾಡುವ ಕೇಂದ್ರವನ್ನು ತಹಶೀಲ್ದಾರ್ ರಾಜು ಪಿರಂಗಿ ಚಾಲನೆ ನೀಡಿ ಮಾತನಾಡಿದರು.
ಜೋಳವನ್ನು ಬೆಳೆದ ರೈತರು ತಮ್ಮ ಜೋಳವನ್ನು ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಮಾರಾಟ ಮಾಡುವುದಕ್ಕೆ ತಾಲೂಕಿನಲ್ಲಿ ಮಾನ್ವಿ ನಗರ, ಹಿರೇಕೋಟ್ನೆಕಲ್, ನಕ್ಕುಂದಿ, ಬ್ಯಾಗವಾಟ, ಪೋತ್ನಾಳ್ ಸೇರಿ 5 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿರುವುದರಿಂದ ರೈತರು ಬೆಳೆದ ಜೋಳಕ್ಕೆ ಉತ್ತಮ ಬೆಲೆ ದೊರೆಯಲಿದೆ.
ರೈತರು ತಮ್ಮ ಜಮೀನಿನ ಸೂಕ್ತ ದಾಖಲೆಗಳನ್ನು ನೀಡಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ರೈತರು ಹೈಬ್ರೀಡ್ ಜೋಳವನ್ನು ಪ್ರತಿ ಕ್ವಿಂಟಾಲ್‌ಗೆ 3,371 ರೂ. ಹಾಗೂ ಮಾಲ್ದಂಡಿ ಜೋಳವನ್ನು 3,421 ರೂ. ನಂತೆ ಪ್ರತಿ ರೈತರು ಎಕರೆಗೆ 20 ಕ್ವಿಂಟಲ್ ನಂತೆ ಗರಿಷ್ಟ 150 ಕ್ವಿಂಟಾಲ್ ಜೋಳವನ್ನು ಮಾರಾಟ ಮಾಡುವುದಕ್ಕೆ ಅನುಕೂಲ ಕಲ್ಪಿಸಲಾಗಿದ್ದು ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರಾದ ಆಶೀತ್ ಅಲಿ ಮಾತನಾಡಿ, ಜಿಲ್ಲೆಯಲ್ಲಿ 35 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಮಾನ್ವಿಯಲ್ಲಿನ ಟಿ.ಎ.ಪಿ.ಸಿ.ಎಂ.ಎಸ್.ನಲ್ಲಿ 1,462 ರೈತರು ನೊಂದಾಯಿಸಿಕೊಂಡಿದ್ದು, ಈ ಕೇಂದ್ರದಲ್ಲಿ ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ 1ಲಕ್ಷ 20 ಸಾವಿರ ಕ್ವಿಂಟಾಲ್ ವರೆಗೂ ರೈತರಿಂದ ಜೋಳವನ್ನು ಖರೀದಿಸುವ ಗುರಿ ಹೊಂದಿದ್ದು, ಜೋಳ ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ಜೋಳವನ್ನು ಪುನಃ ಸಾರ್ವಜನಿಕ ವಿತರಣ ಪದ್ದತಿ ಮೂಲಕ ಮರಳಿ ಜನರಿಗೆ ಸೇರುವುದರಿಂದ ರೈತರು ಉತ್ತಮ ಗುಣಮಟ್ಟದ ಸ್ವಚ್ಚವಾಗಿರುವ ಜೋಳವನ್ನು ಮಾತ್ರ ಖರೀದಿ ಕೇಂದ್ರಗಳಿಗೆ ತರಬೇಕು. ಖರೀದಿಸಲಾಗುವ ಜೋಳದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ.ಮೂಲಕ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕರಾದ ಎಂ.ಆರ್.ಮನೋಹರ್, ಜೋಳ ಗುಣಮಟ್ಟ ಪರೀಕ್ಷಕರಾದ ಕೃಷಿ ಅಧಿಕಾರಿ ಅಮರೇಶ, ತಾ. ಆಹಾರ ನಿರೀಕ್ಷಕರಾದ ದೇವರಾಜ ಟಿ.ಎ.ಪಿ.ಸಿ.ಎಂ.ಎಸ್.ಲಿ.ನ ವ್ಯವಸ್ಥಾಪಕರಾದ ಸಿದ್ದರಾಮೇಶ ಬೆಟ್ಟದೂರು, ಮುಖಂಡರಾದ ರಾಮಣ್ಣನಾಯಕ, ರೈತ ಎಂ.ರವೀಂದ್ರಗೌಡ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು, ರೈತರು ಉಪಸ್ಥಿತರಿದ್ದರು.