ರಾಯಚೂರು | ಅಂಗನವಾಡಿ ನೌಕರರನ್ನು ಖಾಯಂ ಗೊಳಿಸಲು ಜು.9 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ
ರಾಯಚೂರು : ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಯನ್ನು ಫಲಾನುಭವಿ ಆಧಾರಿತವಾಗಿ ರೂಪಿಸಲು ಹೊರಟಿರುವುದು ಸೇರಿದಂತೆ ಅಂಗನವಾಡಿ ನೌಕರರನ್ನು ಖಾಯಂಗೊಳಿಸುವುದು, ಘಟಕ ವೆಚ್ಚ ಹೆಚ್ಚಿಸುವಂತೆ ಆಗ್ರಹಿಸಿ ಜು.9 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರ ಬೆಂಬಲಿಸಿ ಅಂಗನವಾಡಿ ನೌಕರರ ಸಂಘ ರಾಜ್ಯದಾಧ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ ಅನುದಾನ ನೀಡುವದಲ್ಲಿ ಕಡಿತಗೊಳಿಸಿದೆ. ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ನೀಡುವ ಆಹಾರ ವಿತರಣಾ ವ್ಯವಸ್ಥೆಯನ್ನು ಆನ್‍ಲೈನ್‍ನಿಂದ ಮೊಬೈಲ್ ಆಫ್ ಮೂಲಕ ನಿರ್ವಹಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಭ್ರಷ್ಟಚಾರದ ನಿಯಂತ್ರಣ ಹೆಸರಿನಲ್ಲಿ ಹೊಸ ಸಮಸ್ಯೆ ಸೃಷ್ಟಿಸುತ್ತಿದೆ. ಗರ್ಭಿಣಿ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಬರುವುದಿಲ್ಲ. ಅಂತಹವರಿಗೆ ಆಧಾರ ಲಿಂಕ್ ಮಾಡಿ ಮೂರು ಓಟಿಪಿ ಪಡೆದು ಮಾಹಿತಿ ನೀಡಬೇಕು. ಇದು ನಿರ್ವಹಣೆ ಸಾಧ್ಯವಾಗುತ್ತಿಲ್ಲ. 4 ಜಿ ಮತ್ತು 5 ಜಿ ನೆಟ್ ವರ್ಕ್‌ವ್ಯವಸ್ಥೆ ಸೇರಿದಂತೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕಿದೆ ಎಂದರು.
ಸರ್ಕಾರ ಕ್ರಮ ವಿರೋಧಿಸಿ ಜೂ.9 ರಂದು ರಾಷ್ಟ್ರ ವ್ಯಾಪಿ ಮುಷ್ಕರ ಬೆಂಬಲಿಸುವುದು, ನವಂಬರ್ ನಲ್ಲಿ ರಾಜ್ಯ ಸಂಸದರುಗಳಿಗೆ ಮನವಿ ಪತ್ರ ನೀಡಿ ಪ್ರತಿಭಟನೆ ನಡೆಸುವುದು .ಡಿಸೆಂಬರ್ ನಲ್ಲಿ ಕೇಂದ್ರ ಸಚಿವರ ಮನೆಗಳ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸುನಂದಾ,ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಪದ್ಮಾ, ರಂಗಮ್ಮ ಅನ್ವರ್ ವರಲಕ್ಷ್ಮಿ ಯಾದಗಿರಿ ಜಿಲ್ಲಾಧ್ಯಕ್ಷ ಅನಿತಾ, ಕಾರ್ಯದರ್ಶಿ ಬಸಲಿಂಗಮ್ಮ, ಬಸ್ಸಮ್ಮ, ಡಿ.ಎಸ್.ಶರಣಬಸವ ಇದ್ದರು.