ಆಪರೇಷನ್ ಸಿಂಧೂರ್ ಹಿನ್ನೆಲೆ; ರಾಯಚೂರಿನಲ್ಲಿ ಇಂದು ನಡೆಯಬೇಕಿದ್ದ ಕೆಪಿಸಿಸಿ ಕಲಬುರಗಿ ವಿಭಾಗೀಯ ಮಟ್ಟದ ಪ್ರತಿಭಟನಾ ಸಮಾವೇಶ ರದ್ದು
ರಾಯಚೂರು: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಮೇಲೆ ಏರ್ ಸ್ಟ್ರೈಕ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಇಂದು ನಡೆಯಬೇಕಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಲಬುರಗಿ ವಿಭಾಗೀಯ ಮಟ್ಟದ ಪ್ರತಿಭಟನಾ ಸಮಾವೇಶ ರದ್ದುಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹಾಗೂ ಸಂವಿಧಾನ ಉಳಿಸಿ ಅಭಿಯಾನವನ್ನು ರಾಯಚೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಎಂಎಲ್ ಸಿ ಎ.ವಸಂತಕುಮಾರ, ಶಾಸಕ ಬಸನಗೌಡ ದದ್ದಲ್ ಹಾಗೂ ಸಂಸದ ಜಿ.ಕುಮಾರ ನಾಯಕ ಅವರು ಮಾಧ್ಯಮ ಗಳ ಜೊತೆಗೆ ಮಾತನಾಡಿ, ದೇಶದ ಸೈನಿಕರು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಸಮಾವೇಶ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ರದ್ದು ಮಾಡಿದ್ದೇವೆ. ನಮಗೆ ದೇಶ ಮೊದಲು ನಂತರ ಆಂತರಿಕ ಹೋರಾಟ. ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ನಮ್ಮ ಸೈನಿಕರು ಏರ್ ಸ್ಟ್ರೈಕ್ ಮಾಡಿದ್ದು ಹೆಮ್ಮೆಯ ವಿಷಯ. ನಮ್ಮ ದೇಶದ ನಾಗರಿಕರ ಪ್ರಾಣ ಕಳೆದ ಉಗ್ರಗಾಮಿಗಳ ಆಶ್ರಯತಾಣದ ಮೇಲೆ ಏರ್ ಸ್ಟ್ರೈಕ್ ಮಾಡಿ ಉತ್ತರ ನೀಡಿದ್ದೇವೆ. ಉಗ್ರರ ದಾಳಿಗೆ ಅನೇಕ ಮಹಿಳೆಯರು ತಮ್ಮಪತಿಯರನ್ನು ಕಳೆದುಕೊಂಡ ಕಾರಣ ಇದಕ್ಕೆ ಸೇಡಿನ ರೀತಿಯಲ್ಲಿ "ಆಪರೇಷನ್ ಸಿಂಧೂರ್" ಎಂಬ ಹೆಸರಿನಲ್ಲಿ ಸೈನಿಕರು ಕಾರ್ಯಾಚರಣೆ ಮಾಡಿದ್ದು ಶ್ಲಾಘನೀಯ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಪರ ನಿಲ್ಲಲಿದೆ. ಪಾಕಿಸ್ತಾನದ ಮೇಲೆ ಏನೇ ಕಾರ್ಯಾಚರಣೆ ನಡೆಸಿದರೂ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಸಚಿವರಾದ ಈಶ್ವರ ಖಂಡ್ರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜಯ್ ಸಿಂಗ್ ಸೇರಿದಂತೆ ಗಣ್ಯರ ದಂಡು ಆಗಮಿಸಬೇಕಿತ್ತು. ಜಿಲ್ಲೆಯ ಶಾಸಕರು ಸಂಸದರು, ಕಾರ್ಯಕರ್ತರು ಆಗಮಿಸಿದ್ದರು ಆನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ವೇದಿಕೆ ಯಿಂದ ನಿರ್ಗಮಿಸಿದರು.