ಕಾಲ್ತುಳಿತ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಲಾಭ ಪಡೆಯಬಾರದು: ಶಾಸಕ ಪ್ರದೀಪ್ ಈಶ್ವರ್
Update: 2025-06-05 19:00 IST
ರಾಯಚೂರು: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಲಾಭ ಪಡೆಯಬಾರದು. ಕ್ರೀಡಾ ಪಟುಗಳ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ದುರಂತ ಸಂಭವಿಸಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಕಾಲ್ತುಳಿತ ಘಟನೆಯನ್ನು ಬಿಜೆಪಿ ನಾಯಕ ಸಿಟಿ ರವಿ ಇದೊಂದು ‘ಸರ್ಕಾರಿ ಪ್ರಾಯೋಜಿತ ಹತ್ಯೆ’ ಎಂದು ಹೇಳಿಕೆ ನೀಡಿದ್ದು ಖಂಡನೀಯ. ಮೃತರ ಕುಟುಂಬಗಳು ನೋವಿನಲ್ಲಿದ್ದಾಗ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈಗಾಗಲೇ ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಗಾಯಗೊಂಡವರಿಗೆ ಚಿಕಿತ್ಸೆಗೂ ಪರಿಹಾರ ನೀಡಲಾಗುತ್ತಿದೆ ಎಂದರು.