×
Ad

ರಾಯಚೂರು: ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

Update: 2025-02-20 18:12 IST

ರಾಯಚೂರು: ಜಿಲ್ಲೆಯ ಸಿಂಧನೂರು ನಗರದ ರಸ್ತೆ ಬದಿಗಳಲ್ಲಿ ಡಬ್ಬಾ ಅಂಗಡಿ, ಶೆಡ್‌ಗಳನ್ನು ತೆರವುಗೊಳಿಸಿದ್ದರಿಂದ ಸಾವಿರಾರು ಸಣ್ಣಪುಟ್ಟ ವ್ಯಾಪಾರಸ್ಥರು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ

ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು

ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂದೆ 200ಕ್ಕೊ ಅಧಿಕ ಬೀದಿ ಬದಿ ವ್ಯಾಪಾರಸ್ಥರು ಘೋಷಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ನಾಗರಾಜ ಪೂಜಾರ್ ಮಾತನಾಡಿ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಕಳೆದ ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದೆವು. ಏಕಾಏಕಿ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ದೈನಂದಿನ ಜೀವನ ನಡೆಸಲು ಕಷ್ಟಕರವಾಗಿದೆ. ಅಂದಂದಿನ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದ ನಮಗೆ ಬರಸಿಡಿಲು ಬಡಿದಂತಾಗಿದೆ. ಕಳೆದ ಬುಧವಾರದಿಂದ ಇಲ್ಲಿಯವರೆಗೂ ಕೈಯಲ್ಲಿ ಕೆಲಸವಿಲ್ಲದೇ, ಜೀವನ ನಿರ್ವಹಣೆಗೆ ಆದಾಯವಿಲ್ಲದೇ ಮುಂದೇನು ಎಂಬ ಆತಂಕದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಸತ್ಯಾಗ್ರಹ ನಿರತ ಬೀದಿ ಬದಿ ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಹೋರಾಟ ತೀವ್ರ ಎಂದು ನಾಗರಾಜ್‌ ಪೂಜಾರ್‌ ಎಚ್ಚರಿಕೆ ನೀಡಿದರು.

ಲೇಖಾ ಅಡವಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಸಂಚಾಲಕಿ ಮಾತನಾಡಿದ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದರಿಂದ ನಗರದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಜಿಲ್ಲಾ, ತಾಲೂಕು ಹಾಗೂ ನಗರಸಭೆ ಆಡಳಿತ ಮುನ್ನೆಚ್ಚರಿಕೆವಹಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ್ದೇ ಇದಕ್ಕೆ ಕಾರಣ. ಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ, ಆದರೆ ಪ್ರಭಾವಿಗಳ ಕಟ್ಟಡ, ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಆದೇಶ ಪಾಲಿಸದೇ ಇರುವುದು ಯಾಕೆ ? ಹಾಗಾದರೆ ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯವೇ ? ಎಂದು ಪ್ರಶ್ನಿಸಿದರು.

ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಹಲವು ಮಾರ್ಗದರ್ಶಿಗಳನ್ನು ನೀಡಿದೆ ಆದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಅವುಗಳನ್ನು ಪಾಲಿಸಿಲ್ಲ. ಇದರಿಂದ ರಸ್ತೆ ಬದಿ ವ್ಯಾಪಾರವನ್ನೇ ಜೀವನ ನಿರ್ವಹಣೆಗೆ ಆಧರಿಸಿದ್ದ ಕುಟುಂಬಗಳು ಬೀದಿಪಾಲಾಗಿವೆ. ಸರ್ಕಾರ ಮತ್ತು ಜಿಲ್ಲಾಡಳಿತ ಬಡವರ ಹೊಟ್ಟೆಯ ಮೇಲೆ ಹೊಡೆಯದೇ ಈ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಲೇಖಾ ಅಡವಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಜೀಜ್ ಜಾಗೀರ್ದಾರ್, ರವಿಚಂದ್ರನ, ಎಐಸಿಸಿಟಿಯು ಮುಖಂಡರು ಖಾಸಿಂ ಸಾಬ್ ಕಾರ್ಪೋರೇಟರ್, ಸಾದಿಕ್ ಹುಸೇನ್,ಲಾಲ್ ಸಾಬ್, ರಸೂಲ್ ಸಾಬ್, ರಹೀಮ್ ಸಾಬ್, ಮಹಿಬೂಬ್, ಸಾದಿಕ್ ಮೈಕೀನಿಕ್ , ಯಕೊಬ್, ಹುಸೇನ್, ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News